×
Ad

ವೃತ್ತಿ ಸುರಕ್ಷತೆ, ಕನಿಷ್ಠ ವೇತನ ನಿಗದಿ ಮುಂತಾದ ಥಳುಕು ತೋರಿಸುತ್ತ ತರಲಾಗಿರುವ ಹೊಸ ಕಾರ್ಮಿಕ ಸಂಹಿತೆಗಳು ನಿಜವಾಗಿಯೂ ಕಾರ್ಮಿಕ ಪರವಾಗಿವೆಯೇ?

Update: 2025-11-27 09:10 IST

ಪತ್ರಿಕೆಗಳು ಹೊಸ ಕಾರ್ಮಿಕ ಸಂಹಿತೆಗಳ ಜಾರಿಯನ್ನು ಪ್ರಮುಖ ಆರ್ಥಿಕ ಸುಧಾರಣೆ, ಪ್ರಮುಖ ಕಾರ್ಮಿಕ ಸುಧಾರಣೆ ಎಂದು ಹೇಳುತ್ತಿವೆ. ಇದು ನಿಜವಾಗಿಯೂ ಹೌದೇ?

ಇದು ಬಂಡವಾಳಶಾಹಿಗಳು, ದೊಡ್ಡ ಕಂಪೆನಿಗಳು ಮತ್ತು ಸರಕಾರಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಲಾಭದ ಗುರಿಯನ್ನು ಪೂರೈಸಲೆಂದೇ ಇವನ್ನು ತರಲಾಗಿದೆ ಮತ್ತಿದು ಕಾರ್ಮಿಕರಿಗೆ ಒಳ್ಳೆಯದಲ್ಲ ಎಂದೇ ಪರಿಣಿತರು ಹೇಳುತ್ತಿದ್ದಾರೆ.

ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಯಥಾ ಪ್ರಕಾರ ಕಾರ್ಪೊರೇಟ್ ಟಿ.ವಿ. ಚಾನೆಲ್‌ಗಳಲ್ಲಿ ಇದರ ಬಗ್ಗೆ ಹೆಚ್ಚು ಚರ್ಚೆ ಇಲ್ಲವಾಗಿದೆ.

ಜನರ ಜೀವನದ ಪ್ರಮುಖ ಪ್ರಶ್ನೆಗಳನ್ನು ಚರ್ಚಿಸುವ ಹೊಣೆಗಾರಿಕೆಯನ್ನೇ ಮಡಿಲ ಮಾಧ್ಯಮಗಳು ಮರೆತಿವೆ. ಮಾತ್ರವಲ್ಲ ಈ ಮೀಡಿಯಾಗಳು ಜನವಿರೋಧಿ ಅಜೆಂಡಾವನ್ನೇ ಜಾರಿ ಮಾಡುತ್ತಿವೆ.

ಭಾರತದಲ್ಲಿ ಹಿಂದೆ ಒಟ್ಟು 29 ಕಾರ್ಮಿಕ ಕಾನೂನುಗಳು ಇದ್ದವು. 2020ರ ಸುಮಾರಿಗೆ, ಅವುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಒಟ್ಟುಗೂಡಿಸಲಾಯಿತು ಮತ್ತು ಸಂಸತ್ತು ಅಂಗೀಕರಿಸಿತು. ಈಗ 2025ರ ನವೆಂಬರ್ 21ರಂದು ಅವುಗಳನ್ನು ಜಾರಿಗೆ ತರಲಾಗಿದೆ.

ಪತ್ರಿಕೆಗಳು ಇದು ಪ್ರಮುಖ ಆರ್ಥಿಕ ಸುಧಾರಣೆ, ಪ್ರಮುಖ ಕಾರ್ಮಿಕ ಸುಧಾರಣೆ ಎಂದು ಹೇಳುತ್ತಿವೆ. ಇದು ನಿಜವಾಗಿಯೂ ಹೌದೇ? ಇದು ಯಾರಿಗೆ ಒಳ್ಳೆಯದು?

ಇದು ಬಂಡವಾಳಶಾಹಿಗಳು, ದೊಡ್ಡ ಕಂಪೆನಿಗಳು ಮತ್ತು ಸರಕಾರಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಲಾಭದ ಗುರಿಯನ್ನು ಪೂರೈಸಲೆಂದೇ ಇವನ್ನು ತರಲಾಗಿದೆ ಮತ್ತಿದು ಕಾರ್ಮಿಕರಿಗೆ ಒಳ್ಳೆಯದಲ್ಲ ಎಂದೇ ಪರಿಣಿತರು ಹೇಳುತ್ತಿದ್ದಾರೆ.

ಮೊದಲನೆಯದಾಗಿ, ಕಾರ್ಮಿಕ ಎನ್ನುವುದರ ವ್ಯಾಖ್ಯಾನದಿಂದಲೇ ಅನ್ಯಾಯ ಶುರುವಾಗಿದೆ ಎನ್ನಲಾಗುತ್ತಿದೆ.

ಮನೆಗೆಲಸದವರೂ ಸೇರಿದಂತೆ ಅನೇಕ ಬಗೆಯ ಕಾರ್ಮಿಕರನ್ನು ಈ ವ್ಯಾಖ್ಯಾನದಲ್ಲಿ ಸೇರಿಸಿಲ್ಲ.ಮೇಲ್ವಿಚಾರಣೆಯ ಹೊಣೆಯುಳ್ಳವರನ್ನು ಮತ್ತು 18,000ಕ್ಕಿಂತ ಹೆಚ್ಚು ಗಳಿಸುವ ಕಾರ್ಮಿಕರನ್ನು ಈ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಇದು ತುಂಬಾ ಕಡಿಮೆ ಮಿತಿ ಎಂದು ಹೇಳಲಾಗುತ್ತಿದೆ.

ಎಷ್ಟೋ ಕಡೆ ಮೇಲ್ವಿಚಾರಣೆ ಹೊಣೆಯಿರುವವರು ಮತ್ತು ಕ್ಲೀನಿಂಗ್ ಮಾಡುವವರಿಗೆ ವ್ಯತ್ಯಾಸ ಇರುವುದಿಲ್ಲ. ಆದರೆ ಈ ವ್ಯಾಖ್ಯಾನದಲ್ಲಿ ಮೇಲ್ವಿಚಾರಣೆ ಹೊಣೆಯಿರುವವರು ಕಾರ್ಮಿಕನ ಸ್ಥಾನವನ್ನೇ ಕಳೆದುಕೊಳ್ಳುತ್ತಾರೆ. ಇದು ಬಹಳ ಕಳವಳಕಾರಿ ವಿಷಯ. ಏಕೆಂದರೆ ಕಾರ್ಮಿಕ ಎಂಬ ವ್ಯಾಖ್ಯಾನದಿಂದ ಹೊರಗೆ ಬಿದ್ದರೆ, ಅನೇಕ ಕಾರ್ಮಿಕ ಹಕ್ಕುಗಳು ಅನ್ವಯಿಸುವುದೇ ಇಲ್ಲ.

ಇನ್ನು, ವೇತನದ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಬೇಕು.

ಹೆಚ್ಚಿನ ಸ್ಥಳಗಳಲ್ಲಿ ಜನರಿಗೆ ಕನಿಷ್ಠ ವೇತನವೂ ಸಿಗುವುದಿಲ್ಲ.

ಕನಿಷ್ಠ ವೇತನ ಮತ್ತು ವಾಸ್ತವವಾಗಿ ಸಿಗುವ ವೇತನ ಇವೆರಡರ ನಡುವೆ ವ್ಯತ್ಯಾಸವಿದೆ. ಕನಿಷ್ಠ ವೇತನ ಸರಕಾರ ನಿರ್ಧರಿಸುವ ಮೂಲ ವೇತನವಾಗಿದೆ. ಆದರೆ ಕಾರ್ಮಿಕನಿಗೆ ಸಿಗುವ ವೇತನ ಅದಕ್ಕಿಂತ ಕಡಿಮೆಯಿರಬಹುದು.

ಅಂದರೆ, ಕನಿಷ್ಠ ವೇತನಕ್ಕಿಂತ ಕಡಿಮೆ ಪಾವತಿಸುವ ಅವಕಾಶವನ್ನು ಕಂಪೆನಿಗಳಿಗೆ ನೀಡಲಾಗುತ್ತಿದೆ. ಇದು ಎಷ್ಟು ಸರಿ ಎಂಬುದು ಮತ್ತೊಂದು ಮುಖ್ಯ ಪ್ರಶ್ನೆಯಾಗುತ್ತದೆ.

ಹೆಚ್ಚಿನ ಕಡೆಗಳಲ್ಲಿ ಅನೇಕ ಕಾರ್ಮಿಕರು ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಅವರಿಗೆ ಕಾನೂನುಬದ್ಧ ಕನಿಷ್ಠ ವೇತನ ನೀಡಲಾಗುತ್ತಿಲ್ಲ. ಕನಿಷ್ಠ ವೇತನಕ್ಕಿಂತ ಕಡಿಮೆ ವೇತನವನ್ನೇ ಸಾಮಾನ್ಯ ಎಂದು ಅಭ್ಯಾಸ ಮಾಡಿಸುವ ಉದ್ದೇಶ ಇಲ್ಲಿದೆ ಎಂದು ಪರಿಣಿತರು ಹೇಳುತ್ತಿದ್ದಾರೆ.

ಇನ್ನು, 18,000 ರೂ.ಗಳಿಗಿಂತ ಹೆಚ್ಚಿನ ವೇತನ ಗಳಿಸುತ್ತಿದ್ದರೆ, ಅವರನ್ನು ಕಾರ್ಮಿಕರೆಂದು ನೋಡಲಾಗುವುದಿಲ್ಲ ಎಂದು ಈಗ ಹೇಳಲಾಗುತ್ತಿದೆ. ಅಂದರೆ, ಅವರಿಗೆ ತಮ್ಮ ಕನಿಷ್ಠ ವೇತನಕ್ಕಾಗಿ ಹೋರಾಡುವ ಅವಕಾಶವೇ ಇರುವುದಿಲ್ಲ. ಇದು ಕಡಿಮೆ ವೇತನದಲ್ಲಿಯೇ ಕಾರ್ಮಿಕರನ್ನು ಸಿಲುಕಿಸುವ ಒಂದು ಸ್ಪಷ್ಟ ವಿಧಾನ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು, ಕಾರ್ಮಿಕ ಸಂಘದ ಹೋರಾಟ.

ಅನೌಪಚಾರಿಕ ವಲಯದ ವಿವಿಧ ಕೈಗಾರಿಕೆಗಳಿಗೆ ಹೋದರೆ, ನೈರ್ಮಲ್ಯ ವಲಯದಲ್ಲಿ, ಉತ್ಪಾದನಾ ವಲಯದಲ್ಲಿ, ಎಲ್ಲೆಡೆ ಕನಿಷ್ಠ ವೇತನ ಜಾರಿಗೊಳಿಸುವಿಕೆಗಾಗಿ ಹೋರಾಟ ನಡೆಯುತ್ತಿದೆ. ಏಕೆಂದರೆ ಕಾರ್ಮಿಕರು ಕಾನೂನುಬದ್ಧ ಕನಿಷ್ಠ ವೇತನ ಪಡೆಯುತ್ತಿಲ್ಲ. ಅನೇಕ ಸಂಸ್ಥೆಗಳು ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ನಿರಾಕರಿಸುತ್ತಿವೆ ಮತ್ತು ಅವರನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಅವರನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ.

ಇಲ್ಲಿ ಪ್ರಶ್ನೆ, ಕಂಪೆನಿ ಯಾವ ಆಧಾರದ ಮೇಲೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತದೆ ಎಂಬುದು.

ಈಗ, ಯಾವುದೇ ಸಂಸ್ಥೆ 300ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿದ್ದರೆ, ಅದು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲು ಸರಕಾರದ ಅನುಮತಿ ಕೇಳಬೇಕಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಸಣ್ಣ ಸಂಸ್ಥೆಗಳು ಸರಕಾರದ ಅನುಮತಿಯಿಲ್ಲದೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲು ಇದರಿಂದ ಅವಕಾಶವಾಗುತ್ತದೆ.

ಹಿಂದಿನ ಕಾನೂನಿನ ಪ್ರಕಾರ, 100ಕ್ಕಿಂತ ಹೆಚ್ಚು ಕೆಲಸಗಾರರಿರುವ ಕಾರ್ಖಾನೆಗಳನ್ನು ಮುಚ್ಚಲು ಅಥವಾ ನೌಕರರನ್ನು ವಜಾ ಮಾಡಲು ಸರಕಾರದ ಪೂರ್ವಾನುಮತಿ ಕಡ್ಡಾಯವಾಗಿತ್ತು. ಆದರೆ, ಈಗ ಈ ಮಿತಿಯನ್ನು 300 ಕಾರ್ಮಿಕರಿಗೆ ಏರಿಸಲಾಗಿದೆ.

ಹೀಗಾಗಿ, 300ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಣ್ಣ ಕೈಗಾರಿಕೆಗಳು ಸರಕಾರದ ಅನುಮತಿಯಿಲ್ಲದೆಯೇ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಹುದು ಅಥವಾ ಕಂಪೆನಿಯನ್ನೇ ಮುಚ್ಚಬಹುದು.

ಇದು ಕಾರ್ಮಿಕರ ಭದ್ರತೆಗೆ ಧಕ್ಕೆ ತಂದಿದೆ ಎಂಬುದು ಪ್ರಮುಖ ವಾದ.

ವಸತಿ ವಿಷಯಕ್ಕೆ ಸರಕಾರ ಯಾವುದೇ ರೀತಿಯಲ್ಲಿ ಬದ್ಧವಾಗಿಲ್ಲ ಎಂಬುದರ ಬಗ್ಗೆ ಆಕ್ಷೇಪಗಳು ಎದ್ದಿವೆ.

ವಸತಿ ಸಮಸ್ಯೆ ನೋಡಿದಾಗ, ದೇಶಾದ್ಯಂತ ಬಡವರ ಸ್ಲಂಗಳನ್ನು ಕೆಡವಲು ಬುಲ್ಡೋಜರ್ ಬಳಸಲಾಗುತ್ತಿದೆ. ಪ್ರಧಾನ ಮಂತ್ರಿ ವಸತಿ ಯೋಜನೆ ಸರಿಯಾಗಿ ಪೂರ್ಣಗೊಂಡಿಲ್ಲ. ಆದ್ದರಿಂದ, ವಸತಿ ಸಮಸ್ಯೆಗೆ ಸರಕಾರದ ಬದ್ಧತೆಯು ತೀರಾ ಕೆಳಮಟ್ಟದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಕಾರ್ಮಿಕರಿಗೆ ಯೋಗ್ಯವಾದ ವಸತಿ ಭತ್ತೆಯೂ ಕೇವಲ ಕನಸು ಎಂದು ಈಗ ಹೇಳಲಾಗುತ್ತಿದೆ.

ನ್ಯಾಯಾಲಯಗಳು ಎಲ್ಲರಿಗೂ ಕನಿಷ್ಠ ವೇತನ ನೀಡಬೇಕೆಂದು ಹೇಳುತ್ತವೆ. ಆದರೆ ಅದೆಂದೂ ಆಗುತ್ತಿಲ್ಲ ಎಂಬ ವಾದವಿದೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ನ್ಯಾಯಾಲಯದ ನಿಲುವು ಅಸಮಂಜಸವಾಗಿದೆ ಎಂಬುದು ಮತ್ತೊಂದು ವಾದ.

ಖಾಸಗಿ ಬಂಡವಾಳಕ್ಕಾಗಿ ಹೊಸ ಒತ್ತಡ ಬಂದಾಗಿನಿಂದ ಕಳೆದ ಹಲವಾರು ದಶಕಗಳಿಂದ ಇದೇ ಸ್ಥಿತಿಯಿದೆ. ಒಂದೆಡೆ, ನ್ಯಾಯಾಲಯ ಅನೇಕ ಕಾರ್ಮಿಕರ ಪರವಾಗಿ ತನ್ನ ಅಭಿಪ್ರಾಯ ನೀಡಿಲ್ಲ. ಕನಿಷ್ಠ ವೇತನ ಮಾತ್ರವಲ್ಲ, ಕಾರ್ಮಿಕರ ವಿಷಯವೇ ರಾಜಕೀಯದಿಂದ, ಅದರಲ್ಲೂ ಚುನಾವಣಾ ರಾಜಕೀಯದಿಂದ ಹೆಚ್ಚುಕಡಿಮೆ ಕಾಣೆಯೇ ಆಗಿಬಿಟ್ಟಿದೆ. ಇನ್ನೊಂದೆಡೆ, ಕಾರ್ಮಿಕ ಸಂಘಗಳು ಯಾವಾಗಲೂ ದೇಶದ ರಾಜಕೀಯ ಚರ್ಚೆಯ ಭಾಗವಾಗಲು ಒದ್ದಾಡುತ್ತವೆ.

ಕಾರ್ಮಿಕ ಒಕ್ಕೂಟದ ಪ್ರಕಾರ, ಇಂದಿನ ವೇತನ ಸಮಸ್ಯೆ ರಾಷ್ಟ್ರೀಯ ರಾಜಕೀಯ ಸಮಸ್ಯೆಯಾಗಿದೆ ಮತ್ತು ಅದನ್ನು ರಾಷ್ಟ್ರೀಯ ರಾಜಕೀಯ ವಿಷಯವಾಗಿ ಎತ್ತಬೇಕಾಗಿದೆ.

ಕೈಗಾರಿಕಾ ಸಂಬಂಧ ಸಂಹಿತೆಯಲ್ಲಂತೂ, ಕಾರ್ಮಿಕರ ಚೌಕಾಸಿ ಮಾಡುವ ಶಕ್ತಿ, ಒಕ್ಕೂಟ ರಚಿಸುವ, ಅಭಿಪ್ರಾಯಗಳನ್ನು ಮಂಡಿಸುವ ಮತ್ತು ಅವರ ಹಕ್ಕುಗಳಿಗಾಗಿ ಹೋರಾಡುವ ಸಾಮರ್ಥ್ಯವನ್ನೇ ದೊಡ್ಡ ಮಟ್ಟದಲ್ಲಿ ಮೊಟಕುಗೊಳಿಸಲಾಗುತ್ತಿದೆ.

ಕೈಗಾರಿಕಾ ವಿವಾದ ಕಾಯ್ದೆಯಡಿಯಲ್ಲಿ ಅಸ್ತಿತ್ವದಲ್ಲಿದ್ದ ಅವರ ಚೌಕಾಸಿ ಮಾಡುವ ಶಕ್ತಿಯನ್ನು ಈಗ ಮೊಟಕುಗೊಳಿಸಲಾಗುತ್ತಿದೆ.

ಒಕ್ಕೂಟವನ್ನು ರಚಿಸಿದಾಗ, ನೋಂದಾಯಿಸಲು ಕನಿಷ್ಠ ಏಳು ಜನರು ಬೇಕು. ಈಗ ಅದನ್ನು ಒಟ್ಟು ಕಾರ್ಮಿಕರ ಸಂಖ್ಯೆಯ ಶೇ. 10ಕ್ಕೆ ಹೆಚ್ಚಿಸಲಾಗಿದೆ.

ನೋಂದಣಿಯಾದ ನಂತರ ಅದೇ ಸಂಖ್ಯೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇಲ್ಲದೇ ಹೋದರೆ ನೋಂದಣಿಯೇ ರದ್ದಾಗಬಹುದು. ಅಂದರೆ ಇದು ಯಾವುದೇ ಕಂಪೆನಿಯ ಮಾಲಕರಿಗೆ ಅನುಕೂಲವಾಗಿದೆ. ಒಂದು ಒಕ್ಕೂಟ ರಚನೆಗೆ ಅಗತ್ಯ ಸಂಖ್ಯೆಯ ಕಾರ್ಮಿಕರೇ ಒಗ್ಗಟ್ಟಾಗದ ಹಾಗೆ ಅವರು ಮೊದಲೇ ನೋಡಿಕೊಳ್ಳುತ್ತಾರೆ. ಒಂದು ವೇಳೆ ಅಷ್ಟು ಸಂಖ್ಯೆಯ ಸದಸ್ಯರು ಒಂದಾಗಿ ಒಕ್ಕೂಟ ರಚಿಸಿದರೂ, ಕಾರ್ಮಿಕರನ್ನು ಬೆದರಿಸುವ ಮೂಲಕ, ಕಾರ್ಮಿಕರ ಸಂಖ್ಯೆಯನ್ನು ಆ ಮಟ್ಟಕ್ಕೆ ಇಳಿಸಿ ಸಂಘದ ನೋಂದಣಿ ರದ್ದುಗೊಳಿಸಲು ಯತ್ನಿಸಬಹುದು.

ಇನ್ನು ಮುಷ್ಕರ ನಡೆಸಬೇಕೆಂದರೆ, ಅಲ್ಲಿ ಒಂದು ಸೂಚನೆ ವ್ಯವಸ್ಥೆ ಇದೆ.

ನೋಟಿಸ್ ನೀಡಿದ ಹಲವು ದಿನಗಳ ನಂತರವೂ ಯಾವುದೇ ವಿಷಯ ರಾಜಿ ಪ್ರಕ್ರಿಯೆಯ ವ್ಯಾಪ್ತಿಯಲ್ಲಿ ಉಳಿಯುತ್ತದೆ. ಅಂದರೆ, ಕಾರ್ಮಿಕರ ಬೇಡಿಕೆ ಬಗ್ಗೆ ಆಡಳಿತ ಮಂಡಳಿ ಚರ್ಚಿಸಲು ಒಪ್ಪಿಕೊಳ್ಳಬಹುದು. ಹಾಗಾಗಿ, ಅಂಥ ಸಂದರ್ಭದಲ್ಲಿ ಮುಷ್ಕರ ನಡೆಸಲು ಸಾಧ್ಯವಿಲ್ಲ.

ಬೇಡಿಕೆ ಚರ್ಚಿಸಲು ಅವರೊಂದು ದಿನಾಂಕ ನೀಡಬಹುದು. ಆದರೆ ಅದನ್ನು ಈಡೇರಿಸಿಯೇಬಿಡುತ್ತಾರೆ ಎಂದೇನಲ್ಲ.

ಆದರೆ ಕಾರ್ಮಿಕರು ಮುಷ್ಕರ ಮಾಡಲಾರದ ಸ್ಥಿತಿಯಲ್ಲಿ ಉಳಿಯುವಂತಾಗುತ್ತದೆ.

ನೋಟಿಸ್ ನೀಡಿದರೆ ಮುಷ್ಕರವನ್ನು 14 ದಿನಗಳಲ್ಲಿ ಮಾಡಬೇಕು. ಆದರೆ, ನೋಟಿಸ್ ಅನ್ನು ಕಂಪೆನಿ ಸ್ವೀಕರಿಸಿ ಚರ್ಚೆಗೆ ಒಪ್ಪಿದರೆ, ಅಂದರೆ ರಾಜಿ ಸಂಧಾನ ತಕ್ಷಣ ಪ್ರಾರಂಭವಾದರೆ, ಆ 14 ದಿನಗಳಿಗೆ ಯಾವುದೇ ಅರ್ಥವಿರುವುದಿಲ್ಲ.

ಆದ್ದರಿಂದ, ಯಾವುದೇ ರೀತಿಯ ಮುಷ್ಕರವನ್ನು ಸುಲಭವಾಗಿ ಕಾನೂನುಬಾಹಿರವೆಂದು ಘೋಷಿಸಬಹುದು ಮತ್ತು ಕಾನೂನುಬಾಹಿರ ಕೃತ್ಯ ನಡೆದರೆ, ಕಾರ್ಮಿಕರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಅವರನ್ನು ಕೆಲಸದಿಂದ ತೆಗೆದುಹಾಕಬಹುದು ಮತ್ತು ಇತರ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಬಹುದು.

ಇತ್ತೀಚಿನ ದಿನಗಳಲ್ಲಿ ಟ್ರೇಡ್ ಯೂನಿಯನ್ ಹೋರಾಟಗಳ ಬಗ್ಗೆ ಹೆಚ್ಚು ಚರ್ಚೆಯಿಲ್ಲವಾಗಿದೆ. ಅಂಥ ಹೋರಾಟಗಳ ಬಗೆಗಿನ ಪ್ರಸಾರವನ್ನು ಮುಖ್ಯವಾಹಿನಿಯ ಮಾಧ್ಯಮಗಳಿಂದ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ.

ಪ್ರಮುಖ ಮುಷ್ಕರಗಳು ಮತ್ತು ಹೋರಾಟಗಳನ್ನು ಸುಳ್ಳು ರೀತಿಯಲ್ಲಿ ಬಿಂಬಿಸಲಾಗುತ್ತದೆ. ಈ ಜನರು ದೇಶ ಒಡೆಯುತ್ತಿದ್ದಾರೆ, ಉದ್ಯಮಕ್ಕೆ ಅಡ್ಡಿಯಾಗುತ್ತಿದ್ದಾರೆ, ಉದ್ಯಮವನ್ನು ನಾಶಪಡಿಸುತ್ತಿದ್ದಾರೆ ಎಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತದೆ. ಮುಷ್ಕರಗಳು ಎಂದರೆ ಉದ್ಯಮದ ನಾಶ ಎಂದು ಬಿಂಬಿಸುವುದು ನಡೆದಿದೆ. ಎಲ್ಲಾ ರೀತಿಯ ಕಾರ್ಮಿಕ ಹೋರಾಟಗಳನ್ನು ಒಂದು ರೀತಿಯಲ್ಲಿ ಅಪರಾಧೀಕರಿಸಲಾಗಿದೆ.

ಈ ನಾಲ್ಕೂ ಸಂಹಿತೆಗಳಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ನೀಡಲಾಗಿಲ್ಲ. ಯಾವುದೇ ಸಮಯದಲ್ಲಿ ಯಾರನ್ನೂ ಕೆಲಸದಿಂದ ತೆಗೆದುಹಾಕುವುದನ್ನು ಸಂಪೂರ್ಣವಾಗಿ ಕಾನೂನುಬದ್ಧಗೊಳಿಸಲಾಗಿದೆ.

ನಿಶ್ಚಿತ ಅವಧಿಯ ಉದ್ಯೋಗ ಎಂಬುದನ್ನು ಪರಿಚಯಿಸಲಾಗಿದೆ. ಅಂದರೆ, ಖಾಯಂ ಕೆಲಸಗಾರರಲ್ಲ, ಒಂದು ನಿಶ್ಚಿತ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಹೀಗಾಗಿ, ಇದರ ಮುಂದೆ ಖಾಯಂ ಕೆಲಸಗಾರರ ಪರಿಕಲ್ಪನೆಯೇ ಅಪ್ರಸ್ತುತವಾಗುತ್ತದೆ.

ಕಂಪೆನಿಗಳು ನಿಶ್ಚಿತ ಅವಧಿಗೆ ನೇಮಿಸಿಕೊಳ್ಳುವುದನ್ನೇ ಅನುಸರಿಸಬಹುದು. ಅವರನ್ನು ಯಾವುದೇ ಸಮಯದಲ್ಲಿ ಕೆಲಸದಿಂದ ತೆಗೆದುಹಾಕಬಹುದು. ಆದ್ದರಿಂದ ಒಕ್ಕೂಟವನ್ನು ರಚಿಸುವುದು ಮತ್ತು ಅವರ ಹೋರಾಟಗಳನ್ನು ನಡೆಸುವುದು ಇನ್ನಷ್ಟು ಕಷ್ಟಕರವಾಗುತ್ತದೆ. ಒಂದು ರೀತಿಯಲ್ಲಿ, ಕಾರ್ಮಿಕರ ಸಂಘವೇ ಇಲ್ಲವಾಗುತ್ತದೆ.

ಯಾವುದೇ ಸಮಯದಲ್ಲಿ ಕೆಲಸದಿಂದ ತೆಗೆದುಹಾಕಬಹುದೆಂಬ ಕಾರಣದಿಂದ ಕಾರ್ಮಿಕರು ಸ್ವಲ್ಪ ಹಿಂಜರಿಯುತ್ತಾರೆ, ಮುಷ್ಕರ ಮಾಡಲು ಹೆದರುತ್ತಾರೆ. ಕೆಲಸವೇ ಶಾಶ್ವತವಾಗಿಲ್ಲದ ಒಂದು ಪರಿಸ್ಥಿತಿ ಏರ್ಪಡುತ್ತದೆ.

ಇದರ ಹಿಂದಿನ ತರ್ಕ ಏನಿರಬಹುದು? ಯಾವ ರೀತಿಯ ನಿಯಮಗಳನ್ನು ಯಾವ ಆಲೋಚನೆಯೊಂದಿಗೆ ರಚಿಸಲಾಗಿದೆ? ಇಂಥ ಪ್ರಶ್ನೆಗಳು ಏಳುತ್ತವೆ.

ಈ ನಿಯಮಗಳನ್ನು ರೂಪಿಸುವ ಏಕೈಕ ಉದ್ದೇಶವೆಂದರೆ,

ಒಂದು, ಕಾರ್ಮಿಕರು ಸಂಘಟಿತರಾಗಲು ಬಿಡಬಾರದು.

ಎರಡನೆಯದಾಗಿ, ಕಾರ್ಮಿಕರ ಚೌಕಾಸಿ ಮಾಡುವ ಶಕ್ತಿಯನ್ನು ತೀವ್ರವಾಗಿ ಕಡಿಮೆ ಮಾಡಬೇಕು.

ಮೂರನೆಯದಾಗಿ, ಯಾರಿಗೂ ಶಾಶ್ವತ ಉದ್ಯೋಗ ಇಲ್ಲದಂತಾಗುವುದು.

ಯಾವಾಗಲೂ ಜನರು ಉದ್ಯೋಗಗಳನ್ನು ಹುಡುಕುತ್ತಿರುವ ಸ್ಥಿತಿ ಸೃಷ್ಟಿಸಲಾಗುತ್ತದೆ. ಆಗ ಮಾತ್ರ, ಬಂಡವಾಳಶಾಹಿಗಳು ಮತ್ತು ಕಂಪೆನಿಗಳು ಕಡಿಮೆ ಸಂಬಳದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಕಾರ್ಮಿಕರು ಮುಷ್ಕರ ಮಾಡಲು ಸಹ ಸಾಧ್ಯವಾಗುವುದಿಲ್ಲ.

ಸಂಘಗಳನ್ನು ಕಟ್ಟುವ ಅವಕಾಶವೇ ಅವರಿಗೆ ಇರುವುದಿಲ್ಲ. ಆದ್ದರಿಂದ ಕಾರ್ಮಿಕರಿಗೆ ಬೇರೆ ಆಯ್ಕೆಯಿರುವುದಿಲ್ಲ. ಅವರು ಕಡಿಮೆ ಸಂಬಳಕ್ಕೆ ದುಡಿಯುವ ಅನಿವಾರ್ಯತೆಯಲ್ಲಿ ಸಿಲುಕುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರವೀಣ್ ಎನ್.

contributor

Similar News