×
Ad

ಬೀದಿ ದೀಪ ಕೊರತೆ: ಕತ್ತಲೆ ಕೂಪವಾದ ತಾಳಿಕೋಟೆ ನಗರ

Update: 2026-06-30 14:53 IST

ತಾಳಿಕೋಟೆ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ, ಒಳ ಚರಂಡಿ, ಕುಡಿಯುವ ನೀರು, ಬೀದಿ ದೀಪ, ಶುಚಿತ್ವ ಕಾಪಾಡುವುದು ಆಯಾ ಸ್ಥಳೀಯ ಸಂಸ್ಥೆಗಳ ಬಹುಮುಖ್ಯವಾದ ಜವಾಬ್ದಾರಿ. ಆದರೆ ಸ್ಥಳೀಯ ಆಡಳಿತಗಳು ಹೊಣೆಗಾರಿಕೆ ಮರೆತ ಪರಿಣಾಮ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ತಾಳಿಕೋಟೆ ಸ್ವತಂತ್ರ ತಾಲೂಕಾಗಿ ರೂಪುಗೊಂಡು ಬರೋಬ್ಬರಿ 12 ವರ್ಷ ಕಳೆದರೂ ಸಮರ್ಪಕವಾದ ಬೀದಿದೀಪಗಳ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕತ್ತಲಿನಲ್ಲಿ ಪಟ್ಟಣ: ತಾಲೂಕಿಗೆ ಮಾದರಿಯಾಗಬೇಕಾಗಿದ್ದ ತಾಳಿಕೋಟೆ ನಗರದಲ್ಲಿ ಬೀದಿದೀಪಗಳ ಸಮಸ್ಯೆ ಗಂಭೀರವಾಗಿದೆ. ರಾತ್ರಿಯ ಹೊತ್ತು ಹೊರ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳಿಂದ ಪ್ರವೇಶಿಸುವ ವಾಹನಗಳಿಗೆ ‘ಕಗ್ಗತ್ತಲಿನ’ ಸ್ವಾಗತ ಸಿಗುತ್ತದೆ. ವಾಹನ ಸವಾರರಿಗೆ ‘ಪಟ್ಟಣ ಪ್ರವೇಶಿಸಿದ್ದೇವೋ ಅಥವಾ ‘ಅರಣ್ಯ’ ಹಾದಿ ಹಿಡಿದಿದ್ದೇವೋ ಎಂಬ ಗೊಂದಲ ಅರೆಕ್ಷಣ ಕಾಡದಿರದು. ವಿಜಯಪುರ ಜಿಲ್ಲೆಯಿಂದ ಆಂಧ್ರ ರಾಜ್ಯ ಸಂಪರ್ಕ ಕಲ್ಪಿಸುವ ಬಿಜ್ಜಳ ರಾಜ್ಯ ಹೆದ್ದಾರಿ ಬೀದಿ ದೀಪಗಳ ನಿರ್ವಹಣೆ ಮಾಡುತ್ತಿಲ್ಲ!

ಭಾರೀ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಕಗ್ಗತ್ತಲು ಕವಿಯುತ್ತದೆ. ಪ್ರತಿದಿನ ಸಾವಿರಾರು ಸರಕು ಸಾಗಣೆ ವಾಹನಗಳು, ಬಸ್‌ಗಳು, ಪ್ರಯಾಣಿಕ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿದ್ದು ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಹೆದ್ದಾರಿಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ವೇಗವಾಗಿ ಬರುವ ವಾಹನಗಳು ಹೊರಸೂಸುವ ಪ್ರಖರ ಬೆಳಕಿನಿಂದ ಚಾಲಕರು ಗೊಂದಲಕ್ಕೆ ಸಿಲುಕುತ್ತಿದ್ದು ವಾಹನಗಳು ಡಿವೈಡರ್‌ಗಳಿಗೆ ಡಿಕ್ಕಿ ಹೊಡೆಯುತ್ತಿರುವ, ಚಾಲಕರ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿರುವ ಘಟನೆಗಳು ನಡೆಯುತ್ತಿವೆ.

ಬೈಕ್ ಸವಾರರ ಪಾಡಂತೂ ಹೇಳತೀರದು. ವಾಹನಗಳ ಪ್ರಖರ ಬೆಳಕಿನಿಂದ ಕಣ್ಣು ಮಂಜಾಗಿ ಹೆದ್ದಾರಿಯಿಂದ ವಾಹನಗಳನ್ನು ಕೆಳಗಿಳಿಸಿ, ಆಯ ತಪ್ಪಿ ಬಿದ್ದು ಗಂಭೀರವಾದ ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳು ಇವೆ.

ಪುರಸಭೆ ವ್ಯಾಪ್ತಿಗೊಳಪಡುವ ಜಾನಕಿ ಹಳ್ಳದ ರಸ್ತೆಯಿಂದ ಅಂಜುಮಾನ್ ಶಾಲೆಯವರೆಗೆ ಬೀದಿದೀಪಗಳಿದ್ದರೂ ಕತ್ತಲಿನಲ್ಲಿಯೇ ಸಂಚರಿಸಬೇಕಾಗಿದೆ. ಈ ರಸ್ತೆಯಲ್ಲಿ ಎಪಿಎಂಸಿ ಕಚೇರಿಯ ಮುಖ್ಯ ದ್ವಾರ, ಬಸವೇಶ್ವರ ವೃತ್ತ, ಅಂಬೇಡ್ಕರ್ ಸರ್ಕಲ್, ಟಿಪ್ಪು ವೃತ್ತ, ಶಾಲಾ-ಕಾಲೇಜುಗಳು ಇವೆ.

ಮತ್ತೊಂದೆಡೆ ಬಸವೇಶ್ವರ ವೃತ್ತದಿಂದ ಆರಂಭವಾಗುವ ಡಿವಿಯೇಷನ್ ರಸ್ತೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ದೇವರಹಿಪ್ಪರಗಿ, ಸಿಂದಗಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲೂ ಬೀದಿದೀಪಗಳಿದ್ದರೂ ಸರಿಯಾಗಿ ಕೆಲಸ ಮಾಡುವುದಿಲ್ಲ.

ನಗರದ ಹೃದಯಭಾಗದಲ್ಲಿರುವ ಶಿವಾಜಿ ವೃತ್ತದಲ್ಲಿ ಬೀದಿದೀಪಗಳಿದದ್ದರೂ ಅವುಗಳಿಗೆ ಮಂಕು ಕವಿದಿದೆ. ರಸ್ತೆ ವಿಭಜಕದಲ್ಲಿ ಅಳವಡಿಸಿರುವ ದೀಪಗಳು ಪ್ರಖರವಾದ ಬೆಳಕು ಹೊರಸೂಸದೆ ರಸ್ತೆಯ ಮೇಲೆ ಬೆಳಕುಚೆಲ್ಲುತ್ತಿಲ್ಲ. ಜತೆಗೆ ಅಲ್ಲಲ್ಲಿ ಬೀದಿ ದೀಪಗಳು ಕೆಟ್ಟುನಿಂತಿವೆ.

ರಸ್ತೆಯ ವಿಭಜಕದ ಮೇಲೆ ಅಳವಡಿಸಿರುವ ವಿದ್ಯುತ್ ಕಂಬ ಎಸ್‌ಕೆ ಪದವಿ ಕಾಲೇಜು ಮುಂದುಗಡೆ ನೆಲಕ್ಕುರುಲಿದೆ. ಗಾಳಿ ಮಳೆಗೆ ಅಪಾಯ ತಂದೊಡ್ಡುವಆತಂಕ ಕಾಡುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಬ್ದುಲ್ ರಝಾಕ್ ಮುಲ್ಲಾ

contributor

Similar News