ಶಿಕ್ಷಕರಿಗೆ ತಲೆನೋವಾದ ‘ನಿರಂತರ’ ಆ್ಯಪ್
ಗದಗ, ಆ.23: ವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸುವ ಮೂಲಕ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು, ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ನಿಖರವಾಗಿ ದಾಖಲಿಸಬೇಕು, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಸರಕಾರದ ವಿವಿಧ ಸೌಲಭ್ಯಗಳ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ‘ನಿರಂತರ’ ಆ್ಯಪ್ ಮೂಲಕ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದೆ.
ಆದರೆ, ಶಿಕ್ಷಕರಿಗೆ ವರದಾನವಾಗಬೇಕಿದ್ದ ಇದೇ ಆ್ಯಪ್ ಇದೀಗ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆ್ಯಪ್‌ನ ತಾಂತ್ರಿಕ ಸಮಸ್ಯೆಗಳು, ನೆಟ್‌ವರ್ಕ್ ಕೊರತೆ, ಸರ್ವರ್ ಸಮಸ್ಯೆ, ಬೆಳಕಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಪ್ರತಿನಿತ್ಯ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಲು ಶಿಕ್ಷಕರು ಪರದಾಡುವಂತಾಗಿದೆ.
ಪಾಠ ಬೋಧನೆಗಿಂತ ಹಾಜರಾತಿಯದ್ದೇ ಚಿಂತೆ..!
ನಿರಂತರ ಆ್ಯಪ್‌ನಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ಬಾರಿ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಬೇಕಾಗಿದೆ. ಮೊಬೈಲ್ ಮೂಲಕ ತರಗತಿಯಲ್ಲಿರುವ ವಿದ್ಯಾರ್ಥಿಗಳ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಇದಾಗಿದೆ. ಆದರೆ, ಒಂದು ಬಾರಿ ಫೋಟೋ ಸೆರೆಹಿಡಿದಾಗ ತರಗತಿಯಲ್ಲಿರುವ ಎಲ್ಲ ವಿದ್ಯಾರ್ಥಿಗಳ ಮುಖ ಸ್ಕ್ಯಾನ್ ಆಗುತ್ತಿಲ್ಲ ಎಂಬುದು ಶಿಕ್ಷಕರ ಪ್ರಮುಖ ಆರೋಪವಾಗಿದೆ. ಕೆಲವೊಮ್ಮೆ 15ರಿಂದ 20 ವಿದ್ಯಾರ್ಥಿಗಳ ಮುಖ ಮಾತ್ರ ಕ್ಯಾಪ್ಚರ್ ಆಗುತ್ತಿದ್ದು, ಉಳಿದ ವಿದ್ಯಾರ್ಥಿಗಳ ಹಾಜರಾತಿಗಾಗಿ ಮತ್ತೆ ಮತ್ತೆ ಪ್ರಯತ್ನಿಸಬೇಕಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳನ್ನು ತರಗತಿಯ ಹೊರಗೆ ಕರೆದುಕೊಂಡು ಹೋಗಿ ಬೆಳಕಿನ ವ್ಯವಸ್ಥೆಯಲ್ಲಿ ನಿಲ್ಲಿಸಿ ಫೋಟೋ ತೆಗೆದರೂ ಕೆಲವರ ಮುಖ ಸರಿಯಾಗಿ ಸ್ಕ್ಯಾನ್ ಆಗುವುದಿಲ್ಲ. ಹೀಗಾಗಿ ಹಾಜರಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ಸಮಯ ಬೇಕಾಗುತ್ತಿದೆ. ಒಂದು ತರಗತಿಯ ಹಾಜರಾತಿ ತೆಗೆದುಕೊಳ್ಳುವಷ್ಟರಲ್ಲಿ ಪಾಠದ ಅರ್ಧ ಸಮಯವೇ ಮುಗಿಯುತ್ತಿದೆ ಎಂಬುದು ಶಿಕ್ಷಕರ ಅಳಲು.
ಗ್ರಾಮೀಣ ಶಾಲೆಗಳಲ್ಲಿ ಸಮಸ್ಯೆ ಮತ್ತಷ್ಟು ಗಂಭೀರ:
ಗದಗ ಜಿಲ್ಲೆಯ ಬಹುತೇಕ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಹಲವು ಶಾಲೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಸಿಗದ ಸಂದರ್ಭದಲ್ಲಿ ಹಾಜರಾತಿ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಆ್ಯಪ್‌ನ ಸರ್ವರ್ ಸಮಸ್ಯೆ ಎದುರಾದರೂ ಹಾಜರಾತಿ ದಾಖಲಿಸಲು ಸಾಧ್ಯವಾಗುವುದಿಲ್ಲ. ವಿದ್ಯುತ್ ವ್ಯತ್ಯಯವಾದರೆ ತರಗತಿ ಕೊಠಡಿಯಲ್ಲಿ ಬೆಳಕಿನ ಸಮಸ್ಯೆ ಉಂಟಾಗುತ್ತದೆ. ಮೋಡ ಕವಿದ ವಾತಾವರಣದಲ್ಲಿಯೂ ಮೊಬೈಲ್ ಕ್ಯಾಮರಾ ಮೂಲಕ ಮುಖ ಗುರುತಿಸುವಿಕೆ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಒಬ್ಬೊಬ್ಬರ ಮುಖವನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಬೇಕಾಗುತ್ತದೆ. ವಿಶೇಷವಾಗಿ 50ರಿಂದ 60 ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.
ಮುಖ ಗುರುತಿಸುವಿಕೆಯಲ್ಲೂ ಹಲವು ಸಮಸ್ಯೆ:
ನಿರಂತರ ಆ್ಯಪ್‌ನಲ್ಲಿ ಮುಖ ಗುರುತಿಸುವಿಕೆ ವ್ಯವಸ್ಥೆಯೇ ಹಾಜರಾತಿಗೆ ಆಧಾರವಾಗಿದೆ. ಆದರೆ, ವಿದ್ಯಾರ್ಥಿಗಳ ಮುಖದಲ್ಲಿ ಸಣ್ಣ ಬದಲಾವಣೆಯಾದರೂ ಕೆಲವೊಮ್ಮೆ ಆ್ಯಪ್‌ಗುರುತಿಸಲು ವಿಫಲವಾಗುತ್ತಿದೆ ಎಂಬ ಆರೋಪವಿದೆ. ಕನ್ನಡಕ ಹಾಕಿಕೊಂಡಿದ್ದರೆ, ಮಾಸ್ಕ್ ಧರಿಸಿದ್ದರೆ, ಕ್ಯಾಪ್ ಹಾಕಿದ್ದರೆ ಅಥವಾ ತಲೆಗೆ ಬಟ್ಟೆ ಕಟ್ಟಿಕೊಂಡಿದ್ದರೆ ಕೆಲವು ಸಂದರ್ಭಗಳಲ್ಲಿ ಮುಖ ಸರಿಯಾಗಿ ಗುರುತಿಸುವುದಿಲ್ಲ. ಅಷ್ಟೇ ಅಲ್ಲ, ದೊಡ್ಡ ಕಿವಿಯೋಲೆ, ಮೂಗುತಿ ಸೇರಿದಂತೆ ವಿದ್ಯಾರ್ಥಿಗಳ ಮುಖದ ಸುತ್ತಲಿನ ಬದಲಾವಣೆಗಳಿಂದಲೂ ಮುಖ ಗುರುತಿಸುವಿಕೆಯಲ್ಲಿ ಸಮಸ್ಯೆಯಾಗುತ್ತಿದೆ ಎನ್ನಲಾಗುತ್ತಿದೆ. ವಿದ್ಯಾರ್ಥಿಗಳು ಅನಾರೋಗ್ಯದ ಕಾರಣ ಮಾಸ್ಕ್ ಧರಿಸಿ ಶಾಲೆಗೆ ಬಂದಾಗಲೂ ಇದೇ ಸಮಸ್ಯೆ ಎದುರಾಗುತ್ತಿದೆ. ಒಂದು ದಿನ ಮಗು ಹೇರ್‌ಸ್ಟೈಲ್ ಬದಲಿಸಿಕೊಂಡು ಬಂದರೂ ಮುಖ ಗುರುತಿಸುವಲ್ಲಿ ತೊಂದರೆಯಾಗುತ್ತಿದೆ ಎಂಬುದು ಶಿಕ್ಷಕರ ಅಳಲು.
ಮೊದಲೇ ನೋಂದಾಯಿಸಿದ್ದರೂ ಮತ್ತೆ ಸ್ಕ್ಯಾನ್:
ಕೆಲವು ವಿದ್ಯಾರ್ಥಿಗಳ ಮುಖವನ್ನು ಮೊದಲ ಬಾರಿಗೆ ಯಶಸ್ವಿಯಾಗಿ ನೋಂದಾಯಿಸಲಾಗುತ್ತದೆ. ಆದರೆ, ಮರುದಿನ ಅಥವಾ ಕೆಲ ದಿನಗಳ ಬಳಿಕ ಅದೇ ವಿದ್ಯಾರ್ಥಿಯ ಮುಖವನ್ನು ಆ್ಯಪ್ ಗುರುತಿಸದೆ ಪುನಃ ಸ್ಕ್ಯಾನ್ ಮಾಡುವಂತೆ ಸೂಚಿಸುತ್ತದೆ. ಹಲವು ಬಾರಿ ಪ್ರಯತ್ನಿಸಿದರೂ ಹಾಜರಾತಿ ದಾಖಲಾಗದ ಸಂದರ್ಭಗಳಿವೆ. ಇದರಿಂದ ಶಾಲೆಗೆ ಹಾಜರಾಗಿರುವ ವಿದ್ಯಾರ್ಥಿಯನ್ನೇ ಗೈರು ಎಂದು ದಾಖಲಿಸುವ ಅನಿವಾರ್ಯತೆ ಎದುರಾಗುತ್ತಿದೆ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಹಾಜರಾತಿಯ ಸಮಸ್ಯೆಯಾಗಿ ಉಳಿಯದೆ, ವಿದ್ಯಾರ್ಥಿಯ ಹಾಜರಾತಿ ದಾಖಲೆಯ ಮೇಲೆಯೂ ಪರಿಣಾಮ ಬೀರುವ ಆತಂಕ ಶಿಕ್ಷಕರಲ್ಲಿದೆ.
ಶಿಕ್ಷಕರ ಮೊಬೈಲ್ ಕ್ಯಾಮರಾವೂ ಸಮಸ್ಯೆ:
ಹಾಜರಾತಿ ದಾಖಲಿಸಲು ಬಳಸುವ ಮೊಬೈಲ್‌ಗಳ ಕ್ಯಾಮರಾ ಗುಣಮಟ್ಟವೂ ಪ್ರಮುಖ ಅಂಶವಾಗಿದೆ. ಎಲ್ಲ ಶಿಕ್ಷಕರ ಬಳಿಯೂ ಉತ್ತಮ ಗುಣಮಟ್ಟದ ಕ್ಯಾಮರಾ ಹೊಂದಿರುವ ಮೊಬೈಲ್‌ಗಳು ಇರಬೇಕೆಂದಿಲ್ಲ. ಕ್ಯಾಮರಾ ಗುಣಮಟ್ಟ ಕಡಿಮೆಯಿದ್ದರೆ ವಿದ್ಯಾರ್ಥಿಗಳ ಮುಖ ಸ್ಪಷ್ಟವಾಗಿ ಸೆರೆಹಿಡಿಯಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಮತ್ತೆ ಮತ್ತೆ ಫೋಟೊ ತೆಗೆದು ಹಾಜರಾತಿ ದಾಖಲಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಶಿಕ್ಷಕರು ತಮ್ಮ ಮೂಲ ಕರ್ತವ್ಯವಾದ ಪಾಠ ಬೋಧನೆಗಿಂತ ತಾಂತ್ರಿಕ ಪ್ರಕ್ರಿಯೆ ಪೂರ್ಣಗೊಳಿಸುವುದರಲ್ಲೇ ಹೆಚ್ಚು ಸಮಯ ಕಳೆಯಬೇಕಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಬಿಸಿಯೂಟದ ಲೆಕ್ಕಕ್ಕೂ ಪರಿಣಾಮ ಬೀರುವ ಆತಂಕ: ‘ನಿರಂತರ’ ಆ್ಯಪ್‌ನಲ್ಲಿ ದಾಖಲಾದ ವಿದ್ಯಾರ್ಥಿಗಳ ಹಾಜರಾತಿ ಆಧರಿಸಿ ಶಾಲೆಯಲ್ಲಿನ ಮಕ್ಕಳ ಸಂಖ್ಯೆಯ ಮಾಹಿತಿಯನ್ನು ಪಡೆಯಲಾಗುತ್ತದೆ. ಇದೇ ಮಾಹಿತಿ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಿವಿಧ ಸೌಲಭ್ಯಗಳ ಯೋಜನೆ ಮತ್ತು ಲೆಕ್ಕಾಚಾರಕ್ಕೂ ಸಂಬಂಧ ಹೊಂದಿದೆ. ತಾಂತ್ರಿಕ ಸಮಸ್ಯೆಯಿಂದ ಶಾಲೆಗೆ ಹಾಜರಾಗಿರುವ ಮಕ್ಕಳ ಹಾಜರಾತಿ ಸರಿಯಾಗಿ ದಾಖಲಾಗದಿದ್ದರೆ, ಹಾಜರಾತಿ ಆಧಾರಿತ ಮಾಹಿತಿಯಲ್ಲಿಯೂ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಹೀಗಾಗಿ ಆ್ಯಪ್‌ನ ತಾಂತ್ರಿಕ ಸಮಸ್ಯೆಯನ್ನು ಕೇವಲ ಶಿಕ್ಷಕರ ಸಮಸ್ಯೆ ಎಂದು ಪರಿಗಣಿಸದೆ, ಶಾಲಾ ಆಡಳಿತ ಮತ್ತು ವಿದ್ಯಾರ್ಥಿಗಳ ಸೌಲಭ್ಯಗಳ ಮೇಲೂ ಪರಿಣಾಮ ಬೀರುವ ವಿಚಾರವಾಗಿ ಪರಿಗಣಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ತಂತ್ರಜ್ಞಾನ ಬೇಕು.. ತೊಂದರೆ ಬೇಡ:
ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಸುವುದು ಸ್ವಾಗತಾರ್ಹ. ಡಿಜಿಟಲ್ ಹಾಜರಾತಿಯಿಂದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗುತ್ತದೆ. ಆದರೆ, ತಂತ್ರಜ್ಞಾನವೇ ಶಿಕ್ಷಕರಿಗೆ ಹೆಚ್ಚುವರಿ ಕೆಲಸದ ಒತ್ತಡವಾಗಬಾರದು. ಹಾಜರಾತಿ ದಾಖಲಿಸಲು ಹೆಚ್ಚು ಸಮಯ ವ್ಯಯವಾದರೆ ಅದರ ನೇರ ಪರಿಣಾಮ ಪಾಠ ಬೋಧನೆಯ ಮೇಲೆಯೇ ಬೀಳಲಿದೆ. ಹೀಗಾಗಿ ‘ನಿರಂತರ’ ಆ್ಯಪ್‌ನ ತಾಂತ್ರಿಕ ದೋಷಗಳನ್ನು ತ್ವರಿತವಾಗಿ ಸರಿಪಡಿಸಿ, ನೆಟ್‌ವರ್ಕ್ ಇಲ್ಲದ ಪ್ರದೇಶಗಳಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮುಖ ಗುರುತಿಸುವಿಕೆ ವಿಫಲವಾದ ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಗೈರು ಎಂದು ದಾಖಲಿಸುವ ಪರಿಸ್ಥಿತಿ ಬರದಂತೆ ಸರಳ ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂಬುದು ಶಿಕ್ಷಕರ ಒತ್ತಾಯವಾಗಿದೆ.
ಮಕ್ಕಳ ಹಾಜರಾತಿ ಖಚಿತಪಡಿಸಲು ತಂದ ಆ್ಯಪ್, ಮಕ್ಕಳ ಕಲಿಕೆಗೆ ಅಡ್ಡಿಯಾಗದಿರಲಿ. ತಂತ್ರಜ್ಞಾನ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕೇ ಹೊರತು, ಶಿಕ್ಷಕರ ಪಾಠದ ಸಮಯವನ್ನೇ ಕಸಿದುಕೊಳ್ಳಬಾರದು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.
‘ನಿರಂತರ’ ಆ್ಯಪ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಆ್ಯಪ್‌ನ ಬಳಕೆಯಲ್ಲಿ ಶಿಕ್ಷಕರಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಇಲಾಖೆಯ ಗಮನಕ್ಕೆ ಬಂದಿದ್ದು, ತಾಂತ್ರಿಕ ದೋಷಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
-ಆರ್.ಎಸ್. ಬುರಡಿ,
ಡಿಡಿಪಿಐ ಗದಗ