ಮಾಜಿ ಮುಖ್ಯಮಂತ್ರಿ ಪುತ್ರನಿಗೆ ಮಂತ್ರಿ ಪಟ್ಟ
ಕಲಬುರಗಿ ಜಿಲ್ಲೆಗೆ ತ್ರಿವಳಿ ಸಚಿವರು: ಅಜಯ ಸಿಂಗ್ ಹೊಸ ಸೇರ್ಪಡೆ
ಕಲಬುರಗಿ: ಸತತ ಮೂರು ಬಾರಿ ಜೇವರ್ಗಿಯ ಶಾಸಕ ಡಾ. ಅಜಯ್ ಧರ್ಮಸಿಂಗ್ ಅವರು, ಡಿ.ಕೆ. ಶಿವಕುಮಾರ್ ನೇತೃತ್ವದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೋಮವಾರ ಸಚಿವರಾಗಿ ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕಲಬುರಗಿ ಜಿಲ್ಲೆಗೆ ಒಟ್ಟು ಮೂರು ಸಚಿವ ಸ್ಥಾನ ದಕ್ಕಿದಂತಾಗಿದೆ.
1974ರ ಜನವರಿ 29ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಜನಿಸಿದ ಡಾ.ಅಜಯ್ ಸಿಂಗ್ ಅವರು, ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಹಾಗೂ ಪ್ರಭಾವತಿ ಸಿಂಗ್ ದಂಪತಿಯ ದ್ವಿತೀಯ ಪುತ್ರ. ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಅವರು, ವೈದ್ಯ ವೃತ್ತಿಯ ಜೊತೆಗೆ ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅವರಿಗೆ ಪತ್ನಿ ಶ್ವೇತಾ, ಅರ್ಹಾನ್ ಜೈ ಸಿಂಗ್ ಮತ್ತು ಸೈನಾ ಸಿಂಗ್ ಎಂಬ ಇಬ್ಬರು ಮಕ್ಕಳಿದ್ದಾರೆ.
2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯರಾಗಿ ರಾಜಕೀಯಕ್ಕೆ ಸೇರ್ಪಡೆಯಾದರು. 2008-09ರ ಅವಧಿಯಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. 2010ರ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದರು. ಆದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಜೇವ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನು 36,700 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ 2018 ಮತ್ತು 2023ರ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದಾರೆ.
2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮ್ಮ ತಂದೆ ದಿ. ಧರ್ಮಸಿಂಗ್ ಅವರ ಚುನಾವಣಾ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿ ತಂತ್ರ ರೂಪಿಸಿದ್ದರು. ಆ ಚುನಾವಣೆಯಲ್ಲಿ ಧರ್ಮಸಿಂಗ್ 39,619 ಮತಗಳ ಅಂತರದಿಂದ ಜಯಗಳಿಸಿದ್ದರು.
ಸಮಾಜಸೇವೆಯಲ್ಲಿಯೂ ಡಾ. ಅಜಯ್ ಸಿಂಗ್ ಗುರುತಿಸಿಕೊಂಡಿದ್ದಾರೆ. 2000ರಲ್ಲಿ ಬೆಂಗಳೂರಿನಲ್ಲಿ ಆಕ್ಸಿಡೆಂಟ್ ರಿಲೀಫ್ ಕೇರ್ ಸಂಸ್ಥೆ ಸ್ಥಾಪಿಸಿ ದೇಶದಾದ್ಯಂತ ಸುಮಾರು 50ಸಾವಿರಕ್ಕೂ ಹೆಚ್ಚು ಅಪಘಾತ ಸಂತ್ರಸ್ತರಿಗೆ ನೆರವು ಒದಗಿಸಿದ್ದಾರೆ. 2005ರಿಂದ ಜೇವರ್ಗಿ ಕ್ಷೇತ್ರದಲ್ಲಿ ಪ್ರತಿವರ್ಷ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದು, 2007ರಲ್ಲಿ ಸ್ಥಾಪಿಸಿದ ಧರ್ಮಸಿಂಗ್ ಫೌಂಡೇಶನ್ ಮೂಲಕ ಉಚಿತ ಆಂಬುಲೆನ್ಸ್ ಸೇವೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಆಡಳಿತಾತ್ಮಕ ಹೊಣೆಗಾರಿಕೆಗಳಲ್ಲಿಯೂ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದರು. 2020ರಲ್ಲಿ ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿ, ನಂತರ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿಯೂ ಸೇವೆ ಸಲ್ಲಿಸಿದರು.
ಕ್ರೀಡಾಪ್ರೇಮಿಯಾದ ಡಾ. ಅಜಯ್ ಸಿಂಗ್ 2003ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಟೆನ್ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್, 2004ರಲ್ಲಿ ಮಲೇಷ್ಯಾದಲ್ಲಿ ನಡೆದ ವಿಶ್ವ ಟೆನ್ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್ ಹಾಗೂ 2006ರ ದೋಹಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ್ದರು. 2007ರಲ್ಲಿ ಮಕಾವಿನಲ್ಲಿ ನಡೆದ ಇಂಡೋರ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ರಾಷ್ಟ್ರೀಯ ಟೆನ್ಪಿನ್ ಬೌಲಿಂಗ್ ತಂಡದ ನಾಯಕರಾಗಿದ್ದ ಅವರು, ಪ್ರಸ್ತುತ ಟೆನ್ಪಿನ್ ಬೌಲಿಂಗ್ ಫೆಡರೇಶನ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಯಿಂದ ಈಗಾಗಲೇ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಸೇಡಂ ಶಾಸಕ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಲಿಗೆ ಅಜಯ್ ಸಿಂಗ್ ನೂತನ ಸೇರ್ಪಡೆಯಾಗಿದ್ದು, ಒಟ್ಟಾರೆಯಾಗಿ ಜಿಲ್ಲೆಯಿಂದ ಮೂವರು ಸಚಿವರಾದಂತಾಗಿದೆ.