×
Ad

ಸಂವಿಧಾನದ ಸಮಾನತೆಯ ಕನಸು ಮತ್ತು ಯುವಜನರ ಬದುಕಿನ ಕಠಿಣ ವಾಸ್ತವ

Update: 2026-06-05 11:50 IST

ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಭಾರತದ ಮಾನವ ಅಭಿವೃದ್ಧಿ ಸಂಸ್ಥೆ 2024ರಲ್ಲಿ ಪ್ರಕಟಿಸಿದ India Employment Report ಪ್ರಕಾರ, ಭಾರತದ ಒಟ್ಟು ನಿರುದ್ಯೋಗಿಗಳಲ್ಲಿ ಸುಮಾರು 83 ಪ್ರತಿಶತ ಯುವಜನರೇ ಆಗಿದ್ದಾರೆ. ಇದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ, ನಿರುದ್ಯೋಗಿಗಳಲ್ಲಿ ಗಣನೀಯ ಸಂಖ್ಯೆಯವರು ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಶಿಕ್ಷಣವು ಉದ್ಯೋಗಕ್ಕೆ ದಾರಿ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಈ ಅಂಕಿಅಂಶಗಳು ಪ್ರಶ್ನಿಸುತ್ತವೆ.

ಭಾರತವು ಇಂದು ವಿಶ್ವದ ಅತಿ ಹೆಚ್ಚು ಯುವಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. 65 ಪ್ರತಿಶತಕ್ಕಿಂತ ಹೆಚ್ಚು ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಜನಸಂಖ್ಯೆಯನ್ನು ದೇಶದ ಜನಸಾಂಖ್ಯಿಕ ಲಾಭಾಂಶ (Demographic Dividend) ಎಂದು ಕರೆಯಲಾಗುತ್ತದೆ. ಆದರೆ ಇದೇ ಯುವಜನಸಂಖ್ಯೆಯು ಇಂದು ನಿರುದ್ಯೋಗ, ಅರೆ-ಉದ್ಯೋಗ ಮತ್ತು ಅಸ್ಥಿರ ಉದ್ಯೋಗದ ಬಲೆಗೆ ಸಿಲುಕಿರುವುದು ಒಂದು ಗಂಭೀರ ಸಾಮಾಜಿಕ ಪ್ರಶ್ನೆಯಾಗಿ ಪರಿಣಮಿಸಿದೆ. ಹಾಗಾಗಿಯೇ ಕ್ರಾಂತಿಗಳ ಸಂದರ್ಭಗಳು ಇಲ್ಲವೇನೋ ಎನ್ನುವ ಸಮಕಾಲೀನ ಪರಿಸ್ಥಿತಿಯಲ್ಲಿಯೂ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಆಂದೋಲನದ ಎಳೆ ಕಾಣಿಸಿಕೊಂಡಿದೆ. ಭಾರತದ ಯುವಜನರ ಜೀವನವನ್ನು ಗಮನಿಸಿದರೆ, ನಿರುದ್ಯೋಗವು ಕೇವಲ ಆರ್ಥಿಕ ಸಮಸ್ಯೆಯಾಗಿರದೆ, ಅದು ವ್ಯಕ್ತಿಯ ಸಾಮಾಜಿಕ ಸ್ಥಾನಮಾನ, ಅವಕಾಶಗಳು ಮತ್ತು ಭವಿಷ್ಯವನ್ನು ನಿರ್ಧರಿಸುವ ಒಂದು ಹೊಸ ರೀತಿಯ ಸಾಮಾಜಿಕ ವರ್ಗೀಕರಣ ವ್ಯವಸ್ಥೆಯಾಗಿ ಬೆಳೆಯುತ್ತಿರುವಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ನಿರುದ್ಯೋಗವು ಭಾರತದ ಹೊಸ ಜಾತಿ ವ್ಯವಸ್ಥೆಯೇ? ಎಂಬ ಪ್ರಶ್ನೆ ಮಹತ್ವ ಪಡೆದುಕೊಳ್ಳುತ್ತದೆ.

‘‘ಜಾತಿ ಎನ್ನುವುದು ಶ್ರಮದ ಹಂಚಿಕೆಯಲ್ಲ, ಶ್ರಮಿಕರ ಹಂಚಿಕೆ’’ ಎಂದು ಅಂಬೇಡ್ಕರ್ ಹೇಳಿದ್ದರು. ನೂರು ವರ್ಷಗಳ ಹಿಂದೆ ಅವರು ಹೇಳಿದ ಈ ಮಾತು ಇಂದಿನ ಭಾರತದಲ್ಲಿ ಹೊಸ ಅರ್ಥ ಪಡೆಯುತ್ತಿದೆ. ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಟ್ಟಿದೆ. ಶಾಲೆ, ಕಾಲೇಜು, ಉದ್ಯೋಗ, ವ್ಯಾಪಾರ, ರಾಜಕಾರಣ, ಮಾಧ್ಯಮ ಎಲ್ಲವೂ ಎಲ್ಲರಿಗೂ ತೆರೆದಿವೆ ಎಂದು ನಾವು ಹೇಳುತ್ತೇವೆ. ಆದರೆ ನಿಜವಾದ ಬದುಕಿನ ಈ ನೆಲದ ಚಿತ್ರ ಬೇರೆಯದೇ ಕಥೆ ಹೇಳುತ್ತದೆ. ಅವಕಾಶಗಳ ಬಾಗಿಲು ಎಲ್ಲರಿಗೂ ಒಂದೇ ರೀತಿ ತೆರೆದಿಲ್ಲ. ಕೆಲವರಿಗೆ ಬಾಗಿಲು ತೆರೆದಿರುವುದಷ್ಟೇ ಅಲ್ಲ, ಒಳಗೆ ಕರೆದುಕೊಂಡು ಹೋಗುವ ಕೈಗಳೂ ಇವೆ. ಇನ್ನು ಕೆಲವರು ಬಾಗಿಲ ಮುಂದೆ ವರ್ಷಗಟ್ಟಲೆ ಅವಕಾಶಗಳಿಗಾಗಿ ಕಾಯಬೇಕಾಗುತ್ತದೆ.

ಈ ಕಾರಣಕ್ಕಾಗಿಯೇ ಇಂದಿನ ಭಾರತದ ನಿರುದ್ಯೋಗವನ್ನು ಕೇವಲ ಕೆಲಸದ ಕೊರತೆಯಾಗಿ ನೋಡಲು ಸಾಧ್ಯವಿಲ್ಲ. ಅದು ಅವಕಾಶಗಳ ಹಂಚಿಕೆಯ ಪ್ರಶ್ನೆಯಾಗಿದೆ. ಆ ಹಂಚಿಕೆಯ ಹಿಂದೆ ಜಾತಿ, ವರ್ಗ, ಪರಿಚಯ, ಕುಟುಂಬದ ಹಿನ್ನೆಲೆ, ಆಸ್ತಿ ಮತ್ತು ಸಂಪರ್ಕಗಳು ಕೆಲಸ ಮಾಡುತ್ತಿವೆ. ಈ ಕಾರಣದಿಂದಲೇ ನಿರುದ್ಯೋಗವು ಇಂದಿನ ಭಾರತದ ಹೊಸ ಜಾತಿ ವ್ಯವಸ್ಥೆಯಂತೆ ಕಾಣತೊಡಗಿದೆ.

ಅಂಬೇಡ್ಕರ್ ತಮ್ಮ ‘Castes in India’ ಪ್ರಬಂಧದಲ್ಲಿ ಜಾತಿಯನ್ನು ಮುಚ್ಚಿದ ವರ್ಗ ಎಂದು ಕರೆದಿದ್ದರು. ಅಂದರೆ ಒಂದು ಗುಂಪು ತನ್ನೊಳಗಿನ ಅವಕಾಶಗಳನ್ನು ತನ್ನೊಳಗೇ ಉಳಿಸಿಕೊಳ್ಳುವುದು. ಇಂದಿನ ಭಾರತದಲ್ಲಿ ಇದೇ ಗುಣ ಹೊಸ ರೂಪದಲ್ಲಿ ಕಾಣಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗಿದೆ. ದೊಡ್ಡ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ವ್ಯಾಪಾರಿ ಮನೆತನಗಳು, ಕೈಗಾರಿಕೆಗಳು, ಮಾಧ್ಯಮ ಸಂಸ್ಥೆಗಳು, ಆಸ್ಪತ್ರೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ತಂತ್ರಾಂಶ ಕಂಪೆನಿಗಳಲ್ಲಿ ಯಾರು ಮೇಲಿನ ಹುದ್ದೆಗಳಲ್ಲಿ ಇದ್ದಾರೆ ಎಂಬುದನ್ನು ಗಮನಿಸಿದರೆ ಒಂದು ಮಾದರಿ ಸ್ಪಷ್ಟವಾಗಿ ಕಾಣಿಸುತ್ತದೆ. ದೇಶದ ಜನಸಂಖ್ಯೆಯಲ್ಲಿರುವ ಎಲ್ಲ ಸಮುದಾಯಗಳಿಗೂ ಸಮಾನ ಪಾಲು ಅಲ್ಲಿ ಕಾಣಿಸುವುದಿಲ್ಲ.

ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಭಾರತದ ಮಾನವ ಅಭಿವೃದ್ಧಿ ಸಂಸ್ಥೆ 2024ರಲ್ಲಿ ಪ್ರಕಟಿಸಿದ India Employment Report ಪ್ರಕಾರ, ಭಾರತದ ಒಟ್ಟು ನಿರುದ್ಯೋಗಿಗಳಲ್ಲಿ ಸುಮಾರು 83 ಪ್ರತಿಶತ ಯುವಜನರೇ ಆಗಿದ್ದಾರೆ. ಇದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ, ನಿರುದ್ಯೋಗಿಗಳಲ್ಲಿ ಗಣನೀಯ ಸಂಖ್ಯೆಯವರು ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಶಿಕ್ಷಣವು ಉದ್ಯೋಗಕ್ಕೆ ದಾರಿ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಈ ಅಂಕಿಅಂಶಗಳು ಪ್ರಶ್ನಿಸುತ್ತವೆ.

ಸಮಾಜಶಾಸ್ತ್ರಜ್ಞ ಕಾರ್ಲ್ ಮಾರ್ಕ್ಸ್ ಅವರು ಉತ್ಪಾದನಾ ಸಾಧನಗಳ ಮೇಲಿನ ನಿಯಂತ್ರಣವೇ ಸಮಾಜದ ವರ್ಗಗಳನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದರು. ಇಂದಿನ ಭಾರತದಲ್ಲಿ ಉದ್ಯೋಗಾವಕಾಶಗಳ ಮೇಲಿನ ನಿಯಂತ್ರಣವೂ ಒಂದು ರೀತಿಯ ಸಾಮಾಜಿಕ ಶಕ್ತಿಯಾಗಿ ಪರಿಣಮಿಸಿದೆ. ಉದ್ಯೋಗವಿಲ್ಲದ ಯುವಕರು ಕುಟುಂಬದ ಮೇಲೆ ಅವಲಂಬಿತರಾಗುತ್ತಾರೆ. ಅವರ ಸಾಮಾಜಿಕ ಚಲನೆ ಕುಂಠಿತವಾಗುತ್ತದೆ. ವಿವಾಹ, ಕುಟುಂಬ ಸ್ಥಾಪನೆ, ಸ್ವತಂತ್ರ ಜೀವನ ಮುಂತಾದವುಗಳು ಮುಂದೂಡಲ್ಪಡುತ್ತವೆ. ಇದರಿಂದ ನಿರುದ್ಯೋಗವು ಕೇವಲ ಆದಾಯದ ಕೊರತೆಯಲ್ಲ; ಅದು ವ್ಯಕ್ತಿಯ ಸಾಮಾಜಿಕ ಅಸ್ತಿತ್ವವನ್ನೇ ನಿರ್ಧರಿಸುವ ಅಂಶವಾಗುತ್ತದೆ.

×
Ad

ಇತ್ತೀಚಿನ ವರ್ಷಗಳಲ್ಲಿ ಗಿಗ್ ಇಕಾನಮಿ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಸ್ವಿಗ್ಗಿ, ಜೊಮ್ಯಾಟೊ, ಉಬರ್, ಓಲಾ, ಅಮೆಝಾನ್ ಮುಂತಾದ ಡಿಜಿಟಲ್ ವೇದಿಕೆಗಳ ಮೂಲಕ ಲಕ್ಷಾಂತರ ಯುವಕರು ಉದ್ಯೋಗ ಪಡೆದಿದ್ದಾರೆ. ಮೇಲ್ನೋಟಕ್ಕೆ ಇದು ಉದ್ಯೋಗ ಸೃಷ್ಟಿಯ ಪವಾಡದಂತೆ ಕಾಣಬಹುದು. ಆದರೆ ಈ ಉದ್ಯೋಗಗಳ ಸ್ವರೂಪವನ್ನು ಪರಿಶೀಲಿಸಿದರೆ, ಅವುಗಳಲ್ಲಿ ಶಾಶ್ವತತೆ, ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕ ಹಕ್ಕುಗಳ ಕೊರತೆ ಸ್ಪಷ್ಟವಾಗುತ್ತದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಮತ್ತು ವಿವಿಧ ಕಾರ್ಮಿಕ ಅಧ್ಯಯನಗಳು ಸೂಚಿಸುವಂತೆ, ಗಿಗ್ ಕಾರ್ಮಿಕರು ಸಾಮಾನ್ಯವಾಗಿ ಆರೋಗ್ಯ ವಿಮೆ, ನಿವೃತ್ತಿ ವೇತನ, ಪಾವತಿಸಿದ ರಜೆ ಅಥವಾ ಉದ್ಯೋಗ ಭದ್ರತೆಯಿಂದ ವಂಚಿತರಾಗಿರುತ್ತಾರೆ. ಅವರ ಆದಾಯವೂ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತದೆ. ಡಿಜಿಟಲ್ ತಂತ್ರಜ್ಞಾನವು ಸ್ವಾತಂತ್ರ್ಯದ ಭರವಸೆ ನೀಡಿದರೂ, ಅನೇಕ ಸಂದರ್ಭಗಳಲ್ಲಿ ಅದು ಅಸ್ಥಿರ ಕಾರ್ಮಿಕತೆಯ ಹೊಸ ರೂಪವನ್ನು ಸೃಷ್ಟಿಸಿದೆ. ಇದರ ಜೊತೆ ಮಹಿಳೆಯರಿಗೆ ಇಲ್ಲಿ ಹೆಚ್ಚು ಅವಕಾಶ ಇಲ್ಲದಂತಾಗಿರುವುದು ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಲಿಂಗ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ.

ಸಮಾಜಶಾಸ್ತ್ರಜ್ಞ ಗೈ ಸ್ಟ್ಯಾಂಡಿಂಗ್ ಅವರು ಈ ಹೊಸ ವರ್ಗವನ್ನು ‘ಪ್ರೆಕಾರಿಯಟ್’ (Precariat) ಎಂದು ಕರೆಯುತ್ತಾರೆ. ಅಂದರೆ ಶಾಶ್ವತ ಭದ್ರತೆಯಿಲ್ಲದ, ನಿರಂತರ ಅನಿಶ್ಚಿತತೆಯಲ್ಲಿ ಬದುಕುವ ಕಾರ್ಮಿಕ ವರ್ಗ. ಭಾರತದ ಲಕ್ಷಾಂತರ ಯುವಕರು ಇಂದು ಇದೇ ವರ್ಗಕ್ಕೆ ಸೇರುತ್ತಿದ್ದಾರೆ. ಅವರು ಉದ್ಯೋಗ ಹೊಂದಿದ್ದರೂ, ಭವಿಷ್ಯದ ಬಗ್ಗೆ ಖಚಿತತೆ ಹೊಂದಿಲ್ಲ. ಇದು ಸಾಂಪ್ರದಾಯಿಕ ಜಾತಿ ವ್ಯವಸ್ಥೆಯಲ್ಲಿದ್ದ ಅಸಮಾನತೆಯ ಹೊಸ ರೂಪವಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ಇದರ ಜೊತೆಗೆ ಇತ್ತೀಚೆಗೆ ಲಕ್ಷಾಂತರ ಯುವಕರು ತಂತ್ರಾಂಶ ಕ್ಷೇತ್ರ, ಖಾಸಗಿ ಶಿಕ್ಷಣ, ಆರೋಗ್ಯ ಸೇವೆಯ ಕೆಲಸಗಳ ಕಡೆ ಮುಖ ಮಾಡಿದ್ದಾರೆ. ಆದರೆ ಈ ಕ್ಷೇತ್ರಗಳಲ್ಲಿ ಮೀಸಲಾತಿ ಇಲ್ಲ. ಸಾಮಾಜಿಕ ಪ್ರತಿನಿಧಿತ್ವದ ಬಗ್ಗೆ ಯಾವುದೇ ಕಟ್ಟುನಿಟ್ಟಿನ ನಿಯಮಗಳೂ ಇಲ್ಲ. ಪರಿಣಾಮವಾಗಿ ಈಗಾಗಲೇ ಸಾಮಾಜಿಕ ಬಲ ಹೊಂದಿರುವ ಸಮುದಾಯಗಳು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತವೆ. ಉಳಿದವರು ಗುತ್ತಿಗೆ ಕೆಲಸ, ತಾತ್ಕಾಲಿಕ ಕೆಲಸ ಅಥವಾ ಕಡಿಮೆ ಸಂಬಳದ ಕೆಲಸಗಳಿಗೆ ತಳ್ಳಲ್ಪಡುತ್ತಾರೆ.

ಉದ್ಯೋಗ ಮಾರುಕಟ್ಟೆಯಲ್ಲಿ ಅದರಲ್ಲೂ ಖಾಸಗಿ ವಲಯದಲ್ಲಿ ಜಾತಿ ಎನ್ನುವುದು ಬಹುದೊಡ್ಡ ಪಾತ್ರ ವಹಿಸುತ್ತದೆ ಎಂಬುದು ಇಂದು ಯಾರಿಗೂ ತಿಳಿಯದ ವಿಷಯವೇನಲ್ಲ. ಈ ವಿಷಯದಲ್ಲಿ ಸುಖದೇವ್ ಥೋರಾಟ್ ಮತ್ತು ಕ್ಯಾಥರಿನ್ ನ್ಯೂಮನ್ ಅವರು ನಡೆಸಿದ ಅಧ್ಯಯನವು ಒಂದು ಮಹತ್ವದ ಸಂಗತಿಯನ್ನು ತೋರಿಸಿದೆ. ಇಲ್ಲಿ ಒಂದೇ ಅರ್ಹತೆ ಇರುವ ಇಬ್ಬರು ಅಭ್ಯರ್ಥಿಗಳಲ್ಲಿ, ಮೇಲ್ಜಾತಿಯ ಹೆಸರಿರುವ ಅಭ್ಯರ್ಥಿಗೆ ಸಂದರ್ಶನದ ಕರೆ ಬರುವ ಸಾಧ್ಯತೆ ಹೆಚ್ಚು ಇದೆ ಎಂಬುದನ್ನು ಇದು ಸಾಬೀತುಪಡಿಸಿದೆ. ಇದರ ಪ್ರಕಾರ ದಲಿತ ಅಥವಾ ಮುಸ್ಲಿಮ್ ಹೆಸರು ಇರುವ ಅಭ್ಯರ್ಥಿಗಳಿಗೆ ಕಡಿಮೆ ಅವಕಾಶ ದೊರೆಯುತ್ತಿತ್ತು. ಇದು ನಿರುದ್ಯೋಗವು ಕೇವಲ ಕೌಶಲದ ಸಮಸ್ಯೆಯಲ್ಲ ಎಂಬುದನ್ನು ತೋರಿಸುತ್ತದೆ. ಕೆಲವೊಮ್ಮೆ ಅದು ಸಾಮಾಜಿಕ ಗುರುತಿನ ಪ್ರಶ್ನೆಯೂ ಆಗಿರುತ್ತದೆ.

ಭಾರತದಲ್ಲಿ ಉದ್ಯೋಗದ ದೊಡ್ಡ ಭಾಗ ಇನ್ನೂ ಪರಿಚಯಗಳ ಮೂಲಕ ಹಂಚಿಕೆಯಾಗುತ್ತದೆ. ಖಾಲಿ ಹುದ್ದೆಗಳು ಪ್ರಕಟವಾಗುವುದಕ್ಕೂ ಮುನ್ನವೇ ಯಾರಿಗೆ ಕೊಡಬೇಕು ಎಂಬ ನಿರ್ಧಾರ ಆಗಿರುತ್ತದೆ ಎಂಬ ದೂರುಗಳನ್ನು ಅನೇಕ ಯುವಕ-ಯುವತಿಯರು ಹೇಳುತ್ತಾರೆ. ಇದು ಎಲ್ಲೆಡೆ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ನಡೆಯುವುದೇ ಇಲ್ಲ ಎಂದು ಹೇಳುವುದೂ ಕಷ್ಟ. ಸ್ನೇಹಿತರು, ಬಂಧುಗಳು, ಜಾತಿ ಸಂಘಗಳು, ಹಳೆಯ ವಿದ್ಯಾರ್ಥಿಗಳ ಬಳಗಗಳು, ವ್ಯಾಪಾರ ಜಾಲಗಳು ಮತ್ತು ಧಾರ್ಮಿಕ ಸಂಪರ್ಕಗಳು ಅನೇಕ ಕಡೆ ಉದ್ಯೋಗದ ದಾರಿಗಳಾಗಿವೆ. ಈ ಜಾಲಗಳ ಹೊರಗಿರುವ ಅನೇಕರಿಗೆ ಬಾಗಿಲು ಮುಚ್ಚಿದಂತಾಗುತ್ತದೆ.

ಇದು ಕೇವಲ ಉದ್ಯೋಗದ ವಿಷಯವಲ್ಲ. ಕೌಶಲ ತರಬೇತಿ, ಇಂಟರ್ನ್‌ಶಿಪ್, ಮಾರ್ಗದರ್ಶನ, ಬಂಡವಾಳ, ಉದ್ಯಮ ಆರಂಭಿಸಲು ನೆರವು ಇವೆಲ್ಲವೂ ಅವಕಾಶಗಳ ಸರಪಳಿಯ ಭಾಗಗಳು. ನಗರದಲ್ಲಿ ಹುಟ್ಟಿದ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ, ಪ್ರಭಾವಿ ಕುಟುಂಬದ ಯುವಜನರಿಗೆ ದೊರೆಯುವ ಅವಕಾಶಗಳು ಮತ್ತು ಹಳ್ಳಿಯ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಯುವಜನರಿಗೆ ದೊರೆಯುವ ಅವಕಾಶಗಳು ಒಂದೇ ಆಗಿರುವುದಿಲ್ಲ. ಸ್ಪರ್ಧೆ ಆರಂಭವಾಗುವ ಮುನ್ನವೇ ಅಂತರ ನಿರ್ಮಾಣವಾಗಿರುತ್ತದೆ. ಪ್ರಬಲ ಜಾತಿಗಳ ಹಿಡಿತದಲ್ಲಿರುವ ಕೆಲವು ಧಾರ್ಮಿಕ ಸಂಸ್ಥೆಗಳು, ಉದ್ಯಮ ಇತ್ಯಾದಿಗಳಲ್ಲಿ ಆಯಾ ಜಾತಿ ಉಪಜಾತಿಗಳ ಅಭ್ಯರ್ಥಿಗಳ ಆಯ್ಕೆ ಸರಾಗವಾಗಿ ಆಗುತ್ತದೆ ಎನ್ನುವ ಯುವ ಪದವೀಧರರ ಆರೋಪವನ್ನು ಇಲ್ಲಿ ಸಾರಾಸಗಟಾಗಿ ತಳ್ಳಿಹಾಕಲಾಗದು.

ಇದನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವಾಗ ಅಂಬೇಡ್ಕರ್ ಜಾತಿ ವ್ಯವಸ್ಥೆಯ ದೊಡ್ಡ ಅಪಾಯವನ್ನು ಅವಕಾಶಗಳ ಏಕಸ್ವಾಮ್ಯ ಎಂದು ಗುರುತಿಸಿದ್ದರು ಎಂಬುದನ್ನು ಗಮನಿಸಬೇಕಾಗುತ್ತದೆ. ಕೆಲವರು ಮಾತ್ರ ಅಧಿಕಾರ, ಶಿಕ್ಷಣ ಮತ್ತು ಸಂಪತ್ತಿನ ಮೇಲೆ ಹಿಡಿತ ಸಾಧಿಸಿದಾಗ ಸಮಾಜದ ಉಳಿದ ಭಾಗ ಹಿಂದುಳಿಯುತ್ತದೆ. ಇಂದಿನ ಭಾರತದಲ್ಲಿಯೂ ಇದೇ ಅಪಾಯ ಕಾಣಿಸುತ್ತಿದೆ. ನಿರುದ್ಯೋಗ ಮತ್ತು ಅದರ ದುಷ್ಪರಿಣಾಮ ಎಲ್ಲರಿಗೂ ಸಮಾನವಾಗಿ ತಟ್ಟುವುದಿಲ್ಲ. ಅದು ಈಗಾಗಲೇ ಅಂಚಿಗೆ ತಳ್ಳಲ್ಪಟ್ಟವರನ್ನು ಇನ್ನಷ್ಟು ಅಂಚಿಗೆ ತಳ್ಳುತ್ತದೆ ಎಂಬುದು ಮಾತ್ರ ಖಾತರಿಯಾಗಿರುವಂತಹದ್ದು. ಆದ್ದರಿಂದ ನಿರುದ್ಯೋಗವನ್ನು ಕೇವಲ ಆರ್ಥಿಕ ಅಂಕಿ-ಅಂಶವಾಗಿ ನೋಡುವುದು ತಪ್ಪು. ಅದು ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿದೆ. ಪ್ರತಿಭೆ ಇದ್ದರೂ ಅವಕಾಶ ಸಿಗದಿರುವುದು, ಅರ್ಹತೆ ಇದ್ದರೂ ಕೆಲಸ ಸಿಗದಿರುವುದು, ವಿದ್ಯಾಭ್ಯಾಸ ಇದ್ದರೂ ಬಾಗಿಲು ತೆರೆದುಕೊಳ್ಳದಿರುವುದು ಇವೆಲ್ಲವೂ ಸೇರಿ ಒಂದು ಹೊಸ ಸಾಮಾಜಿಕ ಗೋಡೆಯನ್ನು ಕಟ್ಟುತ್ತಿವೆ. ಆ ಗೋಡೆಗೆ ಇಂದು ಜಾತಿ ಎಂಬ ಹೆಸರಿಲ್ಲದಿರಬಹುದು. ಆದರೆ ಅದರ ಕೆಲಸ ಮಾತ್ರ ಹಳೆಯ ಜಾತಿ ವ್ಯವಸ್ಥೆಯ ಕೆಲಸವನ್ನೇ ನೆನಪಿಸುತ್ತದೆ. ಈ ಕಾರಣಕ್ಕಾಗಿಯೇ ಇಂದಿನ ಭಾರತದ ನಿರುದ್ಯೋಗವನ್ನು ಹೊಸ ಜಾತಿ ವ್ಯವಸ್ಥೆ ಎಂದು ಕರೆಯುವುದು ಕೇವಲ ಮಾತಿಗಾಗಿ ಮಾತ್ರ ಅಲ್ಲ, ಅದು ನಮ್ಮ ಸಮಾಜದ ಒಳಹೊಕ್ಕು ನೋಡಬೇಕಾದ ಕಹಿ ಸತ್ಯದ ಸೂಚನೆಯಾಗಿದೆ.

ನಿರುದ್ಯೋಗದ ಸಮಸ್ಯೆಯನ್ನು ಕೇವಲ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಅವಕಾಶಗಳ ಹಂಚಿಕೆಯಲ್ಲಿರುವ ಅಸಮಾನತೆಯನ್ನೂ ಎದುರಿಸಬೇಕಾಗಿದೆ. ಮೊದಲನೆಯದಾಗಿ, ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳ ನೇಮಕಾತಿ ಕ್ರಮಗಳು ಹೆಚ್ಚು ಪಾರದರ್ಶಕವಾಗಬೇಕು. ಉದ್ಯೋಗಗಳ ಪ್ರಕಟಣೆ, ಆಯ್ಕೆ ಪ್ರಕ್ರಿಯೆ ಮತ್ತು ನೇಮಕಾತಿಯ ವಿವರಗಳು ಸಾರ್ವಜನಿಕ ಪರಿಶೀಲನೆಗೆ ತೆರೆದಿರಬೇಕು. ಎರಡನೆಯದಾಗಿ, ಖಾಸಗಿ ವಲಯದಲ್ಲಿಯೂ ಸಾಮಾಜಿಕ ಪ್ರತಿನಿಧಿತ್ವದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಬೇಕು. ದೇಶದ ಜನಸಂಖ್ಯೆಯಲ್ಲಿ ಮಹಿಳೆಯರೂ ಸೇರಿದಂತೆ ಇರುವ ಎಲ್ಲ ಸಮುದಾಯಗಳಿಗೂ ಅವಕಾಶಗಳು ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆಗಳು ರೂಪುಗೊಳ್ಳಬೇಕು.

ಮೂರನೆಯದಾಗಿ, ಕೌಶಲ ತರಬೇತಿ, ಮಾರ್ಗದರ್ಶನ, ಇಂಟರ್ನ್ ಶಿಪ್ ಮತ್ತು ಉದ್ಯಮ ಆರಂಭಿಸುವ ನೆರವು ನಗರಗಳಲ್ಲಷ್ಟೇ ಅಲ್ಲ, ಗ್ರಾಮೀಣ ಮತ್ತು ಅಂಚಿನ ಸಮುದಾಯಗಳ ಯುವಜನರಿಗೂ ತಲುಪಬೇಕು. ಅವಕಾಶಗಳ ಅಂತರವನ್ನು ಕಡಿಮೆ ಮಾಡದಿದ್ದರೆ ಸ್ಪರ್ಧೆಯು ನ್ಯಾಯಯುತವಾಗುವುದಿಲ್ಲ.

ನಾಲ್ಕನೆಯದಾಗಿ, ಗಿಗ್ ಮತ್ತು ತಾತ್ಕಾಲಿಕ ಕೆಲಸಗಳಲ್ಲಿ ತೊಡಗಿರುವ ಲಕ್ಷಾಂತರ ಯುವಜನರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಆರೋಗ್ಯ ವಿಮೆ, ನಿವೃತ್ತಿ ನೆರವು ಮತ್ತು ಕನಿಷ್ಠ ಆದಾಯದ ಭರವಸೆ ಇಂತಹ ಕಾರ್ಮಿಕರ ಬದುಕನ್ನು ಸ್ಥಿರಗೊಳಿಸಬಹುದು. ಕೊನೆಯದಾಗಿ, ಸಮಾಜವು ಪ್ರತಿಭೆಯನ್ನು ಗುರುತಿಸುವ ಹೊಸ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಜಾತಿ, ಪರಿಚಯ, ಕುಟುಂಬದ ಹಿನ್ನೆಲೆ ಅಥವಾ ಸಂಪರ್ಕಗಳ ಬದಲು ಅರ್ಹತೆ ಮತ್ತು ಸಾಮರ್ಥ್ಯವೇ ಅವಕಾಶಗಳ ಅಳತೆಗೋಲಾಗಬೇಕು. ಇಲ್ಲವಾದರೆ ನಾವು ಜಾತಿ ವ್ಯವಸ್ಥೆಯನ್ನು ಕಾನೂನಿನಿಂದ ರದ್ದುಪಡಿಸಿದರೂ, ಅದರ ಆತ್ಮವನ್ನು ಹೊಸ ರೂಪಗಳಲ್ಲಿ ಉಳಿಸಿಕೊಂಡಂತಾಗುತ್ತದೆ.

ಭಾರತದ ಭವಿಷ್ಯವು ಅದರ ಯುವಜನರ ಭವಿಷ್ಯದೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ನಿರುದ್ಯೋಗದ ಪ್ರಶ್ನೆಯನ್ನು ಕೇವಲ ಆರ್ಥಿಕ ಪ್ರಶ್ನೆಯಾಗಿ ಅಲ್ಲ, ಸಮಾನ ಅವಕಾಶಗಳು ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿ ನೋಡಬೇಕಾದ ಕಾಲ ಇದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರಸನ್ನಕುಮಾರ್ ಕೆರಗೋಡು

contributor

Similar News