ಕೊಡಗು ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಜಾತಿ ಮ್ಯಾಪಿಂಗ್

ಕೂಲಿ ಬಿಟ್ಟು ಅಲೆದಾಡುತ್ತಿರುವ ಬಡವರು, ಅನಕ್ಷರಸ್ಥರು

Update: 2026-07-19 07:57 IST

ಮಡಿಕೇರಿ, ಜು.18: ಪಡಿತರ ಚೀಟಿದಾರರು (ರೇಷನ್ ಕಾರ್ಡ್) ಜಾತಿ ಪ್ರಮಾಣ ಪತ್ರ ಮ್ಯಾಪಿಂಗ್ ಮಾಡಬೇಕೆಂಬ ಸರಕಾರದ ಆದೇಶಕ್ಕೆ ಇದೀಗ ಬಡವರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ.

ಕೊಡಗು ಜಿಲ್ಲೆಯ ಐದು ತಾಲೂಕುಗಳು ಸೇರಿ ಒಟ್ಟು 1,39,247 ಮಂದಿ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಹಾರ ಇಲಾಖೆ ಸೂಚನೆ ನೀಡಿದೆ.ಇದರ ಅನ್ವಯ ತಾಲೂಕು ಆಹಾರ ಇಲಾಖೆಯ ಆಯಾ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿ ಮಾಲಕರು ಹಾಗೂ ಕಾರ್ಯದರ್ಶಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಬೇಕಾದವರ ಮಾಹಿತಿಯನ್ನು ನೀಡಲಾಗಿದೆ.

ನ್ಯಾಯ ಬೆಲೆ ಅಂಗಡಿಯ ಮಾಲಕರು ತಮ್ಮ ವ್ಯಾಪ್ತಿಯ ಪಡಿತರ ಚೀಟಿದಾರರ ಮಾಹಿತಿಯನ್ನು ನೀಡಿ ಇದೀಗ ಜಾತಿ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಇ ಕೆವೈಸಿ ಮಾಡಿಸುತ್ತಿದ್ದಾರೆ.

ಕೂಲಿ ಬಿಟ್ಟು ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಟ :

ಬಹುತೇಕ ಭಾಗಗಳಲ್ಲಿ ನ್ಯಾಯ ಬೆಲೆ ಅಂಗಡಿ ಮಾಲಕರು ತಮ್ಮ ವ್ಯಾಪ್ತಿಯಲ್ಲಿ ಪಡಿತರ ಪಡೆದುಕೊಳ್ಳುವವರಿಗೆ ಎರಡು ವಾರದೊಳಗೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಆದರೆ ಸರಕಾರ ಹಾಗೂ ಆಹಾರ ಸರಬರಾಜು ಮತ್ತು ನಾಗರಿಕ ಇಲಾಖೆಯು ಅವಧಿಯ ಬಗ್ಗೆ ಯಾವುದೇ ನಿರ್ದೇಶನ ನೀಡಿಲ್ಲ. ಪಡಿತರ ಚೀಟಿ ರದ್ದಾಗುವ ಆತಂಕದಿಂದ ಕೂಲಿ ಬಿಟ್ಟು ಜಾತಿ ಪ್ರಮಾಣ ಪತ್ರ ಮಾಡಿಸಲು ನಾಡ ಕಚೇರಿ, ತಾಲೂಕು ಕಚೇರಿ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ.

ಇಕ್ಕಟ್ಟಿಗೆ ಸಿಲುಕಿದ ಅನಕ್ಷರಸ್ಥರು :

ಪಡಿತರ ಚೀಟಿದಾರರು ಜಾತಿ ಪ್ರಮಾಣ ಪತ್ರ ನೀಡಬೇಕೆಂಬ ಸರಕಾರದ ಆದೇಶಕ್ಕೆ ಇದೀಗ ಅನಕ್ಷರಸ್ಥರು, ಬಡವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೂಲಿ ಬಿಟ್ಟು ಜಾತಿ ಪ್ರಮಾಣ ಪತ್ರ ಮಾಡಲು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿ ಪ್ರಮಾಣ ಪತ್ರ ಮಾಡಲು ಟಿ.ಸಿ.(ಶಾಲಾ ವರ್ಗಾವಣಾ ಪತ್ರ) ಕಡ್ಡಾಯವಾಗಿದೆ. 50 ವರ್ಷ ಮೇಲ್ಪಟ್ಟ ಬಹುತೇಕ ಪಡಿತರ ಚೀಟಿ ಸದಸ್ಯರಿಗೆ ಟಿ.ಸಿ. ಇಲ್ಲ. ಮಗನಿಗೆ ಟಿ.ಸಿ. ಇದ್ದರೆ, ಆ ಟಿ.ಸಿ. ಮೂಲಕ ತಂದೆಗೆ ಜಾತಿ ಪ್ರಮಾಣ ಪತ್ರ ಮಾಡಬಹುದಾಗಿದೆ.

ಆದರೆ, ಈ ನಿಯಮ ತಾಯಿಗೆ ಅನ್ವಯವಾಗಲ್ಲ. ತಾಯಿಗೆ ಅವರ ತಮ್ಮ ಅಥವಾ ಸಹೋದರಿಯರ ಟಿ.ಸಿ. ಕಡ್ಡಾಯವಾಗಿದೆ. ಟಿ.ಸಿ. ಇಲ್ಲದ ಪಡಿತರ ಚೀಟಿ ಸದಸ್ಯರು ಅಫಿಡವಿಟ್ ಮಾಡಲು ನೋಟರಿ ಲಾಯರ್ ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಏತನ್ಮಧ್ಯೆ ಅಫಿಡವಿಟ್ ಮಾಡಿಸಲು 350 ರಿಂದ 500 ರೂ. ಕೊಡಬೇಕು. ಅದಲ್ಲದೆ ಬಹುತೇಕರು ಗ್ರಾಮ ಒನ್ ಕೇಂದ್ರಗಳ ಮೂಲಕ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಜಾತಿ ಪ್ರಮಾಣ ಪತ್ರಕ್ಕೆ ಗ್ರಾಮ ಒನ್ ಕೇಂದ್ರಗಳಲ್ಲಿ 200 ರಿಂದ 250 ರೂ. ಪಡೆಯುತ್ತಿದ್ದಾರೆ. ಪಡಿತರ ಚೀಟಿಗೆ ಜಾತಿ ಮ್ಯಾಪಿಂಗ್ ಕಡ್ಡಾಯವಾಲ್ಲ. ಆದರೂ ಪಡಿತರ ಚೀಟಿದಾರರು ಆತಂಕದಿಂದ ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ.

ಕೊಡಗಿನಲ್ಲಿ ಪಡಿತರ ಚೀಟಿಗೆ ಜಾತಿ ಮ್ಯಾಪಿಂಗ್ ಆಗದವರ ವಿವರ: ಮಡಿಕೇರಿ ತಾಲೂಕಿನಲ್ಲಿ 35,236 ಮಂದಿ ಸದಸ್ಯರನ್ನು ಗುರುತಿಸಲಾಗಿದ್ದು, ಜು.17ರವರೆಗೆ ಕೇವಲ 245 ಮಂದಿ ಪಡಿತರ ಚೀಟಿ ಸದಸ್ಯರು ಮಾತ್ರ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ 25,579 ಪಡಿತರ ಚೀಟಿ ಸದಸ್ಯರನ್ನು ಗುರುತಿಸಿದ್ದು ಇದರಲ್ಲಿ 730 ಮಂದಿ ಸದಸ್ಯರು ಇದುವರೆಗೆ ಜಾತಿ ಪ್ರಮಾಣ ಪತ್ರ ಮ್ಯಾಪಿಂಗ್ ಮಾಡಿದ್ದಾರೆ. ವಿರಾಜಪೇಟೆ ತಾಲೂಕಿನಲ್ಲಿ 27,666 ಮಂದಿಯನ್ನು ಗುರುತಿಸಿದ್ದು, ಇದರಲ್ಲಿ ಕೇವಲ 180 ಮಂದಿ ಮಾತ್ರ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಕುಶಾಲನಗರ ತಾಲೂಕಿನಲ್ಲಿ 27,945 ಮಂದಿಯನ್ನು ಗುರುತಿಸಲಾಗಿದ್ದು, ಇದುವರೆಗೆ 1,032 ಮಂದಿ ಜಾತಿ ಮ್ಯಾಪಿಂಗ್ ಮಾಡಿದ್ದಾರೆ. ಪೊನ್ನಂಪೇಟೆ ತಾಲೂಕಿನಲ್ಲಿ 20,821 ಮಂದಿಯನ್ನು ಪಡಿತರ ಚೀಟಿಗೆ ಜಾತಿ ಮ್ಯಾಪಿಂಗ್ ಮಾಡಲು ಗುರುತಿಸಲಾಗಿದ್ದು, ಕೇವಲ ಮೂರು ಮಂದಿ ಮಾತ್ರ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 1,39,247 ಮಂದಿ ಸದಸ್ಯರು ಪಡಿತರ ಚೀಟಿಗೆ ಜಾತಿ ಮ್ಯಾಪಿಂಗ್ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ, ಜು.17 ರವರೆಗೆ ಜಿಲ್ಲೆಯಲ್ಲಿ ಕೇವಲ 2,190 ಮಂದಿ ಪಡಿತರ ಚೀಟಿ ಸದಸ್ಯರು ಮಾತ್ರ ಜಾತಿ ಮ್ಯಾಪಿಂಗ್ ಮಾಡಿದ್ದಾರೆ.

ಅಧಿಕಾರಿಗಳ ನಡುವೆಯೇ ಗೊಂದಲ? :

ವಿರಾಜಪೇಟೆ ತಾಲೂಕು ಆಹಾರ ಸರಬರಾಜು ಇಲಾಖೆಯ ನಿರ್ದೇಶಕಿ ಸೀನಾ ಕುಮಾರಿ ಅವರು ಹೇಳುವ ಪ್ರಕಾರ, ಎಸ್‌ಸಿ ಮತ್ತು ಎಸ್‌ಟಿ ಪಡಿತರ ಚೀಟಿದಾರರು ಮಾತ್ರ ಜಾತಿ ಪ್ರಮಾಣ ಪತ್ರ ನೀಡಿದರೆ ಸಾಕು. ಇನ್ನುಳಿದ ಇತರ ಜಾತಿಯವರು ಜಾತಿ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯವಲ್ಲ. ಜಾತಿ ಪ್ರಮಾಣ ಪತ್ರ ಇದ್ದಲ್ಲಿ ಮಾತ್ರ ನೀಡಿದರೆ ಸಾಕು. ಇದರ ಬಗ್ಗೆ ಈಗಾಗಲೇ ನಮ್ಮ ಗ್ರೂಪಿನಲ್ಲಿಯೂ ಮಾಹಿತಿ ನೀಡಿದ್ದೇವೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ಆದರೆ, ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ಅವರನ್ನು ಸಂಪರ್ಕಿಸಿದಾಗ, ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 27 ಸಾವಿರ ಪಡಿತರ ಚೀಟಿ ಸದಸ್ಯರಿಗೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಎಲ್ಲಾ ಜಾತಿಯವರು ನೀಡಬೇಕೆಂದು ಶುಕ್ರವಾರ ಬೆಳಗ್ಗೆ ಪತ್ರಿಕೆಗೆ ಹೇಳಿಕೆ ನೀಡಿದ್ದರು. ನಂತರ, ಸಂಜೆ ಎಸ್‌ಸಿ ಮತ್ತು ಎಸ್‌ಟಿ ಅವರಿಗೆ ಮಾತ್ರ ಕಡ್ಡಾಯವಿರುವುದೆಂದು ಪ್ರಕಟಣೆ ನೀಡಿದ್ದಾರೆ. ಎರಡು ತಾಲೂಕುಗಳ ಅಧಿಕಾರಿಗಳಲ್ಲಿಯೇ ಇದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Similar News