ಹರಪನಹಳ್ಳಿ: ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರ ಅನುದಾನ ನೀಡುತ್ತಿದ್ದರೂ, ಸ್ಥಳೀಯ ಮಟ್ಟದಲ್ಲಿ ಕಾಮಗಾರಿಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದಿಂದ ವಿದ್ಯಾರ್ಥಿಗಳು ಅಗತ್ಯ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಆರೋಪ ಕೇಳಿಬಂದಿದೆ.

ತಾಲೂಕಿನ ಕೂಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಅಡುಗೆ ಕೋಣೆ ಹಾಗೂ ಬಾಲಕಿಯರ ಶೌಚಾಲಯ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಅಡುಗೆ ಕೋಣೆ ನಿರ್ಮಾಣಕ್ಕೆ 7.50 ಲಕ್ಷ ರೂ. ಹಾಗೂ ಬಾಲಕಿಯರ ಶೌಚಾಲಯಕ್ಕೆ 5.20 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಎರಡೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅಡುಗೆ ಕೋಣೆ ಕಾಮಗಾರಿ ಬೇಸ್ಮೆಂಟ್ ಹಂತದಲ್ಲೇ ಸ್ಥಗಿತಗೊಂಡಿದ್ದರೆ, ಶೌಚಾಲಯ ಕಾಮಗಾರಿ ಲಿಂಟಲ್ ಹಂತದಲ್ಲಿ ನಿಂತಿದೆ.

ಮೂಲಸೌಕರ್ಯ ಕೊರತೆ :

ಶಾಲೆಯಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶುದ್ಧ ಕುಡಿಯುವ ನೀರಿನ ಘಟಕದ ಕೊರತೆ, ಅಪೂರ್ಣ ಕಾಂಪೌಂಡ್ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳು ಇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶಾಲಾ ಆವರಣದಲ್ಲಿ ಹುಳು-ಉಪ್ಪಡಿಗಳ ಕಾಟವೂ ಇದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಗಿದೆ. ವಿಶೇಷವಾಗಿ ಬಾಲಕಿಯರಿಗೆ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಪೋಷಕರು ದೂರಿದ್ದಾರೆ.

ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆ :

ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡಿದ ಬಳಿಕ ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ಪೂರ್ಣಗೊಳಿಸುವಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕಿದೆ. ಆದರೆ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದರೂ ಅವುಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಕ್ಷೇತ್ರದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ತಕ್ಷಣ ಪುನರಾರಂಭಿಸಿ ಪೂರ್ಣಗೊಳಿಸುವುದರ ಜತೆಗೆ ಶಾಲೆಗೆ ಶುದ್ಧ ಕುಡಿಯುವ ನೀರು, ಕಾಂಪೌಂಡ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಾದಾಪುರ ಸರಕಾರಿ ಶಾಲೆಯಲ್ಲಿ ಬಾಲಕಿಯರಿಗಾಗಿ ನಿರ್ಮಿಸಲಾಗುತ್ತಿರುವ ಶೌಚಾಲಯದ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತಾಗಿದೆ. ಶಾಲಾ ಆವರಣದ ಸುತ್ತಮುತ್ತ ಪುಂಡರ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಬಯಲು ಪ್ರದೇಶಕ್ಕೆ ತೆರಳಲು ವಿದ್ಯಾರ್ಥಿನಿಯರು ಮುಜುಗರ ಹಾಗೂ ಆತಂಕ ಎದುರಿಸುತ್ತಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಇದರಿಂದ ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಗೌಪ್ಯತೆಗೂ ಸಮಸ್ಯೆಯಾಗುತ್ತಿದೆ. ಶೌಚಾಲಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಾಲಕಿಯರಿಗೆ ಸುರಕ್ಷಿತ ಹಾಗೂ ಸಮರ್ಪಕ ಸೌಲಭ್ಯ ಕಲ್ಪಿಸಬೇಕು ಎಂದು ಪೋಷಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಾದಾಪುರ ಶಾಲೆಯಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿದ್ದ ಕಾಮಗಾರಿಯು ಇದೀಗ ವಿಬಿಜಿ ರಾಮ್ ಜಿ ಯೋಜನೆಯಾಗಿ ಪರಿವರ್ತನೆಯಾಗಿರುವ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿದೆ. ಇನ್ನೂ 15 ದಿನಗಳೊಳಗೆ ಕಾಮಗಾರಿ ಪುನರಾರಂಭಿಸಿ ಪೂರ್ಣಗೊಳಿಸಲಾಗುವುದು.

-ವೈ.ಎಚ್. ಚಂದ್ರಶೇಖರ, ಹರಪನಹಳ್ಳಿ ತಾ.ಪಂ. ಇಒ

ಶಾಲೆಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಕೂಡಲೇ ಪುನರಾರಂಭಿಸಿ ಪೂರ್ಣಗೊಳಿಸಬೇಕು. ಶಾಲೆಗೆ ಶುದ್ಧ ಕುಡಿಯುವ ನೀರು, ಕಾಂಪೌಂಡ್ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

-ಹೊಸಪೇಟೆ ಅಜ್ಜಯ್ಯ, ಮಾದಾಪುರ ನಿವಾಸಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗುಡಿಹಳ್ಳಿ ಮಂಜುನಾಥ್

contributor