ಸಾಂದರ್ಭಿಕ ಚಿತ್ರ | Photo credit : PTI

ಬೀದರ್: ಭಾಲ್ಕಿ ತಾಲೂಕಿನಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಫಾರಂ-7 ಮೂಲಕ ಮುಸ್ಲಿಂ ಸಮುದಾಯದವರನ್ನೇ ಗುರಿಯಾಗಿಸಿಕೊಂಡು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಭಾಲ್ಕಿ ನಗರದ 1, 107, 112, 114, 115, 129 ಸೇರಿದಂತೆ ಹಲವು ವಾರ್ಡ್‌ಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುಮಾರು 1,800ಕ್ಕೂ ಹೆಚ್ಚು ಮತದಾರರು ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದ್ದು, ತಾಲೂಕು ಮಟ್ಟದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.

ಆಕ್ಷೇಪಣೆಗೆ ಒಳಗಾದವರ ಪೈಕಿ ಹಲವರು ವರ್ಷಗಳಿಂದ ಭಾಲ್ಕಿಯಲ್ಲೇ ವಾಸಿಸುತ್ತಿದ್ದು, ಸ್ಥಳಾಂತರಗೊಂಡಿಲ್ಲ ಅಥವಾ ಮೃತಪಟ್ಟಿಲ್ಲ. ಕೆಲವರು 2002ರ ಮತದಾರರ ಪಟ್ಟಿಯಲ್ಲೂ ಹೆಸರು ಹೊಂದಿದ್ದು, ಪ್ರಸ್ತುತ ಎಸ್‌ಐಆರ್ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಆದರೂ ತಮ್ಮ ವಿರುದ್ಧ ಆಕ್ಷೇಪಣೆ ಸಲ್ಲಿಸಿರುವುದು ಉದ್ದೇಶಪೂರ್ವಕ ಕ್ರಮ ಮುಸ್ಲಿಂ ಸಮುದಾಯದ ಮುಖಂಡರು, ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

‘2002 ಕ್ಕಿಂತಲೂ ಮುಂಚೆಯಿಂದಲೂ ನಾವು ಇಲ್ಲಿಯೇ ವಾಸವಾಗಿದ್ದೇವೆ. ಇತಿಹಾಸ ತೆಗೆದು ನೋಡಿದರೆ ನಾವು, ನಮ್ಮ ತಂದೆ ತಾಯಿ ಹಾಗೂ ತಾತಂದಿರು ಕೂಡ ಭಾಲ್ಕಿ ಕ್ಷೇತ್ರದಲ್ಲಿಯೇ ಮತದಾನ ಮಾಡಿದ್ದಾರೆ. 2002 ರ ಮತದಾನದ ಪಟ್ಟಿಯಲ್ಲಿಯೂ ಕೂಡ ನಮ್ಮ ಹೆಸರು ಇದೆ. ನಾವು ಎಸ್‌ಐಆರ್ ಫಾರಂ ಅನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಿದ್ದೇವೆ. ಕರಡು ಪಟ್ಟಿಯಲ್ಲಿ ನಮ್ಮ ಹೆಸರು ಕೂಡ ಬಂದಿದೆ. ಆದರೆ, ನಾವು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ನಮ್ಮನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ’ ಎಂದು ಅಲ್ಲಿನ ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಒಬ್ಬನೇ ವ್ಯಕ್ತಿ ಹಲವಾರು ಮತದಾರರ ವಿರುದ್ಧ, ತಮ್ಮ ವಾರ್ಡ್ ಹೊರತಾಗಿಯೂ ಬೇರೆ ವಾರ್ಡ್‌ಗಳಲ್ಲಿಯೂ ಆಕ್ಷೇಪಣೆ ಸಲ್ಲಿಸಿರುವ ಆರೋಪವೂ ಕೇಳಿಬಂದಿದೆ. ಸಾಮಾನ್ಯರು ಮಾತ್ರವಲ್ಲದೆ, ಮಾಜಿ ತಹಸೀಲ್ದಾರ್ ಅವರ ಪುತ್ರ ಹಾಗೂ ಮಾಜಿ ಮುಖ್ಯೋಪಾಧ್ಯಾಯಿನಿಯ ಪುತ್ರರಾಗಿರುವ ವಕೀಲ್ ಅಹಮ್ಮದ್ ಮುನ್ಸಿ ಮತ್ತು ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಮುಹಮ್ಮದ್ ಅತಿಕ್ ಅಹಮ್ಮದ್ ಅವರ ವಿರುದ್ಧವೂ ಆಕ್ಷೇಪಣೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಆಕ್ಷೇಪಣೆಗೆ ಒಳಗಾದವರಿಗೆ ಚುನಾವಣಾ ಅಧಿಕಾರಿಗಳಿಂದ ನೋಟಿಸ್ ನೀಡುವ ಸಾಧ್ಯತೆ ಇರುವುದರಿಂದ ದಾಖಲೆಗಳನ್ನು ಸಂಗ್ರಹಿಸಿ ವಿಚಾರಣೆಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ಬಡವರು ಮತ್ತು ಈ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇಲ್ಲದವರು ಅಗತ್ಯ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೆ ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಭಾಲ್ಕಿ ನಗರ ಮಾತ್ರವಲ್ಲದೆ ನಿಟ್ಟೂರು (ಬಿ), ಹುಪಳಾ, ಲಖನಗಾಂವ್, ಉಚ್ಚಾ, ಏಣಕೂರು ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿಯೂ ಮುಸ್ಲಿಂ ಸಮುದಾಯದವರ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೆಲವು ಬಿಜೆಪಿ ಬೆಂಬಲಿಗರು ಹಾಗೂ ಹಿಂದೂಪರ ಸಂಘಟನೆಗಳಿಗೆ ಸೇರಿದವರು ಉದ್ದೇಶಪೂರ್ವಕವಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಸ್ಥಳೀಯ ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಿರುವವರ ಉದ್ದೇಶ ಮತ್ತು ಆಕ್ಷೇಪಣೆಯ ಆಧಾರವನ್ನು ಅಧಿಕಾರಿಗಳು ಪರಿಶೀಲಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

‘ಬಿಜೆಪಿ ಮತ್ತು ಕೆಲ ಹಿಂದೂಪರ ಸಂಘಟನೆಯವರು ನಮ್ಮನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಒಬ್ಬನೇ ವ್ಯಕ್ತಿ ಹಲವಾರು ಮುಸ್ಲಿಂ ಸಮುದಾಯದ ಜನರ ವಿರುದ್ಧ ಅಕ್ಷೇಪಣೆ ಸಲ್ಲಿಸಿದ್ದಾರೆ. ಇವರು ಕೋಮು ಗಲಭೆ ಸೃಷ್ಟಿಸಲು ಇದೆಲ್ಲ ಮಾಡುತ್ತಿದ್ದಾರೆ ಅನಿಸುತ್ತಿದೆ. ಸರಕಾರ ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ಇಂತಹ ವ್ಯಕ್ತಿಗಳನ್ನು ಗುರುತಿಸಿ, ಶಾಂತಿ ಕದಡಲು ಹೊರಟವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನಿನ ಮೂಲಕ ತಕ್ಕ ಶಿಕ್ಷೆ ನೀಡಬೇಕು. ಇಲ್ಲವಾದರೆ ಅನ್ಯಾಯಕ್ಕೊಳಗಾದ ನಾವು ಪ್ರತಿಭಟನೆ ಮಾಡುತ್ತೇವೆ’ ಎಂದು ಮುಸ್ಲಿಮ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಕೆಲವು ಬಿಎಲ್‌ಒಗಳನ್ನು ಸಂಪರ್ಕಿಸಿದಾಗ, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧ ಆಕ್ಷೇಪಣೆಗಳು ಬಂದಿರುವುದು ಗಮನಕ್ಕೆ ಬಂದಿದೆ. ಸ್ಥಳಾಂತರವಾಗದೆ ಸ್ಥಳೀಯವಾಗಿಯೇ ಇರುವವರು ಹಾಗೂ ವಯೋವೃದ್ಧರ ವಿರುದ್ಧವೂ ಆಕ್ಷೇಪಣೆಗಳಿವೆ. ನೋಟಿಸ್ ನೀಡಿ ವಿಚಾರಣೆ ನಡೆಸಿದ ಬಳಿಕವಷ್ಟೇ ನಿಖರ ಮಾಹಿತಿ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಚುನಾವಣಾ ಅಧಿಕಾರಿಗಳು ಆಕ್ಷೇಪಣೆಗಳ ಸ್ವರೂಪ, ಆಧಾರ ಮತ್ತು ಒಂದೇ ವ್ಯಕ್ತಿಯಿಂದ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಉದ್ದೇಶಪೂರ್ವಕವಾಗಿ ತಪ್ಪು ಆಕ್ಷೇಪಣೆ ಸಲ್ಲಿಸಿರುವುದು ಕಂಡುಬಂದರೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ: 

ಪ್ರಜಾಪ್ರಭುತ್ವದಲ್ಲಿ ಆಕ್ಷೇಪಣೆ ಸಲ್ಲಿಸುವ ಅವಕಾಶವಿದೆ. ಆದರೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಅಧಿಕಾರಿಗಳು ವಿಚಾರಣೆ ನಡೆಸಿಯೇ ಪ್ರಕರಣಗಳನ್ನು ಇತ್ಯರ್ಥಪಡಿಸಲಿದ್ದಾರೆ. ಅಕ್ಷೇಪಣೆ ಸಲ್ಲಿಸಿದವರಲ್ಲಿ ಬಹುತೇಕರು ತಮ್ಮ ಆಕ್ಷೇಪಣಾ ಅರ್ಜಿಗಳನ್ನು ಹಿಂಪಡೆದಿದ್ದಾರೆ. ಇನ್ನು ಅನೇಕರು ಹಿಂಪಡೆಯುತ್ತಿದ್ದಾರೆ. ಯಾರಾದರೂ ತಪ್ಪು ಮಾಹಿತಿ ನೀಡಿದರೆ ಅವರ ವಿರುದ್ಧ ಆರ್‌ಪಿ ಆಕ್ಟ್ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ.

-ಶಿಲ್ಪಾ ಶರ್ಮಾ, ಜಿಲ್ಲಾಧಿಕಾರಿ, ಬೀದರ್

‘ಒಬ್ಬರಿಂದ ಹತ್ತಾರು ಆಕ್ಷೇಪಣೆ; ತನಿಖೆಯಾಗಲಿ’ :

ಒಬ್ಬನೇ ವ್ಯಕ್ತಿ ಹತ್ತಾರು ಆಕ್ಷೇಪಣೆಗಳನ್ನು ಸಲ್ಲಿಸುವುದು ಸರಿಯಲ್ಲ. ತಮ್ಮ ವಾರ್ಡ್ ಹೊರತಾಗಿಯೂ ಬೇರೆ ವಾರ್ಡ್‌ಗಳ ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆ ಸರಿಯಾದ ದಿಕ್ಕಿನಲ್ಲಿ ಸಾಗಲು ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು. ಜಿಲ್ಲಾಡಳಿತ ಮತ್ತು ಸರಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು.

-ಮುಬಶಿರ್ ಶಿಂದೆ, ಜಿಲ್ಲಾಧ್ಯಕ್ಷ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

ನನ್ನ ತಂದೆ ಮಾಜಿ ತಹಶೀಲ್ದಾರ್ ಹಾಗೂ ತಾಯಿ ಮಾಜಿ ಮುಖ್ಯೋಪಾಧ್ಯಾಯಿನಿ. ಸ್ವಾತಂತ್ರ್ಯಕ್ಕೂ ಮುಂಚಿನಿಂದಲೂ ನಾವು ಭಾಲ್ಕಿಯ ನಿವಾಸಿಗಳು. ಎಲ್ಲಿಯೂ ಸ್ಥಳಾಂತರವಾಗಿಲ್ಲ. ಆದರೂ ನನ್ನ ವಿರುದ್ಧ ಎಸ್‌ಐಆರ್ ಫಾರಂ-7ರಲ್ಲಿ ಆಕ್ಷೇಪಣೆ ಸಲ್ಲಿಸಲಾಗಿದೆ. ಸೂಕ್ತ ತನಿಖೆ ನಡೆಸಿ, ತಪ್ಪು ಆಕ್ಷೇಪಣೆ ಸಲ್ಲಿಸಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಬೇಕು.

-ವಕೀಲ್ ಅಹಮ್ಮದ್ ಮುನ್ಸಿ, ಸ್ಥಳೀಯ ನಿವಾಸಿ

‘ಆಕ್ಷೇಪಣೆಗೆ ಆಧಾರವೇನು ಎಂಬುದು ಸಾಬೀತಾಗಲಿ’ :

ನಾನು ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯನಾಗಿದ್ದೇನೆ. ಬೇರೆ ಯಾವುದೇ ಸ್ಥಳದಲ್ಲಿ ವಾಸವಾಗಿಲ್ಲ. ಬೇರೆ ಸ್ಥಳದಲ್ಲಿ ನನ್ನ ದಾಖಲೆಗಳೂ ಇಲ್ಲ. ಆದರೂ ನನ್ನ ವಿರುದ್ಧ ಫಾರಂ-7ರಲ್ಲಿ ಆಕ್ಷೇಪಣೆ ಸಲ್ಲಿಸಲಾಗಿದೆ. ಆಕ್ಷೇಪಣೆ ಸಲ್ಲಿಸಿದವರು ಅದರ ಆಧಾರವನ್ನು ಸಾಬೀತುಪಡಿಸಬೇಕು. ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಬೇಕು.

-ಮುಹಮ್ಮದ್ ಅತಿಕ್ ಅಹಮ್ಮದ್, ಭಾಲ್ಕಿ ನಿವಾಸಿ

‘ಆಕ್ಷೇಪಣೆ ಸಲ್ಲಿಸಿದವರ ಆಧಾರವೂ ಪರಿಶೀಲನೆ’ :

ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ನೋಟಿಸ್ ನೀಡಲಾಗುವುದು. ಆಕ್ಷೇಪಣೆಗೆ ಒಳಗಾದವರು ಮಾತ್ರವಲ್ಲ, ಆಕ್ಷೇಪಣೆ ಸಲ್ಲಿಸಿದವರೂ ದಾಖಲೆಗಳನ್ನು ಹೊಂದಿರಬೇಕು. ಯಾವ ಆಧಾರದ ಮೇಲೆ ಆಕ್ಷೇಪಣೆ ಸಲ್ಲಿಸಲಾಗಿದೆ ಎಂಬುದನ್ನೂ ಪರಿಶೀಲಿಸಲಾಗುವುದು.

-ಮಲ್ಲಿಕಾರ್ಜುನ್ ವಡ್ಡನಕೇರೆ, ತಹಶೀಲ್ದಾರ್, ಭಾಲ್ಕಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಶೇನ ಫುಲೆ

contributor