ಸಕಲ ಜೀವರಾಶಿಗಳೂ ಬದುಕಲು ಯೋಗ್ಯವಾಗಲಿ ಭೂಮಿ
ಇಂದು ವಿಶ್ವ ಪರಿಸರ ದಿನ
ಇಂದು ಜೂನ್ 5 ವಿಶ್ವ ಪರಿಸರ ದಿನ. ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಮುಖಾಂತರ ಜಗತಿನಾದ್ಯಂತ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಲು ಸಾಂಕೇತಿಕವಾಗಿ ಜೂನ್ 5ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 1972ರಲ್ಲಿ ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದ ನೆನಪಿನಲ್ಲಿ ಜೂನ್ 5ನ್ನು ವಿಶ್ವ ಪರಿಸರ ದಿನ ಎಂದು ಸಾಂಕೇತಿಕವಾಗಿ ಆಚರಿಸಲಾಗುತ್ತದೆ. ನಮ್ಮ ಪರಿಸರ ಕಾಳಜಿಗಳನ್ನು ಮರುವಿಮರ್ಶೆಗೆ ಒಡ್ಡಿಕೊಳ್ಳುವ ದಿನ.
ಮನುಷ್ಯನ ಆಸೆ ಆಕಾಂಕ್ಷೆಗಳಿಗೆ ಮಿತಿಯೆಂಬುದೇ ಇಲ್ಲ. ಕೈಗಾರೀಕರಣದ ಹೆಸರಲ್ಲಿ ಅಭಿವೃದ್ಧಿಯ ನೆಪದಲ್ಲಿ ಮರಗಿಡಗಳನ್ನು ಕಡಿದು, ನೆಲ, ಹೊಲ, ಜಲಗಳನ್ನು ಕಲುಷಿತಗೊಳಿಸಿ ಸಸ್ಯರಾಶಿಯನ್ನು ಬಲಿತೆಗೆದು ಕಾಡು ಕಡಿದು ಕಾಂಕ್ರೀಟ್ ನಾಡು ಮಾಡುವ ಹುನ್ನಾರದಿಂದ ನಾವು ಬದುಕುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದೇವೆ ಎಂದರೂ ತಪ್ಪಲ್ಲ. ಭೂಮಿಯ ಮೇಲೆ ಅವಿರತವಾಗಿ, ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಅಕ್ರಮ ಗಣಿಗಾರಿಕೆ, ಅವೈಜ್ಞಾನಿಕ ಮೀನುಗಾರಿಕೆ, ಇಂಧನಗಳ ಪೋಲು, ನೈಸರ್ಗಿಕ ಸಂಪನ್ಮೂಲಗಳ ಕೊಳ್ಳೆಗಾರಿಕೆ ಹೀಗೆ ಹಗಲು ರಾತ್ರಿ ಮನುಷ್ಯನ ದಬ್ಬಾಳಿಕೆ ಎಗ್ಗಿಲ್ಲದೇ ನಡೆಯುತ್ತಲೇ ಇದೆ.
ಮನುಷ್ಯ ತನ್ನ ದುರಾಸೆ ತ್ಯಜಿಸಿ, ಕ್ಷಣಿಕ ಸುಖದ ಆಸೆಗೆ ತಿಲಾಂಜಲಿ ಬಿಟ್ಟು, ತಾನು ಬದುಕುವ ನೆಲ-ಜಲಕ್ಕೆ ಗೌರವ ನೀಡಿದಲ್ಲಿ ಮಾತ್ರ ಮುಂದಿನ ಜನಾಂಗಕ್ಕೂ ಬದುಕಲು ಎಡೆಯಾಗಬಹುದು. ಇಲ್ಲವಾದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗಿ, ಭೂಮಿ ಬರಡಾಗಿ, ಉಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ ಮತ್ತು ತಿನ್ನುವ ತುತ್ತು ಅನ್ನಕ್ಕೂ ತತ್ಸಾರ ಬರುವ ದಿನಗಳು ದೂರವಿಲ್ಲ.
ಪ್ಲಾಸ್ಟಿಕಾಸುರ
ಆಧುನಿಕ ಶತಮಾನದ ಬಹುದೊಡ್ಡ ಪೆಡಂಭೂತ ಪ್ಲಾಸ್ಟಿಕಾಸುರ ಎಂದರೂ ತಪ್ಪಲ್ಲ. 1933ರಲ್ಲಿ ಇಂಗ್ಲೆಂಡ್‌ನ ಬಹುದೊಡ್ಡ ಕೈಗಾರಿಕಾ ದೈತ್ಯ ಇಂಪೀರಿಯನ್ ರಾಸಾಯನಿಕ ಕಾರ್ಖಾನೆಯ ರೇಜಿನಾಲ್ಡ್ ಗಿಬ್ಸನ್ ಮತ್ತು ಎರಿಕ್ ಸೆಟ್ ಎಂಬ ಇಬ್ಬರು ವ್ಯಕ್ತಿಗಳು ಕಂಡುಹಿಡಿದ ‘ಪಾಲಿ ಎಥಿಲೀನ್’ ಅಥವಾ ಪಾಲಿಥೀನ್ ಜೀವನ ಅವಿಭಾಜ್ಯ ಅಂಗವಾದ ‘ಪ್ಲಾಸ್ಟಿಕ್’ ಅಸುರನಾಗಿ ಬೆಳೆದು ನಿಂತಿದೆ. ಈಗಿರುವ ಸ್ಥಿತಿಯಲ್ಲಿ ನಮ್ಮ ಜೀವನದ ಹೆಚ್ಚಿನ ವಸ್ತುಗಳೆಲ್ಲಾ ಉಪಯೋಗಿಸಿ ಎಸೆಯುವಂತಹದ್ದೇ ಆಗಿದೆ. ಅಧ್ಯಯನವೊಂದರ ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ಸರಾಸರಿ ಪ್ರತಿದಿನ 12 ಕೋಟಿ ಟನ್ ಪ್ಲಾಸ್ಟಿಕ್ ಮತ್ತು ಭಾರತದಾದ್ಯಂತ 22 ಲಕ್ಷ ಟನ್ ಪ್ಲಾಸ್ಟಿಕ್ ಉಪಯೋಗಿಸಲಾಗುತ್ತಿದೆ. ಇದರರ್ಥ ಒಂದು ವರ್ಷಕ್ಕೆ ಸರಾಸರಿ 555 ಬಿಲಿಯನ್‌ನಿಂದ ಒಂದು ಟ್ರೆಲಿಯನ್ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಒಟ್ಟಿನಲ್ಲಿ ಪ್ಲಾಸ್ಟಿಕ್ ಇಲ್ಲದೆ ನಮ್ಮ ಜೀವನ ರಥ ಮುಂದೆಹೋಗುವುದೇ ಇಲ್ಲ ಎಂಬ ಹಂತಕ್ಕೆ ಬಂದು ನಿಂತಿದ್ದೇವೆ ಎಂದರೂ ತಪ್ಪಲ್ಲ. 40 ಮೈಕಾನ್‌ಗಿಂತ ಜಾಸ್ತಿ ಇರುವ ತೆಳು ಪ್ಲಾಸ್ಟಿಕ್ ಬಳಕೆ ನಮ್ಮ ದೇಶದಲ್ಲಿ ನಿಷೇಧಿಸಿದ್ದರೂ, ಎಲ್ಲೆಂದರಲ್ಲಿ ಅಂತಹ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ನಾವು ಕುಡಿಯುವ ನೀರು, ತಿನ್ನುವ ಆಹಾರ ಪ್ಯಾಕಿಂಗ್‌ನ ವರೆಗೂ ಎಲ್ಲದಕ್ಕೂ ಪ್ಲಾಸ್ಟಿಕ್ ಅನಿವಾರ್ಯ.
ಪ್ಲಾಸ್ಟಿಕ್‌ನಲ್ಲಿರುವ ‘ಡೈಯಾಕ್ಸಿನ್’ ಎಂಬ ರಾಸಾಯನಿಕ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆ ಕಾರಣವಾಗಬಹುದು. ಅಂದಾಜಿನ ಪ್ರಕಾರ ಒಂದು ಪ್ಲಾಸ್ಟಿಕ್ ಬ್ಯಾಗ್ ಕೊಳೆಯಲು ಸರಾಸರಿ ನೂರು ವರ್ಷ ಹಿಡಿಯಬಹುದು. ಹಾಗಾಗಿಯೇ ಪ್ಲಾಸ್ಟಿಕ್‌ನ ತ್ಯಾಜ್ಯ ನಿರ್ವಹಣೆ ಬಹಳ ಕಷ್ಟಸಾಧ್ಯ. ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿದಾಗ ಅದರಲ್ಲಿನ ಪ್ಲಾಸ್ಟಿನೈಸರ್ ಎಂಬ ಕೆಮಿಕಲ್ ಕರಗಿ ನಮ್ಮ ರಕ್ತನಾಳಕ್ಕೆ ಸುಲಭವಾಗಿ ಸೇರಿಕೊಳ್ಳಬಹುದು ಮತ್ತು ಕಣ್ಣು ಕುರುಡಾಗುವ ಅಪಾಯವಂತೂ ಖಂಡಿತಾ ಇದೆ. ಆ ಕಾರಣಕ್ಕೆ ಪ್ಲಾಸ್ಟಿಕನ್ನು ಆಧುನಿಕ ಶತಮಾನದ ಮಾರಿ ಮತ್ತು ಬಾಂಬ್‌ಗಳಿಗಿಂತಲೂ ಗಂಭೀರವಾದ ಪರಿಸರ ವಿರೋಧಿ ಪ್ಲಾಸ್ಟಿಕಾಸುರ ಎಂದು ಪರಿಸರವಾದಿಗಳು ಕರೆಯುತ್ತಾರೆ. ಆದರೆ ಈ ಕಳವಳ ನಮಗೆ ಅರ್ಥವಾಗುತ್ತಿಲ್ಲ.
ವಿಪರ್ಯಾಸವೆಂದರೆ ನಮ್ಮ ಪರಿಸರ ಕಾಳಜಿ ಯಾರೋ ಒಬ್ಬ ಫೇಸ್‌ಬುಕ್‌ನಲ್ಲಿ ಗಿಡನೆಟ್ಟ ಚಿತ್ರ ಬಂದಲ್ಲಿ ಲೈಕ್ ಮಾಡುವುದಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತದೆ. ನಮ್ಮ ಆಧುನಿಕ ಜೀವನ ಶೈಲಿಯ ಅವಶ್ಯಕತೆಗಳನ್ನು ಪೂರೈಸಲು ಪೂರಕವಾಗಿ ಬೆಳೆಯುತ್ತಿರುವ ಆಧುನೀಕರಣ, ವ್ಯಾಪಾರೀಕರಣ, ಕೈಗಾರಿಕೀಕರಣ, ಗಣಿಗಾರಿಕೆ ಇತ್ಯಾದಿಗಳಿಂದ ಪರಿಸರ ಮಾಲಿನ್ಯ ತಾರಕಕ್ಕೇರಿದೆ.
ಮುಕ್ತಾಯಕ್ಕೆ ಮುನ್ನ
ಮನುಷ್ಯ ಜೀವಿ ಭೂಮಂಡಲದಲ್ಲಿ ಓಡಾಡಲು ಆರಂಭಿಸಿ ಸರಿ ಸುಮಾರು 40 ಸಾವಿರ ವರ್ಷಗಳೇ ಸಂದಿವೆ. ಭೂಮಿಯಲ್ಲಿ ಜನಸಂಖ್ಯೆ 900 ಕೋಟಿ ದಾಟಿದೆ. ಇನ್ನು ಐವತ್ತು ವರ್ಷ ಕಳೆದರೆ ಭೂಮಿಯಲ್ಲಿ ನಡೆದಾಡಲು ಮನುಷ್ಯ ಪರದಾಡುವ ಪರಿಸ್ಥಿತಿ ಬಂದರೂ ವಿಶೇಷವಲ್ಲ. ಕಳೆದ ಐವತ್ತು ವರ್ಷಗಳಲ್ಲಿ ಮನುಷ್ಯ ಬೆಳವಣಿಗೆಯ ನೆಪದಲ್ಲಿ ಹೊಲ, ನೆಲ, ಜಲವನ್ನು ಭಯಾನಕವಾಗಿ ಕಲುಷಿತಗೊಳಿಸಿದ್ದಾನೆ. ನೋಡು ನೋಡುತ್ತಿದ್ದಂತೆಯೇ ನಮ್ಮ ಭೂಮಂಡಲ ಸಮಸ್ಯೆಗಳ ಆಗರವಾಗಿ ಬೆಳೆದು ನಿಂತಿದೆ. ಪರಿಸರ ಮಾಲಿನ್ಯ ತಾರಕಕ್ಕೇರಿದೆ. ಇಡೀ ಭೂ ಮಂಡಲದ ‘ಜೀವ ಸಂಕುಲ’ಗಳು ವಿನಾಶದತ್ತ ಸಾಗಿದೆ. ಕಾರ್ಖಾನೆಗಳಿಂದ ಕ್ಯಾನ್ಸರ್ ಹಬ್ಬಿಸಬಲ್ಲ ವಿಷಪೂರಿತ ರಾಸಾಯನಿಕಗಳು ದಿನ ನಿತ್ಯವು ಪರಿಸರಕ್ಕೆ ಸೇರುತ್ತಿದೆ. ವಾತಾವರಣದ ಓರೆನ್ ವಲಯ ಛಿದ್ರವಾಗುತ್ತಿದೆ. ಹುಳಿ ಮಳೆ ಸುರಿಯ ತೊಡಗಿದೆ. ಕೈಗಾರಿಕಾ ಕಾರ್ಖಾನೆಗಳಿಂದ ಬಿಡುಗಡೆಯಾಗುವ ಹಸಿರು ಅನಿಲ ಎಂದೇ ಕುಖ್ಯಾತಿ ಪಡೆದ ಇಂಗಾಲದ ಡೈ ಆಕ್ಸೈಡ್, ಮಿಥೇನ್ ಮುಂತಾದ ಅನಿಲಗಳು ನಾವು ಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸುತ್ತಿದೆ. ಮರುಭೂಮಿ ವಿಸ್ತರಿಸುತ್ತಿದೆ. ಅಂತರ್ಜಲ ಬತ್ತಿ ಕೆರೆ, ಬಾವಿಗಳು ಬರಡಾಗುತ್ತಿವೆ. ನೂರಾರು ಅಡಿ ಅಗೆದರೂ ಕೊಳವೆ ಬಾವಿಗಳಲ್ಲಿ ಹನಿ ನೀರೂ ಕೂಡ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ನದಿ, ಕೆರೆ, ಸಾಗರಗಳೂ ಮಲಿನಗೊಳ್ಳುತ್ತಿದೆ. ಕುಡಿಯುವ ಹನಿ ನೀರಿಗೂ ತತ್ವಾರ ಬಂದೊದಗಿದೆ. ಭೂಗರ್ಭದಲ್ಲಿ ಕಾವು ಏರಿ, ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹವಾಮಾನದಲ್ಲಿ ಅನೀರಿಕ್ಷಿತ ಸ್ಥಿತ್ಯಂತರಗಳೂ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ‘ಜೀವ ಸಂಕುಲಗಳ’ ಸಮತೋಲನಕ್ಕೆ ಧಕ್ಕೆ ಬಂದಿದೆ.
ಮನುಷ್ಯನ ಆಸೆಬುರುಕತನಕ್ಕೆ ಎಣೆಯೇ ಇಲ್ಲ. ತಾನು ಅಭಿವೃದ್ಧಿ ಹೊಂದುವ ಧಾವಂತದಲ್ಲಿ ತನ್ನ ಜೀವನಾಡಿಯಾದ ಭೂಮಿಯ ಒಡಲನ್ನು ಅಗೆದು, ಬಗೆದು ಬರಡುಮಾಡುತ್ತಿದ್ದಾನೆ. ಇದನ್ನು ನೋಡಿಯೇ 1940ರಲ್ಲಿ ಗಾಂಧೀಜಿಯವರು ಹೀಗೆ ಹೇಳಿದ್ದರು: ‘‘ಈ ಭೂಮಿ ಎಲ್ಲರ ಆಸೆಗಳನ್ನು ಪೂರೈಸಬಲ್ಲದು, ಆದರೆ ದುರಾಸೆಗಳನ್ನಲ್ಲ’’
ಸಂಪದ್ಭರಿತವಾದ ಈ ಭೂಮಿಯನ್ನು ಬರಡಾಗಿಸುವ ಹಕ್ಕು ಯಾರಿಗೊಬ್ಬರಿಗೂ ಇಲ್ಲ. ವಿಶ್ವಪರಿಸರ ದಿನಾಚರಣೆ ಅರ್ಥಪೂರ್ಣವಾಗಬೇಕಾದರೆ ಸರಕಾರದ ಜೊತೆಗೆ ಸರಕಾರೇತರ ಸಂಘಸಂಸ್ಥೆಗಳ ಮುಖಾಂತರ ಪರಿಸರ ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು, ಪರಿಸರ ವಿಚಾರವಾದಿಗಳು ಮತ್ತು ಜನಸಾಮಾನ್ಯರಲ್ಲೂ ನಿಜವಾದ ಬದಲಾವಣೆ ಉಂಟಾಗಬೇಕಾಗಿದೆ. ಇಲ್ಲವಾದಲ್ಲಿ ಈ ವಿಶ್ವ ಪರಿಸರ ದಿನವು ಮತ್ತೊಂದು ಘೋಷಣಾ ದಿನವಾಗಿ ಮಾತ್ರ ಉಳಿಯಬಹುದು.