ಚರ್ಚೆಯಾಗಲೇಬೇಕಾದ ಮಾಧ್ವ ಮತ್ತು ಶಂಕರ ಪಂಥ ಸಂಘರ್ಷದ ಇತಿಹಾಸ
ಮಾಧ್ವರು-ಶಂಕರರು, ದ್ವೈತ-ಅದ್ವೈತದ ಗಲಾಟೆ ಕೇವಲ ‘ಹರಿಕತೆ’ ಅಲ್ಲ. ಅದೊಂದು ತುಳುನಾಡಿನ ಇತಿಹಾಸವೂ ಹೌದು. ಬ್ರಾಹ್ಮಣರಲ್ಲದವರಿಗೆ ಈ ವಿಷಯ ಯಾಕೆ ಎಂದು ಕೇಳುವಂತಿಲ್ಲ. ಈ ಸಂಘರ್ಷಕ್ಕೆ ಕರಾವಳಿಯ ಸಂಸ್ಕೃತಿ, ರಾಜಕೀಯವನ್ನು ಬದಲಿಸಿದ ಚರಿತ್ರೆಯಿದೆ. ಹಾಗಾಗಿ ಈ ಸಂಘರ್ಷ ಸಾರ್ವಜನಿಕ ಚರ್ಚಾರ್ಹವಾಗಿದೆ.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆಯೊಂದರಲ್ಲಿ ಶಂಕರಾಚಾರ್ಯ ರನ್ನು ‘ರಾಕ್ಷಸರು’ ಎಂಬ ಆಕ್ಷೇಪಾರ್ಹ ರೀತಿಯಲ್ಲಿ ವಿವರಣೆ ನೀಡಿದ ವೀಡಿಯೊ ವೈರಲ್ ಆಗಿ ವ್ಯಾಪಕ ವಿವಾದಕ್ಕೆ ಕಾರಣವಾಯಿತು. ಮಾಧ್ವರು ಮತ್ತು ಶಂಕರ ಪಂಥದ ಈ ಜಗಳಗಳು ಇಂದು ನಿನ್ನೆಯದ್ದಲ್ಲ. ಇದು ಕೇವಲ ಬ್ರಾಹ್ಮಣರ ಎರಡು ಗುಂಪುಗಳಿಗೆ ಸಂಬಂಧಿಸಿದ ವಿಷಯವಲ್ಲ. ಇದೊಂದು ಕರಾವಳಿಯ ಸಂಸ್ಕೃತಿ, ರಾಜಕೀಯವನ್ನೇ ಬದಲಿಸಿದ ಇತಿಹಾಸದ ಚರ್ಚೆಯಾಗಿದೆ.
ಎಂಟನೇ ಶತಮಾನದಲ್ಲಿ ಬದುಕಿದ್ದ ಶಂಕರಾಚಾರ್ಯರು, ಆತ್ಮ-ಪರಮಾತ್ಮನಲ್ಲಿ ಭೇದವಿಲ್ಲ ಎಂದು ವಾದಿಸಿದರು. ಇದರ ಸರಳ ಅರ್ಥ ಮನುಷ್ಯನಲ್ಲೇ ದೇವರನ್ನು ಕಾಣಿರಿ ಎಂಬುದು. ಇದನ್ನು ಅದ್ವೈತ ಎನ್ನುತ್ತಾರೆ. ಇವರ ಅನುಯಾಯಿಗಳನ್ನು ಶೈವರು, ಶಾಂಕರರು, ಶಾಕ್ತರು ಎಂದೆಲ್ಲ ಕರೆಯಲಾಗುತ್ತದೆ. ಇವರ ಬಳಿಕ 13ನೇ ಶತಮಾನದಲ್ಲಿ ಮಧ್ವಾಚಾರ್ಯರು ಜನಿಸಿ, ವೈಷ್ಣವ ಆರಾಧನೆಯನ್ನು ಜನಪ್ರಿಯಗೊಳಿಸಿದರು. ಆತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು. ಕಠಿಣ ಮಡಿ ಪದ್ಧತಿಗಳನ್ನು ಜಾರಿಗೊಳಿಸಿದರು. ಹೀಗಾಗಿ ಇವರ ಬೋಧನೆಯನ್ನು ದ್ವೈತ ಎಂದು ಕರೆಯಲಾಗುತ್ತದೆ. ಇವರ ಅನುಯಾಯಿಗಳು ಮಾಧ್ವರು. ಉಡುಪಿಯ ಕೃಷ್ಣಮಠಗಳು, ಮಂತ್ರಾಲಯ ಇವೆಲ್ಲ ಮಾಧ್ವ ಸಂಪ್ರದಾಯದವು. ಇವರಿಬ್ಬರೂ ಇಡೀ ದೇಶ ಸುತ್ತಿದ್ದರೂ ಇವರ ಕಾರ್ಯಕ್ಷೇತ್ರ, ಸಂವಾದ, ಮತಾಂತರ ಪ್ರಕ್ರಿಯೆ, ಜಗಳ, ಹೋರಾಟಗಳು ನಡೆದಿದ್ದು ಬಹುತೇಕ ಕರಾವಳಿ ಮತ್ತು ಮಲೆನಾಡಿನಲ್ಲಿ!
ಅದ್ವೈತ ಮತದ ಸ್ಥಾಪಕರಾದ ಶಂಕರಾಚಾರ್ಯರು ಉಡುಪಿಯನ್ನು ಕಟ್ಟಿದರು. ಜೈನ ಬಸದಿಗಳನ್ನು ಶಿವಾಲಯ ವನ್ನಾಗಿ ಪರಿವರ್ತಿಸಿದರು. ಉಡುಪಿಯ ಚಂದ್ರನಾಥ ಬಸದಿಯು ಚಂದ್ರಮೌಳ್ವೀಶ್ವರ ದೇವಸ್ಥಾನವಾಯಿತು. ನಂತರ ಬಂದ ಮಧ್ವಾಚಾರ್ಯರು ಚಂದ್ರಮೌಳ್ವೀಶ್ವರ ದೇವಸ್ಥಾನವನ್ನು ವಶಪಡಿಸಿ ಶಂಕರಾಚಾರ್ಯರ ಪರಂಪರೆಯ ಸ್ಥಾನಿಕ ಬ್ರಾಹ್ಮಣರನ್ನು ಓಡಿಸಿದರು. ಆದರೆ ಮಾಧ್ವ ಅನುಯಾಯಿಗಳು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಮಾಧ್ವ ಬ್ರಾಹ್ಮಣರು ಬಂಟ-ಜೈನ, ಮೊಗವೀರರ ಸಹಾಯ ಪಡೆದು ಸ್ಥಾನಿಕ ಬ್ರಾಹ್ಮಣರ ಮೇಲೆ ದಾಳಿ ನಡೆಸಿದರು. ಶಂಕರಾಚಾರ್ಯರ ಕಡೆಯ ಸ್ಥಾನಿಕರು ಮಾಧ್ವರ ಮೇಲೆ ದಾಳಿ ನಡೆಸಲು ಬಿಲ್ಲವರು ಮತ್ತು ದಲಿತರ ಸಹಾಯ ಪಡೆದುಕೊಂಡರು. (ಆಧಾರ: ಉಡುಪಿ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ, ಲೇಖಕರು: ಡಾ ಮ.ಸು ಅಚ್ಯುತ ಶರ್ಮ-1969, ಪುಟ ಸಂಖ್ಯೆ: 16) ಹೀಗೆ ‘ಸನಾತನ ಕಾಲ’ದಲ್ಲೂ ಬ್ರಾಹ್ಮಣರ ಅಸ್ತಿತ್ವಕ್ಕಾಗಿ ನಡೆದ ದ್ವೈತ-ಅದ್ವೈತ ಜಗಳಗಳಿಗೆ ಜೈನ, ಬಂಟ- ಬಿಲ್ಲವ, ದಲಿತರು ಬಳಕೆಯಾದರು.
ಮಾಧ್ವರು ಹೊಡೆದಾಟಕ್ಕೆ ಬಂಟರು, ಜೈನರು, ಮೊಗವೀರರ ಸಹಾಯ ಪಡೆದುಕೊಂಡರೆ, ಶಂಕರಾಚಾರ್ಯರ ಕಡೆಯವರು ದಲಿತ ಮತ್ತು ಬಿಲ್ಲವರ ಸಹಾಯ ಪಡೆದುಕೊಂಡರು ಎಂದು ಇತಿಹಾಸ ಹೇಳುತ್ತದೆ. ಯಾಕೆ ದಲಿತರು ಮತ್ತು ಬಿಲ್ಲವರು ಮಾಧ್ವರಿಗೆ ಸಹಾಯ ಮಾಡಲಿಲ್ಲ? ಯಾಕೆಂದರೆ ಮಾಧ್ವರಿಗೆ ದಲಿತರು ಮತ್ತು ಬಿಲ್ಲವರು ಅಸ್ಪಶ್ಯರಾಗಿದ್ದರು. ಬಂಟರು, ಜೈನರು, ಮೊಗವೀರರನ್ನು ಮಾಧ್ವರು ಮುಟ್ಟಿಸಿಕೊಳ್ಳದಿದ್ದರೂ ನೋಡಬಹುದಿತ್ತು, ಮಾತನಾಡಬಹುದಿತ್ತು. ಆದರೆ ದಲಿತರು ಮಾಧ್ವರ ಎದುರು ನಡೆಯುವ, ಮಾತನಾಡುವ, ಹಾದು ಹೋಗುವ ಸ್ವಾತಂತ್ರ್ಯವನ್ನೂ ಹೊಂದಿರಲಿಲ್ಲ. ಆತ್ಮ ಮತ್ತು ಪರಮಾತ್ಮ ಒಂದೇ ಎಂದು ಹೇಳುವ ಶಂಕರಾಚಾರ್ಯರಿಗೆ ಬಿಲ್ಲವರು ಮತ್ತು ದಲಿತರು ಸ್ವಲ್ಪ ಹತ್ತಿರವಾಗಿದ್ದರು. ಹೀಗೆ ಹೊಡೆದಾಟದ ಬಳಕೆಗೂ ಮುಟ್ಟಿಸಿಕೊಳ್ಳದ ಸಮುದಾಯಗಳು ಶಂಕರರ ಬ್ರಾಹ್ಮಣ ಧರ್ಮವನ್ನು ಕಾಪಾಡಿದೆ.
ಶಂಕರಾಚಾರ್ಯರ ಸ್ಥಾನಿಕ ಬ್ರಾಹ್ಮಣರಿಗೆ ಬಹುಸಂಖ್ಯಾತ ಬಿಲ್ಲವರು ಮತ್ತು ದಲಿತರ ಸಹಾಯದಿಂದ ಮಾಧ್ವರು ಕಂಗೆಟ್ಟಿದ್ದರು. ಹಾಗಾಗಿ ಬಂಟರು, ಜೈನರು, ಮೊಗವೀರ ರನ್ನು ಮತಾಂತರಿಸುವ ಕೆಲಸವನ್ನು ಮಾಧ್ವರು ಮಾಡಲಾರಂಭಿಸಿದರು. ಮೊಗವೀರರು ಮೀನು ಹಿಡಿಯುವುದನ್ನೂ, ಬಂಟರು, ಜೈನರು ಕೃಷಿಯನ್ನೂ ಬಿಟ್ಟು ಮಾಧ್ವ ಬ್ರಾಹ್ಮಣರಾದರು. ತಪ್ತ ಮುದ್ರಾಧಾರಣೆಯನ್ನು ಮಾಡುವ ಮೂಲಕ ಮತಾಂತರಿ ಮಾಧ್ವರಿಗೂ ಸ್ಥಾನಿಕ ಸೇರಿದಂತೆ ಇನ್ನುಳಿದ ಬ್ರಾಹ್ಮಣರಿಗೂ ಅಂತರವನ್ನು ಉಂಟು ಮಾಡಿದರು. ಜನಿವಾರ ಎಲ್ಲಾ ಬ್ರಾಹ್ಮಣರೂ ಹಾಕುವುದರಿಂದ ಜನಿವಾರ ಹಾಕಿದ ಬ್ರಾಹ್ಮಣರ ಪೈಕಿ ಮಾಧ್ವರು ಯಾರು ಎಂದು ಗುರುತಿಸಲು ತಪ್ತ ಮುದ್ರಾಧಾರಣೆ ಬಳಕೆಗೆ ಬಂತು. ಈ ರೀತಿ ಮತಾಂತರದಿಂದ ಜನಸಂಖ್ಯೆ ಹೆಚ್ಚಿಸಿಕೊಂಡು ಸ್ಥಾನಿಕರ ದೇವಸ್ಥಾನಗಳನ್ನು, ಅರ್ಚಕ ಉದ್ಯೋಗಗಳನ್ನೂ ಕಸಿದುಕೊಳ್ಳಲಾಯಿತು.
1782ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಳುತ್ತಿದ್ದ ಹೈದರಲಿಯು ನಿಧನ ಹೊಂದಿದರು. ಆ ಬಳಿಕ ಟಿಪ್ಪು ಸುಲ್ತಾನರು ಕರಾವಳಿಯನ್ನು ಆಳುತ್ತಿದ್ದರು. ಟಿಪ್ಪುವಿಗೂ ಬ್ರಿಟಿಷರಿಗೂ ಶ್ರೀರಂಗಪಟ್ಟಣದಲ್ಲಿ ಯುದ್ಧವಾದಾಗ ಕರಾವಳಿಯಲ್ಲಿ ರಾಜನಿಲ್ಲದೇ ಅರಾಜಕತೆ ಮೂಡಿತ್ತು. ಸ್ವಾತಂತ್ರ್ಯ ಹೋರಾಟದ ಸಮಯದ ಅರಾಜಕತೆಯನ್ನೇ ಬಳಸಿಕೊಂಡ ಮಾಧ್ವರು ಸ್ಥಾನಿಕರ ಆಡಳಿತದಲ್ಲಿ ಅಳಿದುಳಿದು ಇದ್ದ ಸಣ್ಣಪುಟ್ಟ ದೇವಸ್ಥಾನಗಳನ್ನೂ ವಶಪಡಿಸಿಕೊಂಡರು.
‘ಟಿಪ್ಪು ಮಂಗಳೂರಿನಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ಘನಘೋರ ಯುದ್ಧಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೊಂದಲ-ಕಲಹಗಳನ್ನು ಸೃಷ್ಟಿಸಿದವು. ತುಳುನಾಡಿನ ಹಲವು ರಾಜರು ಬ್ರಿಟಿಷರ ಪರವೂ, ಕೆಲವು ರಾಜರು ಟಿಪ್ಪುವಿನ ಪರವೂ ನಿಂತರು. ಏನೇ ಆದರೂ ಕೊನೆಗೆ ಟಿಪ್ಪು ಮಂಗಳೂರಿನ ಎಲ್ಲಾ ಯುದ್ಧಗಳಲ್ಲೂ ಜಯಶಾಲಿಯಾಗಿದ್ದರು. ಒಟ್ಟಾರೆ ಯುದ್ಧಗಳಿಂದಾಗಿ ಜಿಲ್ಲೆಯ ಆಳ್ವಿಕೆಯು 1582ರಿಂದ 1799ರವರೆಗೆ ಅಸ್ತವ್ಯಸ್ತವಾಗಿತ್ತು. ಈ ಗೊಂದಲದ ಸಮಯವನ್ನು ಮಾಧ್ವ ಬ್ರಾಹ್ಮಣರು ಮತಾಂತರಕ್ಕಾಗಿ ಬಳಸಿಕೊಂಡರು’ ಎಂದು ಇತಿಹಾಸಕಾರ ಮಾ.ಸು. ಅಚ್ಯುತ ಶರ್ಮರು ‘ಉಡುಪಿ ಕ್ಷೇತ್ರದ ನೈಜ ಚಿತ್ರ ಮತ್ತು ಚಾರಿತ್ರಿಕ ಹಿನ್ನಲೆ’: ಮುದ್ರಣ-1969, ಪುಟ ಸಂಖ್ಯೆ 51ರಲ್ಲಿ ಹೇಳುತ್ತಾರೆ. ಟಿಪ್ಪು ಸುಲ್ತಾನ್ ಸ್ವಾತಂತ್ರ್ಯಕ್ಕಾಗಿ ಮಂಗಳೂರಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದರೆ ಬ್ರಾಹ್ಮಣರ ಒಂದು ಪಂಗಡ ಮತಾಂತರಕ್ಕಾಗಿ ಕೆಲಸ ಮಾಡುತ್ತಿತ್ತು.
‘ವಿಜಯನಗರದವರಿಂದ ದೇವಸ್ಥಾನಗಳ ಅಧಿಕಾರಿಗಳಾಗಿ ನೇಮಿಸಲ್ಪಟ್ಟ ಸ್ಥಾನಿಕರೆಂಬ ಬ್ರಾಹ್ಮಣ ಉದ್ಯೋಗಸ್ಥರಿಗೆ ಸರಕಾರದ ಬೆಂಬಲವಿಲ್ಲದೆ ಉದ್ಯೋಗಸ್ಥರಂತೆ ಇರಬೇಕಾಗಿತ್ತು. ಯುದ್ಧ ಕಾಲದ ಈ ಅನಾಯಕತ್ವದ ಕಾಲವೇ ವಾದಿರಾಜರಿಗೆ ತನ್ನ ಕಾರ್ಯವನ್ನು ಸಾಧಿಸಲು ಅನುಕೂಲವಾಗಿ ಪರಿಣಮಿಸಿತು, ಬ್ರಾಹ್ಮಣರಲ್ಲದವರನ್ನು ಮತಾಂತರಿಸಿ ತನ್ನ ಇಚ್ಛಾನುಸಾರ ವರ್ತಿಸಲು ಆನುಕೂಲವಾಯಿತು’ ಎಂದು ಇತಿಹಾಸಕಾರ ಡಾ. ಮ.ಸು. ಅಚ್ಯುತ ಶರ್ಮರು ಬರೆಯುತ್ತಾರೆ.
‘ಮಾಧ್ವರು ಬೇರೆ ಜಾತಿಗಳನ್ನು ಮತಾಂತರ ಮಾಡಿದ್ದರಿಂದ ಮಾಧ್ವರ ಸಂಖ್ಯೆ ಉಡುಪಿಯಲ್ಲಿ ತುಂಬಿ ಹೋಯಿತು. ಈ ರೀತಿ ಮತಾಂತರಿಸಿ ಬಂದವರಾದುದರಿಂದಲೇ ಈ ಮಾಧ್ವರ ಜಾತಿಯ ಹೆಸರುಗಳೊಂದಿಗೆ ಬಂಟರ, ಮೊಗವೀರರ ಮತ್ತು ಜೈನರ ಕುಲನಾಮಗಳಂತೆ ಬಳಿಗಳ ಹೆಸರುಗಳು ಬಂದಿರುತ್ತವೆ. ಸ್ಥಾನಿಕ ಶಿವಬ್ರಾಹ್ಮಣರನ್ನು ಸಿಕ್ಕಿದಲ್ಲಿ ಕೊಲ್ಲುವಂತೆ ಪ್ರೇರೇಪಿಸುವ ಪದ್ಯವನ್ನು ಕಟ್ಟಿ ಕೃಷ್ಣ ದರ್ಶನಕ್ಕೆ ಬರುವ ಅವರ ಮತದವರಿಗೆ ತಿಳಿಯುವಂತೆ ಮಾಡಲು ದೇವರ ಸ್ತೋತ್ರದಂತೆ ತಾಳ ತಟ್ಟಿ ಹಾಡುವುದನ್ನು ಮಾಧ್ವರು ಕ್ರಮಗೊಳಿಸಿದರು. ಆ ಪದ್ಯವು ಹೀಗಿದೆ:
‘ಕೊಲ್ಲು ಕೊಲ್ಲು ಕಳ್ಳರನ್ನು ಮಲ್ಲ ಮಾಧ್ವ ವಲ್ಲಭನೆ
ನೀನು ಕೊಲ್ಲದಿದ್ದರೆ ನಿನ್ನ ಪೂಜೆಗೆ ಕಲ್ಲನೆಸೆಯುವರು
ಕಲಿಯುಗದ ಕಳ್ಳರು
ಲಕ್ಷ್ಮೀನಾರಾಯಣ ಜಯ ಲಕ್ಷ್ಮೀನಾರಾಯಣ’ ಎಂದು ಬರೆದು ಹಾಡುತ್ತಿದ್ದರು ಎಂದು ಸಂಶೋಧಕ ಡಾ. ಮ.ಸು. ಅಚ್ಯುತ ಶರ್ಮರು ತಮ್ಮ ಸಂಶೋಧನಾ ಕೃತಿಯ ಪುಟ 17ರಲ್ಲಿ ಬರೆಯುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳ ಅಧಿಕಾರಿಗಳಾದ ಸ್ಥಾನಿಕರನ್ನು ಅವರ ಹಕ್ಕಿನದ್ದಾದ ದೇವಸ್ಥಾನಗಳ ಹಕ್ಕನ್ನೂ ದೇವಸ್ಥಾನಗಳನ್ನೂ ಅವರ ಪ್ರತಿಸ್ಪರ್ಧಿ ಮತದವರಾದ ಮಾಧ್ವರು ಬಲಾತ್ಕಾರದಿಂದ ತಮ್ಮ ಸ್ವಾಧೀನ ಪಡಿಸಿಕೊಂಡಿದ್ದಾಗಿ ಡಾ. ಮ.ಸು. ಅಚ್ಯುತ ಶರ್ಮರು 1922-25ರಲ್ಲಿ ಉಡುಪಿ ಮತ್ತಿತರ ಸ್ಥಳಗಳನ್ನು ಸಂದರ್ಶಿಸಿ ಸಂಶೋಧನೆ ನಡೆಸಿದ್ದಾರೆ. ಮಾಧ್ವರಿಂದ ದೇವಸ್ಥಾನಗಳ ಹಕ್ಕಿನ ಸ್ವಾಧೀನವು ಶಾಂತಿಯಿಂದ ನಡೆಯಲಿಲ್ಲ. ಬಲಾತ್ಕಾರದಿಂದಲೇ ಸ್ಥಾನಿಕರಿಂದ ದೇವಸ್ಥಾನಗಳ ಹಕ್ಕನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದನ್ನು ಕೆಲವು ದೇವಸ್ಥಾನಗಳಲ್ಲಿ ಇರುವ ವಿಗ್ರಹಗಳ ಪರಿಸ್ಥಿತಿಯೊಂದನ್ನು ನೋಡಿದರೆ ತಿಳಿಯಬಹುದು. ಸ್ಥಾನಿಕರ ಸ್ವಾಧೀನವಿದ್ದ ಹೆಚ್ಚಿನ ವಿಗ್ರಹಗಳು ವೈಷ್ಣವರ ಸ್ವಾಧೀನ ಬಂದ ನಂತರ ಹಾಳು ಗೆಡವಲ್ಪಟ್ಟು, ದೇವಸ್ಥಾನಗಳ ಹತ್ತಿರ ಎಸೆಯಲ್ಪಟ್ಟಿದ್ದು ಕಾಣಬಹುದು. ಇದೆಲ್ಲವನ್ನೂ ಟಿಪ್ಪು ಮತ್ತು ಬ್ರಿಟಿಷರ ಮಧ್ಯೆ ನಡೆದ ಯುದ್ಧದ ಸಂದರ್ಭದಲ್ಲಿ ಪರಿಸ್ಥಿತಿಯ ಲಾಭ ಪಡೆದುಕೊಂಡ ಮಾಧ್ವ ಬ್ರಾಹ್ಮಣರು ಮಾಡಿದರು ಎಂದು ಡಾ. ಮ.ಸು. ಅಚ್ಯುತ ಶರ್ಮರು ಅಭಿಪ್ರಾಯಪಡುತ್ತಾರೆ. (ಆಧಾರ: ‘ಉಡುಪಿ ಕ್ಷೇತ್ರದ ನೈಜ ಚಿತ್ರ ಮತ್ತು ಚಾರಿತ್ರಿಕ ಹಿನ್ನೆಲೆ’ ಲೇಖಕರು: ಡಾ. ಮ.ಸು ಅಚ್ಯುತ ಶರ್ಮ, ಮುದ್ರಣ-1969, ಪುಟ ಸಂಖ್ಯೆ 51)
ಸ್ಥಾನಿಕ ಬ್ರಾಹ್ಮಣರು ಸ್ವಾತಂತ್ರ್ಯ ಪ್ರಿಯರು. ಹಾಗಾಗಿ ಅವರು ಟಿಪ್ಪು ಸುಲ್ತಾನರನ್ನು ಬೆಂಬಲಿಸಿದ್ದರು. ಟಿಪ್ಪು ಮತ್ತು ಹವ್ಯಕರ ನಡುವಿನ ಸಂಬಂಧದ ಬಗ್ಗೆ ಸ್ವರ್ಣವಲ್ಲಿ ಮಠದಲ್ಲಿ ದಾಖಲೆಗಳಿವೆ ಎಂದು ‘ಶಂಕರಾಚಾರ್ಯರ ಅದ್ವೈತ ದರ್ಶನ’ ಗ್ರಂಥ ಹೇಳುತ್ತದೆ. (ಆಧಾರ: ಶ್ರೀ ಶಂಕರಾಚಾರ್ಯರ ಅದ್ವೈತ ದರ್ಶನ, ಸಂಪಾದಕತ್ವ: ಡಾ. ಜಿ. ಎಂ. ಹೆಗಡೆ, ಪ್ರಕಾಶನ ಮಂಡಳಿ: ಸ್ವರ್ಣವಲ್ಲೀ ಮಹಾಸಂಸ್ಥಾನದ 54ನೆಯ ಪೀಠಾಧಿಪತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು, ಗಣಪತಿ ಸುಬ್ರಾಯ ಹೆಗಡೆ ಅಜ್ಜೀಬಳ, ಗಜಾನನ ವೆಂಕಟರಮಣ ಜೋಶಿ ಕಾಗೇರಿ, ನಾರಾಯಣ ಸುಬ್ರಾಯ ಹೆಗಡೆ ಕುಂದರಗಿ, ಮಹಾದೇವ ಮಹಾಬಲೇಶ್ವರ ಹೆಗಡೆ ಗಡಿಕೈ, ಡಾ. ಜಿ.ಎಂ. ಹೆಗಡೆ ಧಾರವಾಡ, ಜಿ. ಸುಬ್ರಾಯ ಭಟ್ಟ ಭಟ್ಕಳ ಇವರ ಸದಸ್ಯತ್ವದ ಶ್ರೀ ಭಗವತ್ಪಾದ ಪ್ರಕಾಶನ)
‘ಬಯಲು ಸೀಮೆ ಮತ್ತು ಕರಾವಳಿಗಳ ನಡುವಿನ ಮಲೆನಾಡು ಐಗೂರು ನಾಯಕರ ಆಳ್ವಿಕೆಯಲ್ಲಿತ್ತು. ಅವರು ವಿಜಯನಗರದ ಸಾಮಂತರಾಗಿದ್ದರು. ಅವರು ಕೊನೆಯಲ್ಲಿ ಟಿಪ್ಪು ಸುಲ್ತಾನನ ಬೆಂಬಲಿಗರಾಗಿದ್ದರು. ಮಲೆನಾಡು ಪ್ರದೇಶದ ಮೇಲೆ ಬ್ರಿಟಿಷರಿಗೆ ಸಂಪೂರ್ಣ ಹಿಡಿತ ಸಿಕ್ಕಿರಲಿಲ್ಲ. ಎಳೆಯ ವಯಸ್ಸಿನ ವೆಂಕಟಾದ್ರಿನಾಯಕರನ್ನು ಸೆರೆ ಹಿಡಿದು ಗಲ್ಲಿಗೇರಿಸುತ್ತಾರೆ. ಇದರ ವಿವರ ಐಗೂರು ವೆಂಕಟಾದ್ರಿನಾಯಕನ ಲಾವಣಿಯಲ್ಲಿ ಸಿಗುತ್ತದೆ’ ಎಂದು ಗೌಡ ಜನಾಂಗ - ಇತಿಹಾಸ ಮತ್ತು ಸಂಸ್ಕೃತಿ ಪುಸ್ತಕದ ಪುಟ ಸಂಖ್ಯೆ 68 ಹೇಳುತ್ತದೆ. ಐಗೂರಿನ ವೆಂಕಟಾದ್ರಿನಾಯಕನನ್ನು ಸೆರೆಹಿಡಿಯಲು ವೆಲ್ಲೆಸ್ಲಿ ಸೈನ್ಯಕ್ಕೆ ಸಾಧ್ಯವಾಗುವುದಿಲ್ಲ. ಕೊನೆಗೆ ಪೂರ್ಣಯ್ಯನ ದಂಡು ಬಂದು ಮೋಸದಿಂದ ಆತನನ್ನು ಸೆರೆಹಿಡಿಯುತ್ತಾನೆ. ಇದು ಐಗೂರು ನಾಯಕರ ಜೊತೆ ಇದ್ದ ಸ್ಥಾನಿಕ ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾಗಿತ್ತು.
ಹಾಗಾಗಿಯೇ ಸ್ಥಾನಿಕರು ಟಿಪ್ಪು ನಿಧನ ಹೊಂದಿದ ಬಳಿಕ ಸುಮ್ಮನಾಗಲಿಲ್ಲ. ಟಿಪ್ಪುವಿನ ಅನುಯಾಯಿಯಾದ ಐಗೂರು ನಾಯಕರನ್ನು ಬ್ರಿಟಿಷರು ಕೊಂದು ಹಾಕಿದಾಗ ಸುಳ್ಯದಲ್ಲಿ ಕಲ್ಯಾಣಪ್ಪನ ಸ್ವಾತಂತ್ರ್ಯ ಸಮರ ನಡೆಯಿತು. ಈ ಸ್ವಾತಂತ್ರ್ಯ ಸಮರದಲ್ಲಿ ಸ್ಥಾನಿಕ ಬ್ರಾಹ್ಮಣರಾದ ಕೊಡಗು ದಿವಾನ್ ಅಣ್ಣಾವರ ಲಕ್ಷ್ಮೀನಾರಾಯಣಯ್ಯನವರೂ ನಾಯಕತ್ವ ವಹಿಸಿದ್ದರು. ಅಣ್ಣಾವರ ಲಕ್ಷ್ಮೀನಾರಾಯಣಯ್ಯನವರ ಬೆಂಬಲಕ್ಕೆ ಕೆನರಾ ಜಿಲ್ಲೆಯ ಸ್ಥಾನಿಕ ಬ್ರಾಹ್ಮಣರು ನಿಂತರು. ಸ್ಥಾನಿಕ/ಹವ್ಯಕ ಬ್ರಾಹ್ಮಣರು ಎರಡನೆಯ ಸ್ವಾತಂತ್ರ್ಯ ಸಂಗ್ರಾಮವಾಗಿರುವ ಅಮರ ಸುಳ್ಯ ದಂಗೆಯಲ್ಲಿ ಪಾಲ್ಗೊಂಡರು ಎಂಬ ಕಾರಣದಿಂದ ಬ್ರಿಟಿಷರ ರಾಜಾಶ್ರಯ ಕಡಿಮೆಯಾಯಿತು. ಇದರ ಲಾಭವನ್ನು ಪಡೆದುಕೊಂಡ ಮಾಧ್ವರು, ಬ್ರಿಟಿಷರ ಬೆಂಬಲದಿಂದ ಸ್ಥಾನಿಕರ ಸ್ವಾಧೀನವಿದ್ದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮೊದಲಾದ ಅನೇಕ ಪ್ರಮುಖ ದೇವಾಲಯಗಳನ್ನು ತಮ್ಮದಾಗಿಸಿಕೊಂಡು ಅಲ್ಲಿ ಪೂಜೆ ಮಾಡುತ್ತಿದ್ದ ಸ್ಥಾನಿಕರನ್ನು/ಹವ್ಯಕರನ್ನು ಓಡಿಸಿದರು. ಹವ್ಯಕರು, ಸ್ಥಾನಿಕರು ನಡೆಸುತ್ತಿದ್ದ ಪೂಜೋದ್ಯೋಗದ ಸ್ಥಳಕ್ಕೆ ಮಾಧ್ವ ಬ್ರಾಹ್ಮಣರು ನಿಯುಕ್ತಿಗೊಂಡರು. (ಆಧಾರ: ಉಡುಪಿ ಕ್ಷೇತ್ರದ ನೈಜ ಚಿತ್ರ ಮತ್ತು ಚಾರಿತ್ರಿಕ ಹಿನ್ನೆಲೆ, ಮುದ್ರಣ-1969, ಲೇಖಕರು: ಡಾ.ಮ.ಸು.ಅಚ್ಯುತಶರ್ಮ, ಪುಟ 21 ಮತ್ತು ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ, ಪ್ರಕಾಶಕರು: ಬೆಳ್ಳಿಹಬ್ಬ ಆಚರಣಾ ಸಮಿತಿ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ, ಮಂಗಳೂರು, ಮುದ್ರಣ: 2006)
ಹೀಗೆ ಮಾಧ್ವರು-ಶಂಕರರು, ದ್ವೈತ-ಅದ್ವೈತದ ಗಲಾಟೆ ಕೇವಲ ‘ಹರಿಕತೆ’ ಅಲ್ಲ. ಅದೊಂದು ತುಳುನಾಡಿನ ಇತಿಹಾಸವೂ ಹೌದು. ಬ್ರಾಹ್ಮಣರಲ್ಲದವರಿಗೆ ಈ ವಿಷಯ ಯಾಕೆ ಎಂದು ಕೇಳುವಂತಿಲ್ಲ. ಈ ಸಂಘರ್ಷಕ್ಕೆ ಕರಾವಳಿಯ ಸಂಸ್ಕೃತಿ, ರಾಜಕೀಯವನ್ನು ಬದಲಿಸಿದ ಚರಿತ್ರೆಯಿದೆ. ಹಾಗಾಗಿ ಈ ಸಂಘರ್ಷ ಸಾರ್ವಜನಿಕ ಚರ್ಚಾರ್ಹವಾಗಿದೆ.