ನೂರನೇ ವರ್ಷಕ್ಕೆ ಭಾರತ ರತ್ನ ಎಲ್.ಕೆ. ಅಡ್ವಾಣಿ
ಎಲ್.ಕೆ. ಅಡಾ್ವಣಿ (Photo: PTI)
ಶ್ರೀ,ಲಾಲ್ ಕೃಷ್ಣ ಅಡ್ವಾಣಿ ಅವರು ಇಂದು, ನವೆಂಬರ್ 8 ರಂದು ತಮ್ಮ ಜೀವನದ ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜನಸಂಘದ ಸ್ಥಾಪನೆಯಾಗಿ 75 ವರ್ಷಗಳು ಪೂರ್ಣ ಗೊಂಡಿರುವ, ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿ ಹಾಗೂ ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶತಮಾನೋತ್ಸವವನ್ನು ಆಚರಿಸಿರುವ ಈ ಸಂದರ್ಭದಲ್ಲಿ, ಈ ವರ್ಷದ ಅವರ ಜನ್ಮದಿನವು ಪ್ರಭು ಶ್ರೀರಾಮ ಮತ್ತು ದೀಪದೊಂದಿಗೆ ನಿಕಟ ಸಂಬಂಧ ಹೊಂದಿರುವ ದೀಪಾವಳಿ ಹಬ್ಬದಂದೇ ಬಂದಿರುವುದು ಔಚಿತ್ಯಪೂರ್ಣವಾಗಿದೆ.
ಆಧುನಿಕ ಭಾರತದ ಹಲವು ವಿಭಿನ್ನ ಅಧ್ಯಾಯಗಳ ಮೇಲೆ ತಮ್ಮ ಜೀವನದ ಮೂಲಕ ಪ್ರಭಾವ ಬೀರಿದ ವ್ಯಕ್ತಿಗಳು ಬಹಳ ವಿರಳ. ಅಡ್ವಾಣಿ ಅವರು 1927ರ ನವೆಂಬರ್ 8ರಂದು ದೇವ ದೀಪಾವಳಿಯಂದು ಜನಿಸಿದರು. 1947ರಲ್ಲಿ ಯುವಕರಾಗಿದ್ದಾಗ, ಅವರು ಸಿಂಧ್ನಲ್ಲಿದ್ದ ತಮ್ಮ ಪರಿಚಿತ ಜಗತ್ತನ್ನು ತೊರೆಯಬೇಕಾದ ನೋವನ್ನು ಅನುಭವಿಸಿದರು. ಆದರೆ, ಯಾವುದೇ ಕಹಿ ಭಾವನೆಗಳಿಗೆ ಎಡೆಮಾಡಿಕೊಡದೆ ಶೂನ್ಯದಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡರು. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶೂನ್ಯದಿಂದ ಮತ್ತೆ ಬದುಕನ್ನು ಕಟ್ಟಿಕೊಳ್ಳುವ ಈ ಗುಣ ಅವರ ಜೀವನದುದ್ದಕ್ಕೂ ಅವರ ಜೊತೆಯಲ್ಲಿದೆ. ಜನಸಂಘವನ್ನು ಬಲಪಡಿಸುವ ಸಂದರ್ಭದಲ್ಲಿ ಹಾಗೂ ನಂತರ ಬಿಜೆಪಿಯನ್ನು ಕಟ್ಟುವಲ್ಲಿಯೂ ಈ ಗುಣ ಸ್ಪಷ್ಟವಾಗಿ ಕಾಣಿಸಿತು. ಅವರು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, 1989ರಲ್ಲಿ ಕಾಂಗ್ರೆಸ್ನ ಸ್ಥಾನಗಳ ಸಂಖ್ಯೆ 400ರಿಂದ 200ಕ್ಕಿಂತ ಕಡಿಮೆಗೆ ಕುಸಿಯಿತು. 1996ರಲ್ಲಿ ಬಿಜೆಪಿ ಮೊದಲ ಬಾರಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಡ್ವಾಣಿ ಅವರು ಹಲವು ತಲೆಮಾರುಗಳ ಕಾರ್ಯಕರ್ತರನ್ನು ಬೆಳೆಸಿದರು ಮತ್ತು ‘ರಾಷ್ಟ್ರ ಮೊದಲು’ ಎಂಬ ತತ್ವದ ಮೇಲೆ ಪಕ್ಷಕ್ಕೆ ಸ್ಪಷ್ಟವಾದ ಭದ್ರ ಬುನಾದಿ ಹಾಕಿದರು.
ನಾಯಕರಾಗಿ ಅಡ್ವಾಣಿ ಅವರನ್ನು ಸದಾ ವಿಭಿನ್ನವಾಗಿ ಗುರುತಿಸುವ ಎರಡು ಗುಣಗಳಿವೆ. ಮೊದಲನೆಯದು, ಅವರ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬೌದ್ಧಿಕ ಪ್ರಖರತೆ. ಇದು ಅವರ ಭಾಷಣಗಳು ಮತ್ತು ಬರಹಗಳಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿತವಾಗುತ್ತಿತ್ತು. ಅವರು ರಚಿಸಿದ ಜನಸಂಘ ಮತ್ತು ಬಿಜೆಪಿ ನಿರ್ಣಯಗಳು ಇಂದಿಗೂ ಓದಲೇಬೇಕಾದ ಮಹತ್ವದ ದಾಖಲೆಗಳಾಗಿವೆ. ಅವರ ಸಂದರ್ಶನಗಳೂ ಸದಾ ಹರಿತವಾದ ವಿಶ್ಲೇಷಣೆ ಮತ್ತು ನಿಖರ ಅಭಿವ್ಯಕ್ತಿಗೆ ಹೆಸರಾಗಿದ್ದವು. ಎರಡನೆಯದು, ಹಲವು ವರ್ಷಗಳಿಂದ ಭಾರತೀಯ ರಾಜಕೀಯ ವ್ಯವಸ್ಥೆಯ ಬಹುಪಾಲು ರಾಜಕೀಯ ಪಕ್ಷಗಳು ಪ್ರತಿಪಾದಿಸುತ್ತಿದ್ದ ಹುಸಿ ಜಾತ್ಯತೀತತೆಯನ್ನು ಅವರು ಪರಿಣಾಮಕಾರಿಯಾಗಿ ಬಯಲಿಗೆಳೆದ ರೀತಿ.
ಅಡ್ವಾಣಿ ಅವರು ತಮಗೆ ವಹಿಸಲಾದ ಪ್ರತಿಯೊಂದು ಜವಾಬ್ದಾರಿಯನ್ನೂ ಅಪಾರ ಶ್ರದ್ಧೆ ಮತ್ತು ಬದ್ಧತೆಯಿಂದ ನಿರ್ವಹಿಸಿದರು. ಆರೆಸ್ಸೆಸ್ ಪ್ರಚಾರಕರಾಗಿ ಅವರು ಮೊದಲು ರಾಜಸ್ಥಾನದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿದರು. ಅಲ್ಲಿಂದ ರಾಷ್ಟ್ರ ರಾಜಧಾನಿ ದಿಲ್ಲಿಗೆ ತೆರಳಿ, ಅಟಲ್ ಜಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಆರಂಭಿಸಿದರು. ದಶಕಗಳ ಕಾಲ ಇಬ್ಬರು ದೈತ್ಯ ರಾಜಕೀಯ ನಾಯಕರು ಪರಸ್ಪರ ಸ್ಪರ್ಧಿಗಳಾಗದೆ, ಸಹಕಾರದ ಮನೋಭಾವದಿಂದ ಒಟ್ಟಾಗಿ ಕಾರ್ಯನಿರ್ವಹಿಸಿರುವುದು ಇತಿಹಾಸದಲ್ಲಿ ಅಪರೂಪ. ಅಡ್ವಾಣಿ ಮತ್ತು ಅಟಲ್ ಜಿ ಇಂತಹ ಅಪೂರ್ವ ಮಾದರಿಯನ್ನು ನಮ್ಮ ಮುಂದಿಟ್ಟಿದ್ದಾರೆ. ಅವರಿಬ್ಬರೂ ಒಟ್ಟಾಗಿ ಭಾರತೀಯ ರಾಜಕೀ ಯದ ದಿಕ್ಕನ್ನೇ ಬದಲಿಸಿದರು.
ಅಡ್ವಾಣಿ ಅವರು ದಿಲ್ಲಿಗೆ ಬಂದಾಗ, ವಿಭಜನೆಯ ಭೀಕರ ಪರಿಣಾಮಗಳಿಂದ ದಿಲ್ಲಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಅವರು ಜನಸಂಘವನ್ನು ಬಲಪಡಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. 1967ರಲ್ಲಿ ಅಡ್ವಾಣಿ ಅವರು ದಿಲ್ಲಿ ಮೆಟ್ರೋಪಾಲಿಟನ್ ಕೌನ್ಸಿಲ್ನ ಅಧ್ಯಕ್ಷರಾದರು. ಅಲ್ಲಿ ಅವರು ದಿವಂಗತ ವಿಜಯ್ ಕುಮಾರ್ ಮಲ್ಹೋತ್ರಾ ಅವರೊಂದಿಗೆ (ಅವರು ಮುಖ್ಯ ಕಾರ್ಯನಿರ್ವಾಹಕ ಕೌನ್ಸಿಲರ್ ಆಗಿದ್ದರು) ಕೆಲಸ ಮಾಡಿದರು.
1970ರಲ್ಲಿ ಅಡ್ವಾಣಿ ಅವರ ಸಂಸದೀಯ ಪಯಣ ಆರಂಭವಾಯಿತು. ಸಂಸತ್ತಿನಲ್ಲಿ ಅವರು ಮಂಡಿಸಿದ ಅಭಿಪ್ರಾಯಗಳು ಮತ್ತು ಮಾಡಿದ ಮಧ್ಯಪ್ರವೇಶಗಳು ರಾಜಕೀಯದ ಎಲ್ಲ ಪಕ್ಷಗಳ ಮೆಚ್ಚುಗೆಗೆ ಪಾತ್ರವಾಗಿವೆ. ಸಂಸದರಾಗಿಯೂ, ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ವಿರೋಧ ಪಕ್ಷದ ನಾಯಕರಾಗಿಯೂ ಹಾಗೂ ಆಡಳಿತ ಪಕ್ಷದ ಸದಸ್ಯರಾಗಿಯೂ ಅವರು ತಮ್ಮ ಛಾಪು ಮೂಡಿಸಿದರು. ಸಂಸತ್ತಿನ ಜವಾಬ್ದಾರಿಗಳ ನಡುವೆಯೂ ಅವರು ಜನರನ್ನು ಭೇಟಿಯಾಗಲು ಭಾರತದಾದ್ಯಂತ ಆಗಾಗ್ಗ ಪ್ರಯಾಣಿಸುತ್ತಿದ್ದರು.
1991ರ ಲೋಕಸಭಾ ಚುನಾವಣೆಯ ನೆನಪುಗಳು ನನ್ನ ಮನಸ್ಸಿನಲ್ಲಿ ಇಂದಿಗೂ ಸ್ಪಷ್ಟವಾಗಿವೆ. ಅಡ್ವಾಣಿ ಅವರು ಎರಡು ಕ್ಷೇತ್ರಗಳಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಲಾಗಿತ್ತು. ಅವುಗಳಲ್ಲಿ ಒಂದು ಗಾಂಧಿನಗರ. ಗುಜರಾತ್ನೊಂದಿಗೆ ಅವರಿಗೆ ಹಿಂದಿ ನಿಂದಲೂ ನಂಟಿತ್ತು. ವಿಭಜನೆಯ ನಂತರ ಅವರ ತಂದೆ
ಕಛ್ನಲ್ಲಿ ನೆಲೆಸಿದ್ದರು. ಅಡ್ವಾಣಿ ಅವರು ಗುಜರಾತ್ನಿಂದ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಹೀಗಾಗಿ, ಇದು ಒಂದು ರೀತಿಯಲ್ಲಿ ತವರು ಮನೆಗೆ ಮರಳಿದಂತಿತ್ತು. ಬಿಜೆಪಿ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನಗೆ, ಅವರ ನಾಮಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಲು ನೆರವಾಗುವ ಹಾಗೂ ಚುನಾವಣಾ ಪ್ರಚಾರದ ಉದ್ದಕ್ಕೂ ಅವರಿಗೆ ಸಹಕರಿಸುವ ಅವಕಾಶ ದೊರೆತಿತ್ತು. ಗಾಂಧಿನಗರದ ಜನರು ಅವರನ್ನು ಮತ್ತೆ ಮತ್ತೆ ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದರು. ಗಾಂಧಿನಗರದ ಮತದಾ ರನಾಗಿ ನಾನೂ ಹಲವು ಸಂದರ್ಭಗಳಲ್ಲಿ ಅಡ್ವಾಣಿ ಅವರಿಗೆ ಮತ ಚಲಾಯಿಸುವ ಗೌರವ ಪಡೆದಿದ್ದೇನೆ. ತಮ್ಮ ಕ್ಷೇತ್ರದ ಬಗ್ಗೆ ಅವರು ತೋರಿಸುತ್ತಿದ್ದ ಕಾಳಜಿ ಮತ್ತು ನೀಡುತ್ತಿದ್ದ ಗಮನ ಎಲ್ಲರೂ ಕಲಿಯಬೇಕಾದ ಸಂಗತಿಯಾಗಿದೆ.
ತುರ್ತು ಪರಿಸ್ಥಿತಿಯು ಅಡ್ವಾಣಿ ಅವರ ಜೀವನದಲ್ಲಿ ಮಹತ್ವದ ತಿರುವು ತಂದ ಘಟನೆಯಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು ಅವರು ಮುಂಚೂಣಿಯಲ್ಲಿ ನಿಂತು ಹೋರಾಡಿದರು. ಆ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಅವರು ‘ಎ ಪ್ರಿಸನರ್ಸ್ ಸ್ಕ್ರಾಪ್-ಬುಕ್’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಆ ಪುಸ್ತಕದ ‘ಎ ಟೇಲ್ ಆಫ್ ಟೂ ಎಮರ್ಜೆನ್ಸೀಸ್’ ಎಂಬ ಶೀರ್ಷಿಕೆಯ ಒಂದು ಭಾಗದಲ್ಲಿ, 1975ರ ಜೂನ್ನಿಂದ ಭಾರತದಲ್ಲಿ ನಡೆದ ಘಟನೆಗಳು ಮತ್ತು 1933ರಲ್ಲಿ ನಾಝಿ ಜರ್ಮನಿಯಲ್ಲಿ ನಡೆದ ಘಟನೆಗಳ ನಡುವಿನ ಗಮನಾರ್ಹ ಸಾಮ್ಯತೆಗಳನ್ನು ಅವರು ಮನೋಜ್ಞವಾಗಿ ವಿವರಿಸಿದ್ದಾರೆ.
ಅಡ್ವಾಣಿ ಅವರು ಪ್ರಬಲ ವಿರೋಧ ಪಕ್ಷದ ನಾಯಕರಾಗಿದ್ದಂತೆಯೇ, ಅತ್ಯುತ್ತಮ ಆಡಳಿತಗಾರರೂ ಆಗಿದ್ದರು. 1977ರಲ್ಲಿ ಜನತಾ ಸರಕಾರ ಅಧಿಕಾರಕ್ಕೆ ಬಂದಾಗ, ಅಡ್ವಾಣಿ ಅವರು ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದರು. ಈ ಇಲಾಖೆಯಲ್ಲಿ ಅವರು ಮಾಡಿದ ಕೆಲಸ ಅತ್ಯಂತ ಪರಿಣಾಮಕಾರಿಯಾಗಿತ್ತು ಎಂಬುದು ಎಲ್ಲರೂ ಒಪ್ಪಿಕೊಂಡಿರುವ ಸಂಗತಿ. ಭಾರತದ ಉಪಪ್ರಧಾನಿಯಾಗಿ ಹಾಗೂ ದೀರ್ಘಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ನಮ್ಮ ಭದ್ರತಾ ಪಡೆಗಳ ಸಿಬ್ಬಂದಿಯ ಜೀವನಮಟ್ಟ ಸುಧಾರಿಸಲು ಅವರು ಕೈಗೊಂಡ ಕ್ರಮಗಳನ್ನು ಇಂದಿಗೂ ಅಭಿಮಾನದಿಂದ ಸ್ಮರಿಸಲಾಗುತ್ತದೆ. ಭಯೋತ್ಪಾದನೆಯ ವಿರುದ್ಧ ಅವರು ತೆಗೆದುಕೊಂಡ ದೃಢವಾದ ನಿಲುವಿನ ಪರಿಣಾಮವಾಗಿ, ಭಾರತದಲ್ಲಿ ಕಠಿಣ ಭಯೋತ್ಪಾದನೆ ನಿಗ್ರಹ ಕಾನೂನು ಜಾರಿಗೆ ಬಂತು.
ನಿಸ್ಸಂದೇಹವಾಗಿ, ಅಡ್ವಾಣಿ ಅವರ ಜೀವನದ ಐತಿಹಾಸಿಕ ಕ್ಷಣಗಳಲ್ಲಿ ಸೋಮನಾಥದಿಂದ ಅಯೋಧ್ಯೆ ಯವರೆಗಿನ ರಥಯಾತ್ರೆಯೂ ಒಂದು. ಈ ಯಾತ್ರೆ ಭಾರತೀಯ ಸಮಾಜದ ದಿಕ್ಕನ್ನೇ ಉತ್ತಮ ರೀತಿ ಯಲ್ಲಿ ಬದಲಿಸಿತು. ಈ ಯಾತ್ರೆಯ ಪರಿಕಲ್ಪನೆಯ ಹಂತದಿಂದ ಹಿಡಿದು ಅದರ ಅನುಷ್ಠಾನದವರೆಗೂ ಭಾಗಿಯಾಗುವ ಅವಕಾಶ ದೊರೆತದ್ದು ನನ್ನ ಪಾಲಿನ ಸೌಭಾಗ್ಯವೆಂದು ಭಾವಿಸುತ್ತೇನೆ. ಯಾತ್ರೆ ಆರಂಭವಾದಾಗ ಸೋಮನಾಥದಲ್ಲಿ ಉಪಸ್ಥಿತರಿದ್ದದ್ದು ನನಗೆ ವಿಶೇಷ ಅನುಭವವಾಗಿತ್ತು. ರಥಯಾತ್ರೆಯನ್ನು ನಡೆಸುವುದು ಅತ್ಯಂತ ಸವಾಲಿನ ಕೆಲಸ; ಅದಕ್ಕೆ ದೀರ್ಘ ಸಮಯದ ಪ್ರಯಾಣ, ನಿರಂತರ ಸಂಚಾರ, ದೈಹಿಕ ಸಹಿಷ್ಣುತೆ ಹಾಗೂ ಆಯಾಸದ ನಡುವೆಯೂ ಗುರಿಯತ್ತ ಗಮನ ಕೇಂದ್ರೀಕರಿಸುವ ಸಾಮರ್ಥ್ಯ ಅಗತ್ಯವಿರುತ್ತದೆ. ಅಡ್ವಾಣಿ ಅವರು ಇಂತಹ ಅಸಾಧಾರಣ ಸಹಿಷ್ಣುತೆ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದ್ದರು.
ಬಿಹಾರದಲ್ಲಿ ಅಡ್ವಾಣಿ ಅವರನ್ನು ಬಂಧಿಸಿದ ದುಃಖದ ಕ್ಷಣಗಳೂ ನನ್ನ ನೆನಪಿನಲ್ಲಿವೆ. ಆ ಬಳಿಕ ಗುಜರಾತ್ನಲ್ಲಿ ಬಿಜೆಪಿ, ಚಿಮನ್ಭಾಯಿ ಪಟೇಲ್ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲ ವನ್ನು ಹಿಂಪಡೆಯಿತು. ಈ ಮೂಲಕ ಒಂದು ಸರಳವಾದ, ಸ್ಪಷ್ಟವಾದ ಸಂದೇಶವನ್ನು ನೀಡಲಾಯಿತು: ನಮ್ಮ ಸಿದ್ಧಾಂತದ ವಿಚಾರದಲ್ಲಾಗಲಿ, ರಾಮಮಂದಿರದ ವಿಚಾರದಲ್ಲಾಗಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಏನೇ ಆದರೂ ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದು ನಮ್ಮ ಅನೇಕ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಪ್ರತಿಜ್ಞೆ ಮಾಡಿದರು. ವರ್ಷಗಳ ಬಳಿಕ, ಭಾರತದ ಜನತೆಯ ಆಶೀರ್ವಾದದಿಂದ ಪ್ರಭು ಶ್ರೀರಾಮನ ಭವ್ಯ ಮಂದಿರ ಅಯೋಧ್ಯೆಯಲ್ಲಿ ಸಾಕಾರಗೊಂಡಿತು.
ಅಡ್ವಾಣಿ ಅವರ ವ್ಯಕ್ತಿತ್ವದಲ್ಲಿ ಮೆಚ್ಚಬೇಕಾದ ಇನ್ನೂ ಅನೇಕ ಗುಣಗಳಿವೆ. ಉದಾಹರಣೆಗೆ, ಅವರ ಸರಳತೆ. ನವನಿರ್ಮಾಣ ಚಳವಳಿಯ ಬಳಿಕ ಅಡ್ವಾಣಿ ಅವರು ಜುನಾಗಢಕ್ಕೆ ಭೇಟಿ ನೀಡಿ, ಸಾಮಾನ್ಯ ಕಾರ್ಯಕರ್ತರಂತೆ ಒಂದು ತಿಂಗಳ ಕಾಲ ಅಲ್ಲಿಯೇ ತಂಗಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜು ಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಅವರು ತಮ್ಮ ನಡೆನುಡಿಗಳ ಮೂಲಕ ಸದಾ ತೋರಿಸಿಕೊಟ್ಟಿದ್ದಾರೆ. ಅವರು ಅಪಾರ ಓದಿನ ಆಸಕ್ತಿಯುಳ್ಳವರು. ಅವರೊಂದಿಗೆ ಸಮಯ ಕಳೆದವರಿಗೆ ಪತ್ರಿಕೆಗಳನ್ನು ಎಷ್ಟು ಸೂಕ್ಷ್ಮವಾಗಿ ಮತ್ತು ಗಮನವಿಟ್ಟು ಓದುತ್ತಾರೆ ಎಂಬುದು ತಿಳಿದಿದೆ. ಚಲನಚಿತ್ರ ಮತ್ತು ರಂಗಭೂಮಿಯ ಬಗ್ಗೆ ಅವರಿಗೆ ಅಪಾರ ಆಸಕ್ತಿ. ಅವರು ಉತ್ಸಾಹಿ ಚಲನಚಿತ್ರ ವಿಮರ್ಶಕರೂ ಹೌದು. ಇತಿಹಾಸದ ಬಗ್ಗೆ ಅವರಿಗಿರುವ ಅರಿವು ಮತ್ತು ಅದನ್ನು ಸಂರಕ್ಷಿಸುವ ಅಗತ್ಯದ ಕುರಿತಾದ ಅವರ ಕಾಳಜಿ ‘ಮೈ ಕಂಟ್ರಿ ಮೈ ಲೈಫ್’ ಎಂಬ ಪುಸ್ತಕದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಅಡ್ವಾಣಿ ಅವರು ಸದಾ ಸಿಂಧಿ ಸಂಸ್ಕೃತಿಯೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡಿದ್ದರು. ಲೇಹ್ ಸಮೀಪದ ಸಿಂಧು ದರ್ಶನ ಪೂಜೆಯನ್ನು ಜನಪ್ರಿಯಗೊಳಿಸಲು ಅವರು ಕೈಗೊಂಡ ಪ್ರಯತ್ನವೂ ಇದಕ್ಕೆ ಮತ್ತೊಂದು ಉದಾಹರಣೆ. ನಾನೂ ಸಹ ಅಡ್ವಾಣಿ ಅವರು ಮತ್ತು ಜಾರ್ಜ್ ಫೆರ್ನಾಂಡಿಸ್ ಅವರೊಂದಿಗೆ ಒಂದು ಬಾರಿ ಈ ಪೂಜೆಯಲ್ಲಿ ಭಾಗವಹಿಸಿದ್ದೆ.
ಅಡ್ವಾಣಿ ಅವರ ಈ ಅಸಾಧಾರಣ ಜೀವನಯಾನದ ಕುರಿತು ಹೇಳುವಾಗ ಕಮಲಾ ಅಡ್ವಾಣಿ ಅವರ ಉಲ್ಲೇಖವಿಲ್ಲದೆ ಅದು ಪೂರ್ಣವಾಗುವುದಿಲ್ಲ. ಅಡ್ವಾಣಿ ಅವರ ಸಾರ್ವಜನಿಕ ಜೀವನದುದ್ದಕ್ಕೂ ಅವರು ನಿರಂತರವಾಗಿ ಶಕ್ತಿ ಮತ್ತು ಬೆಂಬಲದ ಮೂಲವಾಗಿದ್ದರು.
ಕರಾಚಿಯಲ್ಲಿ ಬೆಳೆದ ಅಡ್ವಾಣಿ ಅವರು ತಮ್ಮ ಬದುಕು ಯಾವ ಹಾದಿಯಲ್ಲಿ ಸಾಗಲಿದೆ ಎಂಬುದನ್ನು ಆಗ ಊಹಿಸಿರಲಿಕ್ಕೂ ಸಾಧ್ಯವಿರಲಿಲ್ಲ. ಅವರ ಸೇವೆ ಮತ್ತು ಕೊಡುಗೆಗಳಿಗೆ ಕೃತಜ್ಞತೆಯ ದ್ಯೋತಕವಾಗಿ, 2024ರಲ್ಲಿ ಭಾರತದ ಜನತೆ ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅಡ್ವಾಣಿ ಅವರು ತಮ್ಮ ಜೀವನದ ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ, ಅವರಿಗೆ ಉತ್ತಮ ಆರೋಗ್ಯ ಲಭಿಸಲಿ ಮತ್ತು ಅವರು ನಮಗೆ ಸದಾ ಸ್ಫೂರ್ತಿಯನ್ನು ನೀಡುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ.