ಪರಿಸರ ಸೂಕ್ಷ್ಮ ವಲಯ ಘೋಷಿಸಿ ಕೇಂದ್ರದಿಂದ ಕರಡು ಅಧಿಸೂಚನೆ : ಚಿಕ್ಕಮಗಳೂರು ಜಿಲ್ಲೆಯ 137 ಗ್ರಾಮಗಳು ಸೇರ್ಪಡೆ

ಆತಂಕದಲ್ಲಿ ಮಲೆನಾಡಿನ ಜನತೆ‌

Update: 2026-08-04 14:42 IST

ಚಿಕ್ಕಮಗಳೂರು, ಆ.3: ವಿಶ್ವದ ಶ್ರೀಮಂತ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದಾದ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜಿಲ್ಲೆಯ ಮಲೆನಾಡು ಭಾಗದ ಕೆಲ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ಕರಡು ಅಧಿಸೂಚನೆ ಹೊರಡಿಸಿದ್ದು, ಇದು ಮಲೆನಾಡು ಭಾಗಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಮಲೆನಾಡಿನ ಜನರು ಕಳೆದ ಹಲವು ದಶಕಗಳಿಂದ ಪರಿಸರ ಮತ್ತು ಅರಣ್ಯ ಸಂಬಂಧಿತ ಯೋಜನೆಗಳ ಒತ್ತಡವನ್ನು ಎದುರಿಸುತ್ತಲೇ ಬಂದಿದ್ದಾರೆ. ಅಭಯಾರಣ್ಯ ವಿಸ್ತರಣೆ, ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ, ಆನೆ ಕಾರಿಡಾರ್ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಯೋಜನೆಗಳು ಸ್ಥಳೀಯರ ಬದುಕಿನ ಮೇಲೆ ಪರಿಣಾಮ ಬೀರಿವೆ ಎಂಬ ಆರೋಪಗಳು ಕೇಳಿಬಂದಿವೆ. ಇದೀಗ ಅದೇ ಸಾಲಿಗೆ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆಯೂ ಸೇರ್ಪಡೆಯಾಗಿದ್ದು, ಮಲೆನಾಡಿನ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕರ್ನಾಟಕದಲ್ಲಿ ಸುಮಾರು 20,668 ಚದರ ಕಿಲೋ ಮೀಟರ್ ಪ್ರದೇಶ ಈ ಕರಡು ಅಧಿಸೂಚನೆ ವ್ಯಾಪ್ತಿಗೆ ಸೇರಿದ್ದು, ಪಶ್ಚಿಮಘಟ್ಟ ಹೊಂದಿರುವ ಆರು ರಾಜ್ಯಗಳ ಪೈಕಿ ಕರ್ನಾಟಕವೇ ಅತಿಹೆಚ್ಚು ಪ್ರದೇಶವನ್ನು ಹೊಂದಿದೆ. ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 460ಕ್ಕೂ ಅಧಿಕ ಗ್ರಾಮಗಳು ಈ ವ್ಯಾಪ್ತಿಗೆ ಒಳಪಟ್ಟಿವೆ.

ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸುಮಾರು 137 ಗ್ರಾಮಗಳು ಕರಡು ಪಟ್ಟಿಯಲ್ಲಿ ಸೇರಿದ್ದು. ಕಳಸ ತಾಲೂಕಿನ ಹೊರನಾಡು, ಇಡಕಣಿ, ಕಳಕೋಡು, ಸಂಸೆ, ತನೂಡಿ ಸೇರಿದಂತೆ ಅನೇಕ ಕೃಷಿ ಹಾಗೂ ಜನವಸತಿ ಪ್ರಧಾನ ಗ್ರಾಮಗಳು ಇಎಸ್‌ಝಡ್ ವ್ಯಾಪ್ತಿಗೆ ಸೇರಿವೆ.

ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಅವಲಂಬಿಸಿರುವ ಮಲೆನಾಡಿನ ರೈತರು ತಮ್ಮ ಭೂಮಿಯ ಭವಿಷ್ಯದ ಕುರಿತು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಭೂಮಿ ಮೇಲಿನ ಹಕ್ಕುಗಳಿಗೆ ಧಕ್ಕೆಯಾಗಬಹುದೇ? ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ, ವಿಸ್ತರಣೆ ಅಥವಾ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಬಹುದೇ? ಬ್ಯಾಂಕುಗಳಿಂದ ಸಾಲ ಪಡೆಯಲು ತೊಂದರೆ ಎದುರಾಗಬಹುದೇ? ಎಂಬ ಅನುಮಾನಗಳು ಜನರಲ್ಲಿದೆ.

ಅಧಿಸೂಚನೆ ಜಾರಿಯಾದ ಬಳಿಕ ಭೂಮಿಯ ಮಾರುಕಟ್ಟೆ ಮೌಲ್ಯ ಕುಸಿಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಈಗಾಗಲೇ ಅರಣ್ಯ ಗಡಿ, ಸರ್ವೇ ಸಮಸ್ಯೆಗಳು ಹಾಗೂ ವನ್ಯಜೀವಿಗಳ ಹಾವಳಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಮತ್ತೊಂದು ಆಡಳಿತಾತ್ಮಕ ಹೊರೆ ಸೇರ್ಪಡೆಯಾಗಬಹುದೆಂಬ ಆತಂಕ ವ್ಯಕ್ತವಾಗುತ್ತಿದೆ.

ಪರಿಸರ ಸೂಕ್ಷ್ಮ ವಲಯವು ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಹಾಗೂ ಪ್ರಮುಖ ಪರಿಸರ ಪ್ರದೇಶಗಳ ಸುತ್ತಮುತ್ತಲಿನ ಭಾಗಗಳಲ್ಲಿ ಪರಿಸರಕ್ಕೆ ಹಾನಿಕಾರಕ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಘೋಷಿಸಲಾಗುವ ವಲಯವಾಗಿದೆ. ಇದರ ಮುಖ್ಯ ಉದ್ದೇಶ ಅರಣ್ಯ ನಾಶ, ಮಾಲಿನ್ಯ, ಅಕ್ರಮ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಹಾಗೂ ಅನಿಯಂತ್ರಿತ ನಗರೀಕರಣವನ್ನು ತಡೆಯುವುದಾಗಿದೆ. ಸರಕಾರದ ಪ್ರಕಾರ ಇದು ಜನರನ್ನು ಸ್ಥಳಾಂತರಿಸುವ ಯೋಜನೆಯಲ್ಲ. ಬದಲಾಗಿ ಪರಿಸರಕ್ಕೆ ಹಾನಿಕಾರಕ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ಅರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಿಸುವ ಕ್ರಮವಾಗಿದೆ. ಕರಡು ಅಧಿಸೂಚನೆಯ ಪ್ರಕಾರ ಹೊಸ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಉತ್ಖನನ ಹಾಗೂ ಇತರ ಭೂಗರ್ಭ ಸಂಪನ್ಮೂಲಗಳ ಶೋಧನೆ ಮತ್ತು ಗಣಿಗಾರಿಕೆಗೆ ಅವಕಾಶ ಇರುವುದಿಲ್ಲ. ಈಗಾಗಲೇ ಇರುವ ಗಣಿಗಾರಿಕೆ ಗುತ್ತಿಗೆಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸುವ ಪ್ರಸ್ತಾವ ಇದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿರುವ ಕೆಂಪು ವರ್ಗದ ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಸಂಪೂರ್ಣ ನಿಷೀಧ ವಿಧಿಸಲಾಗಿದೆ. ಉಷ್ಣ ವಿದ್ಯುತ್ ಸ್ಥಾವರಗಳು, ಬೃಹತ್ ವಾಣಿಜ್ಯ ಸಂಕೀರ್ಣಗಳು ಹಾಗೂ ಪರಿಸರಕ್ಕೆ ಧಕ್ಕೆ ಉಂಟುಮಾಡುವ ದೊಡ್ಡ ನಗರೀಕರಣ ಯೋಜನೆಗಳಿಗೂ ಅವಕಾಶ ಇರುವುದಿಲ್ಲ.

ಜನರಲ್ಲಿ ಹರಡಿರುವ ಹಲವು ಭಯಗಳಿಗೆ ಸರಕಾರ ಸ್ಪಷ್ಟನೆ ನೀಡಿದೆ. ಸ್ಥಳೀಯ ನಿವಾಸಿಗಳು ತಮ್ಮ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಲು, ದುರಸ್ತಿ ಮಾಡಲು ಅಥವಾ ವಿಸ್ತರಿಸಲು ಯಾವುದೇ ನಿಬರ್ಂಧ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ರೈತರ ಭೂಮಿ, ತೋಟಗಳು ಹಾಗೂ ಆಸ್ತಿ ಹಕ್ಕುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶವಿದೆ. ಶಾಲೆಗಳು, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಾಗೂ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸೂಕ್ತ ಅನುಮತಿಗಳೊಂದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

ಗ್ರಾಮೀಣ ಪ್ರವಾಸೋದ್ಯಮ, ಹೋಮ್ ಸ್ಟೇ, ರೆಸಾರ್ಟ್, ಕೃಷಿ ಆಧಾರಿತ ಸಂಸ್ಕರಣಾ ಘಟಕಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ಹೆಚ್ಚುವರಿ ಅನುಮತಿಗಳ ಅಗತ್ಯ ಉಂಟಾಗುವ ಸಾಧ್ಯತೆಯಿದೆ. ಸಾಮಾನ್ಯ ಜನರು ಮನೆ ನಿರ್ಮಾಣ ಅಥವಾ ಸಣ್ಣ ಅಭಿವೃದ್ಧಿ ಕಾಮಗಾರಿಗಳಿಗೆ ಹಲವು ಇಲಾಖೆಗಳ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದೆಂಬ ಭಯವೂ ವ್ಯಕ್ತವಾಗಿದೆ.

ಅರಣ್ಯ ಹಕ್ಕುಗಳ ಕಾಯ್ದೆ-2006ರ ಪ್ರಕಾರ ಸ್ಥಳೀಯ ಸಮುದಾಯಗಳ ಅಭಿಪ್ರಾಯವನ್ನು ಪರಿಗಣಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಗ್ರಾಮಸಭೆಗಳು ತಮ್ಮ ವ್ಯಾಪ್ತಿಯ ಕೃಷಿ ಭೂಮಿ, ಜನವಸತಿ ಪ್ರದೇಶಗಳು, ಸಾರ್ವಜನಿಕ ಸೌಲಭ್ಯಗಳು ಹಾಗೂ ಭವಿಷ್ಯದ ಅಭಿವೃದ್ಧಿ ಅಗತ್ಯಗಳ ಕುರಿತು ಸ್ಪಷ್ಟ ಅಭಿಪ್ರಾಯ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದೆ. ಕರಡು ಅಧಿಸೂಚನೆಯಲ್ಲಿನ ಅಂಶಗಳನ್ನು ಗ್ರಾಮ ಮಟ್ಟದಲ್ಲಿ ಸಮಗ್ರವಾಗಿ ಚರ್ಚಿಸಿ, ಅಗತ್ಯ ತಿದ್ದುಪಡಿಗಳನ್ನು ಸೂಚಿಸುವ ಅವಕಾಶವನ್ನು ಸ್ಥಳೀಯರು ಬಳಸಿಕೊಳ್ಳಬೇಕು. ರೈತ ಸಂಘಟನೆಗಳು, ಗ್ರಾಮ ಪಂಚಾಯತ್‌ಗಳು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ಈ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ. ಕರಡು ಅಧಿಸೂಚನೆ ಸಂಬಂಧ ಸಾರ್ವಜನಿಕರಿಗೆ ತಮ್ಮ ಆಕ್ಷೇಪ ಹಾಗೂ ಸಲಹೆಗಳನ್ನು ಸಲ್ಲಿಸಲು ಅವಕಾಶವಿದೆ. ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 60 ದಿನಗಳೊಳಗೆ ಕೇಂದ್ರ ಸರಕಾರಕ್ಕೆ ಲಿಖಿತ ಆಕ್ಷೇಪ ಸಲ್ಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್.ಶಿವು

contributor

Similar News