ಕಾಫಿಯಿಂದ ಎನರ್ಜಿ ಡ್ರಿಂಕ್: ಬೆಳ್ಳೂರು ರೈತನ ‘ಬಾ ಬ್ರಿವ್’ ಈಗ ಜರ್ಮನಿಗೂ ರಫ್ತು!
ಮಡಿಕೇರಿ: ವಿದೇಶಗಳಿಗೆ ಹೋಗಿ ಉದ್ಯೋಗ ಹುಡುಕುವ ಯುವಕರ ನಡುವೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ರೈತ ಇಟ್ಟೀರ ವಿಷ್ಣು ತಿಮ್ಮಯ್ಯ ತವರು ಮಣ್ಣಿನಲ್ಲೇ ಉದ್ಯಮ ಕಟ್ಟಿದ್ದಾರೆ. ಕಾಫಿ ಎಂದರೆ ಪೇಯ ಎಂಬ ಕಲ್ಪನೆಯನ್ನು ಬದಿಗೊತ್ತಿ, ಅದರಲ್ಲಿರುವ ನೈಸರ್ಗಿಕ ಕೆಫಿನ್ ಬಳಸಿ ‘ಬಾ ಬ್ರಿವ್’ ಎಂಬ ಎನರ್ಜಿ ಡ್ರಿಂಕ್ ತಯಾರಿಸಿ ಯಶಸ್ಸು ಕಂಡಿದ್ದಾರೆ.
ವಿದೇಶ ಪ್ರವಾಸದ ವೇಳೆ ಅಲ್ಲಿನ ಮಾರುಕಟ್ಟೆ ಮತ್ತು ಎನರ್ಜಿ ಡ್ರಿಂಕ್ ಬಳಕೆಯನ್ನು ಗಮನಿಸಿದ ಅವರಿಗೆ, ಮಾರುಕಟ್ಟೆಯಲ್ಲಿ ಸಿಗುವ ಡ್ರಿಂಕ್‌ಗಳಲ್ಲಿ ಕೃತಕ ಕೆಫಿನ್ ಬಳಸುವುದು ಕಂಡು, ನಮ್ಮಲ್ಲೇ ಸಿಗುವ ನೈಸರ್ಗಿಕ ಕಾಫಿ ಕೆಫಿನ್‌ನಿಂದಲೇ ಪೇಯ ತಯಾರಿಸಬಹುದು ಎಂಬ ಚಿಂತನೆ ಮೂಡಿತು.
ಯುವಕರು ನಗರ, ವಿದೇಶದತ್ತ ಹೋಗುತ್ತಿರುವಾಗ ತವರಲ್ಲೇ ಏನಾದರೂ ಸಾಧಿಸಬೇಕೆಂಬ ಛಲದಿಂದ ಭಾರತ ಸರಕಾರದ ಸ್ಟಾರ್ಟ್‌ಅಪ್ ಯೋಜನೆ ಮತ್ತು ಕಾಫಿ ಮಂಡಳಿ ಸಹಕಾರದೊಂದಿಗೆ ಹುದಿಕೇರಿಯಲ್ಲಿ ಘಟಕ ಸ್ಥಾಪಿಸಿ ಉತ್ಪಾದನೆ ಆರಂಭಿಸಿದ್ದಾರೆ. ಪ್ರಸಕ್ತ ದಿನಕ್ಕೆ 500 ರಿಂದ 1,000 ಕ್ಯಾನ್ ಉತ್ಪಾದನೆ ಆಗುತ್ತಿದೆ. ಆರಂಭದಲ್ಲಿ ಗಾಜಿನ ಬಾಟಲಿಯಲ್ಲಿದ್ದ ಉತ್ಪನ್ನ ಈಗ ಅಲ್ಯೂಮಿನಿಯಂ ಟಿನ್‌ನಲ್ಲಿ ಲಭ್ಯವಿದೆ.
250 ಮಿ.ಲೀ. ‘ಬಾ ಬ್ರಿವ್’ ಒಂದು ಟಿನ್ 130 ರೂ.ಗೆ ಮಾರಾಟವಾಗುತ್ತಿದೆ. ವೆನಿಲ್ಲಾ, ಹೇಝಲ್ನಟ್, ಕ್ಲಾಸಿಕ್ ಹಾಗೂ ಲೆಮನ್ ಎಂಬ ನಾಲ್ಕು ಫ್ಲೇವರ್‌ಗಳಲ್ಲಿ ಲಭ್ಯವಿದೆ. ಆನ್‌ಲೈನ್ ಮೂಲಕ ಮಾರುಕಟ್ಟೆ ಕಂಡುಕೊಂಡಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇತರ ಕಂಪೆನಿಗಳಿಗೂ ವೈಟ್ ಲೇಬಲಿಂಗ್ ಮೂಲಕ ಉತ್ಪನ್ನ ತಯಾರಿಸಿಕೊಡಲಾಗುತ್ತಿದೆ. ಹಲವು ಕಾಫಿ ಸಮ್ಮೇಳನಗಳಲ್ಲಿ ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದಾರೆ.
ಕೃಷಿಯಲ್ಲೂ ಅವರ ಪ್ರಯೋಗ ಮುಂದುವರಿದಿದೆ. ಸುಮಾರು 70 ಎಕರೆ ಕಾಫಿ ತೋಟದ ಜೊತೆಗೆ ಕಾಳುಮೆಣಸು ಕೃಷಿಗೂ ಆದ್ಯತೆ ನೀಡಿದ್ದಾರೆ. ಹಳೆಯ ಗಿಡ ತೆರವುಗೊಳಿಸಿ ಪ್ರತಿ ವರ್ಷ 3 ರಿಂದ 5 ಎಕರೆ ಮರುನಾಟಿ ಮಾಡುತ್ತಿದ್ದಾರೆ. ತೋಟದಲ್ಲಿ ವಿವಿಧ ಹಣ್ಣಿನ ಗಿಡಗಳನ್ನೂ ಬೆಳೆಸುತ್ತಿದ್ದು, ಬ್ರೆಜಿಲಿಯನ್ ಅಕಾಯ್ ಗಿಡ ಉತ್ತಮ ಭರವಸೆ ಮೂಡಿಸಿದೆ.
ತೋಟದ ಕೆರೆಗಳ ನೀರಿಗೆ ಶಾಶ್ವತ ಪೈಪ್‌ಲೈನ್ ವ್ಯವಸ್ಥೆ ಮಾಡಿ, ನೀರು ಹಾಯಿಸುವಾಗಲೇ ಜೀವಾಮೃತ ಬೆರೆಸಿ ನೀಡುತ್ತಿದ್ದಾರೆ. ಕೆರೆಗಳಲ್ಲಿ ಕಾಟ್ಲಾ, ರೋಹು ಸೇರಿದಂತೆ ವಿವಿಧ ಮೀನು ಸಾಕುತ್ತಿದ್ದಾರೆ.
ಸಾವಯವ ಪದ್ಧತಿಯಲ್ಲಿ ಬೆಳೆದ ಕಾಫಿಯನ್ನು ಉತ್ತಮ ಗುಣಮಟ್ಟದ ಉತ್ಪನ್ನವಾಗಿ ರೂಪಿಸಿ ರಫ್ತು ಮಾಡಲಾಗುತ್ತಿದೆ. ಮುಖ್ಯವಾಗಿ ಜರ್ಮನಿ ಹಾಗೂ ಫ್ರಾನ್ಸ್‌ಗೆ ರಫ್ತಾಗುತ್ತಿದ್ದು, ಅಮುಲ್‌ನ ಕೆಲವು ಬ್ರಾಂಡ್‌ಗಳಿಗೆ ಅಧಿಕೃತ ಕಾಫಿ ಸರಬರಾಜುದಾರರಾಗಿದ್ದಾರೆ. ಸಾವಯವ ಕಾಫಿಗೆ ಉತ್ತಮ ಬೇಡಿಕೆ ಇರುವುದರಿಂದ ಮೌಲ್ಯವರ್ಧನೆಯಿಂದ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ, ಸಾವಯವ ಪದ್ಧತಿ, ಹೊಸ ಬೆಳೆಗಳ ಪ್ರಯೋಗ ಹಾಗೂ ಸ್ವಂತ ಉದ್ಯಮದ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂಬುದಕ್ಕೆ ಅವರ ಪ್ರಯತ್ನ ಮಾದರಿಯಾಗಿದೆ.
ವಿದೇಶಗಳಿಗೆ ಭೇಟಿ ನೀಡಿದಾಗ ಎಲ್ಲೆಡೆ ಎನರ್ಜಿ ಡ್ರಿಂಕ್ಸ್ ಸಾಮಾನ್ಯವಾಗಿರುವುದು ಕಂಡುಬಂತು. ಆದರೆ ಬಹುತೇಕ ಉತ್ಪನ್ನಗಳಲ್ಲಿ ಕೃತಕ ಕೆಫಿನ್ ಬಳಸಲಾಗುತ್ತಿತ್ತು. ನಮ್ಮಲ್ಲೇ ನೈಸರ್ಗಿಕ ಕಾಫಿ ಲಭ್ಯವಿರುವಾಗ ಅದರಲ್ಲಿರುವ ನೈಸರ್ಗಿಕ ಕೆಫಿನ್ ಬಳಸಿಕೊಂಡು ಎನರ್ಜಿ ಡ್ರಿಂಕ್ ಏಕೆ ತಯಾರಿಸಬಾರದು ಎನಿಸಿತು. ಅದರಿಂದಲೇ ಈ ಪ್ರಯತ್ನ ಆರಂಭವಾಯಿತು. ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮುಂದೆ ವಿಸ್ತರಿಸುವ ಯೋಜನೆ ಇದೆ.
-ಇಟ್ಟೀರ ವಿಷ್ಣು ತಿಮ್ಮಯ್ಯ, ಕೃಷಿಕ