ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಪ್ರೊ. ಕೆ.ವಿ. ನಾರಾಯಣ (ಕೆ.ವಿ.ಎನ್.) ಅವರ ಅಗಲಿಕೆ ಕನ್ನಡ ವಿದ್ವತ್‌ಲೋಕಕ್ಕೆ ತುಂಬಲಾರದ ನಷ್ಟ. ಭಾಷೆಯನ್ನು ಕೇವಲ ಸಂವಹನದ ಸಾಧನವಾಗಿ ನೋಡದೆ, ಒಂದು ಜನಸಮುದಾಯದ ಬದುಕು, ಚರಿತ್ರೆ, ಸಂಸ್ಕೃತಿ ಮತ್ತು ಚಿಂತನೆಯ ಅಭಿವ್ಯಕ್ತಿಯಾಗಿ ಗ್ರಹಿಸಿದ ಅಪರೂಪದ ಭಾಷಾವಿಜ್ಞಾನಿ ಅವರು. ಸಾಹಿತ್ಯವನ್ನು ಓದುವ, ಅರ್ಥೈಸುವ ಮತ್ತು ವಿಶ್ಲೇಷಿಸುವ ಕ್ರಮಕ್ಕೆ ಹೊಸ ಒಳನೋಟಗಳನ್ನು ನೀಡಿದ ವಿಮರ್ಶಕರು. ಸಂಶೋಧನೆಯ ಶಿಸ್ತು, ವೈಚಾರಿಕ ಸ್ಪಷ್ಟತೆ ಮತ್ತು ಭಾಷೆಯ ಬಗೆಗಿನ ಸೂಕ್ಷ್ಮ ಸಂವೇದನೆಗಳನ್ನು ಒಂದೇ ನೆಲೆಯಲ್ಲಿ ಬೆಸೆದಿದ್ದ ಅವರ ವಿದ್ವತ್ತು ಕನ್ನಡದ ಜ್ಞಾನಪರಂಪರೆಯಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯಲಿದೆ.

ಕಂಪಲಾಪುರದ ನೆಲೆಯಿಂದ ಬೆಳೆದುಬಂದ ಕೆ.ವಿ. ನಾರಾಯಣ ಅವರು ತಮ್ಮ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಯ ಮೂಲಕ ಕನ್ನಡದ ವಿಶಾಲ ಜ್ಞಾನಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದರು. ವಿಜ್ಞಾನ ವಿಷಯಗಳ ಹಿನ್ನೆಲೆಯಿಂದ ಬಂದಿದ್ದ ಅವರು ಸಾಹಿತ್ಯ, ಸಾಹಿತ್ಯಮೀಮಾಂಸೆ ಮತ್ತು ಭಾಷಾವಿಜ್ಞಾನವನ್ನು ಅಧ್ಯಯನದ ಮುಖ್ಯ ಕ್ಷೇತ್ರಗಳನ್ನಾಗಿ ಆರಿಸಿಕೊಂಡದ್ದು ಅವರ ವೈಚಾರಿಕ ಕುತೂಹಲಕ್ಕೆ ಸಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅವರು, ಅನೇಕ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯವನ್ನು ಹೊಸ ದೃಷ್ಟಿಕೋನದಿಂದ ಗ್ರಹಿಸುವ ಮಾರ್ಗದರ್ಶಕರಾದರು. ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ’ವನ್ನು ಆಳವಾಗಿ ಅಧ್ಯಯನ ಮಾಡಿ ಸಂಶೋಧನೆ ನಡೆಸಿದರು. ಆ ಅಧ್ಯಯನದ ಫಲವಾಗಿ ರೂಪುಗೊಂಡ ‘ಧ್ವನ್ಯಾಲೋಕ: ಒಂದು ಅಧ್ಯಯನ’ ಕೃತಿ ಕನ್ನಡ ಸಾಹಿತ್ಯಮೀಮಾಂಸೆಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿದೆ.

ಕೆ.ವಿ.ಎನ್. ಅವರ ವಿಮರ್ಶೆಯ ವೈಶಿಷ್ಟ್ಯವೆಂದರೆ, ಕೃತಿಯೊಂದನ್ನು ಅದರ ಮೇಲ್ಮೈಯಲ್ಲಿ ಕಾಣುವ ಕಥಾವಸ್ತು, ಭಾಷೆ ಅಥವಾ ಅಭಿವ್ಯಕ್ತಿಗೆ ಸೀಮಿತಗೊಳಿಸದೆ, ಅದರೊಳಗಿನ ತಾತ್ವಿಕ ನೆಲೆ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಅರ್ಥದ ವಿವಿಧ ಪದರಗಳನ್ನು ಶೋಧಿಸುವುದು. ಅವರ ವಿಮರ್ಶೆಯಲ್ಲಿ ಸಿದ್ಧಮಾದರಿಗಳಿಗಿಂತ ಸ್ವತಂತ್ರ ಚಿಂತನೆಗೆ ಹೆಚ್ಚಿನ ಮೌಲ್ಯವಿತ್ತು. ಸಾಹಿತ್ಯವನ್ನು ಕೇವಲ ರಸಾನುಭವದ ನೆಲೆಯಲ್ಲಿ ಮಾತ್ರವಲ್ಲದೆ, ಅದು ರೂಪುಗೊಳ್ಳುವ ಸಾಮಾಜಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳೊಂದಿಗೂ ಬೆಸೆದು ನೋಡುವ ವಿಶಾಲ ದೃಷ್ಟಿ ಅವರಲ್ಲಿತ್ತು. ಭಾರತೀಯ ಕಾವ್ಯಮೀಮಾಂಸೆಯ ಪರಿಕಲ್ಪನೆಗಳನ್ನು ಆಧುನಿಕ ವಿಮರ್ಶಾ ಚಿಂತನೆಯೊಂದಿಗೆ ಸಂವಾದಕ್ಕೆ ಒಳಪಡಿಸುವ ಅವರ ಪ್ರಯತ್ನ ಗಮನಾರ್ಹವಾದುದು. ಬೇಂದ್ರೆಯವರ ಕಾವ್ಯಲೋಕವನ್ನು ಸಾಹಿತ್ಯತತ್ವದ ನೆಲೆಯಲ್ಲಿ ಗ್ರಹಿಸುವ ‘ಸಾಹಿತ್ಯ ತತ್ವ: ಬೇಂದ್ರೆ ದೃಷ್ಟಿ’ಯಂತಹ ಕೃತಿಗಳು ಅವರ ವಿಮರ್ಶಾ ಪ್ರಜ್ಞೆಯ ಆಳವನ್ನು ಪರಿಚಯಿಸುತ್ತವೆ.

ಭಾಷಾಶಾಸ್ತ್ರ ಅವರ ವಿದ್ವತ್ತಿನ ಮತ್ತೊಂದು ಪ್ರಮುಖ ಆಯಾಮ. ಭಾಷೆಯ ರಚನೆ, ಬಳಕೆ, ಬೆಳವಣಿಗೆ, ಬದಲಾವಣೆ, ಆಡುನುಡಿಗಳು, ಸ್ಥಳನಾಮಗಳು, ವ್ಯಕ್ತಿನಾಮಗಳು ಮತ್ತು ಭಾಷೆಯ ಸಾಮಾಜಿಕ ಆಯಾಮಗಳ ಕುರಿತು ಅವರು ನಡೆಸಿದ ಅಧ್ಯಯನಗಳು ಕನ್ನಡ ಭಾಷಾ ಸಂಶೋಧನೆಗೆ ಮಹತ್ವದ ಕೊಡುಗೆಗಳಾಗಿವೆ. ‘ಕನ್ನಡದ ಉಳಿಕಂಟೆಗಳು: ಕನ್ನಡ ಆಡುನುಡಿಯ ಸೊಲ್ಲರಿಮೆ’, ‘ಸ್ಥಳನಾಮಗಳು: ಪರಿವರ್ತನೆ ಮತ್ತು ಪ್ರಭಾವ’, ‘ವ್ಯಕ್ತಿನಾಮಗಳು: ಸ್ವರೂಪ ಮತ್ತು ವಿಶ್ಲೇಷಣೆ’, ‘ಶೈಲಿಶಾಸ್ತ್ರ’ ಮೊದಲಾದ ಕೃತಿಗಳು ಭಾಷೆಯನ್ನು ಅದರ ಜೀವಂತ ಬಳಕೆಯ ನೆಲೆಯಿಂದ ಅರಿಯುವ ಅವರ ಆಸಕ್ತಿಯನ್ನು ತೋರಿಸುತ್ತವೆ. ಭಾಷೆ ಎನ್ನುವುದು ವ್ಯಾಕರಣದ ನಿಯಮಗಳ ಚೌಕಟ್ಟಿನಲ್ಲಿ ಮಾತ್ರ ಬಂಧಿತವಾಗಿರುವುದಲ್ಲ; ಅದು ಜನರ ಬದುಕಿನೊಂದಿಗೆ ನಿರಂತರವಾಗಿ ಬದಲಾಗುತ್ತಾ, ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಾ ಸಾಗುವ ಜೀವಂತ ವ್ಯವಸ್ಥೆ ಎಂಬ ಅರಿವು ಅವರ ಅಧ್ಯಯನದ ಕೇಂದ್ರದಲ್ಲಿತ್ತು.

‘ನುಡಿಗಳ ಅಳಿವು’ ಕೃತಿ ಅವರ ಭಾಷಾ ಚಿಂತನೆಯ ವ್ಯಾಪಕತೆಯನ್ನು ವಿಶೇಷವಾಗಿ ತೆರೆದಿಡುತ್ತದೆ. ಜಗತ್ತಿನ ಭಾಷೆಗಳು ಎದುರಿಸುತ್ತಿರುವ ಅಳಿವಿನ ಅಪಾಯ, ಭಾಷಾ ವೈವಿಧ್ಯದ ಮಹತ್ವ ಮತ್ತು ನುಡಿಗಳನ್ನು ಉಳಿಸಿಕೊಳ್ಳುವ ಅಗತ್ಯವನ್ನು ಅವರು ಈ ಕೃತಿಯಲ್ಲಿ ಗಂಭೀರವಾಗಿ ಚರ್ಚಿಸಿದ್ದಾರೆ. ಭಾಷೆಯೊಂದು ನಶಿಸುವುದು ಎಂದರೆ ಕೇವಲ ಕೆಲವು ಪದಗಳು ಬಳಕೆಯಿಂದ ಮರೆಯಾಗುವುದಲ್ಲ; ಆ ಭಾಷೆಯೊಂದಿಗೆ ಬೆಸೆದುಕೊಂಡಿರುವ ಸಮುದಾಯದ ನೆನಪುಗಳು, ಜ್ಞಾನ, ಅನುಭವ, ನಂಬಿಕೆಗಳು ಮತ್ತು ವಿಶಿಷ್ಟವಾಗಿ ಜಗತ್ತನ್ನು ನೋಡುವ ಕ್ರಮವೂ ಕಣ್ಮರೆಯಾಗುವುದು ಎಂಬುದನ್ನು ಅವರು ಮನವರಿಕೆ ಮಾಡಿಕೊಡುತ್ತಾರೆ. ಭಾಷೆ ಮತ್ತು ಸಂಸ್ಕೃತಿಯ ನಡುವಿನ ಸಂಬಂಧವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಈ ಕೃತಿ ಕನ್ನಡದಾಚೆಗೂ ಮಹತ್ವ ಪಡೆದಿದೆ. ಈ ಕೃತಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಅವರ ದೀರ್ಘಕಾಲದ ವಿದ್ವತ್‌ಸಾಧನೆಗೆ ಸಂದ ರಾಷ್ಟ್ರೀಯ ಮನ್ನಣೆಯಾಗಿದೆ.

ಅವರ ಕೃತಿಗಳ ವ್ಯಾಪ್ತಿ ಭಾಷಾಶಾಸ್ತ್ರ ಅಥವಾ ಸಾಹಿತ್ಯ ವಿಮರ್ಶೆಗೆ ಮಾತ್ರ ಸೀಮಿತವಾಗಿರಲಿಲ್ಲ. ‘ಭಾಷೆಯ ಸುತ್ತಮುತ್ತ’, ‘ಮತ್ತೆ ಭಾಷೆಯ ಸುತ್ತಮುತ್ತ’, ‘ನಮ್ಮೊಡನೆ ನಮ್ಮ ನುಡಿ’, ‘ಬೇರು ಕಾಂಡ ಚಿಗುರು’, ‘ಕನ್ನಡ ಜಗತ್ತು: ಅರ್ಧ ಶತಮಾನ’, ‘ತೊಂಡುಮೇವು’ ಮೊದಲಾದ ಕೃತಿಗಳ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಅವರು ಪರಿಶೀಲಿಸಿದ್ದಾರೆ. ನಾಟಕ ರಚನೆಯಲ್ಲಿಯೂ ತಮ್ಮ ಸೃಜನಶೀಲತೆಯನ್ನು ಪ್ರಕಟಿಸಿದ ಅವರು, ‘ಹುತ್ತವ ಬಡಿದರೆ’ ನಾಟಕದ ಮೂಲಕ ಮತ್ತೊಂದು ಸಾಹಿತ್ಯಿಕ ನೆಲೆಯನ್ನು ಪರಿಚಯಿಸಿದರು. ಕನ್ನಡದ ಅಧ್ಯಯನ ಕ್ಷೇತ್ರಕ್ಕೆ ಅಗತ್ಯವಾದ ಪರಿಭಾಷೆ, ಸಂಶೋಧನಾ ವಿಧಾನ ಮತ್ತು ಜ್ಞಾನಸಂಪನ್ಮೂಲಗಳ ರೂಪಿಸುವಿಕೆಯಲ್ಲಿಯೂ ಅವರ ಕೊಡುಗೆ ಮಹತ್ವದ್ದು. ಅವರ ಬರಹಗಳಲ್ಲಿದ್ದ ವಿಷಯವೈವಿಧ್ಯ ಮತ್ತು ಸಂಶೋಧನಾತ್ಮಕ ಶಿಸ್ತು ಅವರನ್ನು ಬಹುಮುಖ ವಿದ್ವಾಂಸರನ್ನಾಗಿ ರೂಪಿಸಿತು.

ಅಧ್ಯಾಪಕರಾಗಿ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿದ ಅವರು, ಸಂಶೋಧಕರಾಗಿ ಕನ್ನಡದ ಅಧ್ಯಯನಕ್ಕೆ ಹೊಸ ದಿಕ್ಕುಗಳನ್ನು ತೆರೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಆರಂಭಿಕ ಬೆಳವಣಿಗೆಯ ಹಂತದಲ್ಲಿ ಅಧ್ಯಾಪನ ಮತ್ತು ಆಡಳಿತದ ಹೊಣೆಗಾರಿಕೆಗಳನ್ನು ನಿರ್ವಹಿಸಿ, ಅದರ ಶೈಕ್ಷಣಿಕ ನೆಲೆ ಗಟ್ಟಿಯಾಗಲು ಶ್ರಮಿಸಿದರು. ಭಾಷಾನಿಕಾಯದ ಡೀನ್, ಕುಲಸಚಿವರು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ತಮ್ಮ ಕೊಡುಗೆ ನೀಡಿದರು. ನಂತರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕನ್ನಡ ಮತ್ತು ಇತರ ಭಾಷೆಗಳ ನಡುವಿನ ಅನುವಾದ, ಸಂವಾದ ಹಾಗೂ ಜ್ಞಾನವಿನಿಮಯದ ಅಗತ್ಯವನ್ನು ಪ್ರತಿಪಾದಿಸಿದರು. ಕನ್ನಡದ ಬೆಳವಣಿಗೆ ಎಂದರೆ ಕನ್ನಡವನ್ನು ಇತರ ಭಾಷೆಗಳಿಂದ ಪ್ರತ್ಯೇಕಿಸಿ ನೋಡುವುದಲ್ಲ; ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಅದರ ಜ್ಞಾನಸಾಮರ್ಥ್ಯವನ್ನು ವಿಸ್ತರಿಸುವುದೆಂಬ ವಿಶಾಲ ದೃಷ್ಟಿ ಅವರಲ್ಲಿತ್ತು.

ಅವರ ಸಾಹಿತ್ಯಿಕ ಮತ್ತು ಶೈಕ್ಷಣಿಕ ಸಾಧನೆಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಜಿ.ಎಸ್.ಎಸ್. ಸಾಹಿತ್ಯ ವಿಮರ್ಶಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಆದರೆ ಪ್ರಶಸ್ತಿಗಳ ಪಟ್ಟಿಗಿಂತಲೂ ಅವರು ಕನ್ನಡದ ಜ್ಞಾನಲೋಕಕ್ಕೆ ನೀಡಿದ ವಿಚಾರಸಂಪತ್ತು ದೊಡ್ಡದು. ಒಂದು ವಿಷಯವನ್ನು ಆಳವಾಗಿ ಅಧ್ಯಯನ ಮಾಡುವುದು, ಅದರ ಪೂರ್ವಾಪರಗಳನ್ನು ಅರಿಯುವುದು, ಪ್ರಶ್ನಿಸುವುದು ಮತ್ತು ಸ್ವತಂತ್ರ ನಿಲುವನ್ನು ರೂಪಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಅವರ ಬರವಣಿಗೆಗಳು ಮಾದರಿಯಾಗಿವೆ. ಅವರ ಕೃತಿಗಳನ್ನು ಓದುವಾಗ ವಿಷಯದ ಗಂಭೀರತೆಯ ಜೊತೆಗೆ ಆಲೋಚನೆಯ ಕ್ರಮಬದ್ಧತೆ, ಪದಗಳ ನಿಖರತೆ ಮತ್ತು ತಾತ್ವಿಕ ಸ್ಪಷ್ಟತೆ ಓದುಗರ ಗಮನ ಸೆಳೆಯುತ್ತವೆ.

ಇಷ್ಟೊಂದು ವಿದ್ವತ್ತು ಮತ್ತು ಅನುಭವದ ಹಿನ್ನೆಲೆಯಿದ್ದರೂ, ವೈಯಕ್ತಿಕ ಬದುಕಿನಲ್ಲಿ ಅವರು ಸರಳತೆ ಮತ್ತು ಆತ್ಮೀಯತೆಗೆ ಮಹತ್ವ ನೀಡುತ್ತಿದ್ದರು. ಕಿರಿಯರ ಬರವಣಿಗೆಯನ್ನು ಗಮನಿಸಿ ಪ್ರೋತ್ಸಾಹಿಸುವುದು, ಅವರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವುದು, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವುದು ಅವರ ವ್ಯಕ್ತಿತ್ವದ ಭಾಗವಾಗಿತ್ತು. ಅವರೊಂದಿಗೆ ನನಗೆ ದೊರೆತಿದ್ದ ಆತ್ಮೀಯ ಒಡನಾಟವೂ ಇಂತಹ ಅನೇಕ ನೆನಪುಗಳಿಂದ ಕೂಡಿದೆ.

ನನ್ನ ವಿಮರ್ಶಾ ಲೇಖನಗಳ ಸಂಕಲನ ‘ಆರಿಸಲಾಗದ ದೊಂದಿಗಳು’ ಕೃತಿಗೆ ಅವರು ಬೆನ್ನುಡಿ ಬರೆಯಲು ಒಪ್ಪಿಕೊಂಡಿದ್ದರು. ಕಳೆದ ತಿಂಗಳು ಬೆನ್ನುಡಿ ಬರೆದು ಕಳುಹಿಸಿದ ಬಳಿಕ, “ಬೆನ್ನುಡಿ ಸ್ವಲ್ಪ ದೊಡ್ಡದು ಎನಿಸಿದರೆ ಒಂದೆರಡು ವಾಕ್ಯಗಳನ್ನು ನೀವೇ ತೆಗೆದುಹಾಕಿಬಿಡಿ ಸುಕನ್ಯಾ” ಎಂದು ಹೇಳಿದ್ದರು. ನನ್ನ ವಿಮರ್ಶಾ ಲೇಖನಗಳ ಕುರಿತು ಅವರ ಅಭಿಪ್ರಾಯ ತಿಳಿದುಕೊಳ್ಳುವ ಕುತೂಹಲದಿಂದ, “ಸರ್, ವಿಮರ್ಶಾ ಲೇಖನಗಳು ಸುಮಾರಾಗಿ ಬಂದಿವೆ ಅನ್ನಿಸಿದೆಯಾ? ಪರವಾಗಿಲ್ಲವಾ? ಏನಾದರೂ ಸಲಹೆಗಳಿದ್ದರೆ ದಯವಿಟ್ಟು ತಿಳಿಸಿ ಸರ್. ಮುಂದಿನ ಪುಸ್ತಕದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುತ್ತೇನೆ” ಎಂದು ಕೇಳಿದ್ದೆ. ಅದಕ್ಕೆ ಅವರು, “ಪರವಾಗಿಲ್ಲ ಅಂತ ಹೇಗೆ ಹೇಳೋದು ಸುಕನ್ಯಾ ಅವರೇ? ಬಹಳ ಚೆನ್ನಾಗಿ ಬರೆದಿದ್ದೀರಿ” ಎಂದು ಮನಃಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನನ್ನ ಬರವಣಿಗೆಯ ಸ್ವಂತಿಕೆಯ ಕುರಿತು ಅವರು ಹೇಳಿದ ಮಾತುಗಳು ಇನ್ನೂ ವಿಶೇಷವಾಗಿ ನೆನಪಾಗುತ್ತವೆ. “ನೀವು ಇಲ್ಲಿಯೇ ಇದ್ದಿದ್ದರೆ, ಇಲ್ಲಿನವರು ಆ ಪುಸ್ತಕಗಳ ಕುರಿತು ಮಾಡಿದ ಭಾಷಣಗಳು, ಬರೆದ ವಿಮರ್ಶೆಗಳು ಮತ್ತು ಅಭಿಪ್ರಾಯಗಳ ಪ್ರಭಾವ ನಿಮ್ಮ ಬರವಣಿಗೆಯ ಮೇಲೂ ಆಗುತ್ತಿತ್ತು. ನೀವು ಕೀನ್ಯಾದಲ್ಲಿ ಇದ್ದಿದ್ದರಿಂದ ಒಳ್ಳೆಯದೇ ಆಯಿತು. ನಿಮ್ಮದೇ ಆದ ಒಂದು ಧಾಟಿಯನ್ನು ಅಳವಡಿಸಿಕೊಂಡು ಬರೆದಿದ್ದೀರಿ. ನಿಮ್ಮ ಬರವಣಿಗೆ ನನಗೆ ಇಷ್ಟವಾಯಿತು” ಎಂದಿದ್ದರು. ಒಬ್ಬ ಹಿರಿಯ ವಿಮರ್ಶಕರು ಕಿರಿಯ ಲೇಖಕಿಯ ಬರವಣಿಗೆಯಲ್ಲಿನ ಸ್ವಂತ ಧಾಟಿಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಣ್ಣ ಸಂಗತಿಯಲ್ಲ. ಅವರ ಆ ಮಾತುಗಳು ನನಗೆ ದೊರೆತ ಅಮೂಲ್ಯ ಪ್ರೋತ್ಸಾಹವಾಗಿದ್ದವು; ಜೊತೆಗೆ, ನನ್ನ ಬರವಣಿಗೆಯ ಜವಾಬ್ದಾರಿಯನ್ನು ನೆನಪಿಸುವ ಮಾರ್ಗದರ್ಶನವೂ ಆಗಿದ್ದವು.

ನಾನು ಬರೆದಿದ್ದ ‘ವಿಜ್ಞಾನ ರಂಗದ ದುರಂತ ನಾಯಕಿ ರೋಸಲಿಂಡ್ ಫ್ರಾಂಕ್ಲಿನ್’ ಕೃತಿಯನ್ನು ಓದಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಅವರ ಊರಿನವರಾದ, ಮನೆಮನೆ ಕವಿಗೋಷ್ಠಿಯ ರೂವಾರಿ ದಿವಂಗತ ಕಂಪಲಾಪುರ ಮೋಹನ್ ಅವರ ಕುರಿತು ಮಾತನಾಡುವಾಗ, ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನಾನು ನೀಡಿದ್ದ ಅಲ್ಪ ಆರ್ಥಿಕ ನೆರವಿನ ವಿಚಾರವನ್ನೂ ಹಂಚಿಕೊಂಡಿದ್ದೆ. ಹಾಗೆಯೇ, ಕೆ.ವಿ.ಎನ್. ಅವರಿಗಿಂತ ಹಿರಿಯರಾಗಿದ್ದ ಶಮ್ಮು ಸುಬ್ಬಣ್ಣ ಕಂಪಾಲಪುರ ಅವರ ಬಗ್ಗೆಯೂ ಮಾತನಾಡಿದ್ದೆವು. ಈ ಮಾತುಕತೆಗಳ ಬಳಿಕ ಅವರು, “ನೀವು ನಮಗೆ ಇನ್ನಷ್ಟು ಹತ್ತಿರವಾಗಿಬಿಟ್ಟಿರಿ” ಎಂದಿದ್ದರು. ಶಮ್ಮು ಸುಬ್ಬಣ್ಣ ಮತ್ತು ಕೆ.ವಿ.ಎನ್. ಅವರು ಒಂದೇ ಶಾಲೆಯಲ್ಲಿ ಓದಿದವರು. ಶಾಲಾ ದಿನಗಳಲ್ಲಿ ಇಬ್ಬರೂ ನಾಟಕಗಳಲ್ಲಿ ಭಾಗವಹಿಸುತ್ತಿದ್ದುದನ್ನೂ, ಕೆ.ವಿ.ಎನ್. ಅವರು ತೆಳ್ಳಗಿನ ಮೈಕಟ್ಟಿನ ಕಾರಣದಿಂದ ಹೆಣ್ಣಿನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದುದನ್ನೂ ಸುಬ್ಬಣ್ಣನವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಇಂತಹ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುವಾಗ ವಿದ್ವಾಂಸರ ವ್ಯಕ್ತಿತ್ವದ ಹಿಂದಿದ್ದ ಬಾಲ್ಯದ ಗೆಳೆಯನೂ ನಮ್ಮ ಮುಂದೆ ತೆರೆದುಕೊಳ್ಳುತ್ತಿದ್ದ.

ಡಾ. ನೆಲ್ಲುಕುಂಟೆ ವೆಂಕಟೇಶ್ ಅವರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ, ಅವರಿಗೆ ತಿಳಿಯದಂತೆ ಅಭಿನಂದನಾ ಗ್ರಂಥವೊಂದನ್ನು ಹೊರತರಲು ನಾವು ಯೋಜಿಸಿದ್ದೆವು. ಆ ಸಂದರ್ಭದಲ್ಲಿ ಕೆ.ವಿ.ಎನ್. ಅವರು ‘ಮಿಥಿಲೆಯ ಮಾವಿನ ಮರ’ದ ಕುರಿತು ಮಾತನಾಡಿದ್ದ ಭಾಷಣವನ್ನು ಕಳುಹಿಸಿಕೊಡುವುದಾಗಿ ಹೇಳಿ, ಅದನ್ನೇ ಅಭಿನಂದನಾ ಗ್ರಂಥದಲ್ಲಿ ಸೇರಿಸುವಂತೆ ಸೂಚಿಸಿದ್ದರು. ಆದರೆ ನೆಲ್ಲುಕುಂಟೆ ವೆಂಕಟೇಶ್ ಅವರು ಅಭಿನಂದನಾ ಗ್ರಂಥದ ಯೋಜನೆಗೆ ಒಪ್ಪದ ಕಾರಣ ಆ ಪ್ರಯತ್ನವನ್ನು ಕೈಬಿಡಬೇಕಾಯಿತು. ಈ ವಿಷಯ ತಿಳಿದಾಗ ಕೆ.ವಿ.ಎನ್. ಅವರೂ ನಮ್ಮ ಪ್ರಯತ್ನ ಕೈಗೂಡದಿದ್ದುದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಕಿರಿಯರ ಸಾಧನೆಯನ್ನು ಗುರುತಿಸಿ ಗೌರವಿಸುವ ಇಂತಹ ಪ್ರಯತ್ನಗಳ ಬಗ್ಗೆ ಅವರಿಗಿದ್ದ ಕಾಳಜಿ ಈ ಪ್ರಸಂಗದಿಂದ ತಿಳಿಯುತ್ತದೆ.

ದೂರವಾಣಿ ಕರೆಗಳಲ್ಲಿ ಬರಗೂರು ರಾಮಚಂದ್ರಪ್ಪ ಸರ್ ಅವರೊಂದಿಗಿನ ಒಡನಾಟದ ನೆನಪುಗಳನ್ನೂ ಅವರು ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಅವರೊಂದಿಗಿನ ಮತ್ತೊಂದು ನೆನಪು ನನ್ನ ಮನಸ್ಸಿನಲ್ಲಿ ಬಹಳ ಆಳವಾಗಿ ಉಳಿದಿದೆ. ಅವರ ವಿವಾಹ ವಾರ್ಷಿಕೋತ್ಸವದಂದು ಕರೆ ಮಾಡಿ, “ನೀವು ಮತ್ತು ಶ್ರೀಮತಿ ಮೇಡಂ ನೂರ್ಕಾಲ ಸುಖವಾಗಿ ಬಾಳಿರಿ” ಎಂದು ಶುಭ ಹಾರೈಸಿದ್ದೆ. ಅದಕ್ಕೆ ಅವರು, “ಅಯ್ಯೋ, ಅಷ್ಟು ವರ್ಷ ಬೇಡ ನನಗೆ. ನನಗೆ ಈಗಾಗಲೇ 78 ವರ್ಷ ವಯಸ್ಸು. ಎಷ್ಟು ಕಾಲ ಇರುತ್ತೇವೆಯೋ, ಇರುವಷ್ಟು ದಿನ ಯಾರ ಮೇಲೆಯೂ ಅವಲಂಬಿತರಾಗದೆ, ಆರೋಗ್ಯದಿಂದ ಬದುಕುವಂತಾಗಲಿ ಎಂದು ಹಾರೈಸಿ” ಎಂದಿದ್ದರು. ಅವರ ಮಾತುಗಳಲ್ಲಿ ಬದುಕಿನ ಬಗೆಗಿನ ವಾಸ್ತವಪ್ರಜ್ಞೆ, ಸ್ವಾವಲಂಬನೆಯ ಮಹತ್ವ ಮತ್ತು ವಯಸ್ಸು ಕಲಿಸಿಕೊಟ್ಟ ಅನುಭವದ ಸಾರವಿತ್ತು. ಬದುಕಿನ ದೀರ್ಘಾಯುಷ್ಯಕ್ಕಿಂತ ಆರೋಗ್ಯಪೂರ್ಣ, ಸ್ವಾಭಿಮಾನಿ ಬದುಕು ಮುಖ್ಯ ಎಂಬ ಅವರ ನಿಲುವು ನನಗೆ ಬಹಳ ಇಷ್ಟವಾಗಿತ್ತು.

ಅವರ ಹುಟ್ಟುಹಬ್ಬದಂದೂ ಕರೆ ಮಾಡಿ ಶುಭಾಶಯ ತಿಳಿಸಿದ್ದೆ. ಆಗ ಅವರು, “78 ವರ್ಷ ತುಂಬಿ 79ಕ್ಕೆ ಕಾಲಿಡುತ್ತಿದ್ದೇನೆ. ಈ ವಯಸ್ಸಿನಲ್ಲಿ ಏನು ಹಬ್ಬ ಮಾಡೋಣ ಸುಕನ್ಯಾ ಅವರೇ?” ಎಂದು ನಗುತ್ತಲೇ ಹೇಳಿದ್ದರು. ನಾನು, “ಹುಟ್ಟುಹಬ್ಬಕ್ಕೆ ಏನು ವಿಶೇಷ? ಏನು ಯೋಜನೆ ಸರ್?” ಎಂದು ಕೇಳಿದ್ದೆ. ಅದಕ್ಕೆ ಅವರು, “ಈ ವಯಸ್ಸಿನಲ್ಲಿ ಏನು ಹಬ್ಬ ಮಾಡೋಣ? ಆರೋಗ್ಯದಿಂದ ಇದ್ದರೆ ಅದೇ ದೊಡ್ಡ ಹಬ್ಬ” ಎಂದಿದ್ದರು. ಎಂತಹ ಸರಳ, ಅರ್ಥಪೂರ್ಣ ಮಾತು! ಬದುಕಿನ ಸಾರ್ಥಕತೆಯನ್ನು ಒಂದೇ ವಾಕ್ಯದಲ್ಲಿ ಕಟ್ಟಿಕೊಟ್ಟಿದ್ದರು. ಅವರ ಈ ಮಾತುಗಳು ಕೇವಲ ಆ ಕ್ಷಣಕ್ಕೆ ಹೇಳಿದ ಸಾಮಾನ್ಯ ಮಾತುಗಳಾಗಿರಲಿಲ್ಲ; ಬದುಕನ್ನು ನೋಡುವ ಅವರ ಪ್ರಬುದ್ಧ ದೃಷ್ಟಿಕೋನದ ಅಭಿವ್ಯಕ್ತಿಯಾಗಿದ್ದವು. ಇಂದು ಆ ಮಾತುಗಳು ನೆನಪಾದಾಗ ಮನಸ್ಸು ಭಾರವಾಗುತ್ತದೆ. ಆರೋಗ್ಯವೇ ದೊಡ್ಡ ಹಬ್ಬ ಎಂದು ಹೇಳುತ್ತಿದ್ದ ಅವರೇ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ.

ಅವರು ಕರೆ ಮಾಡಿದಾಗಲೆಲ್ಲ ನಮ್ಮ ಮನೆಗೆ ಬನ್ನಿ ಎಂದು ಆತ್ಮೀಯವಾಗಿ ಆಹ್ವಾನಿಸುತ್ತಿದ್ದರು. ಆ ಆಹ್ವಾನದಲ್ಲಿ ಕೇವಲ ಔಪಚಾರಿಕತೆಯಿರಲಿಲ್ಲ; ನಿಜವಾದ ಆತ್ಮೀಯತೆಯಿತ್ತು. ಕಳೆದ ಜುಲೈನಲ್ಲಿ ನಾನು ಬೆಂಗಳೂರಿಗೆ ಬಂದಿದ್ದಾಗ ಅವರ ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಮಾತನಾಡಿದಾಗ, “ಜುಲೈನಲ್ಲಿ ಬಂದಾಗ ನಮ್ಮ ಮನೆಗೆ ಬರಲಿಲ್ಲ ನೀವು. ಬೇಸರ ಆಯ್ತು” ಎಂದು ತಮ್ಮ ಅಸಮಾಧಾನವನ್ನು ಪ್ರೀತಿಯಿಂದಲೇ ವ್ಯಕ್ತಪಡಿಸಿದ್ದರು. ಅದಕ್ಕೆ ನಾನು, “ಸರ್, ಕಡಿಮೆ ದಿನಗಳಿಗಾಗಿ ಬಂದಿದ್ದೆ. ಸಮಯದ ಅಭಾವದಿಂದಾಗಿ ನಿಮ್ಮ ಮನೆಗೆ ಬರಲು ಸಾಧ್ಯವಾಗಲಿಲ್ಲ. ಡಿಸೆಂಬರ್‌ನಲ್ಲಿ ಖಂಡಿತವಾಗಿಯೂ ಬರುವೆ ಸರ್. ಬೇಸರ ಮಾಡಿಕೊಳ್ಳಬೇಡಿ” ಎಂದು ಹೇಳಿದ್ದೆ. ಅದೊಂದು ಸಾಮಾನ್ಯ ದೂರವಾಣಿ ಸಂಭಾಷಣೆಯಾಗಿರಬಹುದು. ಆದರೆ ಇಂದು ಅದೇ ಮಾತುಗಳು ನನ್ನನ್ನು ಬಹುವಾಗಿ ಕಾಡುತ್ತಿವೆ. ಡಿಸೆಂಬರ್‌ನಲ್ಲಿ ಅವರ ಮನೆಗೆ ಹೋಗಿ, ಅವರೊಂದಿಗೆ ಒಂದಿಷ್ಟು ಹೊತ್ತು ಕುಳಿತು ಮಾತನಾಡಬೇಕು, ನನ್ನ ಹೊಸ ಪುಸ್ತಕಗಳನ್ನು ಅವರ ಕೈಗಿಟ್ಟು ಅವರ ಪ್ರತಿಕ್ರಿಯೆ ತಿಳಿದುಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ ಆ ಭೇಟಿಗೆ ಕಾಲವೇ ಅವಕಾಶ ನೀಡಲಿಲ್ಲ. ನಾನು ಕೊಟ್ಟ ಭರವಸೆಯನ್ನು ಈಡೇರಿಸುವ ಮೊದಲೇ ಅವರು ನಮ್ಮನ್ನು ಅಗಲಿಬಿಟ್ಟರು. ಮುಂದಿನ ಭೇಟಿಗೆಂದು ಉಳಿಸಿಕೊಂಡಿದ್ದ ಮಾತುಗಳು ಈಗ ನೆನಪುಗಳಾಗಿ ಮಾತ್ರ ಉಳಿದಿವೆ. ಭೇಟಿಯನ್ನು ಮುಂದೂಡಬಹುದು; ಆದರೆ ಆ ಭೇಟಿಗಾಗಿ ಕಾಯುತ್ತಿದ್ದ ವ್ಯಕ್ತಿಯೇ ಇಲ್ಲವಾದಾಗ ಉಂಟಾಗುವ ಶೂನ್ಯವನ್ನು ಯಾವುದರಿಂದಲೂ ತುಂಬಲು ಸಾಧ್ಯವಿಲ್ಲ. ಅವರೊಂದಿಗೆ ಮಾತನಾಡಿದ ಅನೇಕ ವಿಷಯಗಳು, ಅವರು ಹಂಚಿಕೊಂಡ ನೆನಪುಗಳು ಮತ್ತು ಆತ್ಮೀಯವಾಗಿ ಆಡಿದ ಮಾತುಗಳು ಈಗಲೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ.

ವ್ಯಕ್ತಿಯೊಬ್ಬರು ನಮ್ಮೊಂದಿಗಿರುವಾಗ ಅವರ ಮಾತುಗಳನ್ನು ಕೇಳುವುದು ಸಹಜ. ಆದರೆ ಅವರು ಇಲ್ಲವಾದಾಗ ಆ ಧ್ವನಿಯೇ ನಮ್ಮೊಳಗೆ ಮತ್ತೆ ಮತ್ತೆ ಪ್ರತಿಧ್ವನಿಸುತ್ತದೆ. ಅವರ ಮಾತಿನ ಧಾಟಿ, ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ರೀತಿ, ಆತ್ಮೀಯವಾಗಿ ಹೆಸರಿಡಿದು ಮಾತನಾಡಿಸುತ್ತಿದ್ದ ಪರಿ—ಎಲ್ಲವೂ ನೆನಪಿನ ಪುಟಗಳಲ್ಲಿ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇನ್ನು ಮುಂದೆ ಅವರಿಗೆ ಕರೆ ಮಾಡಿ ಮಾತನಾಡಲು ಸಾಧ್ಯವಿಲ್ಲ; ಹೊಸ ಪುಸ್ತಕದ ಬಗ್ಗೆ ಅಭಿಪ್ರಾಯ ಕೇಳಲು ಸಾಧ್ಯವಿಲ್ಲ; ಯಾವುದಾದರೂ ವಿಷಯದ ಕುರಿತು ಅವರೊಂದಿಗೆ ಚರ್ಚಿಸಲು ಸಾಧ್ಯವಿಲ್ಲ ಎಂಬ ಅರಿವು ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಒಬ್ಬ ಹಿರಿಯ ವಿದ್ವಾಂಸರಾಗಿ ಅವರು ತಮ್ಮ ಜ್ಞಾನವನ್ನು ತಮ್ಮಲ್ಲೇ ಸೀಮಿತಗೊಳಿಸಿಕೊಳ್ಳಲಿಲ್ಲ. ತಮ್ಮನ್ನು ಸಂಪರ್ಕಿಸುವವರೊಂದಿಗೆ ಮಾತನಾಡುತ್ತಿದ್ದರು, ಅವರ ಬರವಣಿಗೆಯನ್ನು ಓದುತ್ತಿದ್ದರು, ಅಗತ್ಯವಿದ್ದಲ್ಲಿ ಸಲಹೆ ನೀಡುತ್ತಿದ್ದರು ಮತ್ತು ಪ್ರೋತ್ಸಾಹಿಸುತ್ತಿದ್ದರು. ಜ್ಞಾನ ಮತ್ತು ವಿದ್ವತ್ತು ವ್ಯಕ್ತಿಯನ್ನು ದೊಡ್ಡವರನ್ನಾಗಿಸಬಹುದು; ಆದರೆ ಆ ಜ್ಞಾನದೊಂದಿಗೆ ಸರಳತೆ, ಸೌಜನ್ಯ ಮತ್ತು ಇತರರನ್ನು ಪ್ರೋತ್ಸಾಹಿಸುವ ಗುಣ ಸೇರಿದಾಗ ಮಾತ್ರ ಆ ವ್ಯಕ್ತಿತ್ವ ಎಲ್ಲರ ಮನಸ್ಸಿನಲ್ಲೂ ನೆಲೆಗೊಳ್ಳುತ್ತದೆ. ಕೆ.ವಿ.ಎನ್. ಸರ್ ಅವರ ವ್ಯಕ್ತಿತ್ವದಲ್ಲಿ ಈ ಗುಣಗಳ ಸಮ್ಮಿಲನವಿತ್ತು ಎಂಬುದನ್ನು ಅವರೊಂದಿಗಿನ ನನ್ನ ಅನುಭವಗಳು ಹೇಳುತ್ತವೆ.

ಅವರ ನಿಧನದ ಸುದ್ದಿ ತಿಳಿದಾಗ ಮೊದಲು ಮನಸ್ಸಿನಲ್ಲಿ ಮೂಡಿದ ಪ್ರಶ್ನೆ—“ಇಷ್ಟು ಬೇಗ ಏಕೆ ಸರ್?” ಇನ್ನೂ ಎಷ್ಟೋ ವರ್ಷಗಳು ನಿಮ್ಮ ಅನುಭವದ ಮಾತುಗಳನ್ನು ಕೇಳಬೇಕಿತ್ತು. ನನ್ನ ಪುಸ್ತಕವನ್ನು ನಿಮ್ಮ ಕೈಗಿಡಬೇಕಿತ್ತು. ನಿಮ್ಮೊಂದಿಗೆ ಮುಖಾಮುಖಿಯಾಗಿ ಕುಳಿತು ಮಾತನಾಡಬೇಕಿತ್ತು. ನನ್ನ ಮುಂದಿನ ಬರವಣಿಗೆಯ ಕುರಿತು ನಿಮ್ಮ ಸಲಹೆಗಳನ್ನು ಪಡೆಯಬೇಕಿತ್ತು. ನಿಮ್ಮಿಂದ ಇನ್ನೂ ಕಲಿಯಬೇಕಾದದ್ದು ಬಹಳಷ್ಟಿತ್ತು. ಆದರೆ ಬದುಕು ನಮ್ಮ ನಿರೀಕ್ಷೆಯಂತೆ ನಡೆಯುವುದಿಲ್ಲ. ನಾವು ಮುಂದೂಡುವ ಭೇಟಿಗಳಿಗೆ, ನಾಳೆಗೆಂದು ಉಳಿಸಿಕೊಳ್ಳುವ ಮಾತುಗಳಿಗೆ ಮತ್ತು ಮುಂದಿನ ದಿನಗಳಲ್ಲಿ ಮಾಡಬೇಕೆಂದುಕೊಳ್ಳುವ ಯೋಜನೆಗಳಿಗೆ ಕಾಲ ಯಾವಾಗಲೂ ಅವಕಾಶ ನೀಡುತ್ತದೆ ಎಂಬ ಖಾತರಿಯಿಲ್ಲ ಎಂಬುದನ್ನು ನಿಮ್ಮ ಅಗಲಿಕೆ ಮತ್ತೊಮ್ಮೆ ಮನದಟ್ಟು ಮಾಡಿದೆ.

ನನ್ನ ‘ಆರಿಸಲಾಗದ ದೊಂದಿಗಳು’ ಕೃತಿಗೆ ಅವರು ಬರೆದ ಬೆನ್ನುಡಿ ನನ್ನ ಪಾಲಿಗೆ ಕೇವಲ ಒಂದು ಬೆನ್ನುಡಿಯಲ್ಲ; ನನ್ನ ಬರವಣಿಗೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಹಿರಿಯ ವಿದ್ವಾಂಸರ ಪ್ರೀತಿಯ ನೆನಪಿನ ಕಾಣಿಕೆ. ಆ ಪುಸ್ತಕವನ್ನು ಅವರ ಕೈಗೆ ನೀಡಿ, ಅವರೊಂದಿಗೆ ಮತ್ತೊಮ್ಮೆ ಮಾತನಾಡುವ ಆಸೆ ಹಾಗೆಯೇ ಉಳಿದುಹೋಯಿತು. ಆದರೆ ಅವರು ಬರೆದ ಬೆನ್ನುಡಿ ಈಗ ಆ ಪುಸ್ತಕದ ಒಂದು ಭಾಗ ಮಾತ್ರವಲ್ಲ; ನನ್ನ ಬರವಣಿಗೆಯ ಪಯಣದಲ್ಲಿ ಅವರು ನೀಡಿದ ಪ್ರೋತ್ಸಾಹದ ನೆನಪೂ ಹೌದು. ದೊಂದಿಯೊಂದು ಕೈಯಿಂದ ಕೈಗೆ ಸಾಗಿದಾಗ ಬೆಳಕು ಮುಂದುವರಿಯುವಂತೆ, ಅವರ ಚಿಂತನೆ ಮತ್ತು ಬರಹಗಳು ಮುಂದಿನ ತಲೆಮಾರುಗಳ ಓದು, ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ಬೆಳಕು ಚೆಲ್ಲುತ್ತಲೇ ಇರುತ್ತವೆ. ವ್ಯಕ್ತಿ ನಮ್ಮೊಂದಿಗಿಲ್ಲದಿದ್ದರೂ ವಿಚಾರಗಳು ಉಳಿಯುತ್ತವೆ; ಧ್ವನಿ ಮೌನವಾದರೂ ಅಕ್ಷರಗಳು ಮಾತನಾಡುತ್ತವೆ.

ಕೆ.ವಿ. ನಾರಾಯಣ ಅವರ ಅಗಲಿಕೆಯಿಂದ ಕನ್ನಡವು ಕೇವಲ ಒಬ್ಬ ಭಾಷಾಶಾಸ್ತ್ರಜ್ಞನನ್ನೋ, ವಿಮರ್ಶಕನನ್ನೋ ಕಳೆದುಕೊಂಡಿಲ್ಲ; ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಮಗ್ರವಾಗಿ ನೋಡುವ ಅಪರೂಪದ ಚಿಂತನಶೀಲ ವಿದ್ವಾಂಸರೊಬ್ಬರನ್ನು ಕಳೆದುಕೊಂಡಿದೆ. ಅವರ ಬರಹಗಳು ಓದುಗರನ್ನು ಪ್ರಶ್ನಿಸಲು ಪ್ರೇರೇಪಿಸುತ್ತವೆ; ಸಂಶೋಧನೆಗಳು ಹೊಸ ಅಧ್ಯಯನಗಳಿಗೆ ದಾರಿ ಮಾಡಿಕೊಡುತ್ತವೆ; ಭಾಷೆಯ ಬಗೆಗಿನ ಅವರ ಚಿಂತನೆಗಳು ನುಡಿಯ ಅಸ್ತಿತ್ವ ಮತ್ತು ಅದರ ಭವಿಷ್ಯದ ಕುರಿತು ಗಂಭೀರವಾಗಿ ಆಲೋಚಿಸುವಂತೆ ಮಾಡುತ್ತವೆ. ಅವರಂತಹ ವಿದ್ವಾಂಸರನ್ನು ನೆನಪಿಸಿಕೊಳ್ಳುವುದು ಎಂದರೆ ಅವರ ಸಾಧನೆಗಳನ್ನು ಸ್ಮರಿಸುವುದಷ್ಟೇ ಅಲ್ಲ, ಅವರು ಪ್ರತಿಪಾದಿಸಿದ ಅಧ್ಯಯನಶೀಲತೆ, ವೈಚಾರಿಕ ಸ್ವಾತಂತ್ರ್ಯ ಮತ್ತು ಭಾಷೆಯ ಬಗೆಗಿನ ಹೊಣೆಗಾರಿಕೆಯನ್ನು ಮುಂದುವರಿಸುವುದೂ ಆಗಿದೆ.

ಕೆಲವು ದೊಂದಿಗಳು ನಮ್ಮ ಹಾದಿಯಲ್ಲಿ ಬೆಳಗುತ್ತವೆ; ಕೆಲವು ದೊಂದಿಗಳು ನಮ್ಮ ಕೈಯಿಂದ ದೂರವಾದರೂ ಅವು ನೀಡಿದ ಬೆಳಕು ನಮ್ಮ ಪಯಣವನ್ನು ನಿರಂತರವಾಗಿ ಬೆಳಗುತ್ತಿರುತ್ತದೆ. ಕೆ.ವಿ.ಎನ್. ಸರ್ ಅವರ ಜ್ಞಾನ, ಚಿಂತನೆ, ಸಾಹಿತ್ಯಿಕ ಕೊಡುಗೆ ಮತ್ತು ಪ್ರೋತ್ಸಾಹದ ಮಾತುಗಳೂ ಅಂತಹ ಬೆಳಕಿನಂತೆಯೇ. ಅವರ ದೈಹಿಕ ಅನುಪಸ್ಥಿತಿಯಿಂದ ಆ ಬೆಳಕು ನಂದುವುದಿಲ್ಲ. ಅವರು ಬಿಟ್ಟುಹೋದ ಕೃತಿಗಳು, ಚಿಂತನೆಗಳು, ಸಂಶೋಧನೆಗಳು ಮತ್ತು ಅವರಿಂದ ಪ್ರೇರಣೆ ಪಡೆದ ಅನೇಕ ವಿದ್ಯಾರ್ಥಿಗಳು, ಬರಹಗಾರರು ಹಾಗೂ ಸಾಹಿತ್ಯಾಸಕ್ತರ ಮೂಲಕ ಆ ಬೆಳಕು ಮುಂದುವರಿಯುತ್ತಲೇ ಇರುತ್ತದೆ.

ಕೆ.ವಿ.ಎನ್. ಸರ್, ನೀವು ನಮ್ಮೊಂದಿಗಿಲ್ಲ. ಆದರೆ ನಿಮ್ಮ ಚಿಂತನೆಗಳು ನಮ್ಮೊಂದಿಗಿವೆ. ನಿಮ್ಮ ಬರಹಗಳು ನಮ್ಮೊಂದಿಗಿವೆ. ನೀವು ನೀಡಿದ ಪ್ರೋತ್ಸಾಹದ ಮಾತುಗಳು ನನ್ನೊಂದಿಗಿವೆ. ನೀವು ಹಚ್ಚಿದ ಜ್ಞಾನದ ದೊಂದಿಗಳು ಮುಂದಿನ ಪೀಳಿಗೆಗೂ ಬೆಳಕು ನೀಡುತ್ತಲೇ ಇರುತ್ತವೆ.

ಅಗಲಿದ ಹಿರಿಯ ಚೇತನಕ್ಕೆ ನನ್ನ ಹೃದಯಪೂರ್ವಕ ಶ್ರದ್ಧಾಂಜಲಿ. ಅವರ ಕುಟುಂಬದವರಿಗೆ, ಆತ್ಮೀಯರಿಗೆ, ಶಿಷ್ಯವೃಂದಕ್ಕೆ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.

ಕೆ.ವಿ.ಎನ್. ಸರ್, ನಿಮ್ಮ ನೆನಪುಗಳು ಸದಾ ಹಸಿರು. ನಿಮ್ಮ ಅಗಲಿಕೆ ತುಂಬಲಾರದ ನಷ್ಟ. ನಿಮಗೆ ಭಾವಪೂರ್ಣ ನುಡಿನಮನಗಳು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಸುಕನ್ಯಾ ಸೂನಗಹಳ್ಳಿ, ನೈರೋಬಿ

contributor