ವಿಜಯಪುರ ಕೋಟೆಯಲ್ಲಿ ಚಾಲುಕ್ಯರ ಕಾಲದ ಶರಭ ಶಿಲ್ಪ ಪತ್ತೆ
ಸಿಂಹ-ಪಕ್ಷಿಯ ವಿಶಿಷ್ಟ ಸಂಯೋಜನೆಯ ಪೌರಾಣಿಕ ಕಲಾಕೃತಿ: ಪ್ರಾಚೀನ ಶಿಲ್ಪಕಲಾ ಪರಂಪರೆಗೆ ಮತ್ತೊಂದು ಸಾಕ್ಷಿ
ವಿಜಯಪುರ, ನ.24: ಆದಿಲ್ ಶಾಹಿ ಸ್ಮಾರಕಗಳಿಂದ ವಿಶ್ವವಿಖ್ಯಾತಿ ಪಡೆದಿರುವ ನಗರದ ಐತಿಹಾಸಿಕ ಕೋಟೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದೆ ಎನ್ನಲಾದ ಅಪರೂಪದ ಶರಭನ ಉಬ್ಬುಶಿಲ್ಪ ಪತ್ತೆಯಾಗಿದೆ. ಈ ಶಿಲ್ಪವು ನಗರದ ಪ್ರಾಚೀನ ಇತಿಹಾಸ ಮತ್ತು ಶಿಲ್ಪಕಲಾ ಪರಂಪರೆಯ ಕುರಿತು ಕುತೂಹಲ ಮೂಡಿಸಿದೆ.
ವಿಜಯಪುರ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಹಾಗೂ ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಅವರು ಕೋಟೆಯಲ್ಲಿರುವ ಈ ಅಪರೂಪದ ಶಿಲ್ಪವನ್ನು ಗುರುತಿಸಿದ್ದಾರೆ. ಶತಮಾನಗಳ ಇತಿಹಾಸವನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ವಿಜಯಪುರ ಕೋಟೆ ಕೇವಲ ಆದಿಲ್ ಶಾಹಿ ಅರಸರ ಕಾಲದ ಸ್ಮಾರಕವಲ್ಲ; ಅದಕ್ಕೂ ಹಿಂದಿನ ರಾಜವಂಶಗಳ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಕುರುಹುಗಳನ್ನೂ ಹೊಂದಿದೆ ಎಂಬುದಕ್ಕೆ ಈ ಶಿಲ್ಪ ಮತ್ತೊಂದು ಸಾಕ್ಷಿಯಾಗಿದೆ.
ಏನಿದು ಶರಭ?: ಭಾರತೀಯ ಪುರಾಣ ಮತ್ತು ಶಿಲ್ಪಶಾಸ್ತ್ರದಲ್ಲಿ ಶರಭನಿಗೆ ವಿಶಿಷ್ಟ ಸ್ಥಾನವಿದೆ. ಸಿಂಹದ ಮುಖ, ಪಕ್ಷಿಯ ರೆಕ್ಕೆಗಳು ಹಾಗೂ ಎಂಟು ಕಾಲುಗಳನ್ನು ಹೊಂದಿರುವ ಬಲಿಷ್ಠ ಪೌರಾಣಿಕ ಜೀವಿಯಾಗಿ ಶರಭನನ್ನು ಚಿತ್ರಿಸಲಾಗಿದೆ. ಆನೆ ಮತ್ತು ಸಿಂಹಕ್ಕಿಂತಲೂ ಹೆಚ್ಚು ಶಕ್ತಿಶಾಲಿ ಎಂಬ ಪೌರಾಣಿಕ ನಂಬಿಕೆಯೂ ಶರಭನ ಕುರಿತ ಕಥನಗಳಲ್ಲಿದೆ.
ಶೈವ ಪುರಾಣಗಳ ಪ್ರಕಾರ, ಹಿರಣ್ಯಕಶಿಪುವಿನ ಸಂಹಾರದ ಬಳಿಕ ಉಗ್ರರೂಪ ತಾಳಿದ್ದ ನರಸಿಂಹನ ಕೋಪವನ್ನು ಶಮನಗೊಳಿಸಲು ಶಿವನು ಶರಭೇಶ್ವರನ ರೂಪ ಧರಿಸಿದ್ದನೆಂಬ ಕಥನವಿದೆ. ಹೀಗಾಗಿ ಶರಭನನ್ನು ಶಿವನ ಪರಾಕ್ರಮ ಮತ್ತು ದೈವಿಕ ಶಕ್ತಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ.
ಚಾಲುಕ್ಯರ ಕಲಾಪರಂಪರೆಯ ಕುರುಹು
ಕಲ್ಯಾಣ ಚಾಲುಕ್ಯರ ಕಾಲದಲ್ಲಿ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಉನ್ನತ ಮಟ್ಟದ ಬೆಳವಣಿಗೆ ಕಂಡಿದ್ದವು. ವಿಜಯಪುರ ಕೋಟೆಯಲ್ಲಿ ಕಂಡುಬಂದಿರುವ ಶರಭನ ಉಬ್ಬುಶಿಲ್ಪವು ಅಂದಿನ ಶಿಲ್ಪಿಗಳ ಕಲಾನೈಪುಣ್ಯ, ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಅಭಿರುಚಿಯನ್ನು ತಿಳಿಯಲು ಮಹತ್ವದ ಕುರುಹಾಗಿದೆ. ಗಂಡಭೇರುಂಡ ಮತ್ತು ಶರಭದಂತಹ ಪೌರಾಣಿಕ ಜೀವಿಗಳ ಚಿತ್ರಣಗಳು ಭಾರತೀಯ ಶಿಲ್ಪಕಲೆಯ ವೈವಿಧ್ಯವನ್ನು ಪರಿಚಯಿಸುತ್ತವೆ.
ಐತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಒತ್ತು
ಕಾಲದ ಹೊಡೆತ, ಹವಾಮಾನ ವೈಪರೀತ್ಯ ಹಾಗೂ ನಿರ್ಲಕ್ಷ್ಯದಿಂದ ಇಂತಹ ಅಪರೂಪದ ಶಿಲ್ಪಗಳು ಹಾನಿಗೊಳಗಾಗುವ ಸಾಧ್ಯತೆಯಿದೆ. ಹೀಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳು ಶಿಲ್ಪವಿರುವ ಕೋಟೆಯ ಭಾಗವನ್ನು ಪರಿಶೀಲಿಸಿ, ವೈಜ್ಞಾನಿಕ ಅಧ್ಯಯನ ನಡೆಸಬೇಕು. ಬಳಿಕ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ತಿಳಿಸಿದ್ದಾರೆ.
ವಿಜಯಪುರ ಕೋಟೆಯಲ್ಲಿ ಪತ್ತೆಯಾಗಿರುವ ಶರಭನ ಉಬ್ಬುಶಿಲ್ಪವು ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪಕಲೆ ಹಾಗೂ ಪ್ರಾಚೀನ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ. ಇಂತಹ ಅಪರೂಪದ ಐತಿಹಾಸಿಕ ಕುರುಹುಗಳು ವಿಜಯಪುರದ ಗತವೈಭವವನ್ನು ಪರಿಚಯಿಸುತ್ತವೆ. ಶಿಲ್ಪದ ಕುರಿತು ಪುರಾತತ್ವ ಇಲಾಖೆ ವೈಜ್ಞಾನಿಕ ಅಧ್ಯಯನ ನಡೆಸಿ, ಅದರ ಐತಿಹಾಸಿಕ ಮಹತ್ವವನ್ನು ದಾಖಲಿಸಬೇಕು.
<ಲಾಯಪ್ಪ ಇಂಗಳೆ
ಇತಿಹಾಸ ಸಂಶೋಧಕರು, ವಿಜಯಪುರ