ಪರಂಪರೆ ಮತ್ತು ಸಾಧನೆಗಳೇ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳನ್ನು ಸಿಎಂ ಖುದ್ದು ವಿಧಾನಸಭೆ ಅಧಿವೇಶನದಲ್ಲಿ ಮುಕ್ತ ಆಹ್ವಾನ ನೀಡಲು ಕಾರಣ. ಅವರ ಆಯ್ಕೆಯನ್ನು ಪ್ರಶ್ನಿಸುವ ಹಾಗೂ ಅಂತಹ ವಿಚಾರದ ಬೌದ್ಧಿಕ ದಿವಾಳಿತನಕ್ಕೆ ಔಷಧಿ ಇಲ್ಲ.

ಹೌದಲ್ಲವೇ, ಮೈಸೂರು ದಸರಾ ಕೇವಲ ಒಂದು ಸರಕಾರಿ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಅದು ನಾಡಿನ ಅಸ್ಮಿತೆ, ಸಾಂಸ್ಕೃತಿಕ ವೈಭವ ಹಾಗೂ ಕರುನಾಡಿನ ಹೆಮ್ಮೆಯ ಸಂಕೇತ. ಇಂತಹ ಪವಿತ್ರ ಹಾಗೂ ಐತಿಹಾಸಿಕ ಉತ್ಸವದ ಉದ್ಘಾಟಕರ ಆಯ್ಕೆಯ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸುವುದು ಅಥವಾ ನಾಡಿನ ಪೂಜ್ಯನೀಯ ಶಕ್ತಿಗಳನ್ನು ಹಗುರವಾಗಿ ಚಿತ್ರಿಸುವುದು ಖಂಡನೀಯ. ‘ವಾರ್ತಾ ಭಾರತಿ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖಕ ಡಾ. ರಾಜಶೇಖರ ಹತಗುಂದಿ ಅವರ ಅಂಕಣವು, ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರನ್ನು ಆಹ್ವಾನಿಸುವ ಕುರಿತು ಎತ್ತಿರುವ ಸಂಶಯ ಹಾಗೂ ನಕಾರಾತ್ಮಕ ಧೋರಣೆಯು ನಾಡಿನ ಜನರ ಭಾವನೆಗಳಿಗೆ ಧಕ್ಕೆ ತರುವಂತಿದೆ.

ಲೇಖನದಲ್ಲಿ ಲೇಖಕರು ರಾಜ್ಯದ ಬರಪರಿಸ್ಥಿತಿಯ ನೆಪವೊಡ್ಡಿ ದಸರಾ ಆಚರಣೆ ಮತ್ತು ಉದ್ಘಾಟಕರ ಆಯ್ಕೆಯ ಬಗ್ಗೆ ಅಪಸ್ವರ ಎತ್ತಿದ್ದಾರೆ. ಆದರೆ, ಕಷ್ಟ-ಕಾರ್ಪಣ್ಯಗಳ ನಡುವೆಯೂ ಜನರಲ್ಲಿ ಭರವಸೆ, ಸಾಂಸ್ಕೃತಿಕ ಒಗ್ಗಟ್ಟು ಮತ್ತು ಚೈತನ್ಯವನ್ನು ತುಂಬುವುದು ಇಂತಹ ನಾಡಹಬ್ಬಗಳ ಮುಖ್ಯ ಉದ್ದೇಶ. ಈ ಸಂದರ್ಭದಲ್ಲಿ ಭಾವೈಕ್ಯಕ್ಕೆ ಹೆಸರು ವಾಸಿಯಾದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರಂತಹ ಮಹಾನ್ ಸಾಧಕರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಅತ್ಯಂತ ಸೂಕ್ತ ಹಾಗೂ ಶ್ಲಾಘನೀಯ ನಿರ್ಧಾರವಾಗಿದೆ. ಕೊಪ್ಪಳದ ನಿವಾಸಿಯಾಗಿ ಮೊದಲು ಅದಕ್ಕಾಗಿ ನಾಡಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಡಿಸಿಎಂ ಡಾ. ಪರಮೇಶ್ವರ್, ಸಚಿವರಾದ ಶಿವರಾಜ ಎಸ್. ತಂಗಡಗಿ ಮತ್ತು ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರನ್ನು ಅಭಿನಂದಿಸುತ್ತೇನೆ.

ಗವಿಶ್ರೀಗಳ ಅಪಾರ ಸಾಧನೆ ಮತ್ತು ಸಾಮಾಜಿಕ ಕ್ರಾಂತಿ:

ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ (ಗವಿಶ್ರೀಗಳು) ಅವರು ಕೇವಲ ಒಂದು ಮಠದ ಪೀಠಾಧಿಪತಿಗಳಷ್ಟೇ ಅಲ್ಲ, ಅವರು ಸಾಕ್ಷಾತ್ ಕಾಯಕ ಯೋಗಿ. ಅವರ ನಾಯಕತ್ವದಲ್ಲಿ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿ ಅಪಾರವಾದುದು.

1. ಜಲಕ್ರಾಂತಿ ಮತ್ತು ಕೆರೆಗಳ ಹೂಳೆತ್ತುವಿಕೆ: ಉತ್ತರ ಕರ್ನಾಟಕದ ಸತತ ಮಳೆ ಅಭಾವ ಪೀಡಿತ ಪ್ರದೇಶಗಳಲ್ಲಿ ಸರಕಾರಗಳು ಮಾಡಲಾಗದ ಸಾಧನೆಯನ್ನು ಗವಿಶ್ರೀಗಳು ಜನಸಂಕಲ್ಪದ ಮೂಲಕ ಸಾಧಿಸಿ ತೋರಿಸಿದ್ದಾರೆ. ಮುನ್ನೂರು ಎಕರೆ ವಿಸ್ತೀರ್ಣದ ಕೆರೆ ಹೂಳೆತ್ತುವ ಬೃಹತ್ ಕಾರ್ಯವನ್ನು ಜನಸಾಮಾನ್ಯರನ್ನು ಒಗ್ಗೂಡಿಸಿ ಉಚಿತವಾಗಿ ನೆರವೇರಿಸಿ ಜೊತೆಗೆ ಕೊಪ್ಪಳದ ಹಿರೇಹಳ್ಳ ಪುನಶ್ಚೇತನದ ಮೂಲಕ ಜಲಕ್ರಾಂತಿ ಮಾಡಿದ್ದಾರೆ.

2. ಶಿಕ್ಷಣ ಮತ್ತು ದಾಸೋಹ: ಸಾವಿರಾರು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಮತ್ತು ಮಹಾದಾಸೋಹವನ್ನು ನಿರಂತರವಾಗಿ ನೀಡುತ್ತಾ ಜ್ಞಾನದಾಸೋಹದ ಜ್ಯೋತಿಯನ್ನು ಬೆಳಗಿಸುತ್ತಿದ್ದಾರೆ. 5,000 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೃಹತ್ ವಸತಿ ಮತ್ತು ಶೈಕ್ಷಣಿಕ ಕಟ್ಟಡವನ್ನು ನಿರ್ಮಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೂ ಸಂಸ್ಥೆಗಳನ್ನು ಬೆಳೆಸಲಾಗಿದ್ದು, ಡಿ.ಎಡ್, ಬಿ.ಎಡ್, ಬಿ.ಬಿ.ಎಂ, ಬಿಎಎಂಎಸ್ (ಮೆಡಿಕಲ್) ಹಾಗೂ ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆಗಳನ್ನು, ಸಾವಿರಾರು ಬಡ ಹೆಣ್ಣುಮಕ್ಕಳಿಗಾಗಿ ಉಚಿತ ಪಿಯು ವಸತಿಸಹಿತ ಕಾಲೇಜು ಸ್ಥಾಪಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.

3. ವೃಕ್ಷಾರೋಪಣ ಮತ್ತು ರಕ್ತದಾನ: ಲಕ್ಷಾಂತರ ಸಸಿಗಳನ್ನು ನೆಟ್ಟು ಪೋಷಿಸುವ ಸಸಿಮಹಾಪ್ರಸಾದ ಆಂದೋಲನ ಹಾಗೂ ಬೃಹತ್ ರಕ್ತದಾನ ಶಿಬಿರಗಳ ಮೂಲಕ ಸಮಾಜಸೇವೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.

4. ಮಹಿಳೆಯರ ಕನಸಿಗೆ ದೊಡ್ಡ ಶಕ್ತಿಯಾಗಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ, ಅದುವೇ ಸಾವಿರಾರು ಹೆಣ್ಣುಮಕ್ಕಳ ಉಚಿತ ವಸತಿಸಹಿತ ಪದವಿಪೂರ್ವ ಕಾಲೇಜು.

5. ಕೊಪ್ಪಳದ ಜಾತ್ರೆ ಅಂದರೆ ಅದು ಕೇವಲ ಹಬ್ಬವಲ್ಲ, ಅದೊಂದು ಮೈಸೂರು ದಸರಾದಷ್ಟೇ ದೊಡ್ಡ ಹಬ್ಬ. ಸರಕಾರದ ಹಣವಿಲ್ಲದೆ ಜನರೇ ಮಾಡುವ ಹಬ್ಬ. ಅದನ್ನು ಅತ್ಯದ್ಭುತವಾಗಿ ಕಟ್ಟಿದ್ದು, ಇವತ್ತಿನ ಗವಿಮಠವನ್ನು ಜನರು ಬಂದು ನೆಮ್ಮದಿ ಸಿಗುವ ಸ್ಥಳ ಎಂದು ಭಾವಿಸಿ ಬರುವಂತೆ ಮಾಡಿದ್ದು ಇದೇ ಕಿರಿ ವಯಸ್ಸಿನ ಹಿರಿಯ ಚಿಂತನೆ ಇರುವ ಸ್ವಾಮೀಜಿ.

ಇಂತಹ ನಿಸ್ವಾರ್ಥ, ಜಾತ್ಯತೀತ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಯುಗಪುರುಷರೊಬ್ಬರನ್ನು ದಸರಾ ಉದ್ಘಾಟನೆಗೆ ಪರಿಗಣಿಸುವುದನ್ನು ರಾಜಕೀಯ ಅಥವಾ ಸೈದ್ಧಾಂತಿಕ ದೃಷ್ಟಿಕೋನದಿಂದ ವಿರೋಧಿಸುವುದು ತೀರಾ ಸಂಕುಚಿತ ಮನೋಭಾವವಾಗಿದೆ. ಮಾಧ್ಯಮಗಳು ಹಾಗೂ ಲೇಖಕರು ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡಬೇಕೇ ಹೊರತು, ಸಾಧಕರ ಕಾರ್ಯವನ್ನು ಹಗುರಗೊಳಿಸುವ ಅಥವಾ ವಿವಾದ ಸೃಷ್ಟಿಸುವ ಕೆಲಸಕ್ಕೆ ಕೈಹಾಕಬಾರದು.

ಮೈಸೂರು ದಸರಾದಂತಹ ಪವಿತ್ರ ವೇದಿಕೆಗೆ ಗವಿಸಿದ್ಧೇಶ್ವರ ಸ್ವಾಮೀಜಿಯವರಂತಹ ಸಮಾಜಮುಖಿ ಸಾಧಕರನ್ನು ಆಹ್ವಾನಿಸುವುದು ನಾಡಹಬ್ಬದ ಘನತೆಯನ್ನು ಹೆಚ್ಚಿಸುತ್ತದೆಯೇ ಹೊರತು ಕುಗ್ಗಿಸುವುದಿಲ್ಲ. ಆದ್ದರಿಂದ, ಲೇಖಕ ರಾಜಶೇಖರ ಹತಗುಂದಿ ಅವರು ಇಂತಹ ನಿರಾಶಾವಾದಿ ಮತ್ತು ನಕಾರಾತ್ಮಕ ಧೋರಣೆಯನ್ನು ಕೈಬಿಟ್ಟು, ನಾಡಿನ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮಹಾತ್ಮರ ಸಾಧನೆಯನ್ನು ಗೌರವಿಸುವುದನ್ನು ಕಲಿಯಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಶ್ರೀಮತಿ ಜ್ಯೋತಿ ಮಂಜುನಾಥ ಗೊಂಡಬಾಳ

contributor

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು, ಹೋರಾಟಗಾರರು, ಮಹಿಳಾಪರ ಚಿಂತಕರು, ಕೊಪ್ಪಳ.