ಜಿ.ಎಸ್. ಜಯದೇವ, ಚಾಮರಾಜನಗರ
ಅಧ್ಯಯನ ತಂಡದ ಪರವಾಗಿ
ಡಾ. ಸಿ. ರವಿನಾರಾಯಣ, ಪ್ರಾಧ್ಯಾಪಕರು ಹಾಗೂ ಶೈಕ್ಷಣಿಕ ಮುಖ್ಯಸ್ಥರು, ಪ್ರಾದೇಶಿಕ ದಕ್ಷಿಣ ಭಾಷಾ ಸಂಸ್ಥೆ, ದಕ್ಷಿಣ ಭಾರತ ಬೆಂಗಳೂರು ಇವರು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಕುರಿತಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಯನದ ವರದಿಗೆ ‘ವಾರ್ತಾಭಾರತಿ’ಯಲ್ಲಿ ಪ್ರತಿಕ್ರಿಯೆಯನ್ನು ಪ್ರಕಟಿಸಿದ್ದಾರೆ. ಈ ಪ್ರತಿಕ್ರಿಯೆಗೆ ಉತ್ತರವಾಗಿ ನಮ್ಮ ಗಮನಕ್ಕೆ ಬಂದಿರುವ ಈ ಅಂಶಗಳನ್ನು ಓದುಗರ ಗಮನಕ್ಕೆ ತರಲು ಇಚ್ಛಿಸುತ್ತೇವೆ.
ಚಾಮರಾಜನಗರ ಜಿಲ್ಲೆಯಲ್ಲಿ 2019-2020ರಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತನೆಗೊಂಡ 20 ಸರಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಶೇ. 25ರಷ್ಟು ಮಕ್ಕಳ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯನ್ನು 2026ರಲ್ಲಿ ಅಧ್ಯಯನಕ್ಕೆ ಒಳಪಡಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯ ಮೇರೆಗೆ ಅಧ್ಯಯನ ಕೈಗೊಳ್ಳಲಾಯಿತು. ಈ ವಿದ್ಯಾರ್ಥಿಗಳು ಸತತ ಆರು ಅಥವಾ ಏಳು ವರ್ಷಗಳ ಪರ್ಯಂತ ಇಂಗ್ಲಿಷ್ ಮಾಧ್ಯಮದಲ್ಲಿ ಅಭ್ಯಾಸ ಮಾಡಿದವರಾಗಿದ್ದರು. ನಮ್ಮ ಅಧ್ಯಯನವು ಕೇವಲ ಅಂಕಗಳಿಕೆಯನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳದೆ ಡಾ. ರವಿನಾರಾಯಣ ಅವರು ಉಲ್ಲೇಖಿಸಿರುವ ಮಕ್ಕಳ ಆತ್ಮವಿಶ್ವಾಸ, ತರಗತಿಯಲ್ಲಿ ಭಾಗವಹಿಸುವಿಕೆ, ಸಂವಹನ ಸಾಮರ್ಥ್ಯ, ಸ್ವತಂತ್ರ ಚಿಂತನೆ ಮತ್ತು ತಮ್ಮ ಮನದಾಳದ ಭಾವನೆಗಳನ್ನು ಅಭಿವ್ಯಕ್ತಿಸುವ ಸಾಮರ್ಥ್ಯದ ಮಾಪನವೂ ಆಗಿದೆ. ಈ ಸಾಮರ್ಥ್ಯಗಳಿಗೆ ಭಾಷೆಯು ಪೂರಕವಾಗಿದೆಯೇ ಅಥವಾ ಅಡಚಣೆಯಾಗಿದೆಯೇ ಎಂಬ ಪ್ರಶ್ನೆಯನ್ನು ವಸ್ತುನಿಷ್ಠವಾಗಿ ನಮ್ಮ ಅಧ್ಯಯನವು ತೋರಿಸುತ್ತದೆ. ಇಂಗ್ಲಿಷ್ ಭಾಷೆಯು ಈ ಸಾಮರ್ಥ್ಯಗಳಿಗೆ ಕಂಟಕವಾಗಿದೆ ಎಂಬುದನ್ನು ನಮ್ಮ ಅಧ್ಯಯನವು ತೋರಿಸುತ್ತದೆ. ಶಿಕ್ಷಣವು ಕೇವಲ ಪದಸಂಪತ್ತು, ಓದು, ಬರವಣಿಗೆ ಅಥವಾ ವ್ಯಾಕರಣದ ಜ್ಞಾನವನ್ನು ಬೆಳೆಸುವುದಕ್ಕೆ ಸೀಮಿತವಾಗಿಲ್ಲ ಎಂಬ ಅವರ ಹೇಳಿಕೆಯನ್ನೇ ಅನುಲಕ್ಷಿಸಿ ಚರ್ಚಿಸುವುದಾದರೆ ಮಕ್ಕಳಿಗೆ ಅರ್ಥವಾಗದ ಇಂಗ್ಲಿಷ್ ಭಾಷೆಯನ್ನು ಅವರ ಮೇಲೆ ಹೇರುವ ಬದಲು ಅರ್ಥವಾಗುವ ಕನ್ನಡದಲ್ಲೇ ಏಕೆ ಕಲಿಸಬಾರದು? ಸತತವಾಗಿ ಆರು ಏಳುವರ್ಷಗಳ ಕಾಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಈ ಮಕ್ಕಳಿಗೆ ಆತ್ಮವಿಶ್ವಾಸವಿಲ್ಲದಿರುವುದು, ತಮಗೆ ಅನ್ನಿಸಿದ್ದನ್ನು ಇಂಗ್ಲಿಷ್ ಭಾಷೆಯಲ್ಲಿ ಹೇಳಲು ಸಾಧ್ಯವಾಗದಿರುವುದು, ಭಾಷೆಯ ತೊಡಕಿನಿಂದ ತರಗತಿಗಳಲ್ಲಿ ಭಾಗವಹಿಸುವಿಕೆ ಕುಂಠಿತವಾಗಿರುವುದು ಮುಂತಾದ ಹಿನ್ನಡೆಗಳನ್ನು ಮಕ್ಕಳ ಮೇಲೆ ಏಕೆ ನಾವು ಹೇರುತ್ತಿದ್ದೇವೆ? ಅಧ್ಯಾಪಕರಿಗೂ ಬಾರದ, ಪರಿಸರದಲ್ಲಿ ಲಭ್ಯವಿಲ್ಲದ ಇಂಗ್ಲಿಷ್ ಭಾಷೆಯನ್ನು ಮೊದಲನೇ ತರಗತಿಯಿಂದಲೇ ಮಕ್ಕಳ ಮೇಲೆ ಹೇರುವ ಉದ್ದೇಶವೇನು?
ಶ್ರೀ ರವಿನಾರಾಯಣ ಅವರು ‘‘ಪ್ರಾದೇಶಿಕ ಭಾಷೆ ಮತ್ತು ಮಕ್ಕಳ ಮನೆ ಭಾಷೆಗಳು ಕಲಿಕೆಯ ಅಮೂಲ್ಯ ಸಂಪನ್ಮೂಲಗಳು. ಮಕ್ಕಳಿಗೆ ತಮ್ಮ ಪರಿಚಿತ ಭಾಷೆಗಳ ಮೂಲಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತ ಕ್ರಮೇಣ ಇಂಗ್ಲಿಷ್ನಲ್ಲಿ ಸಂವಹನ ನಡೆಸುವ ಸಾಮರ್ಥ್ಯವನ್ನು ಬೆಳೆಸುವುದು ಪರಿಣಾಮಕಾರಿ ದ್ವಿಭಾಷಾ ಶಿಕ್ಷಣದ ಉದ್ದೇಶವಾಗಿರಬೇಕು’’ ಎನ್ನುತ್ತಾರೆ. ಮಕ್ಕಳಿಗೆ ಅತ್ಯುತ್ತಮ ಇಂಗ್ಲಿಷ್ ಕಲಿಸಬೇಕೆಂಬುದು ನಮ್ಮ ಅಧ್ಯಯನದ ಶಿಫಾರಸು ಸಹ ಆಗಿದೆ. ಮಕ್ಕಳಿಗೆ ಉತ್ತಮವಾದ ಇಂಗ್ಲಿಷ್ ಅನ್ನು ಕಲಿಸುವ ಸಲುವಾಗಿ ದ್ವಿಭಾಷಾ ಪದ್ಧತಿಯನ್ನು ಏಕೆ ಜಾರಿಗೊಳಿಸಬೇಕು? ವಿಷಯ ಗ್ರಹಿಕೆಗೆ ಭಾಷೆ ಒಂದು ಸಾಧನ ಅಷ್ಟೆ, ಮಕ್ಕಳು ವಿಷಯವನ್ನು ಪರಿಚಿತ ಭಾಷೆಯಲ್ಲಿ ಗ್ರಹಿಸಿ ಅನ್ವಯಿಕ ಜ್ಞಾನವನ್ನಾಗಿ ಮಾಡುವ ಕಡೆ ಗಮನವೀಯಬೇಕೇ ಹೊರತು ನಿರಂತರ ಅನುವಾದಗಳ ಹೊರೆಯನ್ನು ಮಕ್ಕಳ ಮೇಲೆ ಹೇರುವುದನ್ನು ಶಿಕ್ಷಣ ಎನ್ನಲಾಗುವುದಿಲ್ಲ. ಇಂಗ್ಲಿಷ್ ಭಾಷೆಯನ್ನು ಸ್ವತಂತ್ರವಾಗಿ ಸಾಂದರ್ಭಿಕ ಚೌಕಟ್ಟಿನಲ್ಲಿ ಕಲಿಸುವುದು ಅನುವಾದಗಳ ಮೂಲಕ ಕಲಿಸುವುದಕ್ಕಿಂತ ಹೆಚ್ಚು ಉತ್ತಮವಾದ ವಿಧಾನ. ಹೀಗೆ ಕಲಿತ ಇಂಗ್ಲಿಷ್ ಭಾಷೆ ಅನುವಾದದ ಅವಲಂಬನೆಯಿಲ್ಲದ ಸ್ವತಂತ್ರ ಭಾಷೆಯಾಗಿ ಮಕ್ಕಳ ಮನಸ್ಸಿನಲ್ಲಿ ಬೇರೂರುತ್ತದೆ. ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನಂತೆ ಕನಿಷ್ಠ ಐದನೇ ತರಗತಿಯವರೆಗೆ ಮಾತೃಭಾಷಾ ಶಿಕ್ಷಣವನ್ನು ನೀಡುತ್ತ, ಜೊತೆಗೆ ಸ್ವತಂತ್ರವಾಗಿ ಇಂಗ್ಲಿಷ್ ಭಾಷೆಯನ್ನೂ ಪರಿಚಯಿಸುತ್ತಾ ಹೋದರೆ ಪ್ರಾದೇಶಿಕ ಸಂದರ್ಭಕ್ಕೆ ಮಾತೃಭಾಷೆಯನ್ನೂ ಅಂತರ್ರಾಷ್ಟ್ರೀಯ ಸಂದರ್ಭಕ್ಕೆ ಇಂಗ್ಲಿಷ್ ಭಾಷೆಯನ್ನೂ ಶಿಕ್ಷಿತರು ಬಳಸಬಲ್ಲರು. ದೀರ್ಘಾವಧಿಯ ಮಾತೃಭಾಷಾ ಕಲಿಕೆ ಶೈಕ್ಷಣಿಕ ಯಶಸ್ಸಿಗೆ ಬಹುಮುಖ್ಯ ಕಾರಣ ಎಂಬುದನ್ನು ಜಗತ್ತಿನಾದ್ಯಂತ ಸಂಶೋಧನೆಗಳು ರುಜುವಾತು ಮಾಡಿವೆ. ಹಾಗಾಗಿ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ ಸುದೀರ್ಘಾವಧಿಯ ಮಾತೃಭಾಷಾ ಶಿಕ್ಷಣವನ್ನು ಶಿಫಾರಸು ಮಾಡುತ್ತದೆ.
‘‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಯನದ ವ್ಯಾಪ್ತಿಯನ್ನು ಗಮನಿಸಬೇಕಾಗಿದೆ’’ ಎನ್ನುತ್ತ ಮಾನ್ಯ ರವಿನಾರಾಯಣ ಅವರು ಈ ಫಲಿತಾಂಶಗಳನ್ನು ಇಡೀ ರಾಜ್ಯದ ಸ್ಥಿತಿಗತಿಗಳಿಗೆ ಅನ್ವಯಿಸುವಾಗ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ. ಈ ಕುರಿತಾಗಿ ಅನೇಕ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಂಡಿರುವ ರವಿನಾರಾಯಣ ಅವರಿಗೆ ಈ ಕುರಿತು ನಮಗಿಂತ ಚೆನ್ನಾಗಿಯೇ ಅರಿವಿದೆ. ಹಾಗಾಗಿ ಅವರು ‘ಇಂಗ್ಲಿಷ್ ಮೀಡಿಯಮ್ ಸೆಕ್ಷನ್ಸ್ ಇನ್ ಒನ್ ಥೌಸಂಡ್ ಗವರ್ನ್ಮೆಂಟ್ ಸ್ಕೂಲ್ಸ್’ ಎಂಬ ತಮ್ಮ ಲೇಖನದಲ್ಲಿ ಮಾತೃಭಾಷೆಯಲ್ಲದೆ ಬೇರೊಂದು ಭಾಷೆಯನ್ನು ಮಾಧ್ಯಮದ ಭಾಷೆಯನ್ನಾಗಿ ಬಳಸುವುದು ಮಕ್ಕಳ ಕಲಿಕೆಗೆ ಅಡಚಣೆಯನ್ನುಂಟು ಮಾಡುತ್ತದೆ ಎಂದು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಮಂಡಿಸುತ್ತಾರೆ. ಆದರೆ ನಮ್ಮ ಅಧ್ಯಯನ ಕುರಿತಾಗಿ ನೀಡುವ ತಮ್ಮ ಪ್ರತಿಕ್ರಿಯೆಯಲ್ಲಿ ‘‘ಪ್ರಶ್ನೆ ಕನ್ನಡ ಅಥವಾ ಇಂಗ್ಲಿಷ್ ಎಂಬುದಲ್ಲ’’ ಎಂದು ಏಕೆ ಹೇಳುತ್ತಾರೆ? ಈ ದ್ವಂದ್ವವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಜೊತೆಗೆ ಮಾನ್ಯರು ಶಾಲೆಯ ಹೊರಗೆ ಇಂಗ್ಲಿಷ್ ಭಾಷೆಯ ಸಂಪರ್ಕ ಕಡಿಮೆ ಇರುವುದನ್ನು, ಶಿಕ್ಷಕರ ಭಾಷಾ ಸಾಮರ್ಥ್ಯ ಮತ್ತು ತರಗತಿ ಬೋಧನಾ ವಿಧಾನಗಳಲ್ಲಿ ಕಂಡುಬರುವ ಸಮಸ್ಯೆಗಳು ಅತ್ಯಂತ ಮಹತ್ವದ ಅಂಶಗಳು ಎಂಬ ಅಭಿಪ್ರಾಯಕ್ಕೆ ಬರುತ್ತಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಎಲ್ಲಾ ಸರಕಾರಿ ಶಾಲೆಗಳನ್ನೂ ಇಂಗ್ಲಿಷ್ ಮಾಧ್ಯಮಕ್ಕೆ ಏಕಾಏಕಿ ಬದಲಾಯಿಸಿದ್ದರ ಪರಿಣಾಮವನ್ನು ಬ್ರಿಟಿಷ್ ಕೌನ್ಸಿಲ್ ಅಧ್ಯಯನ ಮಾಡಿ ನೀಡಿರುವ ವರದಿಯಲ್ಲಿ ‘ಈ ಬದಲಾವಣೆಗೆ ಈಗ ಇರುವ ಸಿದ್ಧತೆಗಳು ಸಾಲುವುದಿಲ್ಲ’ ಎಂಬ ಅಭಿಪ್ರಾಯ ನೀಡುತ್ತದೆ. ಜರ್ಮನಿ, ಫ್ರಾನ್ಸ್, ನೆದರ್ಲ್ಯಾಂಡ್ಸ್ ಮುಂತಾದ ದೇಶಗಳು ತಮ್ಮತಮ್ಮ ಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಎಲ್ಲ ದೇಶಗಳೂ ಇಂಗ್ಲಿಷ್ ವಿರೋಧಿ ಧೋರಣೆಯಿಂದ ಅಥವಾ ತಮ್ಮ ಭಾಷೆಯ ಅಂಧಾಭಿಮಾನದಿಂದ ಮಾತೃಭಾಷಾ ಶಿಕ್ಷಣವನ್ನು ಅಳವಡಿಸಿಕೊಂಡಿದ್ದಾರೆ ಎಂದೇನೂ ಅಲ್ಲ. ಈ ದೇಶಗಳಲ್ಲೂ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸುತ್ತಾರೆ. ಆದರೆ ವಿಷಯ ಗ್ರಹಿಕೆ ಸಾಧ್ಯವಾಗುವುದು ಪರಿಚಿತ ಭಾಷೆಯಲ್ಲಿ ಎಂಬ ಸಾಮಾನ್ಯ ತಿಳಿವಳಿಕೆಯನ್ನು ಇವರು ಗೌರವಿಸುತ್ತಾರೆ
ಪರಿಣಿತ ಭಾಷಾ ಶಾಸ್ತ್ರಜ್ಞರಾಗಿರುವುದರಿಂದ ಮಾನ್ಯ ರವಿನಾರಾಯಣ ಅವರಿಗೆ ನಾವು ಚರ್ಚಿಸುತ್ತಿರುವ ಈ ಎಲ್ಲವೂ ಚೆನ್ನಾಗಿಯೇ ತಿಳಿದಿದೆ. ಆದರೆ ಅವರು ತಮ್ಮ ಪ್ರತಿಕ್ರಿಯೆಯ ತುಂಬಾ ಅನೇಕ ವಿರೋಧಾಭಾಸಗಳ ಹೇಳಿಕೆಗಳನ್ನು ನೀಡುತ್ತ, ಅಸಮರ್ಥನೀಯವಾದುದನ್ನು ಸಮರ್ಥಿಸಲು ವೃಥಾ ಶ್ರಮ ಪಡುತ್ತಿರುವ ಉದ್ದೇಶವಾದರೂ ಏನು ಎಂದು ತಿಳಿಯುತ್ತಿಲ್ಲ. ಒಂದು ನಿರ್ಣಾಯಕ ಸ್ಥಾನದಲ್ಲಿರುವವರಿಗೆ ಕೆಲವೊಂದು ಒತ್ತಡಗಳಿರುತ್ತವೆ ಎಂಬುದು ನಿಜವಾದರೂ ಅವರು ತಮ್ಮ ಜ್ಞಾನ ನಿಷ್ಠೆಯನ್ನು ಮತ್ತಾವುದಕ್ಕೂ ವಿನಿಮಯ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ನಂಬುತ್ತೇನೆ.