ಹಟ್ಟಿ ಚಿನ್ನದ ಗಣಿಯಲ್ಲಿ ಉತ್ಪಾದನೆ ಕುಸಿತ
ಡಿಸೆಂಬರ್ 2025ರ ಗುರಿಗೆ 285ಕೆಜಿ ಹಿನ್ನಡೆ
ದೇಶದ ಏಕೈಕ ಚಿನ್ನದ ಗಣಿ ಎಂದೇ ಪ್ರಸಿದ್ಧಿಯಲ್ಲಿರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಭಾರೀ ಉತ್ಪಾದನಾ ಕುಸಿತ ಕಂಡುಬಂದಿದ್ದು, ಚಿನ್ನ ಉತ್ಪಾದನೆಯಲ್ಲಿ ಗುರಿಗಿಂತ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಮುಖಿಯಾಗಿದ್ದರೂ, ರಾಜ್ಯ ಸರಕಾರದ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿ ಉತ್ಪಾದನೆ ಇಳಿಮುಖವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಹಟ್ಟಿ ಚಿನ್ನದ ಗಣಿ ಕಂಪೆನಿಯು ಡಿಸೆಂಬರ್ 2025ರ ಅಂತ್ಯಕ್ಕೆ 1,187 ಕೆಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಿತ್ತು. ಆದರೆ ಕಂಪೆನಿಯ ಅಂಕಿ-ಅಂಶಗಳ ಪ್ರಕಾರ ಕೇವಲ 901 ಕೆಜಿ ಚಿನ್ನ ಮಾತ್ರ ಉತ್ಪಾದನೆಯಾಗಿದ್ದು, 285 ಕೆಜಿ ಹಿನ್ನಡೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
2025-26ನೇ ಸಾಲಿನ ಮೊದಲ 9 ತಿಂಗಳ ಅವಧಿಯಲ್ಲಿ ಚಿನ್ನ ಹಾಗೂ ಅದಿರು ಉತ್ಪಾದನೆಯಲ್ಲಿ ಹಿನ್ನಡೆ ಕಂಡುಬಂದಿರುವುದು ಗಣಿ ಆಡಳಿತವರ್ಗದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಅವಧಿಯಲ್ಲಿ 5 ಲಕ್ಷ 70 ಸಾವಿರ ಟನ್ ಚಿನ್ನದ ಅದಿರು ಹೊರತೆಗೆಯುವ ಗುರಿ ಹೊಂದಲಾಗಿದ್ದರೂ, ವಾಸ್ತವದಲ್ಲಿ 4 ಲಕ್ಷ 39 ಸಾವಿರ 434 ಟನ್ ಅದಿರು ಮಾತ್ರ ಹೊರತೆಗೆಯಲಾಗಿದೆ. ಪರಿಣಾಮವಾಗಿ 1 ಲಕ್ಷ 30 ಸಾವಿರ 566 ಟನ್ ಅದಿರು ಉತ್ಪಾದನೆಗೆ ಹಿನ್ನಡೆ ಉಂಟಾಗಿದೆ.
ಸದ್ಯ ಚಿನ್ನದ ಬೆಲೆ ಏರಿಕೆಯಲ್ಲಿರುವುದರಿಂದ ಉತ್ಪಾದನಾ ಕುಸಿತದ ಪರಿಣಾಮ ಸ್ಪಷ್ಟವಾಗಿ ಕಾಣಿಸಿಕೊಳ್ಳದಿದ್ದರೂ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಮುಖವಾದರೆ ಕಂಪೆನಿಯ ಆರ್ಥಿಕ ಸ್ಥಿತಿಗೆ ಗಂಭೀರ ಹೊಡೆತ ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಗಣಿ ಆಡಳಿತವರ್ಗದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ನಿಗಮದ ಅಧ್ಯಕ್ಷರನ್ನು ಸಂಪರ್ಕಿಸಿದರೂ ಸ್ಪಷ್ಟ ಉತ್ತರ ನೀಡದೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಆಧುನಿಕ ತಂತ್ರಜ್ಞಾನದ ವೈಫಲ್ಯ
ಇತ್ತೀಚಿನ ಆಧುನಿಕ ತಂತ್ರಜ್ಞಾನಗಳು ಲಭ್ಯವಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾಗಿರುವುದು ಆಡಳಿತ ಮಂಡಳಿಯ ಅಸಮರ್ಥತೆಯನ್ನೇ ತೋರಿಸುತ್ತದೆ ಎಂದು ಕಾರ್ಮಿಕ ವಲಯ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನ್ಯೂ ಸರ್ಕ್ಯುಲರ್ ಶಾಫ್ಟ್ ಆರಂಭವಾದರೂ ಫಲವಿಲ್ಲ
ಗಣಿಯ ಆಧುನೀಕರಣದ ಭಾಗವಾಗಿ ಆರಂಭಿಸಲಾದ ನ್ಯೂ ಸರ್ಕ್ಯುಲರ್ ಶಾಫ್ಟ್ ಮೂಲಕ ದಿನಕ್ಕೆ 3,000 ಟನ್ ಅದಿರು ಸಂಸ್ಕರಣೆ ಮಾಡಿ, ವಾರ್ಷಿಕ 3 ಟನ್ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಆದರೆ ಶಾಫ್ಟ್ ಆರಂಭಗೊಂಡರೂ ನಿರೀಕ್ಷಿತ ಪ್ರಮಾಣದ ಅದಿರು ಹಾಗೂ ಚಿನ್ನ ಉತ್ಪಾದನೆ ಸಾಧ್ಯವಾಗಿಲ್ಲ. ಇದರಿಂದಾಗಿ ಗಣಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಡಳಿತವರ್ಗದ ಮುಂದಾಲೋಚನೆಯ ಕೊರತೆ ಹಾಗೂ ಅವೈಜ್ಞಾನಿಕ ಯೋಜನೆಗಳ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ.
ಕಾರ್ಮಿಕರ ಬದುಕಿನ ಮೇಲೂ ಪರಿಣಾಮದ ಭೀತಿ
ಹಟ್ಟಿ ಚಿನ್ನದ ಗಣಿಯ ಮೇಲೆ ಅವಲಂಬಿತವಾಗಿರುವ ಸಾವಿರಾರು ಕುಟುಂಬಗಳ ಜೀವನಕ್ಕೂ ಈ ಉತ್ಪಾದನಾ ಕುಸಿತ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಕಾರ್ಮಿಕರ ಬೋನಸ್, ಪ್ರೋತ್ಸಾಹಧನ ಹಾಗೂ ವಿವಿಧ ಕಲ್ಯಾಣ ಯೋಜನೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.