×
Ad

ತಡವಾಗಿ ಬರುವ ಯಣ್ಣಿವಡಗೇರಿ ಬಸ್

ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಪರದಾಟ!

Update: 2026-06-30 15:02 IST

ಹುಣಸಗಿರಿ: ತಾಲೂಕಿನ ಯಣ್ಣಿವಡಗೇರಿ ಮಾರ್ಗವಾಗಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್ ಶನಿವಾರ ನಿಗದಿತ ಸಮಯಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್‌ಗಾಗಿ ಕಾದು ಕಾದು ಪರದಾಡಿದ ಘಟನೆ ತಾಲೂಕಿನ ಗಡಿ ಭಾಗದ ನಾಲತವಾಡ ಪಟ್ಟಣದಲ್ಲಿ ಶನಿವಾರ ನಡೆದಿದೆ.

ಹುಣಸಗಿ-ಕೊಡೇಕಲ್-ನಾರಾಯಣಪುರ ಮಾರ್ಗವಾಗಿ ಯಣ್ಣಿವಡಗೇರಿ ಹಾಗೂ ಮಾರನಾಳ ಗ್ರಾಮಗಳಿಗೆ ಸಂಚರಿಸುವ ಬಸ್ ಮಧ್ಯಾಹ್ನ ಶಾಲೆ ಬಿಡುವ ವೇಳೆಗೆ ಸರಿಯಾಗಿ ಬಾರದ ಕಾರಣ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗಂಟೆಗಟ್ಟಲೆ ಬಸ್‌ಗಾಗಿ ಕಾಯಬೇಕಾಯಿತು. ಬೆಳಗ್ಗೆ ಮತ್ತು ಸಂಜೆ ಬಸ್ ಸಕಾಲಕ್ಕೆ ಬರುತ್ತಿದ್ದರೂ ಮಧ್ಯಾಹ್ನದ ಸೇವೆಯಲ್ಲಿ ನಿರಂತರ ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದರು.

ಶಾಲೆ ಮುಗಿದ ಬಳಿಕ ಮನೆಗೆ ತೆರಳಲು ಸಾಧ್ಯವಾಗದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, 1.30ಕ್ಕೆ ಬರಬೇಕಾದ ಬಸ್ ಅನಿಯಮಿತ ಸಮಯದಲ್ಲಿ ಆಗಮಿಸುತ್ತಿದೆ. ಇದರಿಂದ ಮನೆಗೆ ತೆರಳಿ ಅಭ್ಯಾಸ ಮಾಡಲು ಸಮಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಗಡಿ ಭಾಗದ ಗ್ರಾಮಗಳಿಗೆ ಸಾರಿಗೆ ಸೇವೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ವಿಶೇಷವಾಗಿ ಸೋಮವಾರದ ಸಂತೆ ದಿನಗಳಲ್ಲಿ ಒಂದೇ ಬಸ್‌ನಲ್ಲಿ ನೂರಾರು ಪ್ರಯಾಣಿಕರು ತಿಣುಕಾಡಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಗ್ರಾಮಸ್ಥರು ದೂರಿದರು. ಸಮಸ್ಯೆ ಮುಂದುವರಿದರೆ ಬಸ್ ತಡೆದು ಗ್ರಾಮದಲ್ಲೇ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದರು.

ಒಮ್ಮೊಮ್ಮೆ ಅನಿವಾರ್ಯ ಕಾರಣಗಳಿಂದ ಬಸ್ ತಡವಾಗಬಹುದು. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಮರುಕಳಿಸದಂತೆ ಸಿಬ್ಬಂದಿಯೊಂದಿಗೆ ಚರ್ಚಿಸಿ, ಬಸ್‌ಗಳನ್ನು ಸಕಾಲಕ್ಕೆ ಓಡಿಸುವ ಕ್ರಮ ಕೈಗೊಳ್ಳಲಾಗುವುದು.

-ಭೀಮಸಿಂಗ್ ರಾಠೋಡ್

ಘಟಕ ವ್ಯವಸ್ಥಾಪಕರು, ಸುರಪುರ

ಬಹಳಷ್ಟು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ. ಸುಮಾರು ಶಾಲಾ ಮಕ್ಕಳಿಗೆ ಸಕಾಲಕ್ಕೆ ಶಾಲೆಗೆ ತೆರಳಲು ಮತ್ತು ಮನೆಗೆ ಮರಳಲು ತೊಂದರೆ ಆಗುತ್ತಿದೆ. ಅರ್ಧ ದಿನ ಬಸ್ ನಿಲ್ದಾಣದಲ್ಲಿಯೇ ಕಳೆಯುವಂತಾಗಿದೆ. ಹೀಗಾಗಿ ಮಕ್ಕಳ ಅಭ್ಯಾಸಕ್ಕೆ ಹಾಗೂ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಸಕಾಲಕ್ಕೆ ಬಸ್ ಓಡಿಸಬೇಕೆಂಬುದು ನಮ್ಮ ಒತ್ತಾಯ.

-ಲಾಲಪ್ಪ ವಡಿಗೇರಿ, ಪ್ರಯಾಣಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರೀತಿ ಪಿ.ರಾಠಿ

contributor

Similar News