ಉದ್ಯೋಗದ ಹೆಸರಿನಲ್ಲಿ ವಂಚನೆ ಆರೋಪ : ಸಮಗ್ರ ತನಿಖೆಗೆ ಪ್ರಗತಿಪರರ ಆಗ್ರಹ
ಮಸ್ಕಿ: ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಭವಿಷ್ಯ ಬೆಳಕು ಎನ್ನುವ ಸಂಸ್ಥೆ ನಿರುದ್ಯೋಗಿ ಯುವಕರಿಂದ ನೋಂದಣಿ, ಪ್ರೊಸೆಸಿಂಗ್ ಹಾಗೂ ಇತರ ಶುಲ್ಕಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಈ ಬಗ್ಗೆ ಮಸ್ಕಿ ದಸಂಸ ದೂರು ನೀಡಿದೆ. ದೂರಿನಲ್ಲಿ ಸಂಸ್ಥೆಯು ಅಭ್ಯರ್ಥಿಗಳಿಂದ ಹಣ ಪಾವತಿಸಿದಬಳಿಕ ಸರಕಾರಿ ಶಾಲೆಗಳಲ್ಲಿ ಅಟೆಂಡರ್ ಹುದ್ದೆಯ ಆದೇಶದ ಪ್ರತಿಗಳನ್ನು ನೀಡಲಾಗುತ್ತಿದೆ. ಅಲ್ಲದೆ ಈ ಹುದ್ದೆಗಳಿಗೆ 80 ಸಾವಿರದಿಂದ 1.50ಲಕ್ಷ ರೂ.ವರೆಗೆ ಹಣ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಭವಿಷ್ಯ ಬೆಳಕು’ ಸಂಸ್ಥೆಯ ಬಗ್ಗೆ ಸರಿಯಾದ ಮಾಹಿತಿ ನೀಡದೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ದೂರುದಾರರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರಗಳು, ದಾಖಲೆಗಳು ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಪ ಪೊಲೀಸ್ ಅಧೀಕ್ಷಕರು, ಲಿಂಗಸುಗೂರು ಉಪವಿಭಾಗ, ಲಿಂಗಸುಗೂರು, ಹಾಗೂ ಪೊಲೀಸ್ ಅಧೀಕ್ಷಕರು, ರಾಯಚೂರು, 2. ಜಿಲ್ಲಾಧಿಕಾರಿಗಳು, ರಾಯಚೂರು ಹಾಗೂ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಯಚೂರು ಜಿಲ್ಲೆ ಇವರಿಗೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇದೇ ವೇಳೆ, ಭವಿಷ್ಯ ಬೆಳಕು ಹೆಸರಿನ ನೋಂದಾಯಿತ ದತ್ತಿ ಸಂಸ್ಥೆಯು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವೆಗಳನ್ನು ನಡೆಸುವುದಾಗಿ ಉಲ್ಲೇಖಿಸಿರುವುದರಿಂದ, ಈ ಆರೋಪಗಳು ಸಂಸ್ಥೆಗೆ ನೇರವಾಗಿ ಸಂಬಂಧಿಸಿದವೆಯೇ ಅಥವಾ ಅದರ ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ವ್ಯಕ್ತಿಗಳು ಅಥವಾ ಬೇರೆ ಸಂಘಟನೆಗೆಸಂಬಂಧಿಸಿದವೆಯೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
ಈ ಕುರಿತು ಸಂಸ್ಥೆಯ ಪ್ರತಿಕ್ರಿಯೆ ಪಡೆಯಲು ದೂರವಾಣಿ ಮೂಲಕ ಹಲವು ಬಾರಿ ಸಂಪರ್ಕಿಸಿದರೂ ಲಭ್ಯವಾಗದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳಲ್ಲಿ ಅಟೆಂಡರ್ ಹುದ್ದೆ ಪಡೆಯಲು ಯಾರೂ ಹಣ ನೀಡಬಾರದು. ಹಣ ನೀಡಿದರೆ ಅದಕ್ಕೆ ಶಿಕ್ಷಣ ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಅದರ ಸಂಪೂರ್ಣ ಜವಾಬ್ದಾರಿ ಹಣ ನೀಡಿದವರದ್ದೇ ಆಗಿದೆ.
-ಸುಜಾತ ಹುನೂರು
ಕ್ಷೇತ್ರ ಶಿಕ್ಷಣಾಧಿಕಾರಿ, ಲಿಂಗಸುಗೂರು
ಭವಿಷ್ಯ ಬೆಳಕು ಸಂಸ್ಥೆಯ ಹೆಸರನ್ನು ಹೇಳಿ ಹಣ ಪಡೆದು ಹುದ್ದೆ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆಯ ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದೇನೆ. ಸಂಸ್ಥೆಯ ಕಡೆಯಿಂದ ಸ್ಪಷ್ಟನೆ ಪಡೆಯುತ್ತೇನೆ. ಯಾರಾದರೂ ಹಣ ನೀಡಿ ಹುದ್ದೆ ಪಡೆದಿದ್ದರೆ ಅಥವಾ ಹಣ ಕಳೆದುಕೊಂಡಿದ್ದರೆ ಮಾಹಿತಿ ನೀಡಲಿ. ಅವರ ಹಣವನ್ನು ಮರಳಿ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ.
-ಮಲ್ಲಿಕಾರ್ಜುನ
ಜಿಲ್ಲಾ ಉಪನಿರ್ದೇಶಕರು,
ಶಾಲಾ ಶಿಕ್ಷಣ ಇಲಾಖೆ, ರಾಯಚೂರು