×
Ad

ಅಮಲಾಪುರ್ ಗ್ರಾಮದ ಓಣಿಯಲ್ಲಿ ರಸ್ತೆ ಮಧ್ಯೆಯೇ ಚರಂಡಿ

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ; ಸಾರ್ವಜನಿಕರಿಗೆ ತೀವ್ರ ಸಂಕಷ್ಟ

Update: 2026-01-30 14:32 IST

ಅಮಲಾಪುರ್: ನಗರ ಸಭೆಯಿಂದ ಮಹಾನಗರ ಪಾಲಿಕೆಯಾಗಿರುವ ಬೀದರ್ ಮಹಾನಗರ ಪಾಲಿಕೆಗೆ ಸುತ್ತಮುತ್ತಲಿನ ಹಲವಾರು ಗ್ರಾಪಂಗಳ ಹಳ್ಳಿಗಳನ್ನು ಸೇರಿಸಲಾಗಿದ್ದು, ಅದರಲ್ಲಿ ಅಮಲಾಪುರ್ ಗ್ರಾಮವೂ ಒಂದಾಗಿದೆ. ಆದರೆ ಮಹಾನಗರ ಪಾಲಿಕೆಗೆ ಸೇರಿಸಿದ ಬಳಿಕವೂ ಅಮಲಾಪುರ್ ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಮುಂದುವರಿದಿದ್ದು, ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಮಲಾಪುರ್ ಗ್ರಾಮದ ಒಂದು ಓಣಿಯಲ್ಲಿ ಸುಮಾರು 25ರಿಂದ 30 ಮನೆಗಳಿದ್ದು, ಈ ಓಣಿ ಸ್ಥಾಪನೆಯಾದ ದಿನದಿಂದಲೂ ಪೂರ್ಣ ಪ್ರಮಾಣದ ರಸ್ತೆ ನಿರ್ಮಾಣವಾಗಿಲ್ಲ. ಶಕೀಲ್ ಅವರ ಮನೆಯಿಂದ ಗಣಿಖಾನ್ ಅವರ ಮನೆವರೆಗೆ ರಸ್ತೆ ನಿರ್ಮಿಸಲಾಗಿದೆ

ಎಂದು ಬೋರ್ಡ್ ಅಳವಡಿಸಲಾಗಿದೆ. ಆದರೆ ವಾಸ್ತವದಲ್ಲಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದ್ದು, ಓಣಿಯ ಜನರು ದಿನನಿತ್ಯ ಓಡಾಡುವುದಕ್ಕೂ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ನೀರಿನ ಪೈಪ್ ಅಳವಡಿಕೆ ವೇಳೆ ರಸ್ತೆ ಮಧ್ಯಭಾಗದಲ್ಲೇ ಗಾರೆ ನಿರ್ಮಿಸಲಾಗಿದ್ದು, ಅದನ್ನು ಮುಚ್ಚದೇ ಬಿಡಲಾಗಿದೆ. ಪರಿಣಾಮವಾಗಿ ಅದೇ ಗಾರೆ ಈಗ ಚರಂಡಿಯಾಗಿ ಮಾರ್ಪಟ್ಟಿದ್ದು, ಓಣಿಯ ಕೊಳಕು ನೀರು ರಸ್ತೆ ಮಧ್ಯೆದಲ್ಲೇ ಹರಿದು ಹೋಗುತ್ತಿದೆ. ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಸೈಕಲ್ ಸವಾರರು ಬಿದ್ದು ಗಾಯಗೊಂಡಿರುವ ಅನೇಕ ಘಟನೆಗಳು ಸಂಭವಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಓಡಾಡುವಾಗ ಕೈಕಾಲು ಮುರಿದುಕೊಂಡಿರುವ ಪ್ರಕರಣಗಳು ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಇದೇ ರಸ್ತೆಯ ಪಕ್ಕದಲ್ಲೇ ಶಾಲೆಯೊಂದು ಇರುವುದರಿಂದ ನೂರಾರು ವಿದ್ಯಾರ್ಥಿಗಳು ಈ ಮಾರ್ಗದಿಂದಲೇ ಶಾಲೆಗೆ ಹೋಗಬೇಕಾಗಿದ್ದು, ಪೋಷಕರಲ್ಲೂ ಭೀತಿ ಮೂಡಿದೆ. ಅಲ್ಲದೆ ಚರ್ಚ್ ಹಾಗೂ ಮಂದಿರಗಳಿಗೆ ತೆರಳುವವರೂ ಇದೇ ರಸ್ತೆಯನ್ನು ಬಳಸಬೇಕಾಗಿದೆ.

ಓಣಿಯಲ್ಲಿರುವ ವಿದ್ಯುತ್ ಕಂಬಗಳಿಗೆ ಬೀದಿದೀಪಗಳನ್ನು ಅಳವಡಿಸದ ಕಾರಣ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ರಸ್ತೆ ತಗ್ಗುಗಳು ಮತ್ತು ಗಾರೆಗಳು ಕಾಣದೆ ಅನೇಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈ ರಸ್ತೆಯಲ್ಲಿ ಆಟೋ, ಬೈಕ್, ಸೈಕಲ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು, ಹೊಸಬರು ಈ ರಸ್ತೆಗೆ ಬಂದರೆ ಅಪಘಾತ ಸಂಭವಿಸುವುದು ನಿಶ್ಚಿತ ಎನ್ನುವ ಮಟ್ಟಿಗೆ ಪರಿಸ್ಥಿತಿ ಗಂಭೀರವಾಗಿದೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಲಾಪುರ್ ಗ್ರಾಮವು ಈಗ ಮಹಾನಗರ ಪಾಲಿಕೆಗೆ ಸೇರಿಸಲ್ಪಟ್ಟಿದ್ದು, ಗ್ರಾಪಂ ವಿಸರ್ಜನೆಗೊಂಡಿರುವ ಕಾರಣ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲ ಗ್ರಾಮಸ್ಥರಲ್ಲಿ ಉಂಟಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ರಸ್ತೆ ಕಾಮಗಾರಿ ಕೆ.ಆರ್.ಐ.ಡಿ.ಎಲ್ (ಏಖಆಐ) ಇಲಾಖೆಯ ಅನುಷ್ಠಾನದಡಿಯಲ್ಲಿ ನಡೆಯಲಾಗಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲುಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ ಎಂದು ತಿಳಿದುಬಂದಿದೆ.

ಅಮಲಾಪುರ್ ಗ್ರಾಮ ಈಗ ಬೀದರ್ ಮಹಾನಗರ ಪಾಲಿಕೆಗೆ ಸೇರಿದೆ. ಗ್ರಾಪಂನ ಎಲ್ಲಾ ಕಾರ್ಯಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಆದ್ದರಿಂದ ಈ ಸಮಸ್ಯೆಗಳ ಕುರಿತು ಮಹಾನಗರ ಪಾಲಿಕೆಯನ್ನು ಸಂಪರ್ಕಿಸಬೇಕು.

-ದೇವಪ್ಪ, ಪಿಡಿಒ

ಅಮಲಾಪುರ್ ಗ್ರಾಮ ಇತ್ತೀಚಿಗೆ ಮಹಾನಗರ ಪಾಲಿಕೆಗೆ ಸೇರಿಸಲಾಗಿದೆ. ಈ ರಸ್ತೆ ಕಾಮಗಾರಿ ಗ್ರಾಪಂ ಇರುವಾಗಲೇ ನಡೆದಿದೆ. ಆಗಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಈ ಬಗ್ಗೆ ಮಾಹಿತಿ ಪಡೆಯಬೇಕು.

-ಮಹಮ್ಮದ್ ಗೌಸ್, ನಗರಸಭಾ ಅಧ್ಯಕ್ಷ, ಬೀದರ್

ನಮ್ಮ ಓಣಿಯಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಬೋರ್ಡ್ ಹಾಕಿ ಅರ್ಧ ರಸ್ತೆ ಮಾತ್ರ ಮಾಡಿ ಬಾಕಿ ಬಿಲ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗುತ್ತಾರೆ.

- ರಜನಿಕಾಂತ್ ಗುತ್ತೇದಾರ್, ಸ್ಥಳೀಯ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಶೇನ ಫುಲೆ

contributor

Similar News