×
Ad

ಸಚಿವ ಸಂಪುಟದಲ್ಲಿ ರಾಯಚೂರಿಗಿಲ್ಲ ಪ್ರಾಶಸ್ತ್ಯ?

Update: 2026-06-04 07:30 IST

ರಾಯಚೂರು : ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂಪುಟದಲ್ಲಿ 14 ಜನ ಸಚಿವರಾಗಿದ್ದು, ಆದರೆ ಜಿಲ್ಲೆಯ ಹಾಲಿ ಸಚಿವ ಎನ್.ಎಸ್.ಬೋಸರಾಜು ಅಥವಾ 5 ಬಾರಿ ಶಾಸಕರಾದ ಸಿಂಧನೂರಿನ ಹಂಪನಗೌಡ ಬಾದರ್ಲಿ ಸೇರಿ ಯಾರೊಬ್ಬರಿಗೂ ಮೊದಲ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದಕ್ಕೆ ಜಿಲ್ಲೆಯ ಜನತೆಗೆ ನಿರಾಸೆಯಾಗಿದೆ.

ಜಿಲ್ಲೆಯಲ್ಲಿನ ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಕೊರತೆ, ಬಣ ಬಡಿದಾಟ, ರಾಜಕೀಯ ಮೇಲಾಟದಿಂದ ಸಚಿವ ಸ್ಥಾನ ಕೈತಪ್ಪಿದೆ ಎನ್ನಲಾಗಿದ್ದು, ಎರಡನೇ ಪಟ್ಟಿಯಲ್ಲಿ ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಕಗ್ಗಂಟ್ಟಾಗಿ ಉಳಿದಿದೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಸ್ಥಾನ ಪಡೆದಿರುವ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ಪಡೆದುಕೊಳ್ಳುವಲ್ಲಿ ಸ್ವಪಕ್ಷೀಯ ಭಿನ್ನಮತವೇ ಹೆಚ್ಚಾಗಿ ಈ ಬಾರಿ ಸಚಿವ ಸ್ಥಾನ ಕೈತಪ್ಪಲಿದೆಯಾ ಎಂಬ ಅನುಮಾನ ಕಾಡುತ್ತಿದೆ ಎನ್ನುತ್ತಿದ್ದಾರೆ ಜನತೆ.

ಸೇವಾ ಹಿರಿತನ, ಜಾತಿ ಲೆಕ್ಕಚಾರದಲ್ಲಿಯಾದರೂ ಜಿಲ್ಲೆಯ ಒಬ್ಬರಿಗಾದರೂ ಸಚಿವ ಸ್ಥಾನ ಸಿಗಬೇಕು ಎನ್ನುವ ನಿರೀಕ್ಷೆಯನ್ನು ಕಾಂಗ್ರೆಸ್ ಹೈಕಮಾಂಡ್ ಈಡೇರಿಸಿಲ್ಲ. ಸಚಿವರಾಗಿದ್ದ ಎನ್.ಎಸ್.ಭೋಸರಾಜ ವಿಧಾನ ಪರಿಷತ್ ಸದಸ್ಯರಾಗಿದ್ದವರು. ಆದರೆ ಈಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡಿದ್ದು, ಹಿರಿಯ ಕಾಂಗ್ರೆಸ್ಸಿಗ ಬಿ.ಕೆ. ಹರಿಪ್ರಸಾದ್ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಮಹ್ಮದ್ ಸಲೀಂ ಹೆಸರು ಮುಂಚೂಣಿಯಲ್ಲಿರುವ ಪರಿಣಾಮ ಸಚಿವ ಸ್ಥಾನ ದೊರಕುವ ಸಂಶಯಗಳು ಮೂಡಿವೆ. ಈಗಾಗಲೇ ಪಕ್ಷದ ಹೈಕಮಾಂಡ್‌ಗೆ ಭೇಟಿಯಾಗಿರುವ ಬೋಸರಾಜುಗೆ ಸಚಿವ ಸ್ಥಾನ ಸಿಕ್ಕಿಲ್ಲ ಹಾಗೂ 5 ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿಯವರಿಗೆ ಸಚಿವ ಸ್ಥಾನದ ದೊರಕುವ ವಿಷಯ ಚರ್ಚೆಗೆ ಬಂದಿದೆಯಾದರೂ ಲಿಂಗಾಯತ ಸಮಾಜದ ಅನೇಕರ ಪೈಪೋಟಿ ಹೆಚ್ಚಾಗಿದೆ.

ಜಾತಿ ಲೆಕ್ಕಚಾರದಲ್ಲಿಯೇ ಸಚಿವ ಸ್ಥಾನ ಹಂಚಿಕೆ ಮಾಡುವ ಪರಿಣಾಮ ಜಿಲ್ಲಾವಾರು ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಹುಸಿಯಾಗುವಂತಾಗಿದೆ. ಇನ್ನುಳಿದಂತೆ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ ಅವರಿಗೆ ಎಸ್ಟಿ ಖೋಟಾದಲ್ಲಿಯಾದರೂ ಸಚಿವ ಸ್ಥಾನ ದೊರೆಯಬೇಕೆನ್ನುವ ಬೇಡಿಕೆಯಿದೆ. ಬೇರೆ ಜಿಲ್ಲೆಯಲ್ಲಿರುವ ಎಸ್ಟಿ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆಯಾಗುವ ಸಾಧ್ಯತೆಗಳೇ ಹೆಚ್ಚು. ಇನ್ನುಳಿದಂತೆ ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದು, ಡಿ.ಕೆ.ಶಿವಕುಮಾರ್ ಗುಂಪಿನಲ್ಲಿ ಗುರುತಿಸಿಕೊಂಡಿರುವ ಬಸನಗೌಡ ಬಾದರ್ಲಿ ಹಾಗೂ ಎ.ವಸಂತಕುಮಾರ ಅವರಿಗೆ ಸಚಿವ ಸ್ಥಾನ ನೀಡಬೇಕೆನ್ನುವ ಬೇಡಿಕೆಯಿದೆ. ಆದರೆ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕಿರುವುದರಿಂದ ಪ್ರಥಮ ಬಾರಿಗೆ ಪರಿಷತ್ ಸದಸ್ಯರಾದರಿಗೆ ನೀಡುವುದೂ ಅನುಮಾನ ಎಂದು ಎನ್ನಲಾಗುತ್ತಿದೆ. ಇನ್ನೂ ಪರಿಶಿಷ್ಟ ಜಾತಿಯ ಮಾದಿಗ ಸಮಾಜದವರಿಗೆ ಸಚಿವ ಸ್ಥಾನ ನೀಡುವಾಗ ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರು ಅವರಿಗೆ ಸಚಿವ ಸ್ಥಾನ ನೀಡಿದರೆ ವಸಂತ ಕುಮಾರಗೆ ಸಚಿವ ಸ್ಥಾನ ಕನಸಿನ ಮಾತು ಎನ್ನಲಾಗಿದೆ.

ಜಿಲ್ಲೆಯ 7 ವಿಧಾನಸಭೆ ಕ್ಷೇತ್ರದ ಪೈಕಿ ನಾಲ್ವರು ಕಾಂಗ್ರೆಸ್ ಶಾಸಕರು, ನಾಲ್ವರು ವಿಧಾನ ಪರಿಷತ್ ಸದಸ್ಯರು, ಓರ್ವ ಸಂಸದ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಶಕ್ತಿ ತುಂಬಿದ್ದಾರೆ. ಮೊದಲನೆ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಬೇಕಿತ್ತು. ಎರಡನೇ ಪಟ್ಟಿಯಲ್ಲಿ ಜಾತಿವಾರು, ಜಿಲ್ಲೆಗೆ ಪ್ರಾತಿನಿಧ್ಯದಡಿಯಲ್ಲಿ ಅನೇಕ ಘಟಾನುಘಟಿ ನಾಯಕರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜಿಲ್ಲೆಗೆ ದೊರಕಬೇಕಾದ ಸ್ಥಾನಮಾನ ಹಾಗೂ ಸಚಿವ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News