ಎಐ ಹಾಜರಾತಿಗೆ ತಾಂತ್ರಿಕ ಸವಾಲುಗಳೇ ಹೆಚ್ಚು
ಶಿಕ್ಷಕರಿಗೆ ಹೆಚ್ಚಿದ ಹೊರೆ: ಬೋಧನೆ ಮೇಲೆ ಪರಿಣಾಮ
ಸಂಡೂರು: ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ಸರಕಾರ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅನುಷ್ಠಾನದ ಹಂತದಲ್ಲಿ ಕಂಡುಬರುತ್ತಿರುವ ತಾಂತ್ರಿಕ ದೋಷಗಳು ಹಾಗೂ ಕಾರ್ಯನಿರ್ವಹಣೆಯ ಸಮಸ್ಯೆಗಳು ಹಲವಾರು ಶಿಕ್ಷಕರಲ್ಲಿ ಆತಂಕ ಮೂಡಿಸಿವೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಮುಖವನ್ನು ತಂತ್ರಾಂಶದಲ್ಲಿ ನೋಂದಾಯಿಸಲಾಗುತ್ತದೆ. ಬಳಿಕ ಪ್ರತಿದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ಅವಧಿಗಳಲ್ಲಿ ಎಐ ತಂತ್ರಾಂಶದ ಮೂಲಕ ವಿದ್ಯಾರ್ಥಿಯ ಮುಖವನ್ನು ಗುರುತಿಸಿ ಹಾಜರಾತಿ ದಾಖಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಹಾಜರಾತಿ, ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ, ಪಾದರಕ್ಷೆ ಸೇರಿದಂತೆ ಸರಕಾರಿ ಸೌಲಭ್ಯಗಳನ್ನು ನಿಖರವಾಗಿ ಯೋಜಿಸಲು ನೆರವಾಗುತ್ತದೆ.
ಶಿಕ್ಷಕರ ಅನುಭವದ ಪ್ರಕಾರ, ಒಂದು ತರಗತಿಯಲ್ಲಿ 35 ರಿಂದ 40 ವಿದ್ಯಾರ್ಥಿಗಳಿದ್ದರೂ ಎಐ ವ್ಯವಸ್ಥೆ ಕೆಲವೊಮ್ಮೆ 28 ರಿಂದ 30 ವಿದ್ಯಾರ್ಥಿಗಳನ್ನು ಮಾತ್ರ ಗುರುತಿಸುತ್ತಿದೆ. ಕೆಲವು ಸಂದರ್ಭಗಳಲ್ಲಿ ಇದಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳ ಹಾಜರಾತಿ ದಾಖಲಾಗುತ್ತಿದೆ. ವಿದ್ಯಾರ್ಥಿಯ ದಾಖಲೆಯನ್ನು ಪರಿಶೀಲಿಸಿ, ಕೈಯಾರೆ ತಿದ್ದುಪಡಿ ಮಾಡುವ ಕೆಲಸವೂ ಶಿಕ್ಷಕರ ಪಾಲಾಗುತ್ತಿದೆ.
ಎಐ ಹಾಜರಾತಿಯ ಪ್ರಮುಖ ಉದ್ದೇಶ ಶಿಕ್ಷಕರ ಸಮಯ ಉಳಿಸುವುದಾಗಿತ್ತು. ಆದರೆ ಹಲವು ಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ಎರಡು ಅವಧಿಗಳ ಹಾಜರಾತಿಯನ್ನು ಪೂರ್ಣಗೊಳಿಸಲು 30 ರಿಂದ 45 ನಿಮಿಷಗಳವರೆಗೆ ಸಮಯ ವ್ಯಯವಾಗುತ್ತಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯ ಆಶಯಪ್ರತಿಯೊಂದು ಮಗುವಿಗೂ ಶಿಕ್ಷಣ ದೊರಕಬೇಕು ಎಂಬುದು. ಆದರೆ ವಿದ್ಯಾರ್ಥಿ ಶಾಲೆಗೆ ಬಂದಿದ್ದರೂ ತಾಂತ್ರಿಕ ಕಾರಣಗಳಿಂದ ಹಾಜರಾತಿ ದಾಖಲಾಗದೆ ಹೋದರೆ, ಮುಂದಿನ ದಿನಗಳಲ್ಲಿ ಹಾಜರಾತಿ ಆಧರಿಸಿದ ಶೈಕ್ಷಣಿಕ ದಾಖಲೆಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
48 ಗಂಟೆಗಳ ತಿದ್ದುಪಡಿ? ಮತ್ತೊಂದು ಸವಾಲು
ವಿದ್ಯಾರ್ಥಿಯ ಛಾಯಾಚಿತ್ರವನ್ನು ತಿದ್ದುಪಡಿ ಮಾಡಬೇಕಾದರೆ ಸುಮಾರು 48 ಗಂಟೆಗಳವರೆಗೆ ಕಾಯಬೇಕಾಗುತ್ತಿದೆ ಎನ್ನಲಾಗಿದೆ. ಒಂದೇ ಹೆಸರಿನ ವಿದ್ಯಾರ್ಥಿಗಳನ್ನು ತಪ್ಪಾಗಿ ಗುರುತಿಸುವುದು ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳನ್ನೂ ಶಿಕ್ಷಕರು ಉಲ್ಲೇಖಿಸುತ್ತಿದ್ದಾರೆ.
ಸರಕಾರದ ಉದ್ದೇಶ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಹಾಗೂ ಪಾರದರ್ಶಕಗೊಳಿಸುವುದಾಗಿದೆ. ತಂತ್ರಜ್ಞಾನವು ಶಿಕ್ಷಣಕ್ಕೆ ಪೂರಕವಾಗಬೇಕು. ಪರ್ಯಾಯವಾಗಬಾರದು. ಮಕ್ಕಳ ಕಲಿಕೆಯ ಸಮಯವನ್ನು ಉಳಿಸುವವ್ಯವಸ್ಥೆಯಾಗಿ ಎಐ ಹಾಜರಾತಿ ರೂಪುಗೊಂಡಾಗ ಮಾತ್ರ ಈ ಮಹತ್ವಾಕಾಂಕ್ಷಿ ಯೋಜನೆಯ ನಿಜವಾದ ಉದ್ದೇಶ ಸಾರ್ಥಕವಾಗಲಿದೆ ಎಂಬುದು ಶಿಕ್ಷಣ ವಲಯದ ಒಟ್ಟಾರೆ ಅಭಿಪ್ರಾಯವಾಗಿದೆ.
ಸಂಡೂರು ತಾಲೂಕಿನಲ್ಲಿ ಈಗಾಗಲೇ ಶಿಕ್ಷಕರ ಕೊರತೆ ಇದೆ. ಅದರ ಜೊತೆಗೆ ಕೆಲ ಖಾಯಂ ಶಿಕ್ಷಕರು ಎಸ್‌ಐಆರ್, ಬಿಎಲ್‌ಒ ಸೇರಿ ವಿವಿಧ ಚುನಾವಣಾ ಸಂಬಂಧಿತ ಕರ್ತವ್ಯಗಳಲ್ಲಿ ನಿರತರಾಗಿರುವುದರಿಂದ ಶಾಲೆಗಳಲ್ಲಿ ಉಳಿದ ಶಿಕ್ಷಕರ ಮೇಲಿನ ಕೆಲಸದ ಒತ್ತಡ ಹೆಚ್ಚಾಗಿದೆ. ಎಐ ಹಾಜರಾತಿಯನ್ನು ಖಾಯಂ ಶಿಕ್ಷಕರೇ ನಿರ್ವಹಿಸಬೇಕಾಗಿರುವುದು ಕೂಡ ಮತ್ತೊಂದು ಸವಾಲಾಗಿದೆ. ತಾಂತ್ರಿಕ ದೋಷಗಳನ್ನು ಶೀಘ್ರವಾಗಿ ಸರಿಪಡಿಸಿ, ವ್ಯವಸ್ಥೆಯನ್ನು ಸುಧಾರಿಸಬೇಕು.
<ಪ್ರೇಮಾ, ಅಧ್ಯಕ್ಷರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಂಡೂರು
ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ಬಂದಿರುವ ಸಲಹೆ ಮತ್ತು ಸಮಸ್ಯೆಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅವುಗಳ ನಿವಾರಣೆಗೆ ಪ್ರತ್ಯೇಕ ತಾಂತ್ರಿಕ ಸಹಾಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಬಹುತೇಕ ತಾಂತ್ರಿಕ ಸಮಸ್ಯೆಗಳು ಪರಿಹಾರಗೊಂಡು ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ.
<ಡಾ. ಐ.ಆರ್.ಅಕ್ಕಿ
ಕ್ಷೇತ್ರ ಶಿಕ್ಷಣಾಧಿಕಾರಿ, ಸಂಡೂರು