×
Ad

ಬ್ಯಾಲೆಟ್ ಪೇಪರ್ ಮರುಸ್ಥಾಪನೆಗೆ ಉಪವಾಸ ಸತ್ಯಾಗ್ರಹ

ಇವಿಎಂ ಸ್ಥಗಿತಕ್ಕೆ ಆಗ್ರಹಿಸಿ ಗೋಪಾಲಸಿಂಗ್ ಠಾಕೂರ್ ಧರಣಿ

Update: 2026-05-09 14:57 IST

ಔರಾದ್: ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳ (ಇವಿಎಂ) ಬಳಕೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಬ್ಯಾಲೆಟ್ ಪೇಪರ್ (ಮತಪತ್ರ) ಪದ್ಧತಿಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ, ಔರಾದ್ ನಿವಾಸಿ ಗೋಪಾಲಸಿಂಗ್ ಠಾಕೂರ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಮತದಾರರು ಚುನಾವಣಾ ಪ್ರಕ್ರಿಯೆಯ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾಗ ಮಾತ್ರ ಪ್ರಜಾಪ್ರಭುತ್ವ ಬಲವಾಗುತ್ತದೆ. ಇವಿಎಂ ಆಧಾರಿತ ವ್ಯವಸ್ಥೆಯಿಂದ ವಿಶ್ವಾಸದ ಬಿಕ್ಕಟ್ಟು ಉಂಟಾಗಿದೆ. ಬ್ಯಾಲೆಟ್ ಪೇಪರ್ ಪದ್ಧತಿ ಗೋಚರಿಸುವ, ದೃಢೀಕರಿಸಬಹುದಾದ ಮತ್ತು ಲೆಕ್ಕಪರಿಶೋಧನೆಗೆ ಒಳಪಡುವ ವ್ಯವಸ್ಥೆಯಾಗಿದ್ದು, ಇದು ಸಾರ್ವಜನಿಕ ವಿಶ್ವಾಸವನ್ನು ಮರುನಿರ್ಮಿಸಲು ಅಗತ್ಯವಾದ ಪಾರದರ್ಶಕತೆ ಹಾಗೂ ಪ್ರಜಾಪ್ರಭುತ್ವದ ನ್ಯಾಯಸಮ್ಮತತೆಯನ್ನು ಖಚಿತಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೇ 3ರಿಂದ ಮಿನಿ ವಿಧಾನಸೌಧದ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅವರು ಐದು ದಿನಗಳನ್ನು ಪೂರೈಸಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೇ ದೇಶದ ಅಖಂಡತೆ ಹಾಗೂ ಏಕತೆಗಾಗಿ ಹೋರಾಟ ಮುಂದುವರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಮಳೆ, ಗಾಳಿ ನಡುವೆಯೂ ಮೂಲಭೂತ ಸೌಲಭ್ಯಗಳಿಲ್ಲದೆ ಧರಣಿ ನಡೆಸುತ್ತಿದ್ದು, ರಾತ್ರಿ ವೇಳೆ ವಿದ್ಯುತ್ ವ್ಯವಸ್ಥೆಯೂ ಇಲ್ಲದೆ ಕಾಲ ಕಳೆಯುತ್ತಿದ್ದಾರೆ. ಬೆಳಿಗ್ಗೆ ಧರಣಿ ಸ್ಥಳದ ಸಮೀಪದ ಸಂಪಿನ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾರೆ. ಏಕಾಂಗಿಯಾಗಿ ಸತ್ಯಾಗ್ರಹ ನಡೆಸುತ್ತಿರುವ ಇವರನ್ನು ಮನವೊಲಿಸಲು ತಾಲೂಕು ಅಥವಾ ಜಿಲ್ಲಾಡಳಿತದಿಂದ ಯಾವುದೇ ಪ್ರಯತ್ನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಮೆರಿಕ, ರಷ್ಯಾ, ಜರ್ಮನಿ, ಜಪಾನ್ ಸೇರಿದಂತೆ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇಂದಿಗೂ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಯುತ್ತಿದೆ. ಆದರೆ ಅಭಿವೃದ್ಧಿಯಲ್ಲಿ ಮುಂದು ವರಿಯುತ್ತಿರುವ ನಮ್ಮ ದೇಶದಲ್ಲಿ ಇವಿಎಂ ಬಳಸುತ್ತಿದ್ದು, ಇದರ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ ಎನ್ನುವ ಅವರು, ‘ಮತದಾರರು ಸರಕಾರವನ್ನು ಆರಿಸಿದಾಗ ಅದು ಪ್ರಜಾಪ್ರಭುತ್ವ. ಸರಕಾರವೇ ಮತದಾರರನ್ನು ಆರಿಸುವ ಸ್ಥಿತಿ ಬಂದರೆ ಅದು ಸರ್ವಾಧಿಕಾರ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಬ್ಯಾಲೆಟ್ ಪೇಪರ್ ಪದ್ಧತಿ ಮರು ಜಾರಿಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಪಾವಿತ್ರ್ಯತೆಯನ್ನು ಮರುಸ್ಥಾಪಿಸಲು ಅರ್ಥಪೂರ್ಣ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ತಮ್ಮ ಮನವಿಗೆ ಸ್ಪಂದಿಸುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಗೋಪಾಲಸಿಂಗ್ ಠಾಕೂರ್ ಎಚ್ಚರಿಸಿದರು.

ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಮತಪತ್ರದ ಮೂಲಕವೇ ಚುನಾವಣೆ ನಡೆಯಬೇಕು. ಆಗ ಮಾತ್ರ ಜನ ಸಾಮಾನ್ಯರಲ್ಲಿ ಚುನಾವಣಾ ವ್ಯವಸ್ಥೆಯ ಮೇಲೆ ಭರವಸೆ ಮೂಡುತ್ತದೆ.

<ಗೋಪಾಲಸಿಂಗ್ ಠಾಕೂರ್, ಸಾಮಾಜಿಕ ಹೋರಾಟಗಾರ

ಠಾಕೂರ್ ಅವರು ಬ್ಯಾಲೆಟ್ ಪೇಪರ್ ಮರುಬಳಕೆ ಕುರಿತು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ

<ಮಹೇಶ್ ಪಾಟೀಲ್,

ತಹಶೀಲ್ದಾರ್, ಔರಾದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಿಯಾಜಪಾಶಾ ಜಿ. ಕೊಳ್ಳೂರ

contributor

Similar News