×
Ad

ತಮ್ಮ ಪಕ್ಷದ ಸಿದ್ಧಾಂತವನ್ನು ಕಡೆಗಣಿಸಿದ ನಯನಾ ಮೋಟಮ್ಮ ಅಂಬೇಡ್ಕರ್ ಸಿದ್ಧಾಂತವನ್ನೂ ಮರೆತರೇ?

ನಯನಾ ಮೋಟಮ್ಮ ಅವರಿಗೆ ಹಿಂದೂ ಧರ್ಮದ ಅಸ್ಮಿತೆ ಪ್ರದರ್ಶಿಸಲು ಬೇಕಾದಷ್ಟು ದಾರಿಗಳಿದ್ದವು. ಅವರ ಜಿಲ್ಲೆಯಲ್ಲೇ ಅದೆಷ್ಟೋ ಹಿಂದೂ ಧಾರ್ಮಿಕ ಕೇಂದ್ರಗಳು, ಸಂತರು ಇದ್ದಾರೆ. ಅವೆಲ್ಲವನ್ನೂ ಬಿಟ್ಟು ಮುತಾಲಿಕ್ ಅಂಥವರ ಪಕ್ಕದಲ್ಲಿ ನಿಂತು ತಮ್ಮ ಧಾರ್ಮಿಕ ಗುರುತು ತೋರಿಸುವ ಅಗತ್ಯವಿತ್ತೇ? ಅವರ ಜೊತೆ ವೇದಿಕೆ ಹಂಚಿಕೊಂಡು ಒಂದು ಇಮೇಜ್ ಬೆಳೆಸಿಕೊಳ್ಳುವಷ್ಟು ದಿವಾಳಿ ಆಗಿದೆಯೇ ನಯನಾ ಮೋಟಮ್ಮ ಅವರ ರಾಜಕೀಯ?

Update: 2025-07-31 10:31 IST

ಸಂಸತ್ತಿನಲ್ಲಿ ರಾಹುಲ್ ಗಾಂಧಿ ಇಡೀ ಬಿಜೆಪಿ ಸರಕಾರದ ವಿರುದ್ಧ ಗುಡುಗುತ್ತಿದ್ದರೆ, ಇಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕಿ ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿರುವವರ ಜೊತೆ ವೇದಿಕೆ ಹಂಚಿಕೊಂಡು ಸುದ್ದಿಯಾಗಿದ್ದಾರೆ. ‘‘ಕೇಸರಿ ಶಾಲು ಹಾಕಿಕೊಂಡಿರುವುದು ನನ್ನ ಧರ್ಮಕ್ಕಾಗಿ’’ ಎಂದು ಹೇಳಿದ್ದಾರೆ. ಒಂದು ಸಮುದಾಯವನ್ನು ಸತತ ದ್ವೇಷಿಸುವ, ಕ್ರಿಮಿನಲ್ ಆರೋಪಿ ಜೊತೆ ನಿಂತಿದ್ದಾರೆ.

ಪ್ರಮೋದ್ ಮುತಾಲಿಕ್ ಅಂಥವರ ಜೊತೆ ಅವರು ವೇದಿಕೆ ಹಂಚಿಕೊಂಡಿರುವುದು, ಅದೇ ಹೊತ್ತಲ್ಲಿ ಪಕ್ಷಾಂತರ ಕುರಿತು ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿರುವುದು ಅವರ ರಾಜಕೀಯದ ಬೇರೆ ರೀತಿಯ ತಯಾರಿಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ವತಿಯಿಂದ ನಡೆದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಪ್ರಮೋದ್ ಮುತಾಲಿಕ್ ಜೊತೆ ನಯನಾ ಮೋಟಮ್ಮ ವೇದಿಕೆ ಹಂಚಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

‘‘ಕೇಸರಿ ಶಾಲು ಹಾಕಿಕೊಂಡಿರುವುದು ಗಣಪತಿಗಾಗಿ, ನನ್ನ ಧರ್ಮಕ್ಕಾಗಿ’’ ಎಂದಿದ್ದಾರೆ.

‘‘ನನ್ನ ಜೊತೆ ನನ್ನ ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಹಿಂದೂವಾಗಿ, ದಲಿತೆಯಾಗಿ, ಮಹಿಳೆಯಾಗಿ ನನಗಿರುವ ಅಸ್ತಿತ್ವದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ’’ ಎಂದು ಸಮರ್ಥಿಸಿಕೊಂಡಿದ್ದಾರೆ.

‘‘ಶಾಸಕಿಯಾಗಿರುವುದು, ಪಕ್ಷವನ್ನು ಪ್ರತಿನಿಧಿಸುವುದು ಆಮೇಲಿನ ವಿಷಯ. ಈಗ ನಾನು ಗಣಪತಿ ಸಮಿತಿ ಕಾರ್ಯಾಧ್ಯಕ್ಷೆಯಾಗಿ ಇಲ್ಲಿ ಬಂದಿದ್ದೇನೆ. ಇದು ಸಾರ್ವಜನಿಕ ಗಣಪತಿ ಉತ್ಸವವಾಗಿದ್ದರಿಂದ ನನ್ನನ್ನು ಒಂದು ಪಕ್ಷಕ್ಕೆ ಸೀಮಿತವಾಗಿ ನೋಡಬೇಡಿ’’ ಎಂದು ಹೇಳಿದ್ದಾರೆ.

ಆದರೆ, ನಯನಾ ಮೋಟಮ್ಮ ಇಷ್ಟಕ್ಕೇ ನಿಲ್ಲಲಿಲ್ಲ.

ಅವರು ಪಕ್ಷಾಂತರದ ವಿಷಯವನ್ನೂ ಮಾತಾಡಿದರು. ಅದನ್ನು ಅವರು ಉದ್ದೇಶಪೂರ್ವಕವಾಗಿಯೇ ಹೇಳಿರಬಹುದೇ ಎಂಬ ಅನುಮಾನವೂ ಏಳದೇ ಇರುವುದಿಲ್ಲ.

‘‘ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೋ, ಬಿಜೆಪಿ, ಬಿಎಸ್‌ಪಿ, ಎಸ್‌ಡಿಪಿಐ ಸೇರುತ್ತೇನೋ ಎಂಬುದನ್ನು ಮೂರು ವರ್ಷಗಳ ಬಳಿಕ ನೋಡೋಣ’’ ಎಂದು ಅವರು ಹೇಳಿದ್ದಾರೆ. ಪಕ್ಷಾಂತರ ಕುರಿತ ಅವರ ಈ ಹೇಳಿಕೆ ಬಹಳ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಪ್ರಮೋದ್ ಮುತಾಲಿಕ್ ಕೂಡ ತಮ್ಮ ಭಾಷಣದಲ್ಲಿ ನಯನಾ ಮೋಟಮ್ಮ ಅವರನ್ನು ಹೊಗಳಿ ಮಾತನಾಡಿದ್ದಾರೆ. ಇದು ಸ್ವತಃ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೂ ಸೇರಿದಂತೆ ದಲಿತ, ಪ್ರಗತಿಪರರ ಸಿಟ್ಟಿಗೆ ಕಾರಣವಾಗಿದೆ.

ನಯನಾ ಅವರನ್ನು ಶಾಸಕಿಯನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷದ ನಾಯಕರು ಬಹಳ ಶ್ರಮಿಸಿದ್ದಾರೆ. ಇದನ್ನು ನಯನಾ ಮೋಟಮ್ಮ ಕಡೆಗಣಿಸಿದರೇ ಎಂಬ ಪ್ರಶ್ನೆಯೂ ಎದ್ದಿದೆ.

ಒಂದು ಸಮುದಾಯದ ವಿರುದ್ಧ ನಿರಂತರ ದ್ವೇಷ ಕಾರುವ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡದ್ದು ಮತ್ತದನ್ನು ಧರ್ಮಕ್ಕಾಗಿ ಎನ್ನುವುದು ಸಮರ್ಥನೀಯ ಎಂದೇನೂ ಅನ್ನಿಸುವುದಿಲ್ಲ.

ಪಕ್ಷಾಂತರದ ಮಾತುಗಳನ್ನಾಡಿರುವುದು ಪಕ್ಷದ ವರಿಷ್ಠರಿಗೆ ಮಾಡಿದ ಅಪಮಾನವಾಗಿದೆ ಎಂಬ ಟೀಕೆಗಳು ಕೂಡ ವ್ಯಾಪಕವಾಗಿ ಕೇಳಿಬರುತ್ತಿವೆ.

ನಯನಾ ಮೋಟಮ್ಮ ಏಕೆ ಹೀಗೆ ಮಾಡಿದರು ಎಂಬ ಪ್ರಶ್ನೆ, ಅವರ ಹಿನ್ನೆಲೆ, ರಾಜಕೀಯದಲ್ಲಿ ಅವರ ತಾಯಿ ಮೋಟಮ್ಮನವರ ಗಟ್ಟಿತನ ಇವೆಲ್ಲವನ್ನೂ ಗಮನಿಸುವಾಗ ಕಾಡದೆ ಇರುವುದಿಲ್ಲ.

ಮೋಟಮ್ಮನವರು ಮಲೆನಾಡಿನ ಪುಟ್ಟ ಊರು ಮಗ್ಗಲಮಕ್ಕಿಯಿಂದ ಬಂದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಾಜಕಾರಣಿ.

ಎಂಎ ಪದವೀಧರರಾಗಿರುವ ಮೋಟಮ್ಮ 1978ರಿಂದ 1983 ರವರೆಗೆ, 1989ರಿಂದ 1994ರವರೆಗೆ, 1999ರಿಂದ 2004ರವರೆಗೆ ಶಾಸಕಿಯಾಗಿದ್ದವರು. 1999ರಿಂದ 2004ರವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆಯಾಗಿ ಸೇವೆ ಸಲ್ಲಿಸಿದವರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಒಬ್ಬ ದಲಿತ ನಾಯಕಿಯಾಗಿ ಅವರು ಹಲವು ಅವಮಾನಗಳನ್ನು, ಕಹಿ ಅನುಭವಗಳನ್ನು ಮೆಟ್ಟಿ ನಿಂತು ಬೆಳೆದವರು.

ಮೋಟಮ್ಮ ಮದುವೆಗೆ ಇಂದಿರಾ ಗಾಂಧಿಯವರೇ ಬಂದಿದ್ದರೆಂಬುದು ಸಣ್ಣ ವಿಷಯವಲ್ಲ. ಅದು ಮೋಟಮ್ಮ ಅವರ ವ್ಯಕ್ತಿತ್ವಕ್ಕೆ ಎಂಥ ಮಹತ್ವ ಇತ್ತು ಎಂಬುದನ್ನು ಕೂಡ ಸೂಚಿಸುವಂಥದ್ದಾಗಿದೆ.

ತಮ್ಮನ್ನು ರಾಜಕೀಯಕ್ಕೆ ಕರೆತಂದ ಡಿ.ಬಿ. ಚಂದ್ರೇಗೌಡರೇ ಆನಂತರ ಕಾಂಗ್ರೆಸ್ ಇಬ್ಭಾಗವಾದಾಗ ಅರಸು ಜೊತೆ ಹೋದರೂ, ಮೋಟಮ್ಮ ಮಾತ್ರ ಇಂದಿರಾ ಕಾಂಗ್ರೆಸ್‌ನಲ್ಲಿಯೇ ಉಳಿದು, ನೆಲೆಯೇ ಇಲ್ಲದ ಸ್ಥಿತಿಯನ್ನೂ ಅನುಭವಿಸಿದ್ದರು. ಆದರೆ ತಮ್ಮ ಜನಪರ ಕೆಲಸಗಳಿಂದಲೇ ಬೆಳೆದು ನಿಲ್ಲುವುದು ಅವರಿಗೆ ಸಾಧ್ಯವಾಗಿತ್ತು.

ಆದರೆ ಅಧಿಕಾರ ಕಳೆದುಕೊಂಡು ಚುನಾವಣೆಯಲ್ಲೂ ಸೋಲು ಕಂಡ ಮೋಟಮ್ಮನವರೂ ತಮ್ಮ ರಾಜಕೀಯ ಜೀವನದ ಕೊನೆ ಹಂತದಲ್ಲಿ ವೈಚಾರಿಕ ಚಿಂತನೆಯನ್ನು ಬದಿಗೆ ಸರಿಸಿ ಸ್ವಯಂ ಘೋಷಿತ ಆಧ್ಯಾತ್ಮಿಕ ಗುರುಗಳ ಕಾಲಿಗೆ ಬಿದ್ದು ಅಚ್ಚರಿ ಮೂಡಿಸಿದ್ದರು.

ಈಗ ಆ ತಾಯಿಯ ರಾಜಕೀಯದ ನೆರಳಲ್ಲಿಯೇ ತಾವೂ ರಾಜಕೀಯ ಆರಂಭಿಸಿದ ನಯನಾ ಏಕೆ ತೀರಾ ಆರಂಭದ ಹಂತದಲ್ಲಿಯೇ ವಿಪರೀತದ ನಿಲುವು ತೆಗೆದುಕೊಳ್ಳುತ್ತ ದುಡುಕುತ್ತಿದ್ದಾರೆ?

ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಲಾ ಸ್ಕೂಲ್ ವಿಶ್ವ ವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದ, ವಿದೇಶದಲ್ಲಿಯೂ ಓದಿ ಬಂದಿರುವ ನಯನಾ, ತಮ್ಮನ್ನು ಗೆಲ್ಲಿಸಿದ ಸಿದ್ಧಾಂತವನ್ನು ಮರೆತು, ರಾಜಕೀಯದ ಯಾವ ಸೆಳವಿನಲ್ಲಿ ತಮ್ಮನ್ನು ಹೋಗಲು ಬಿಟ್ಟುಕೊಳ್ಳುತ್ತಿದ್ದಾರೆ?

ಜಾತ್ಯತೀತ ಸಿದ್ಧಾಂತಕ್ಕಾಗಿ, ಮಹಿಳೆಯರು, ಮಕ್ಕಳ ಹಕ್ಕುಗಳಿಗಾಗಿ ಸ್ವಯಂ ಪ್ರೇರಿತವಾಗಿ ಕಾನೂನು ಹೋರಾಟ ಮಾಡುತ್ತಿದ್ದ ನಯನಾ ಮೋಟಮ್ಮಗೆ ಮಹಿಳಾ ವಿರೋಧಿಯೆಂದು ಬಿಂಬಿಸಲ್ಪಡುವ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಳ್ಳುವ ದುರ್ಗತಿ ಬಂದಿದ್ದು ಹೇಗೆ?

ಧರ್ಮಕ್ಕಾಗಿ ಕೇಸರಿ ಶಾಲು ಹಾಕಿದ್ದೇನೆ, ಪಕ್ಷ ಆಮೇಲೆ ಎನ್ನುವಾಗ ಅವರು ನಿಜವಾಗಿಯೂ ಏನನ್ನು ಹೇಳಲು ಬಯಸಿದ್ದಾರೆ? ‘‘ದಲಿತೆಯಾಗಿ, ಮಹಿಳೆಯಾಗಿ’’ ಎಂದು ಮೂಡಿಗೆರೆಯಲ್ಲಿನ ತಮ್ಮ ಅಸ್ಮಿತೆಯ ಬಗ್ಗೆ ಹೇಳುವ ಅವರು, ದಲಿತರನ್ನು, ಮಹಿಳೆಯರನ್ನು ಬದಿಗಿಟ್ಟು ನೋಡುವವರ ಜೊತೆಗೇ ಹೋಗಿ ನಿಂತದ್ದನ್ನು ಹೇಗಾದರೂ ಸಮರ್ಥಿಸಿಕೊಳ್ಳುತ್ತಾರೆ?

ನೆನಪಿಸಿಕೊಳ್ಳುವುದಾದರೆ, ಡಿ.ಕೆ. ಶಿವಕುಮಾರ್ ಕುಂಭಮೇಳಕ್ಕೆ ಹೋಗಿ, ಮಹಾಕುಂಭದ ವ್ಯವಸ್ಥೆಯನ್ನು ಹಾಡಿ ಹೊಗಳಿದಾಗಲೂ ಕಾಂಗ್ರೆಸ್ ಒಳಗೆ ವಿಚಿತ್ರ ತಳಮಳ ಕಾಣಿಸಿಕೊಂಡಿತ್ತು. ಇದು ಯಾವುದೇ ನಾಯಕರು ಪಕ್ಷ ಬಿಟ್ಟು ಹೋಗಬಹುದು ಎಂಬುದಕ್ಕಾಗಿ ಅಲ್ಲ. ಆದರೆ, ಒಂದು ಪಕ್ಷ ಈ ದೇಶದ ಪ್ರಜಾಸತ್ತಾತ್ಮಕ ಮೌಲ್ಯವನ್ನು ನಾಶ ಮಾಡುತ್ತಿರುವ ಶಕ್ತಿಗಳ ವಿರುದ್ಧ ತನ್ನದೇ ನೆಲೆಯಲ್ಲಿ ಹೋರಾಡುತ್ತಿರುವಾಗ, ಅದರ ಕೆಲ ನಾಯಕರು ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ರೀತಿ ಪಕ್ಷವನ್ನು ಮುಜುಗರಕ್ಕೀಡುಮಾಡುವ ಮಟ್ಟಕ್ಕೆ ಹೋಗುವುದರ ಬಗ್ಗೆ.

ಆಗ, ಇಡೀ ಕಾಂಗ್ರೆಸ್ ಕುಂಭದಲ್ಲಿನ ಹಲವು ಕಳವಳಕಾರಿ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾಗ, ಡಿ.ಕೆ. ಶಿವಕುಮಾರ್ ಅದನ್ನು ಹಾಡಿಹೊಗಳಿದ್ದರು.

ಈಗ ನಯನಾ ಮೋಟಮ್ಮ ಮೂಡಿಗೆರೆಯ ಕಾಂಗ್ರೆಸ್ ಶಾಸಕಿಯಾಗಿದ್ದೂ ಕೇಸರಿ ಪಡೆಯವರ ಜೊತೆ ಕಾಣಿಸಿಕೊಳ್ಳುತ್ತ, ಅನುಭವಕ್ಕೂ ಮೀರಿದ ಧಾಟಿಯಲ್ಲಿ ಮಾತಾಡುತ್ತ ಸುದ್ದಿಯಾಗಿದ್ದಾರೆ.

ಬಿಜೆಪಿಯನ್ನು ದೂರ ತಳ್ಳಿದ ರಾಜ್ಯದ ಜನರು ಬಹುಮತದಿಂದ ಕಾಂಗ್ರೆಸನ್ನು ಆರಿಸಿ ತಂದರು.

ಆದರೆ ಕಾಂಗ್ರೆಸ್‌ನ ಕೆಲವು ನಾಯಕರು ಆಗೀಗ ಬೇಕಿರದ ವಿವಾದಗಳಿಗೆ ಸಿಲುಕುತ್ತ ಏನು ಮಾಡಲು ಹೊರಟಿದ್ದಾರೆ?

ನಯನಾ ಮೋಟಮ್ಮ ಅವರಿಗೆ ಹಿಂದೂ ಧರ್ಮದ ಅಸ್ಮಿತೆ ಪ್ರದರ್ಶಿಸಲು ಬೇಕಾದಷ್ಟು ದಾರಿಗಳಿದ್ದವು. ಅವರ ಜಿಲ್ಲೆಯಲ್ಲೇ ಅದೆಷ್ಟೋ ಹಿಂದೂ ಧಾರ್ಮಿಕ ಕೇಂದ್ರಗಳು, ಸಂತರು ಇದ್ದಾರೆ. ಅವೆಲ್ಲವನ್ನೂ ಬಿಟ್ಟು ಮುತಾಲಿಕ್ ಅಂಥವರ ಪಕ್ಕದಲ್ಲಿ ನಿಂತು ತಮ್ಮ ಧಾರ್ಮಿಕ ಗುರುತು ತೋರಿಸುವ ಅಗತ್ಯವಿತ್ತೇ? ಅವರ ಜೊತೆ ವೇದಿಕೆ ಹಂಚಿಕೊಂಡು ಒಂದು ಇಮೇಜ್ ಬೆಳೆಸಿಕೊಳ್ಳುವಷ್ಟು ದಿವಾಳಿ ಆಗಿದೆಯೇ ನಯನಾ ಮೋಟಮ್ಮ ಅವರ ರಾಜಕೀಯ?

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ, ಸಾಧನೆ ಹಾಗೂ ಬೋಧನೆಗಳನ್ನು ತಿಳಿದುಕೊಂಡ ಯಾರಾದರೂ ಎಂದಾದರೂ ಹೋಗಿ ಮುತಾಲಿಕ್ ಪಕ್ಕದಲ್ಲಿ ನಿಂತುಕೊಳ್ಳಲು ಸಾಧ್ಯವೇ?

ಇದು ತನ್ನ ದಲಿತ ಅಸ್ಮಿತೆ, ತನ್ನ ಉನ್ನತ ಶಿಕ್ಷಣ, ತನ್ನ ಕಾನೂನು ಜ್ಞಾನ, ತನ್ನ ಕೌಟುಂಬಿಕ ಹಿನ್ನೆಲೆ, ತನ್ನ ಪಕ್ಷ, ತನ್ನ ನಾಯಕ, ತನ್ನ ಸಿದ್ಧಾಂತ ಎಲ್ಲದಕ್ಕೂ ಮಹಾ ದ್ರೋಹ ಎಸಗಿದಂತಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರವೀಣ್ ಎನ್.

contributor

Similar News