ಕೊಡಗಿಗೆ ಮತ್ತೊಮ್ಮೆ ಕೈತಪ್ಪಿದ ಮಂತ್ರಿ ಭಾಗ್ಯ ಕಾವೇರಿ

ತವರಿಗೆ ನಿರಾಸೆ

Update: 2026-08-04 14:52 IST

ಮಡಿಕೇರಿ : ಬಹು ನಿರೀಕ್ಷಿತ ರಾಜ್ಯ ಕಾಂಗ್ರೆಸ್ ಸರಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಡಗಿಗೆ ಮತ್ತೊಮ್ಮೆ ನಿರಾಸೆಯುಂಟಾಗಿದೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಅದಲ್ಲದೆ ಪೊನ್ನಣ್ಣ ಅವರ ಹೆಸರು ಬಹುತೇಕ ಅಂತಿಮಗೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದು, ಸಚಿವರಿಲ್ಲದ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಕೊಂಡಿದೆ. ಎ.ಎಸ್. ಪೊನ್ನಣ್ಣ ಅವರಿಗೆ ವಿಧಾನಸಭಾ ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡಲಾಗಿದೆ.

ಪೊನ್ನಣ್ಣ ಅವರನ್ನು ಕೈಬಿಟ್ಟ ಹೈಕಮಾಂಡ್:

ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಕಳೆದ ಎರಡು ತಿಂಗಳಿನಿಂದ ನಡೆಯುತ್ತಲೇ ಇದೆ.ಎರಡು ಬಾರಿ ಹಾಲಿ,ಮಾಜಿ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ದಿಲ್ಲಿಯಿಂದ ಬರಿಗೈಯಲ್ಲಿ ಹಿಂತಿರುಗಿದ್ದರು. ಕಳೆದ ವಾರ ಮೂರು ದಿನಗಳ ಕಾಲ ದಿಲ್ಲಿಯಲ್ಲಿಯೇ ಉಳಿದು ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೊಂದಿಗೆ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಸಿದ್ದರು. ಮೊದಲ ಬಾರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಲ್ಲ ಎಂಬ ಚರ್ಚೆಗಳು ಮೊದಲು ನಡೆದಿತ್ತು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆಂಬ ನಿಲುವಿಗೆ ಬಂದಿದ್ದರು. ಸಂಭ್ಯಾವ ಸಚಿವರ ಪಟ್ಟಿಯಲ್ಲಿ ಹೆಸರೇ ಇಲ್ಲದ ಎ.ಎಸ್. ಪೊನ್ನಣ್ಣ ಅವರ ಹೆಸರು ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎಂದು ಹೇಳಲಾಗುತ್ತಿತ್ತು.ಆದರೆ ಮೊದಲ ಬಾರಿಗೆ ಶಾಸಕರಾಗಿರುವವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಮೊದಲ ಬಾರಿಗೆ ಶಾಸಕರಾಗಿರುವ ಪಟ್ಟಿಯಲ್ಲಿ ಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ.

ಜಾತಿವಾರು ಪ್ರಾತಿನಿಧ್ಯ,ಕೊಡಗಿಗೆ ಅನ್ಯಾಯ!

ಈ ಬಾರಿಯ ಕಾಂಗ್ರೆಸ್ ಸರಕಾರದಲ್ಲಿ ಕೊಡಗಿನ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಪಕ್ಷಾತೀತವಾಗಿ ಕೇಳಿಬಂದಿತ್ತು. 2013ರ ನಂತರ ಕೊಡಗು ಜಿಲ್ಲೆ ಸಚಿವ ಸ್ಥಾನದ ಭಾಗ್ಯವನ್ನೇ ಕಂಡಿಲ್ಲ.

ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕಳೆದ ಒಂದು ದಶಕಗಳಿಂದ ಇದೆ. ಈ ಬಾರಿ ವಿರಾಜಪೇಟೆಯ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬಹುದೆಂದು ಎಲ್ಲರಲ್ಲೂ ನಿರೀಕ್ಷೆ ಇತ್ತು.ಆದರೆ ಕೊನೆಯ ಕ್ಷಣದಲ್ಲಿ ಜಾತಿವಾರು ಲೆಕ್ಕಾಚಾರಗಳಿಂದ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಹೇಳಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಎ.ಎಸ್. ಪೊನ್ನಣ್ಣ ಅವರು ಹೈಕಮಾಂಡ್ ಮಟ್ಟದಲ್ಲಿ ಕೂಡ ತನ್ನ ಪ್ರಭಾವವನ್ನು ಗಟ್ಟಿಗೊಳಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆ ಬಿಕ್ಕಟ್ಟು ಎದುರಾದಾಗ ಮಧ್ಯಸ್ಥಿಕೆ ವಹಿಸಿದ್ದ ಏಕೈಕ ವ್ಯಕ್ತಿ ಪೊನ್ನಣ್ಣ. ಅದಲ್ಲದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಮೂರು ವರ್ಷಗಳ ಕಾಲ ಕಾನೂನು ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News