ಕಸ್ತೂರಿ ರಂಗನ್ ವರದಿಗೆ ವ್ಯಾಪಕ ವಿರೋಧ: ಜನಾಂದೋಲನಕ್ಕೆ ಸಜ್ಜಾದ ಚಳವಳಿಯ ತವರೂರು ಶಿವಮೊಗ್ಗ
ಶಿವಮೊಗ್ಗ : ಸಾಮಾಜಿಕ,ರೈತ ಮತ್ತು ಸ್ವಾತಂತ್ರ್ಯ ಹೋರಾಟಗಳ ಶ್ರೀಮಂತಿಕೆಯ ಇತಿಹಾಸ ಹೊಂದಿರುವ ಶಿವಮೊಗ್ಗ ಜಿಲ್ಲೆ ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಬೃಹತ್ ಜನಾಂದೋಲನಕ್ಕೆ ಸಜ್ಜಾಗುತ್ತಿದೆ.
ಜು.27ರಂದು ಕೇಂದ್ರ ಸರಕಾರವು ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧಿಸಿದಂತೆ ಏಳನೇ ಗೆಜೆಟ್ ನೋಟಿಫಿಕೇಶನ್ ಜಾರಿ ಮಾಡಿದ್ದು, ಇದರಲ್ಲಿ ಪರಿಸರ ಸೂಕ್ಷ್ಮ ವಲಯ ಸಂಬಂಧಿಸಿದಂತೆ ಪಶ್ಚಿಮ ಘಟ್ಟ ಶ್ರೇಣಿಯ ಎಲ್ಲ ರಾಜ್ಯಗಳ ಗ್ರಾಮಗಳು ಹಾಗೂ ಅವುಗಳ ಹೆಸರು ಸಮೇತ ನೋಟಿಫಿಕೇಶನ್ ಜಾರಿ ಮಾಡಿದೆ. ಇದಕ್ಕೆ ಮಲೆನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸದಂತೆ ಮಲೆನಾಡಿನ ಜನರು ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದು ಬೃಹತ್ ಪಾದಯಾತ್ರೆಗೆ ಸಜ್ಜಾಗುತ್ತಿದ್ದಾರೆ.
ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳುವ ಸಂಬಂಧ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರವು 2011ರಲ್ಲಿ ಮಾಧವ ಗಾಡ್ಗೀಳ್ ಅವರ ನೇತೃತ್ವದ ಸಮಿತಿ ರಚಿಸಿತು. ಆ ಸಮಿತಿಯ ವರದಿಯು ಪರಿಸರ ಕೇಂದ್ರಿತವಾಗಿದ್ದು, ಅದರ ವ್ಯಾಪ್ತಿಯಲ್ಲಿನ ಜನರ ಅಭಿವೃದ್ಧಿಗೆ ಪೂರಕವಾಗಿಲ್ಲ ಎನ್ನುವ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರವು ಕಸ್ತೂರಿ ರಂಗನ್ ಸಮಿತಿ ನೇಮಿಸಿತು. ಗಾಡ್ಗೀಳ್ ವರದಿಯು ಆರು ರಾಜ್ಯಗಳಲ್ಲಿ ಹರಡಿರುವ ಪೂರ್ಣ ಘಟ್ಟದ 1.29 ಲಕ್ಷ ಚದರ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ್ದರೆ, ಕಸ್ತೂರಿ ರಂಗನ್ ವರದಿಯು ಅದನ್ನು 59,940 ಚದರ ಕಿ.ಮೀ.ಗಳಿಗೆ (ಪಶ್ಚಿಮ ಘಟ್ಟಗಳ ಶೇ.37ರಷ್ಟು ಪ್ರದೇಶ) ಇಳಿಸಿತು. ಆ ಬಳಿಕ ಕೇರಳಂ ನಡೆಸಿದ ಭೌತಿಕ ಸಮೀಕ್ಷೆ ಆಧರಿಸಿ ಕೇಂದ್ರ ಸರಕಾರ ಇಎಸ್‌ಎ ವ್ಯಾಪ್ತಿಯನ್ನು ಸ್ವಲ್ಪ ಕಡಿಮೆ ಮಾಡಿದೆ. ಆರಂಭದಿಂದಲೂ, ಕೇಂದ್ರ ಸರಕಾರ ಕರಡು ಅಧಿಸೂಚನೆಯಲ್ಲಿ ಒಟ್ಟಾರೆ ಪರಿಸರ ಸೂಕ್ಷ್ಮ ಪ್ರದೇಶವನ್ನು 56,825.7 ಚದರ ಕಿ.ಮೀ. ಎಂದು ಉಲ್ಲೇಖಿಸುತ್ತಾ ಬಂದಿದೆ. ಜು.27ರಂದು ಹೊರಡಿಸಿರುವ ಅಧಿಸೂಚನೆಯಲ್ಲೂ ಇಷ್ಟೇ ಭೂಪ್ರದೇಶವನ್ನು ಉಲ್ಲೇಖಿಸಿದೆ.
ಕರಡು ಅಧಿಸೂಚನೆಯ ಪ್ರಕಾರ, ಆರು ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಹೆಚ್ಚು ಪ್ರದೇಶ (20,668 ಚದರ ಕಿ.ಮೀ.- 10 ಜಿಲ್ಲೆಗಳ 1,449 ಗ್ರಾಮಗಳು) ಇಎಸ್‌ಎ ವ್ಯಾಪ್ತಿಯಲ್ಲಿ ಬರುತ್ತದೆ.ಕರ್ನಾಟಕ ರಾಜ್ಯದ 10 ಜಿಲ್ಲೆಗಳಿಂದ ಒಟ್ಟು 1,449 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರ್ಪಡೆಯಾಗಿವೆ. ಇದರಲ್ಲಿ ಬೆಳಗಾವಿ ಜಿಲ್ಲೆ-63,ಚಾಮರಾಜನಗರ-21,ಚಿಕ್ಕಮಗಳೂರು-13, ದಕ್ಷಿಣ ಕನ್ನಡ-44,ಉಡುಪಿ-35,ಹಾಸನ-31 ಗ್ರಾಮಗಳು ಸೇರ್ಪಡೆಗೊಂಡಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪರಿಸರ ಸೂಕ್ಷ್ಮ ವಲಯಕ್ಕೆ 5 ತಾಲೂಕುಗಳ 447 ಗ್ರಾಮಗಳು ಸೇರ್ಪಡೆಯಾಗಿವೆ.ಶಿವಮೊಗ್ಗ- 60, ತೀರ್ಥಹಳ್ಳಿ - 139, ಶಿಕಾರಿಪುರ - 11, ಸಾಗರ - 114, ಹೊಸನಗರ - 118 ಗ್ರಾಮಗಳು ಸೇರ್ಪಡೆಯಾಗಿವೆ.
ಪಶ್ಚಿಮ ಘಟ್ಟ ಭಾಗದ ರೈತರು ಮತ್ತು ಇತರರು ಈಗಾಗಲೇ ಜಾರಿಯಲ್ಲಿರುವ ಅರಣ್ಯ ಕಾನೂನುಗಳಿಂದ ಹಲವು ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಜತೆಗೆ ಇಎಸ್‌ಎ ಕೂಡ ಜಾರಿಯಾದರೆ ಕೃಷಿ, ತೋಟಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜೀವನೋಪಾಯದ ವಿಚಾರದಲ್ಲಿ ತೊಡಕುಂಟಾಗುತ್ತದೆ ಎನ್ನುವ ಆತಂಕ ಜನರಲ್ಲಿದೆ. ಹೀಗಾಗಿ ಪ್ರತೀ ಬಾರಿ ಕರಡು ಅಧಿಸೂಚನೆಯನ್ನು ವಿರೋಧಿಸುತ್ತಿದ್ದಾರೆ.
ರಾಜ್ಯಗಳ ವಿರೋಧ:
ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ, ತಮಿಳುನಾಡು, ಕೇರಳಂ ರಾಜ್ಯಗಳು ಮೊದಲಿನಿಂದಲೂ ಕರಡು ಅಧಿಸೂಚನೆಯನ್ನು ವಿರೋಧಿಸುತ್ತಲೇ ಬಂದಿವೆ. ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದರೆ, ಆ ಪ್ರದೇಶದಲ್ಲಿ ಭವಿಷ್ಯದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಅತ್ಯಂತ ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಲಿದೆ ಎಂಬುದು ರಾಜ್ಯಗಳ ವಾದ. ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲು ಗುರುತಿಸಿರುವ ಪ್ರದೇಶಗಳ ಜನರು, ಜನಪ್ರತಿನಿಧಿಗಳು ಕೂಡ ಕರಡು ಅಧಿಸೂಚನೆಗೆ ವಿರೋಧ ಮಾಡುತ್ತಲೇ ಇದ್ದಾರೆ.ಹೀಗಾಗಿ ರಾಜ್ಯಗಳ ವಿರೋಧದಿಂದಾಗಿ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.
ಕರ್ನಾಟಕ ಸರಕಾರವೂ ಈ ಹಿಂದೆ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದು ಈ ಬಗ್ಗೆ ತನ್ನ ನಿಲುವನ್ನು ತಿಳಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದರೆ ರಾಜ್ಯದ 10 ಜಿಲ್ಲೆಗಳ 33 ತಾಲೂಕುಗಳ 1,449 ಗ್ರಾಮಗಳಲ್ಲಿರುವ ಲಕ್ಷಾಂತರ ಜನರಿಗೆ ಭಾರೀ ತೊಂದರೆ ಆಗಲಿದೆ. ಈ ವರದಿ ಬಗ್ಗೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜನಪ್ರತಿನಿಧಿಗಳು ಧ್ವನಿ ಎತ್ತಿದ್ದಾರೆ. ಇದಲ್ಲದೆ, ವರದಿಯಲ್ಲಿ ಗುರುತಿಸಿರುವ ಬಹುತೇಕ ಪ್ರದೇಶವನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಈಗಾಗಲೇ ಸಂರಕ್ಷಣೆ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ತನ್ನ ನಿಲುವು ಪ್ರಕಟಿಸಿತ್ತು.
ಪ್ರಸಕ್ತ ರಾಜ್ಯ ಸರಕಾರ ಕೂಡ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ತಿರಸ್ಕರಿಸುವುದಾಗಿ ಪ್ರಕಟಿಸಿದೆ. ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ಹಾಗೂ ಕರಡು ಅಧಿಸೂಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಕೇಂದ್ರ ಸರಕಾರಕ್ಕೆ ಆಕ್ಷೇಪ ಸಲ್ಲಿಸುವುದಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಆ.29ರಂದು ಬೃಹತ್ ಪಾದಯಾತ್ರೆ,ಬಹಿರಂಗ ಸಭೆ
ಕಸ್ತೂರಿ ರಂಗನ್ ವರದಿ ಜಾರಿಯ ಅಧಿಸೂಚನೆ ವಿರೋಧಿಸಿ ಬೃಹತ್ ಪಾದಯಾತ್ರೆ ಹಾಗೂ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ. ಆ.29ರಂದು ಬೆಳಗ್ಗೆ 9ಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಗಡಿಯ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಿಂದ ಬೃಹತ್ ಪಾದಯಾತ್ರೆ ಪ್ರಾರಂಭವಾಗಿ ಹೊಸನಗರದಲ್ಲಿ ಬಹಿರಂಗ ಸಭೆ ನಡೆಯಲಿದೆ.
ಹೋರಾಟಕ್ಕೆ ಸಹಕಾರಿ ವೇದಿಕೆ
ಕಳೆದ 13 ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ಮಲೆನಾಡಿನ ಜನರನ್ನು ತೀವ್ರ ಆತಂಕಕ್ಕೆ ದೂಡಿದೆ. ಜನರ ಆತಂಕ ದೂರ ಮಾಡುವ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಬೃಹತ್ ಹೋರಾಟ ರೂಪಿಸುವ ಸಲುವಾಗಿ ಪಶ್ಚಿಮ ಘಟ್ಟ ಸಹಕಾರಿ ವೇದಿಕೆ ಅಸ್ತಿತ್ವಕ್ಕೆ ಬಂದಿದೆ.
ಇದಕ್ಕೆ ಸಹಕಾರಿ ಧುರೀಣ ಡಾ.ಆರ್.ಎಂ. ಮಂಜುನಾಥ್ ಗೌಡ ಅಧ್ಯಕ್ಷತೆ ಹಾಗೂ ಸಮಾಜವಾದಿ ಹಿನ್ನೆಲೆಯ ಬಿ.ಆರ್. ಜಯಂತ್ ಸಂಚಾಲಕತ್ವದಲ್ಲಿ ಪಶ್ಚಿಮ ಘಟ್ಟ ಸಹಕಾರಿ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು,ಹೋರಾಟದ ರೂಪುರೇಷೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೋರಾಟಕ್ಕೆ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಹಕಾರಿ ಧುರೀಣರು,ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ನಾಯಕರು, ಮುಖಂಡರು, ಜಿಲ್ಲೆಯ ರೈತ-ದಲಿತ ಸಂಘಟನೆಗಳ ಪ್ರಮುಖರು ಕೈ ಜೋಡಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಜನರ ಜೀವನ-ಕೃಷಿ ಚಟುವಟಿಕೆ ಮೇಲಾಗುವ ಅಪಾಯದ ಕುರಿತು ಜನರಿಗೆ ಮಾಹಿತಿ ಒದಗಿಸುವ ಮೂಲಕ ಪಾದಯಾತ್ರೆಗೆ ಸಂಘಟಿಸುವ ಕೆಲಸವನ್ನು ಸಹಕಾರಿ ಕ್ಷೇತ್ರದ ಮುಖಂಡರು ಮಾಡುತ್ತಿದ್ದಾರೆ.ಈಗಾಗಲೇ ಹಲವು ಸುತ್ತಿನ ಸಭೆಗಳು ನಡೆದು,ಜನರಿಗೆ ಕರಪತ್ರ ವಿತರಿಸಲಾಗುತ್ತಿದೆ.