×
Ad

ಅಮಿತ್ ಮಾಳವೀಯ ಎಂಬ ಸುಳ್ಳಿನ ಕಾರ್ಖಾನೆ!

Update: 2025-09-03 12:49 IST

ರಾಜಕೀಯ ಮಾಡದೆ, ಬರೀ ಸುಳ್ಳು ಹಾಗೂ ದ್ವೇಷದ ಮೂಲಕ ಅಮಾಯಕ ನಾಗರಿಕರ ಬ್ರೈನ್ ವಾಷ್ ಮಾಡಿ ಅವರನ್ನು ಪರಸ್ಪರ ದ್ವೇಷಿಸುವಂತೆ ಮಾಡಿದ ಮಾಳವೀಯ ಈ ದೇಶಕ್ಕೆ, ಇಲ್ಲಿನ ಸಂವಿಧಾನಕ್ಕೆ, ಇಲ್ಲಿನ ಜನರಿಗೆ ಬಹುದೊಡ್ಡ ದ್ರೋಹ ಎಸಗಿದ್ದಾರೆ.

ಬಿಜೆಪಿ ರಾಜಕೀಯ ಉತ್ತುಂಗಕ್ಕೆ ಏರುವಲ್ಲಿ ತನ್ನ ದೊಡ್ಡ ಪಾತ್ರವಿದೆ ಎಂದು ಮಾಳವೀಯ ಹೆಮ್ಮೆ ಪಟ್ಟುಕೊಳ್ಳಬಹುದು.

ಆದರೆ ಅದೆಷ್ಟೋ ಹಿಂದೂ ಮುಸ್ಲಿಮರು ತಮ್ಮ ಜೀವ ಬಲಿದಾನ ನೀಡಿ ಕಟ್ಟಿದ ಈ ದೇಶದಲ್ಲಿ ಇವತ್ತು ಪರಸ್ಪರ ಅಸಹಿಷ್ಣುತೆ, ಅನುಮಾನ, ಮತೀಯ ಹಿಂಸೆ ಈ ಪರಿ ಹೆಚ್ಚಾಗಿರುವುದಕ್ಕೂ ತಾನೇ ನಿರ್ಣಾಯಕ ಕೊಡುಗೆ ನೀಡಿದ್ದೇನೆ ಎಂದು ಈ ವ್ಯಕ್ತಿ ತಲೆತಗ್ಗಿಸಬೇಕಾಗಿದೆ

ಹಿಟ್ಲರ್‌ನ ಮಂತ್ರಿ ಜೋಸೆಫ್ ಗೋಬೆಲ್ಸ್. ಸುಳ್ಳನ್ನೇ ಮತ್ತೆ ಮತ್ತೆ ಹೇಳುತ್ತಿದ್ದರೆ, ಜನರು ಅದನ್ನೇ ಕಡೆಗೆ ಸತ್ಯವೆಂದು ನಂಬಲು ಶುರು ಮಾಡುತ್ತಾರೆ ಎಂಬುದು ಅವನ ಪ್ರತಿಪಾದನೆಯಾಗಿತ್ತು. ಮತ್ತವನು ಅದನ್ನೇ ಮಾಡಿದ್ದ. ಇಡೀ ಜಗತ್ತೇ ಬೆಚ್ಚಿಬಿದ್ದ ಯಹೂದಿಗಳ ನರಮೇಧದಲ್ಲಿ ಅವನ ಸುಳ್ಳಿನ ಪ್ರಚಾರದ ಪಾಲು ದೊಡ್ಡದಿತ್ತು.

ಭಾರತದಲ್ಲೂ ಸುಳ್ಳು ಹಬ್ಬಿಸುವ ದೊಡ್ಡ ಫ್ಯಾಕ್ಟರಿಗಳೇ ಇವೆ. ಇಂತಹವರಲ್ಲೊಬ್ಬರು ಸುಳ್ಳುಗಳನ್ನು ಹರಡುವುದರಲ್ಲಿ ಗೋಬೆಲ್ಸ್ ಆಗಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ.

ಈ ಐಟಿ ಸೆಲ್‌ನ ಕೆಲಸ ಪ್ರಮುಖವಾಗಿ ಏನೆಲ್ಲಾ ಅಂದರೆ ಮೋದಿಯನ್ನು ಮಹಾನ್ ಎಂದು ಬಿಂಬಿಸುವುದು. ಹಿಂದೂ, ಮುಸ್ಲಿಮರ ನಡುವೆ ದ್ವೇಷ ಹಚ್ಚುವ ನೆಪವನ್ನು ಹುಡುಕುತ್ತಲೇ ಇರುವುದು. ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನು ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಎಂದು ಚಿತ್ರಿಸುವುದು. ರಾಜಕೀಯ ವಿರೋಧಿಗಳ ಪ್ರತಿಷ್ಠೆ ಹಾಳು ಮಾಡುವುದು. ಪತ್ರಕರ್ತರು ಅಥವಾ ಹೋರಾಟಗಾರರನ್ನು ಬೆದರಿಸಿ ಮೌನಗೊಳಿಸಲು ನೊಡುವುದು. ಇವೆಲ್ಲವೂ ಅಮಿತ್ ಮಾಳವೀಯ ನೇತೃತ್ವದ ಐಟಿ ಸೆಲ್‌ನ ಮಹಾ ಆಟದ ಭಾಗಗಳಾಗಿವೆ.

ಮಾಳವೀಯ, ಮೋದಿ ಮತ್ತು ಶಾ ಇಬ್ಬರಿಗೂ ಅತಿ ಹತ್ತಿರದವರು ಎಂದೇ ಹೇಳಲಾಗುತ್ತದೆ.

2009ರಲ್ಲಿ ಬಿಜೆಪಿಯೊಂದಿಗೆ ಬುದ್ಧಿಜೀವಿಗಳನ್ನು ಸಂಪರ್ಕಿಸಲು ‘ಫ್ರೆಂಡ್ಸ್ ಆಫ್ ಬಿಜೆಪಿ’ ಎಂಬ ವೇದಿಕೆ ಶುರುಮಾಡುವ ಮೂಲಕ ಅವರು ಮುನ್ನೆಲೆಗೆ ಬಂದರು.

2010ರಲ್ಲಿ ಬಿಜೆಪಿಯ ಖಜಾಂಚಿಯಾಗಿದ್ದ ಪಿಯೂಷ್ ಗೋಯಲ್ ಮೂಲಕ ಮಾಳವೀಯ ಬಿಜೆಪಿಯ ಉನ್ನತ ನಾಯಕರ ಸಂಪರ್ಕಕ್ಕೆ ಬಂದರು. 2014ರ ಲೋಕಸಭಾ ಚುನಾವಣೆಗಳ ಹೊತ್ತಲ್ಲಿ, ಬಿಜೆಪಿಯ ಆಗಿನ ಐಟಿ ಸೆಲ್ ಮುಖ್ಯಸ್ಥ ಅರವಿಂದ್ ಗುಪ್ತಾ ಅವರೊಂದಿಗೆ ಕೆಲಸ ಮಾಡಲು ಮಾಳವೀಯಗೆ ಅವಕಾಶ ಸಿಕ್ಕಿತು. ಮೋದಿ ಗೆದ್ದು, ಒಂದು ವರ್ಷದ ತರುವಾಯ ಅರವಿಂದ್ ಗುಪ್ತಾ ಜಾಗದಲ್ಲಿ ಅಮಿತ್ ಮಾಳವೀಯ ಬಂದುಬಿಟ್ಟರು.

ಹೀಗೆ ಅವರು ಬಿಜೆಪಿಯ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕರಾಗುವುದರೊಂದಿಗೆ ದೇಶದಲ್ಲಿ ಸುಳ್ಳು, ದ್ವೇಷ ಮತ್ತು ವಂಚನೆಯ ಮಹಾ ಸರಣಿಯೂ ಶುರುವಾಯಿತು.

ಈಗ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡುತ್ತಿರುವಾಗಲೂ, ಮಾಳವೀಯ ಸುಮ್ಮನಾಗದೆ, ಬಹಳ ಕಷ್ಟಪಟ್ಟು ಒಂದು ಸುಳ್ಳು ದಾಖಲೆ ತಂದರು.

ಸೋನಿಯಾ ಗಾಂಧಿ 1980ರಲ್ಲಿ ಇಟಾಲಿಯನ್ ಪ್ರಜೆಯಾಗಿದ್ದಾಗ ಮತ್ತು ನಂತರ 1983ರಲ್ಲಿ, ಅವರು ಭಾರತೀಯ ಪೌರತ್ವ ಪಡೆಯುವ ಕೆಲ ತಿಂಗಳುಗಳ ಮೊದಲು ಮತದಾರರ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದ್ದರು ಎಂದು ಮಾಳವೀಯ ಹೇಳಿಕೊಂಡರು.

ಆದರೆ ಅವರ ಸುಳ್ಳಿನಾಟ ಬಯಲಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಸತ್ಯ ಏನೆಂಬುದನ್ನು ಕೇರಳ ಕಾಂಗ್ರೆಸ್ ಮಾಳವೀಯ ಮುಖಕ್ಕೆ ಹಿಡಿಯಿತು.

ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು 1991ರ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ 69ರ ಮೂಲಕ ರಚಿಸಲಾಯಿತು. 1980ರಲ್ಲಿ ದಿಲ್ಲಿ ಒಂದು ಕೇಂದ್ರಾಡಳಿತ ಪ್ರದೇಶವಾಗಿತ್ತು. ನಿಮ್ಮ ಪ್ರಧಾನಿ ಮೋದಿಯವರಿಂದ ಉತ್ತಮ ಸಲಹೆಗಳನ್ನು ಪಡೆಯಿರಿ ಎಂದು ಕೇರಳ ಕಾಂಗ್ರೆಸ್ ತಿವಿಯಿತು.

ಅಮಿತ್ ಮಾಳವೀಯ ಶೇರ್ ಮಾಡಿದ 1980ರದ್ದು ಎಂದು ತೋರಿಸಲಾದ ದಾಖಲೆಯಲ್ಲಿ ‘ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ’ ಎಂದು ಬರೆದಿತ್ತು. ಆದರೆ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ 1992ರಲ್ಲಿ.

ಈ ರೀತಿ ನಕಲಿ ದಾಖಲೆ ತೋರಿಸುವುದು ಬಿ.ಎನ್.ಎಸ್. ಸೆಕ್ಷನ್ 336(3) ಪ್ರಕಾರ ಏಳು ವರ್ಷ ಜೈಲು ಶಿಕ್ಷೆಗೆ ಕಾರಣವಾಗುತ್ತದೆ ಎಂದು ತೃಣಮೂಲ ಸಂಸದ ಸಾಕೇತ್ ಗೋಖಲೆ ಕೂಡ ಕುಟುಕಿದರು.

ಇಷ್ಟು ದೊಡ್ಡ ಅವಮಾನದ ನಂತರವೂ ಮಾಳವೀಯಗೆ ಅದೇನೂ ಅನ್ನಿಸುವುದಿಲ್ಲ. ಅವರ ಉದ್ದೇಶವೇ ಸುಳ್ಳನ್ನು ಅದು ಸುಳ್ಳೆಂದು ಯಾರೋ ಹೇಳುವ ಮೊದಲೇ ಅದೇ ಸತ್ಯ ಎಂದು ನಂಬಿಸಿ ಲಕ್ಷ ಲಕ್ಷ ಜನರಿಗೆ ಮುಟ್ಟಿಸಿಬಿಡುವುದಾಗಿದೆ.

ಸತ್ಯ ಹಾಗೂ ತಾರ್ಕಿಕತೆಗೂ ಮಾಳವೀಯಗೂ ಸಂಬಂಧ ಇಲ್ಲ. ಅವರದೇನಿದ್ದರೂ ಹಸಿ ಹಸಿ ಸುಳ್ಳು, ಅದಕ್ಕೆ ಅಸಹಿಷ್ಣುತೆ ಹಾಗೂ ದ್ವೇಷದ ಮಸಾಲೆ. ಜೊತೆಗೆ ದೇಶಭಕ್ತಿಯ ಹುಸಿ ಮೇಕಪ್.

ಅವರು ಸತ್ಯಗಳನ್ನು ತಿರುಚಿ, ಬಿಜೆಪಿಗೆ ಅನುಕೂಲಕರವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಾರೆ. ಅದಕ್ಕಾಗಿ ಅವರು ರಾಷ್ಟ್ರೀಯ ಭದ್ರತೆಯನ್ನು ಬೇಕಾದರೂ ಪಣಕ್ಕಿಡುತ್ತಾರೆ.

ಎಪ್ರಿಲ್ 22ರಂದು ಪಹಲ್ಗಾಮ್ ದಾಳಿ ನಡೆಯಿತು. 26 ಭಾರತೀಯರು ಪ್ರಾಣ ಕಳೆದುಕೊಂಡರು. ದೇಶದಲ್ಲಿ ಕೋಪದ ವಾತಾವರಣವಿತ್ತು. ಅದರ ಹೊರತಾಗಿಯೂ, ಮಾಳವೀಯ ತನ್ನ ಕೊಳಕು ರಾಜಕೀಯ ಮಾಡುವುದನ್ನು ನಿಲ್ಲಿಸಲಿಲ್ಲ. ಅವರಿಗೆ ಭಯೋತ್ಪಾದಕ ಘಟನೆಯ ಬಗ್ಗೆ ಕೋಪವಿರಲಿಲ್ಲ, ಹತ್ಯೆಗಳ ಬಗ್ಗೆ ದುಃಖವಿರಲಿಲ್ಲ. ಅವರು ವಿಪತ್ತಿನ ಹೊತ್ತಲ್ಲೂ ರಾಜಕೀಯ ಆಟ ಶುರುಮಾಡಿದ್ದರು.

ಅರ್ನಬ್ ಗೋಸ್ವಾಮಿ ಮೇ 15ರಂದು, ಕಾಂಗ್ರೆಸ್ ತುರ್ಕಿಯದಲ್ಲಿ ಕಚೇರಿ ಹೊಂದಿದೆ ಎಂದು ಹೇಳುತ್ತ, ಇಸ್ತಾಂಬುಲ್ ಕಾಂಗ್ರೆಸ್ ಕೇಂದ್ರದ ಚಿತ್ರ ತೋರಿಸಿದ್ದರು. ಇದನ್ನೇ ಮೇ 17ರಂದು ಮಾಳವೀಯ ಶೇರ್ ಮಾಡಿದರು.ರಾಹುಲ್ ಗಾಂಧಿ ಉತ್ತರಿಸಲಿ ಎಂದರು.

ತುರ್ಕಿಯದಲ್ಲಿ ಕಾಂಗ್ರೆಸ್ ಪಕ್ಷದ ಅಂತಹದ್ದೊಂದು ಕಚೇರಿಯೇ ಇರಲಿಲ್ಲ. ಅದು ಹಸಿ ಸುಳ್ಳಾಗಿತ್ತು

ಮಾಳವೀಯ ಮತ್ತು ಅರ್ನಬ್ ವಿರುದ್ಧ ಕಾಂಗ್ರೆಸ್ ಎಫ್‌ಐಆರ್ ದಾಖಲಿಸಿತು. ಅರ್ನಬ್ ಅವರ ಚಾನೆಲ್ ಕ್ಷಮೆಯಾಚಿಸಿತು. ಆದರೆ ಭಂಡ ಮಾಳವೀಯ ಇನ್ನೂ ಅದೇ ಸುಳ್ಳನ್ನು ಹಿಡಿದು ಕೂತಿದ್ದಾರೆ.

ಅವರು ಎಫ್‌ಐಆರ್ ಬಗ್ಗೆಲ್ಲ ಹೆದರುವುದಿಲ್ಲ. ಏಕೆಂದರೆ, ವಕೀಲರ ದೊಡ್ಡ ತಂಡ ಮತ್ತು ಇಡೀ ಮೋದಿ ಸರಕಾರ ಅವರ ಜೊತೆ ಇದೆ. ದಿಲ್ಲಿಯಲ್ಲಿ ಕುಳಿತ ಮಾಳವೀಯರನ್ನು ಅಲ್ಲಿನ ಪೊಲೀಸರು ಹೇಗೆ ಮುಟ್ಟಲು ಸಾಧ್ಯ? ಬದಲಿಗೆ ಅವರು ಬೇರೆ ರಾಜ್ಯದ ಪೊಲೀಸರು ಬಂದು ಬಂಧಿಸದಂತೆ ಮಾಳವೀಯಗೆ ರಕ್ಷಣೆ ಕೊಡುತ್ತಾರೆ.

ಮಾರ್ಚ್ 14, 2024ರಂದು ಮಾಳವೀಯ ರಾಹುಲ್ ಗಾಂಧಿಗೆ ಸಂಬಂಧಿಸಿದ ವೀಡಿಯೊ ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ‘ಇಂಡಿಯಾ’ ಒಕ್ಕೂಟದ ಕಾರ್ಯಕ್ರಮದಲ್ಲಿ ರಾಹುಲ್ ಅವರು ವಿಠ್ಠಲನ ವಿಗ್ರಹ ಸ್ವೀಕರಿಸಲು ನಿರಾಕರಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ ಈ ವೀಡಿಯೊ ಪರಿಶೀಲಿಸಿದಾಗ, ಮಾಳವೀಯ ದುಷ್ಕೃತ್ಯ ಮತ್ತೆ ಬಯಲಾಯಿತು.

ಮಾಳವೀಯ ಹಾಕಿದ್ದ ವೀಡಿಯೊ ಎಡಿಟ್ ಮಾಡಿದ್ದು. ಆದರೆ ಇಡೀ ವೀಡಿಯೊವನ್ನು ನೋಡುವಾಗ ರಾಹುಲ್ ಗಾಂಧಿ ವಿಠ್ಠಲನ ವಿಗ್ರಹವನ್ನು ಗೌರವದಿಂದ ಸ್ವೀಕರಿಸುತ್ತಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಮಾಳವೀಯ ಮಾಡುವ ದುಷ್ಟ ಕೆಲಸವೇ ಅಂತಹದ್ದು. ಸತ್ಯಗಳನ್ನು ತಿರುಚುವುದು ಮತ್ತು ಬಿಜೆಪಿ ಪರ ನಿರೂಪಣೆಯನ್ನು ಮುಂದೆ ತರುವುದು. ಜನರನ್ನು ದಾರಿ ತಪ್ಪಿಸಬೇಕು. ಅವರನ್ನು ಮೂರ್ಖರನ್ನಾಗಿ ಮಾಡಬೇಕು ಮತ್ತು ಬಿಜೆಪಿಗೆ ಮತಗಳನ್ನು ಗಳಿಸಲು ಪ್ರಯತ್ನಿಸಬೇಕು.

28 ನವೆಂಬರ್ 2020ರಂದು ರೈತರ ಪ್ರತಿಭಟನೆ ನಡೆಯುತ್ತಿತ್ತು. ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಲಾಠಿ ಚಾರ್ಜ್‌ನ ಫೋಟೊಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ರಾಹುಲ್ ಗಾಂಧಿ ಆ ಫೋಟೊ ಹಂಚಿಕೊಂಡು, ‘ಇದು ತುಂಬಾ ದುಃಖಕರ’ ಎಂದು ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಳವೀಯ, ರಾಹುಲ್ ಗಾಂಧಿಯನ್ನು ‘‘ಅತ್ಯಂತ ಕುಖ್ಯಾತ ವಿರೋಧ ಪಕ್ಷದ ನಾಯಕ’’ ಎಂದರು. ರಾಹುಲ್ ಶೇರ್ ಮಾಡಿದ್ದು ನಕಲಿ ಫೋಟೊ ಎಂಬಂತೆ ಅಪಪ್ರಚಾರ ಮಾಡಿದರು. ಫೋಟೊಗಳು ಮತ್ತು ವೀಡಿಯೊಗಳ ಕೊಲಾಜ್ ಅನ್ನು ಹಂಚಿಕೊಂಡರು. ಆದರೆ ಈ ಫೋಟೊ ತೆಗೆದ ಪಿಟಿಐ ಫೋಟೊ ಜರ್ನಲಿಸ್ಟ್ ರವಿ ಚೌಧರಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದಾಗ, ಮಾಳವೀಯ ರಹಸ್ಯ ಬಹಿರಂಗವಾಗಿತ್ತು.

ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಮತ್ತು ರಾಹುಲ್ ಗಾಂಧಿಯವರ ಹೇಳಿಕೆ ಸರಿಯಾಗಿದೆ ಎಂದು ರವಿ ಚೌಧರಿ ಹೇಳಿದ್ದರು ಮತ್ತು ಫೋಟೊದಿಂದಲೂ ಆದು ಸ್ಪಷ್ಟವಾಗಿತ್ತು.

ಅದೇ ರೀತಿ, ಜನವರಿ 15, 2020 ರಂದು ಶಾಹೀನ್ ಬಾಗ್‌ನಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆ ಹೊತ್ತಲ್ಲಿ ಮಾಳವೀಯ ವೀಡಿಯೊ ಹಂಚಿಕೊಂಡು, ಪ್ರತಿಭಟನೆಗೆ ಹಣ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಮಾಳವೀಯ ಟ್ವೀಟ್ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ತೀವ್ರ ಚರ್ಚೆಗಳು ನಡೆದವು. ಪ್ರತಿಭಟನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಮುಸ್ಲಿಮರ ವಿರುದ್ಧ ನಿರೂಪಣೆಗೆ ಯತ್ನಿಸಲಾಯಿತು. ಆದರೆ ಆಲ್ಟ್ ನ್ಯೂಸ್ ಮತ್ತು ನ್ಯೂಸ್ ಲಾಂಡ್ರಿ ಈ ವೀಡಿಯೊದ ಫ್ಯಾಕ್ಟ್ ಚೆಕ್ ಮಾಡಿದಾಗ ಸತ್ಯ ಹೊರಬಂತು.

ವೀಡಿಯೊವನ್ನು ಶಾಹೀನ್ ಬಾಗ್‌ನಿಂದ 8 ಕಿ.ಮೀ. ದೂರದಲ್ಲಿ ಚಿತ್ರೀಕರಿಸಿರುವುದು ಕಂಡುಬಂತು. ಮಾಳವೀಯ ಆರೋಪ ಸಂಪೂರ್ಣ ಸುಳ್ಳು ಎಂಬುದು ಗೊತ್ತಾಯಿತು.

ಅದಾದ ಎರಡು ದಿನಗಳ ನಂತರ, ಶಾಹೀನ್ ಬಾಗ್ ನಲ್ಲಿ ವೃದ್ಧರೊಬ್ಬರು ಊಟ ಮಾಡುತ್ತಿರುವ ಫೋಟೊ ಹಂಚಿಕೊಂಡ ಮಾಳವೀಯ, ಶಾಹೀನ್ ಬಾಗ್‌ನಲ್ಲಿ ಬಿರಿಯಾನಿ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಅದೇ ರೀತಿ ಡಿಸೆಂಬರ್ 28, 2019ರಂದು, ಲಕ್ನೊದ ಘಂಟಾಘರ್‌ನಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸುವ ಪ್ರತಿಭಟನಾಕಾರರ ಫೋಟೊವನ್ನು ಮಾಳವೀಯ ಹಂಚಿಕೊಂಡರು. ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಲಾಗುತ್ತಿದೆ ಎಂದು ಹೇಳಿಕೊಂಡರು. ಆದರೆ ಅಲ್ಲೂ ಮಾಳವೀಯ ಸುಳ್ಳು ಬಯಲಾಯಿತು.

ಪ್ರತಿಭಟನಾಕಾರರು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗಲಿಲ್ಲ, ಬದಲಾಗಿ ಕಾಶಿಫ್ ಸಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು.

ಕಾಶಿಫ್ ಎಐಎಂಐಎಂ ಲಕ್ನೊ ಮುಖ್ಯಸ್ಥರು.

ಡಿಸೆಂಬರ್ 16, 2019ರಂದು ಮಾಳವೀಯ ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವೀಡಿಯೊ ವೈರಲ್ ಮಾಡಿದರು. ಅದರಲ್ಲಿ ಹಿಂದೂಗಳ ವಿರುದ್ಧ ಘೋಷಣೆ ಕೂಗಲಾಗುತ್ತಿದೆ ಎಂದು ಆರೋಪಿಸಲಾಯಿತು.

ಆದರೆ ಇಲ್ಲಿಯೂ ಮಾಳವೀಯ ವಂಚನೆ ಬಯಲಾಯಿತು. ವೀಡಿಯೊ ಎಡಿಟ್ ಮಾಡಿದ್ದಾಗಿತ್ತು.

ವಿದ್ಯಾರ್ಥಿಗಳು ಹಿಂದುತ್ವ, ಸಾವರ್ಕರ್, ಬಿಜೆಪಿ, ಬ್ರಾಹ್ಮಣತ್ವ ಮತ್ತು ಜಾತಿವಾದದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ನವೆಂಬರ್ 2017ರಲ್ಲಿ ಮಾಳವೀಯ ಪಂಡಿತ್ ನೆಹರೂ ಅವರ ಅವಹೇಳನ ಮಾಡಲು ಯತ್ನಿಸಿದರು. ನೆಹರೂ ಹಲವಾರು ಮಹಿಳೆಯರೊಂದಿಗೆ ಇರುವ ಫೋಟೊಗಳ ಕ್ಲಿಪ್ ಅನ್ನು ಹಂಚಿಕೊಂಡರು.

ಆದರೆ ಹೆಚ್ಚಿನ ಫೋಟೊಗಳಲ್ಲಿ, ನೆಹರೂ ತಮ್ಮ ಸಹೋದರಿ ಅಥವಾ ಸೊಸೆಯೊಂದಿಗೆ ಅಥವಾ ಜಾಕ್ವೆಲಿನ್ ಕೆನಡಿಯಂತಹ ವಿಶ್ವಪ್ರಸಿದ್ಧ ವ್ಯಕ್ತಿಗಳೊಂದಿಗೆ ಇದ್ದರು.

ಈ ಫೋಟೊ ವೈರಲ್ ಆಗಿತ್ತು. ಆದರೆ ಜನರು ಸತ್ಯವನ್ನು ತಿಳಿದಾಗ, ಮಾಳವೀಯ ಈ ಟ್ವೀಟ್ ಅನ್ನು ಅಳಿಸಿ ಓಡಿಹೋಗಬೇಕಾಯಿತು.

ನವೆಂಬರ್ 27, 2018ರಂದು ಮಾಳವೀಯ ಮನಮೋಹನ್ ಸಿಂಗ್ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ವೀಡಿಯೊದಲ್ಲಿ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ಸರಕಾರಗಳು ತುಂಬಾ ಒಳ್ಳೆಯವಾಗಿವೆ ಎಂದು ಮನಮೋಹನ್ ಸಿಂಗ್ ಹೇಳುವುದನ್ನು ಕೇಳಬಹುದು.

ಈ ಕ್ಲಿಪ್ ನೋಡಿದರೆ, ಡಾ. ಮನಮೋಹನ್ ಸಿಂಗ್ ತಮ್ಮ ಕಾಲದ ಬಿಜೆಪಿ ಸರಕಾರಗಳನ್ನು ಹೊಗಳುತ್ತಿದ್ದಾರೆ ಎಂಬಂತೆ ಅನಿಸುತ್ತದೆ. ಆದರೆ ಈ ವೀಡಿಯೊ ಕೂಡ ಎಡಿಟ್ ಮಾಡಿದ್ದಾಗಿತ್ತು.

ವಾಸ್ತವವಾಗಿ ಮನಮೋಹನ್ ಸಿಂಗ್ ‘‘ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ಸರಕಾರಗಳೊಂದಿಗಿನ ನನ್ನ ಸಂಬಂಧಗಳು ತುಂಬಾ ಉತ್ತಮವಾಗಿವೆ’’ ಎಂದು ಹೇಳಿದ್ದರು.

ಮಾಳವೀಯ ನವೆಂಬರ್ 2017ರಲ್ಲಿ ಮತ್ತೊಂದು ನಕಲಿ ಹೇಳಿಕೆ ನೀಡಿದ್ದರು. ಗುಜರಾತ್‌ನ ಸೋಮನಾಥ ದೇವಾಲಯದ ರಿಜಿಸ್ಟರ್‌ನಲ್ಲಿ ರಾಹುಲ್ ಗಾಂಧಿ ತನ್ನನ್ನು ಹಿಂದೂಯೇತರ ಎಂದು ಉಲ್ಲೇಖಿಸಿದ್ದಾಗಿ ಹೇಳಲಾಯಿತು. ಆದರೆ ಅದರ ಕೈಬರಹವನ್ನು ವಿಶ್ಲೇಷಿಸಿದಾಗ, ಸುಳ್ಳು ಸ್ಪಷ್ಟವಾಗಿ ಕಂಡುಬಂತು.

ನವೆಂಬರ್ 2017ರಲ್ಲಿಯೇ, ಮಾಳವೀಯ ರಾಹುಲ್ ಗಾಂಧಿಯವರ ವೀಡಿಯೊವನ್ನು ಪೋಸ್ಟ್ ಮಾಡಿದರು.

ವೀಡಿಯೊದಲ್ಲಿ, ರಾಹುಲ್ ಗಾಂಧಿ ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ, ಇನ್ನೊಂದು ಕಡೆಯಿಂದ ಚಿನ್ನ ಹೊರಬರುವ ಯಂತ್ರವನ್ನು ನಾವು ತರುತ್ತೇವೆ ಎಂದು ಹೇಳುತ್ತಿರುವುದು ಇದೆ. ಮಾಳವೀಯ ಹಾಕಿದ ಈ ವೀಡಿಯೊ ಕೂಡ ಎಡಿಟ್ ಆದದ್ದು. ಇದು ವೈರಲ್ ಆಗಿ ರಾಹುಲ್ ಗಾಂಧಿಯವರ ಇಮೇಜ್‌ಗೆ ಸಾಕಷ್ಟು ಹಾನಿ ಉಂಟುಮಾಡಿತು. ಮಾಳವೀಯ ವೈರಲ್ ಮಾಡಿದ ರಾಹುಲ್ ಗಾಂಧಿಯವರ ಈ ಎಡಿಟೆಡ್ ವೀಡಿಯೊ 2017ರ ನವೆಂಬರ್ 12ರದ್ದಾಗಿತ್ತು.

ಗುಜರಾತ್‌ನ ಪಠಾಣ್‌ನಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದರು.ಮೋದಿಯ ಭರವಸೆಯನ್ನು ಉಲ್ಲೇಖಿಸಿ, ರಾಹುಲ್ ಗಾಂಧಿ, ‘‘ಈ ಕಡೆಯಿಂದ ಆಲೂಗಡ್ಡೆ ಹಾಕಿ. ಇನ್ನೊಂದು ಕಡೆಯಿಂದ ಚಿನ್ನ ತೆಗೆಯಿರಿ. ಇವು ನನ್ನ ಮಾತುಗಳಲ್ಲ. ಇವು ನರೇಂದ್ರ ಮೋದಿ ಮಾತುಗಳು’’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ ಜನರು ಮಾಳವೀಯ ಅಪ್‌ಲೋಡ್ ಮಾಡಿದ ವೀಡಿಯೊ ನಿಜ ಎಂದು ಜನರು ಬಹಳ ಸಮಯದವರೆಗೆ ನಂಬಿದ್ದರು.

ಆಗಸ್ಟ್ 2017ರಲ್ಲಿ ಮಾಳವೀಯ ರಾಹುಲ್ ಗಾಂಧಿಯನ್ನು ಅತ್ಯಾಚಾರಿ ಗುರ್ಮೀತ್ ಸಿಂಗ್ ಜೊತೆ ಜೋಡಿಸಲು ಪ್ರಯತ್ನಿಸಿದರು.

ರಾಹುಲ್ ಗಾಂಧಿ 2017ರ ಜನವರಿಯಲ್ಲಿ ಬೆಂಬಲ ಪಡೆಯಲು ಡೇರಾ ಸಚ್ಚಾ ಸೌದಾಗೆ ಹೋಗಿದ್ದರು ಎಂದು ಮಾಳವೀಯ ಹೇಳಿಕೊಂಡಿದ್ದರು. ಅದು ಕೂಡ ಮಾಳವೀಯ ಕಟ್ಟಿದ ಸುಳ್ಳು ಎಂಬುದು ಆಮೇಲೆ ಬಯಲಾಯಿತು.

ಈಗ ಅದೇ ಅತ್ಯಾಚಾರಿ, ಕೊಲೆ ಅಪರಾಧಿ ಗುರ್ಮೀತ್ ಸಿಂಗ್‌ನನ್ನು ಬಿಜೆಪಿ ಬೆಂಬಲಿಸುತ್ತಿದೆ. ಜೈಲು ಶಿಕ್ಷೆಯಾಗಿರುವ ಆತನನ್ನು ಪದೇ ಪದೇ ಪರೋಲ್ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.

ನೋಟ್ ಬ್ಯಾನ್ ಸಮಯದಲ್ಲಿ ಬಿಜೆಪಿಯನ್ನು ಬಹಳಷ್ಟು ಟೀಕಿಸಲಾಯಿತು. ಅನೇಕ ಅರ್ಥಶಾಸ್ತ್ರಜ್ಞರು ಅದನ್ನು ಟೀಕಿಸುತ್ತಿದ್ದರು. ಆಗ ಮಾಳವೀಯ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆಸಿದರು.

2017ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ರಿಚರ್ಡ್ ಥೇಲರ್ ಮೋದಿಯವರ ನೋಟು ರದ್ದತಿ ನಿರ್ಧಾರ ಶ್ಲಾಘಿಸಿದ್ದಾರೆ ಎಂದು ಮಾಳವೀಯ ಹೇಳಿದರು. ಆದರೆ ಮಾಳವೀಯ, ಥೇಲರ್ ಅವರ ಸಂಪೂರ್ಣ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಭಾಗವನ್ನಷ್ಟೇ ತೋರಿಸುವ ಮೂಲಕ ಮಾಳವೀಯ ಜನರನ್ನು ಗೊಂದಲಗೊಳಿಸಿದ್ದರು.

ಈ ಮಾಳವೀಯರನ್ನು 2021ರ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಲಿನ ಪ್ರಚಾರದ ಸಹ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಆಗ ಮತ್ತು ಆಮೇಲೆ ಇವತ್ತಿನವರೆಗೂ ಮಾಳವೀಯ ನೇತೃತ್ವದ ಬಿಜೆಪಿ ಐಟಿ ಸೆಲ್ ಮಮತಾ ಬ್ಯಾನರ್ಜಿ ಬಗ್ಗೆ, ಪಶ್ಚಿಮ ಬಂಗಾಳದ ಬಗ್ಗೆ ಹರಡಿರುವ ಸುಳ್ಳುಗಳಿಗೆ ಲೆಕ್ಕವೇ ಇಲ್ಲ.

ಪ್ರತಿಯೊಂದನ್ನೂ ಹಿಂದೂ-ಮುಸ್ಲಿಮ್ ಮಾಡಿ ತೋರಿಸುವ ದುಷ್ಟ ಕಲೆಯಲ್ಲಿ ನಿಪುಣ ಈ ಮಾಳವೀಯ.ಅದು ಕೋವಿಡ್ ಸಂದರ್ಭ ಇರಬಹುದು ಅಥವಾ ಕಳೆದ ಹನ್ನೊಂದು ಹನ್ನೆರಡು ವರ್ಷಗಳಲ್ಲಿ ಇನ್ನೂ ನೂರಾರು ಘಟನೆಗಳು, ವಿಷಯಗಳು ಇರಬಹುದು.. ಪ್ರತಿಯೊಂದರಲ್ಲೂ ಸುಳ್ಳುಗಳ ಮೂಲಕವೇ ಮುಸ್ಲಿಮರನ್ನು ವಿಲನ್ ಗಳಂತೆ, ದೇಶದ್ರೋಹಿಗಳಂತೆ, ದುಷ್ಟರಂತೆ ಚಿತ್ರಿಸುವ ಕೆಲಸ ಮಾಡಿದ್ದಾರೆ ಈ ಅಮಿತ್ ಮಾಳವೀಯ.

ಹೀಗೆ ಮಾಳವೀಯ ಅವರ ಸುಳ್ಳುಗಳು, ವಂಚನೆ ಮತ್ತು ಶೋಷಣೆಗಳ ಪಟ್ಟಿ ಉದ್ದವಾಗಿದೆ.

ಮಾಳವೀಯ ನೇತೃತ್ವದ ಐಟಿ ಸೆಲ್ ಮಾಡಿರುವ ವ್ಯವಸ್ಥಿತ ಅಪಪ್ರಚಾರದಿಂದಾಗಿ ಬಿಜೆಪಿ ಭಾರೀ ದೊಡ್ಡ ರಾಜಕೀಯ ಲಾಭವಾಗಿದೆ. ಆದರೆ ದುಃಖದ ವಿಷಯ ಏನೆಂದರೆ, ಭಾರತದ ಸಮಾಜಕ್ಕೆ, ಇಲ್ಲಿನ ಸಹಬಾಳ್ವೆಯ ವಾತಾವರಣಕ್ಕೆ, ವಿವಿಧ ಧರ್ಮಗಳ ಜನರ ನಡುವಿನ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಈ ಮಾಳವೀಯ ತಂಡದ ಕೆಲಸದಿಂದಾಗಿ ಬಹಳ ದೊಡ್ಡ ನಷ್ಟವಾಗಿದೆ.

ರಾಜಕೀಯ ಮಾಡದೆ, ಬರೀ ಸುಳ್ಳು ಹಾಗೂ ದ್ವೇಷದ ಮೂಲಕ ಅಮಾಯಕ ನಾಗರಿಕರ ಬ್ರೈನ್ ವಾಷ್ ಮಾಡಿ ಅವರನ್ನು ಪರಸ್ಪರ ದ್ವೇಷಿಸುವಂತೆ ಮಾಡಿದ ಮಾಳವೀಯ ಈ ದೇಶಕ್ಕೆ, ಇಲ್ಲಿನ ಸಂವಿಧಾನಕ್ಕೆ, ಇಲ್ಲಿನ ಜನರಿಗೆ ಬಹುದೊಡ್ಡ ದ್ರೋಹ ಎಸಗಿದ್ದಾರೆ.

ಬಿಜೆಪಿ ರಾಜಕೀಯ ಉತ್ತುಂಗಕ್ಕೆ ಏರುವಲ್ಲಿ ತನ್ನ ದೊಡ್ಡ ಪಾತ್ರವಿದೆ ಎಂದು ಮಾಳವೀಯ ಹೆಮ್ಮೆ ಪಟ್ಟುಕೊಳ್ಳಬಹುದು.

ಆದರೆ ಅದೆಷ್ಟೋ ಹಿಂದೂ ಮುಸ್ಲಿಮರು ತಮ್ಮ ಜೀವ ಬಲಿದಾನ ನೀಡಿ ಕಟ್ಟಿದ ಈ ದೇಶದಲ್ಲಿ ಇವತ್ತು ಪರಸ್ಪರ ಅಸಹಿಷ್ಣುತೆ, ಅನುಮಾನ, ಮತೀಯ ಹಿಂಸೆ ಈ ಪರಿ ಹೆಚ್ಚಾಗಿರುವುದಕ್ಕೂ ತಾನೇ ನಿರ್ಣಾಯಕ ಕೊಡುಗೆ ನೀಡಿದ್ದೇನೆ ಎಂದು ಈ ವ್ಯಕ್ತಿ ತಲೆತಗ್ಗಿಸಬೇಕಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹರೀಶ್ ಎಚ್.ಕೆ.

contributor

Similar News