ರಾಯಚೂರು: ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಾಗಿ ದರ ಏರಿಕೆಯಾಗುವುದು ಸಹಜ. ಆದರೆ ಈ ಬಾರಿ ಮಳೆಗಾಲದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ, ಸುಡು ಬಿಸಿಲು ಮುಂದುವರಿದಿರುವ ಪರಿಣಾಮ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಬಿಸಿಲಿನಿಂದ ದೇಹ ತಂಪಾಗಿಸಿಕೊಳ್ಳಲು ಎಳನೀರಿನ ಮೊರೆ ಹೋಗುತ್ತಿದ್ದು, ಎಳನೀರಿನ ದರವೂ ಇಳಿಕೆಯಾಗದೆ ಏರಿಕೆಯಾಗುತ್ತಲೇ ಇದೆ.
ನಗರದಲ್ಲಿ ಸದ್ಯ ಸಣ್ಣ ಗಾತ್ರದ ಎಳನೀರಿಗೆ 50ರಿಂದ 60 ರೂ. ಹಾಗೂ ಮಧ್ಯಮ ಗಾತ್ರದ ಕಾಯಿಗಳಿಗೆ 70ರಿಂದ 80 ರೂ.ವರೆಗೆ ಏರಿಕೆಯಾಗಿದೆ. ಗ್ರಾಹಕರಿಗೆ ಬಿಸಿಲಿನ ತಾಪದ ಜೊತೆ ದರ ಏರಿಕೆ ಬಿಸಿಯೂ ಕಾಡುತ್ತಿದೆ.
ದರ ಏರಿಕೆಗೆ ಕಾರಣವೇನು :
ನಿರೀಕ್ಷಿತ ಮಳೆ ಬಾರದ ಕಾರಣ ಎಳನೀರಿನ ಫಸಲು ಕಡಿಮೆಯಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿ, ಎಳನೀರು ಸೇವನೆ ಮಾಡುವವರ ಸಂಖ್ಯೆ ಏರುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಎಳನೀರು ಪೂರೈಕೆಯಾಗುತ್ತಿಲ್ಲ. ರಾಯಚೂರಿಗೆ ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಏಳನೀರು ತರುತ್ತಿದ್ದು, ಹಿಂದೆ ಹೋಲ್ಸೆಲ್ ವ್ಯಾಪಾರಸ್ಥರು ಎರೆಡು ದಿನಕ್ಕೊಮ್ಮೆ ಲಾರಿಯಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದ್ದರು. ಈ ವರ್ಷ ಮುಂಬೈ, ದೆಹಲಿಗೆ ಹೆಚ್ಚು ಸಾಗಣೆ ಮಾಡಲಾಗುತ್ತಿದ್ದು, ವಾರಕ್ಕೆ ಎರೆಡು ಬಾರಿ ಮಾತ್ರ ಲಾರಿ ಲೋಡ್ ಬರುತ್ತಿದೆ.
ನಗರದಲ್ಲಿ ಸುಮಾರು 40 ಎಳನೀರಿನ ವ್ಯಾಪಾರಸ್ಥರು ಇದ್ದು, 4ರಿಂದ 5 ಜನ ಹೋಲ್ ಸೇಲ್ ಮಾರಾಟಗಾರರು ಇದ್ದಾರೆ. ಒಂದು ಲಾರಿ ಲೋಡ್ನಲ್ಲಿ 6000 ಎಳನೀರು ಕಾಯಿಗಳು ಇರುತ್ತದೆ. ಇಬ್ಬರು ಅಥವಾ ಮೂರು ಜನ ವ್ಯಾಪಾರಸ್ಥರು ಸೇರಿ ಲೋಡ್ ತರುತ್ತಾರೆ. ಮಧ್ಯಮ ಗಾತ್ರದ ಒಂದು ಕಾಯಿಗೆ 55ರಿಂದ 60ರೂ. ಹೋಲ್ಸೆಲ್ ಮಾರಾಟಗಾರರಿಗೆ ಎಳನೀರಿನ ಬೆಲೆಯಿದ್ದರೇ, ಸ್ಥಳೀಯ ವ್ಯಾಪಾರಸ್ಥರಿಗೆ 62ರಿಂದ 65 ರೂ.ಗೆ ಸಿಗುತ್ತಿದೆ. ಆದ್ದರಿಂದ ಗ್ರಾಹಕರಿಗೆ 70ರಿಂದ 80 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
ಕಿಡ್ನಿ ಸಮಸ್ಯೆ ಇರುವವರು, ದೈಹಿಕ ವ್ಯಾಯಾಮ ಮಾಡುವವರು, ರೋಗಿಗಳಿಗೆ ವೈದ್ಯರು ಎಳನೀರು ಕುಡಿಯುವಂತೆ ಸಲಹೆ ನೀಡುತ್ತಿದ್ದು, ದರ ಏರಿಕೆಯನ್ನು ಲೆಕ್ಕಿಸದೇ ಗ್ರಾಹಕರು ಎಳನೀರು ಖರೀದಿ ಮಾಡುತ್ತಿದ್ದಾರೆ ಎಂದು ಎಳನೀರು ವ್ಯಾಪಾರಸ್ಥ ಗಣೇಶ ತಿಳಿಸಿದರು.
ಮಳೆಯಿಲ್ಲದೇ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಎಳನೀರಿನ ದರವೂ ಹೆಚ್ಚಾಗಿದೆ. ಆದ್ದರಿಂದ ಗ್ರಾಹಕರಿಗೆ 70ರಿಂದ 80ರೂ. ದರದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದರು, ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ. ಇನ್ನು ಮುಂದೆಯೂ ಎಳನೀರಿನ ದರ ಹೆಚ್ಚಾಗಬಹುದು ಎಂಬ ನೀರಿಕ್ಷೆಯಿದೆ.
-ಸೈಯದ್ ನಿಸಾರ್ ಅಹಮದ್, ಎಳನೀರು ವ್ಯಾಪಾರಸ್ಥ