×
Ad

ಗಂಜಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆ

ಚರ್ಮರೋಗ, ಮೂತ್ರಪಿಂಡ ಸಮಸ್ಯೆಗೆ ಒಳಗಾದ ಗ್ರಾಮಸ್ಥರು

Update: 2026-05-09 14:26 IST

ರಾಯಚೂರು : ರಾಯಚೂರು ಗ್ರಾಮೀಣ ಕ್ಷೇತ್ರದ ಯದ್ಲಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಳ್ಳಿ ಗ್ರಾಮದಲ್ಲಿ ಸಾರ್ವಜನಿಕ ನಳಗಳ ಮೂಲಕ ಕಲುಷಿತ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಗ್ರಾಮಸ್ಥರು ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಕುಡಿಯುವ ನೀರಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ.

ಕೃಷ್ಣ ನದಿ ಮೂಲಕ ಗಂಜಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಚಿಕ್ಕಸುಗೂರು ಘಟಕದ ಬಳಿ ಶುದ್ಧೀಕರಣದ ನಡೆಸಲಾಗುತ್ತಿದೆ. ಆದರೆ ಗ್ರಾಮಕ್ಕೆ ಬರುವಾಗ ಹೊಂಡು ಮಿಶ್ರಿತ ನೀರು ಬರುತ್ತಿದೆ.

ಚಿಕ್ಕಸುಗೂರು, ವಡ್ಲೂರು ಗ್ರಾಮದ ಸುತ್ತಮುತ್ತಲು ಇರುವ ಕೈಗಾರಿಕೆ, ಕೆಮಿಕಲ್ ಕಾರ್ಖಾನೆಗಳು ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಕೃಷ್ಣ ನದಿಗೆ ಹರಿ ಬಿಡುತ್ತಿದ್ದಾರೆ. ಅಲ್ಲದೆ, ಕಾರ್ಖಾನೆಗಳ ನೀರು ಗ್ರಾಮಗಳಿಗೆ ಸರಬರಾಜು ಆಗುವ ಪೈಪ್‌ಲೈನ್‌ಗಳಲ್ಲಿ ಸೋರಿಕೆ ಆಗಿ ಈ ಸಮಸ್ಯೆ ಕಂಡು ಬರುತ್ತಿದೆ ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ.

ಪ್ರಸ್ತುತ, ನಲ್ಲಿಗಳಿಂದ ಕೆಮಿಕಲ್, ರಸಾಯನಿಕ ಮಿಶ್ರಿತ ನೀರು ಪೂರೈಕೆ ಆಗುತ್ತಿದ್ದು, ಇದರ ನಿರಂತರ ಸೇವನೆಯಿಂದ ಗ್ರಾಮಸ್ಥರಲ್ಲಿ ಚರ್ಮದ ಸಮಸ್ಯೆ, ಕಿಡ್ನಿ ಸಮಸ್ಯೆ, ಅತೀಸಾರ, ವಾಂತಿ ಭೇದಿ, ಕಾಲರ, ಜ್ವರ, ಮೈಕೈ ನೋವು ಹಾಗೂ ಇತರೆ ರೋಗಗಳು ಕಾಣಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕಳೆದ ಕೆಲವು ತಿಂಗಳುಗಳಿಂದ ಗರ್ಭಿಣಿಯರು ಮತ್ತು ನವಜಾತ ಶಿಶುಗಳಲ್ಲಿ ಚರ್ಮದ ಸೋಂಕು ಹೆಚ್ಚುತ್ತಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಹಲವು ದಿನಗಳಿಂದ ನಲ್ಲಿಗಳಲ್ಲಿ ಹೊಂಡು ಮಿಶ್ರಿತ ಹಳದಿ ಬಣ್ಣದ ಹೊಂಡು ಮಿಶ್ರಿತ ನೀರು ಬರುತ್ತಿದ್ದು, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ನೀರು ಪೂರೈಕೆ ಮಾಡುತ್ತಾರೆ. ಆದರೆ ಎರಡು ಬಾರಿಯೂ ಕಲುಷಿತ ನೀರು ಪೂರೈಕೆ ಆಗುತ್ತಿದ್ದು, ಬಳಸಲು ಆಗದಂತಹ ನೀರಿದೆ. ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರ ವಿರುದ್ಧ ಆಕ್ರೋಶ: ಗಂಜಳ್ಳಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಅನೇಕರು ಚರ್ಮದ ಕಾಯಿಲೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಎರಡನೇ ಬಾರಿ ಚುನಾವಣೆಯಲ್ಲಿ ಗೆದ್ದರೂ ಜನರ ಸಮಸ್ಯೆ ಆಲಿಸುತ್ತಿಲ್ಲ, ಚುನಾವಣೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಭರವಸೆ ನೀಡಿ ಹೋದ ಬಳಿಕ ಮರಳಿ ಗ್ರಾಮದ ಕಡೆಗೆ ತಿರುಗಿಯೂ ನೋಡಿಲ್ಲ ಎಂದು ಗ್ರಾಮಸ್ಥರಾದ ಮಲ್ಲಪ್ಪ, ಮೆಹಬೂಬ್ ದೂರಿದರು.

ಬೇಸಿಗೆ ಆರಂಭದಲ್ಲಿಯೇ ಜಿಲ್ಲೆಯ ಎಲ್ಲಾ ಜಲಮೂಲಗಳ ನೀರನ್ನು ಪರೀಕ್ಷೆ ಮಾಡಿ ಟ್ಯಾಂಕ್, ಕೆರೆಗಳು, ಶುದ್ಧೀಕರಣದ ಘಟಕಗಳು ಸ್ವಚ್ಛಗೊಳಿಸಬೇಕು ಹಾಗೂ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣಕ್ಕೆ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೇ ಇದಕ್ಕಾಗಿಯೇ ತಾಲೂಕು ಹಾಗೂ ಪಂಚಾಯತಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಾಸ್ತವವಾಗಿ ಯಾವುದೇ ನೋಡಲ್ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ. ಗಂಜಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲ, ಆದರೆ ಸ್ವಚ್ಛ ನೀರು ಪೂರೈಕೆ ಮಾಡುತ್ತಿಲ್ಲ. ಕಲುಷಿತ ನೀರಿನ ಬಗ್ಗೆ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗಂಜಳ್ಳಿ ಗ್ರಾಮದ ಕುಡಿಯುವ ನೀರು ಪರೀಕ್ಷೆ ಮಾಡಿದ್ದು ಯಾವುದೇ ಸಮಸ್ಯೆಯಿಲ್ಲ, ಕುಡಿಯಲು ಯೋಗ್ಯವಾಗಿದೆ ಎಂದು ವರದಿ ಬಂದಿದೆ. ಗ್ರಾಮದಲ್ಲಿ ಆರ್‌ಒ ಪ್ಲಾಂಟ್ ಕೂಡ ಇದೆ. ಕುಡಿಯುವ ನೀರಿನ ಸಮಸ್ಯೆಯಿಲ್ಲ.

<ಚೆನ್ನಮ್ಮ, ಪಿಡಿಒ ಯದ್ಲಾಪೂರು ಪಂಚಾಯತಿ

ಯದ್ಲಾಪೂರು ಪಂಚಾಯಿತಿಯಿಂದ ಗಂಜಳ್ಳಿ ಗ್ರಾಮದ ಕುಡಿಯುವ ನೀರು ಪರೀಕ್ಷೆ ಮಾಡಿದ್ದು ಕೆಮಿಕಲ್ ಪ್ರಮಾಣ ಮಿತಿ ಮೀರಿಲ್ಲ, ರಸಾಯನಿಕ, ಆರ್ಸೆನಿಕ್ ಅಂಶವಿಲ್ಲ. ಮೈಕ್ರೋ ಬಯೋಲಾಜಿಕಲ್ ವರದಿ ಇನ್ನೂ ಬಂದಿಲ್ಲ. ಬಂದಮೇಲೆ ನಿಜಾಂಶ ಗೊತ್ತಾಗಲಿದೆ.

<ಧವಲ್ ಅರ್ಜುನಗಿ,

ಗುಣಮಟ್ಟ ವ್ಯವಸ್ಥಾಪಕರು, ಜಿಲ್ಲಾ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ,ರಾಯಚೂರು

contributor

Similar News