ಕೃಷ್ಣಾ ಮೇಲ್ದಂಡೆ ಕಾಲುವೆಗೆ ಜಮೀನು: ಅಲೆದಾಡುತ್ತಿರುವ ರೈತರು
ಸರ್ವೇ, ಪಿಟಿ ಶೀಟ್ ಸಿಗದೆ ವಿಳಂಬವಾಗುತ್ತಿರುವ ಪರಿಹಾರ
ಇಂಡಿ: ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಜಮೀನು ನೀಡಿರುವ ರೈತರು ಪರಿಹಾರಕ್ಕಾಗಿ ಕಳೆದ ಆರು ತಿಂಗಳಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಅಧಿಕಾರಿಗಳಿಂದ ಸ್ಪಂದನ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಿಂಬಾಳ ಕೆ.ಡಿ. ಗ್ರಾಪಂ ವ್ಯಾಪ್ತಿಯ ಲಿಂಗದಳ್ಳಿ ಗ್ರಾಮದ ನೀಲಪ್ಪ ತಂದೆ ಗುದ್ದಪ್ಪ ಹರಿಜನ, ಯಲ್ಲಪ್ಪ ತಂದೆ ಗುದ್ದಪ್ಪ ಹರಿಜನ ಹಾಗೂ ಶಟ್ಟೆಪ್ಪ ಗುದ್ದಪ್ಪ ಹರಿಜನ ಅವರಿಗೆ ಸೇರಿದ ಸರ್ವೇ ನಂ.37ರ 28 ಎಕರೆ ಜಮೀನಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 0.32ರ ಕಾಲುವೆ ಹಾದುಹೋಗಿದೆ. ಈ ಹಿನ್ನೆಲೆಯಲ್ಲಿ ಪಿಟಿ ಶೀಟ್ಗಾಗಿ ರೈತರು ಸಂಬಂಧಿಸಿದ ವಿಶೇಷ ಭೂಸ್ವಾಧೀನ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಐದಾರು ತಿಂಗಳಿಂದ ಹೊಲದ ಕೆಲಸ ಬಿಟ್ಟು ಹತ್ತಾರು ಬಾರಿ ಕಚೇರಿಗೆ ಅಲೆದಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳನ್ನು ವಿಚಾರಿಸಿದಾಗ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಮೀನಿನಲ್ಲಿ ಕಾಲುವೆ ಎಷ್ಟು ಪ್ರಮಾಣದಲ್ಲಿ ಹಾದುಹೋಗಿದೆ ಎಂಬುದನ್ನು ಸರ್ವೇ ಮಾಡಿ ಪಿಟಿ ಶೀಟ್ ಸಿದ್ಧಪಡಿಸಿದ ಬಳಿಕವಷ್ಟೇ ಪರಿಹಾರ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಕೂಡಲೇ ಸರ್ವೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ:
ನಮ್ಮ ಇಲಾಖೆಯ ಸರ್ವೇ ಅಧಿಕಾರಿಗಳನ್ನು ಸುಮಾರು ನಾಲ್ಕು ತಿಂಗಳ ಹಿಂದೆ ಮೇಲಧಿಕಾರಿಗಳು ವಾಪಸ್ ಕರೆಸಿಕೊಂಡಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕಚೇರಿಗೆ ಸರ್ವೇ ಅಧಿಕಾರಿಗಳನ್ನು ನಿಯೋಜಿಸಿದ ಕೂಡಲೇ ಲಿಂಗದಳ್ಳಿಗೆ ಕಳುಹಿಸಲಾಗುವುದು. ಆದಷ್ಟು ಬೇಗ ರೈತರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಬಿಜೆಎನ್ಎಲ್ ಲೆಕ್ಕ ಪರಿಶೋಧನಾಧಿಕಾರಿ ವಿ.ಕೆ. ಮಸಳಿ ತಿಳಿಸಿದ್ದಾರೆ.