×
Ad

ದ್ವೇಷ ‘ಭಾಷಣ’ ನಿಲ್ಲಲಿ

Update: 2026-06-30 10:40 IST

ಕರ್ನಾಟಕದ ಅಧಿಕಾರ ಹಸ್ತಾಂತರ ನಾಟಕಕ್ಕೆ ಕೊನೆಗೂ ತೆರೆ ಬಿದ್ದು, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಿದೆ. ಸಂಘ ಪರಿವಾರದ ಎದುರು ನೇರಾನೇರ ಹಣಾಹಣಿಗೆ ಇಳಿದು ತಮ್ಮ ಸೈದ್ಧಾಂತಿಕ ಬದ್ಧತೆ ಪ್ರದರ್ಶಿಸಿದ್ದ ಪ್ರಿಯಾಂಕ್ ಖರ್ಗೆ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ಪ್ರಖರ ವಾದಸರಣಿ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪೇಚಿಗೆ ಸಿಲುಕಿಸುವಲ್ಲಿ ಅವರು ಯಶಸ್ವಿಯಾದರಾದರೂ, ಅದನ್ನೊಂದು ತಾರ್ಕಿಕ ಅಂತ್ಯಕ್ಕೆ ಒಯ್ಯುವಲ್ಲಿ ಪ್ರಯತ್ನ ಪಟ್ಟಂತೆ ಕಾಣಲಿಲ್ಲ. ಈಗ ಗೃಹಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಹಜವಾಗಿಯೇ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಒಗ್ಗಟ್ಟಿನಿಂದ ಆರೆಸ್ಸೆಸ್ ಅನ್ನು ಎದುರಿಸಬಲ್ಲಷ್ಟು ಕಾಂಗ್ರೆಸ್ ಪಕ್ಷದ ನಾಯಕರು ಸೈದ್ಧಾಂತಿಕ ಬದ್ಧತೆ ಹೊಂದಿದ್ದಾರೆಯೇ ಎಂಬುದೇ ಮುಖ್ಯ ಪ್ರಶ್ನೆ. ಹಿಂದೊಮ್ಮೆ ಅರುಣ್ ಶೌರಿ ‘‘ಬಿಜೆಪಿ ಅಂದರೆ ಕಾಂಗ್ರೆಸ್ ಪ್ಲಸ್ ಕೌ (ಗೋವು)’’ ಅಂತ ಹೇಳಿದ್ದ ಮಾರ್ಮಿಕ ಮಾತು ನೆನಪಾಗುತ್ತಿದೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಸೈದ್ಧಾಂತಿಕ ಸಂಘರ್ಷ ತೀರಾ ತೆಳು ಮಟ್ಟದ್ದು ಮಾತ್ರ. ಬಿಜೆಪಿಯದು ಅಬ್ಬರದ, ತೋರುಗಾಣಿಕೆಯ ಹಿಂದುತ್ವವಾದರೆ, ಕಾಂಗ್ರೆಸ್ ಪಕ್ಷದ್ದು ಮುಸುಕಿನ ಒಳಗಿನ ಮೃದು ಹಿಂದುತ್ವ.

ಸ್ವತಃ ಪ್ರಿಯಾಂಕ್ ಖರ್ಗೆಯವರೇ ಬಹಳಷ್ಟು ಬಾರಿ ಉದ್ಧರಿಸಿರುವಂತೆ ಸರ್ದಾರ್ ಪಟೇಲರು ಆರೆಸ್ಸೆಸ್ ನಿಷೇಧ ಮಾಡಿದ್ದು ನಿಜವಾದರೂ, ಅವರ ನಂತರದಲ್ಲಿ ಕಾಂಗ್ರೆಸ್ ಪಕ್ಷದ ಯಾವ ನಾಯಕ ಕಾನೂನಾತ್ಮಕವಾಗಿ ಸಂಘವನ್ನು ಎದುರಿಸುವ ಛಾತಿ ತೋರಿಸಿದ್ದಾರೆ? ನೂರು ವರ್ಷಗಳ ನಂತರವಾದರೂ ಆರೆಸ್ಸೆಸ್ ಕಾನೂನಿನ ಚೌಕಟ್ಟಿನಲ್ಲಿ ನೋಂದಾವಣೆ ಮಾಡಿಕೊಂಡಿಲ್ಲ ಏಕೆ ಎಂಬ ಮಹತ್ವದ ಪ್ರಶ್ನೆಯನ್ನು ಪ್ರಿಯಾಂಕ್ ಖರ್ಗೆ ಪದೇ ಪದೇ ಕೇಳುತ್ತಿರುವರಾದರೂ, ಅವರ ಪಕ್ಷದ ಎಷ್ಟು ಜನ ನಾಯಕರು ಅವರೊಟ್ಟಿಗೆ ದನಿಗೂಡಿಸಿದರು? ಈ ಪ್ರಶ್ನೆಗಳ ಉತ್ತರದಲ್ಲೇ ಕಾಂಗ್ರೆಸ್ ಪುನರುತ್ಥಾನದ ಬೀಜಗಳಿವೆ.

ಒಂದು ಕಡೆ ರಾಷ್ಟ್ರಮಟ್ಟದಲ್ಲಿ ಸಂಘದ ಅಧಿಕೃತ ಹುದ್ದೆಯಲ್ಲಿರುವವರು ಹಿಂದಿಯಲ್ಲಿ ದ್ವೇಷ ಭಾಷಣಕ್ಕೆ ಬೆಣ್ಣೆ ಸವರಿ ಮುಖ್ಯವಾಹಿನಿಗೆ ತೇಲಿಬಿಟ್ಟರೆ, ರಾಜ್ಯಮಟ್ಟದಲ್ಲಿ ದ್ವೇಷಭಾಷಣಕಾರರ ಉರಿನುಡಿಗಳಿಗೆ ಸಿಕ್ಕಿ ಬೆಣ್ಣೆ ಕರಗಿ ಕೇವಲ ದ್ವೇಷ ಜನಮಾನಸದೊಳಗಡೆ ಇಳಿಯುತ್ತದೆ. ಸಂಘದ ನಾಯಕರು ‘ಭಾರತೀಯ ಸಂಸ್ಕೃತಿಯ ಪುನರುತ್ಥಾನ’ ಎಂದರೆ, ದ್ವೇಷ ಭಾಷಣಕಾರರು ‘ಹಿಂದೂ ರಾಷ್ಟ್ರದ ನಿರ್ಮಾಣ’ ಎನ್ನುತ್ತಾರೆ. ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಬೇರೆ ಧರ್ಮಗಳ ಮೂಲಭೂತವಾದಿಗಳ ಬಾಯಲ್ಲೂ ದ್ವೇಷ ಭಾಷಣದ ಕಿಡಿನುಡಿ ಕೇಳಿಸದೇ ಏನಿಲ್ಲ. ದ್ವೇಷ ಭಾಷಣಕಾರರನ್ನು ಧರ್ಮಾತೀತವಾಗಿ ನೋಡಲು ಸಾಧ್ಯವಿದೆಯಾದರೂ, ಆ ಕಿಡಿಗೇಡಿಗಳ ಹಿಂದಿನ ಸಾಂಘಿಕ ಶಕ್ತಿಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ದ್ವೇಷ ಭಾಷಣಕಾರರು ಏಕವ್ಯಕ್ತಿಗಳಾಗಿದ್ದಾರೆಯೇ ಅಥವಾ ಸಿದ್ಧಾಂತವೊಂದರ ವಕ್ತಾರರಾಗಿದ್ದಾರೆಯೇ ಎಂದು ಗುರುತಿಸುವುದು ಬಹಳ ಮುಖ್ಯ.

2014ರಿಂದ ಈಚೆಗೆ ಜನಬಲ, ಧನಬಲ ಎರಡರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಆರೆಸ್ಸೆಸ್‌ನ್ನು ಎದುರಿಸಲು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾದರೂ, ಸಂಘದ ನೆರಳಿನಲ್ಲಿ ದ್ವೇಷ ಭಾಷಣ ಮಾಡುತ್ತಾ ಸಾಮರಸ್ಯ ಕದಡುತ್ತಿರುವ ವಿಷಸರ್ಪಗಳನ್ನಾದರೂ ಹಿಡಿಯುವ ಕೆಲಸ ಮಾಡಬೇಕಲ್ಲವೇ? ಸೆಕ್ಯುಲರ್ ಸಮಾಜದ ರಕ್ಷಕ ಪಕ್ಷ ಎಂದು ಹೇಳಿಕೊಳ್ಳುವವರಿಂದ ಇಷ್ಟನ್ನು ನಿರೀಕ್ಷೆ ಮಾಡುವುದು ಸ್ವಾಭಾವಿಕವಲ್ಲವೇ? ಆದರೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ದ್ವೇಷ ಭಾಷಣಕಾರರಿಗೆ ತಕ್ಕ ಶಾಸ್ತಿ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲವೆಂದೇ ಹೇಳಬೇಕು.

ಇಂಡಿಯಾ ಹೇಟ್ ಲ್ಯಾಬ್ ವರದಿಯ ಪ್ರಕಾರ 2025ರಲ್ಲಿ ಭಾರತದಾದ್ಯಂತ 1,318 ದ್ವೇಷ ಭಾಷಣಗಳು ವರದಿಯಾಗಿವೆ. ಇವುಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ರಾಜ್ಯಗಳಲ್ಲಿ 1,082 ಘಟನೆಗಳು ದಾಖಲಾಗಿವೆ. ಒಟ್ಟು ದ್ವೇಷ ಭಾಷಣಗಳ ಪೈಕಿ 1,289 ಮುಸ್ಲಿಮರ ವಿರುದ್ಧ ಮತ್ತು 162 ಕ್ರೈಸ್ತರ ವಿರುದ್ಧ ಇರುವುದನ್ನು ನೋಡಿದಾಗ ಇಸ್ಲಾಮೋಫೋಬಿಯಾದ ಕರಿನೆರಳಿನ ಅಂದಾಜು ಸಿಗುತ್ತದೆ. 40 ದಾಖಲಿತ ದ್ವೇಷಭಾಷಣದ ಘಟನೆಗಳೊಂದಿಗೆ ಕಾಂಗ್ರೆಸ್ ನೇತೃತ್ವದ ಕರ್ನಾಟಕವು, ಅಗ್ರ ಹತ್ತು ರಾಜ್ಯಗಳಲ್ಲಿ ಸ್ಥಾನ ಪಡೆದ ಏಕೈಕ ಬಿಜೆಪಿಯೇತರ ಆಡಳಿತದ ರಾಜ್ಯವಾಗಿದೆ. ಇದು ಏಕಕಾಲಕ್ಕೆ ನಾಚಿಕೆಗೇಡಿನ ಮತ್ತು ಕಳವಳಕಾರಿ ಸಂಗತಿಯಾಗಿದೆ.

ಕರ್ನಾಟಕ ಸರಕಾರವು ಸಮಾಜದಲ್ಲಿ ಶಾಂತಿ, ಸೌಹಾರ್ದವನ್ನು ಕಾಪಾಡಲು ಮತ್ತು ಪ್ರಚೋದನಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ, 2025’ನ್ನು ಅಂಗೀಕರಿಸುವಲ್ಲಿ ಸಫಲವಾಯಿತಾದರೂ, ಒಕ್ಕೂಟ ಸರಕಾರದ ಗೃಹ ಸಚಿವಾಲಯವು ದ್ವೇಷ ಭಾಷಣ ಮಸೂದೆಯ ಅಗತ್ಯವನ್ನೇ ಪ್ರಶ್ನೆ ಮಾಡಿದೆ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲೇ ದ್ವೇಷ ಭಾಷಣಕಾರರನ್ನು ಶಿಕ್ಷೆಗೆ ಒಳಪಡಿಸಬಹುದು ಎಂಬುದು ಅವರ ವಾದವಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ದ್ವೇಷ ಭಾಷಣಗಳು ಹೆಚ್ಚಿರುವಾಗ, ಒಕ್ಕೂಟ ಸರಕಾರದಿಂದ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ?

ಬಸವಣ್ಣನ ನಾಡಿನಲ್ಲಿ ಸಮುದಾಯಗಳ ನಡುವೆ ಬೆಂಕಿ ಹಚ್ಚುತ್ತಿರುವ ಪುನರಾವರ್ತಿತ ಆರೋಪಿಗಳನ್ನು ಕೂಡ ಹಿಡಿಯದೆ ಕಾಂಗ್ರೆಸ್ ಸರಕಾರ ಏನು ಮಾಡುತ್ತಿದೆ ಎಂಬುದೇ ಚಿದಂಬರ ರಹಸ್ಯವಾಗಿದೆ. ಸಂವಿಧಾನ ಕೇವಲ ತೋರಿಕೆಯ, ಮತಗಳಿಕೆಯ ಭಾಷಣದ ವಿಷಯವಾಗಬಾರದು. ಅನುಷ್ಠಾನಗೊಳ್ಳದ ಕಾನೂನುಗಳು ಕೇವಲ ವಾಗಾಡಂಬರಕ್ಕೆ ಸೀಮಿತವಷ್ಟೇ. ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ಸುಳ್ಳುಸುದ್ದಿಗಳನ್ನು, ದ್ವೇಷ ಭಾಷಣಗಳನ್ನು ಆಕರ್ಷಕ ಭಾಷೆಯಲ್ಲಿ ಪ್ರಚುರಪಡಿಸುವ ಬಾಡಿಗೆ ಭಾಷಣಕಾರರಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಈ ದುರಿತಕಾಲದ ಅಗತ್ಯಕ್ಕೆ ಅನುಗುಣವಾಗಿ ತರಲಿಚ್ಛಿಸಿರುವ ಕಾನೂನನ್ನು ಕಾಂಗ್ರೆಸ್ ಪಕ್ಷ ಶತಾಯಗತಾಯ ಸೂಕ್ತ ರೀತಿಯಲ್ಲಿ, ಸೂಕ್ತ ಸ್ಥಳದಲ್ಲಿ ಸಮರ್ಥಿಸಿಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಕಾನೂನು ಹೋರಾಟಕ್ಕೆ ಕೂಡ ಸಜ್ಜಾಗಬೇಕು. ಅದಷ್ಟೆ ಅಲ್ಲದೆ, ಪುನರಾವರ್ತಿತ ಆರೋಪಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.

ಆದಿಕವಿ ಪಂಪನಿಂದ ರಸಋಷಿ ಕುವೆಂಪುವರೆಗೆ, ನಮ್ಮ ಪೂರ್ವಸೂರಿಗಳು ಮಾಡಿರುವ ಸಾಮರಸ್ಯದ ಪಾಠವನ್ನು ನಮ್ಮ ಗೃಹಸಚಿವರು ಮರೆಯಬಾರದು. ಬಹುಸಂಖ್ಯಾತರ ಮನೋಧರ್ಮಕ್ಕೆ ಧಕ್ಕೆಯಾಗದಂತೆ ನಿಲುವು ತಳೆಯುವುದು ಹಗ್ಗದ ಮೇಲಿನ ನಡಿಗೆ ಎಂಬುದು ನಿಜ. ಆದರೆ, ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಯುವ ಕೆಲಸ ಕಾಂಗ್ರೆಸ್ ಮಾಡದೆ ಹೋದಲ್ಲಿ ಹಾಳೂರಿಗೆ ಉಳಿದವನೇ ನಾಯಕ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ್ರಿಯಾಂಕ್ ಖರ್ಗೆ ತಮ್ಮ ಜವಾಬ್ದಾರಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಸೂಕ್ತವಾಗಿ ನಿರ್ವಹಿಸಿ ನಂಬಿಕೆ ಉಳಿಸಿಕೊಳ್ಳಲಿ ಎಂಬುದು ಆಗ್ರಹಪೂರ್ವಕ ಹಾರೈಕೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಚ್.ವಿ. ಶ್ರೀನಿಧಿ

contributor

Similar News