ಬೀದರ್: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯಾದ್ಯಂತ ಬೆಳೆಗಳು ಒಣಗುತ್ತಿದ್ದು, ಇದೀಗ ಹಿಂಗಾರು ಬೆಳೆಗಳ ಮೇಲೂ ಬರದ ಛಾಯೆ ಆವರಿಸಿದೆ. ಮಳೆಯಿಲ್ಲದೆ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದ್ದು, ಬಿತ್ತನೆ ಮಾಡಿದ ಬಂಡವಾಳವೂ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂದಿನ ಹಂಗಾಮಿನಲ್ಲಾದರೂ ಬೆಳೆ ಬೆಳೆಯಬಹುದೇ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದ್ದು, ಹಿಂಗಾರು ಮಳೆಯ ಮುನ್ಸೂಚನೆಯೂ ಇಲ್ಲವಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಕೆಲವು ಭಾಗಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಮುಂಗಾರು ಬೆಳೆಗಳು ಕೈಕೊಟ್ಟಿರುವ ಬೆನ್ನಲ್ಲೇ ಹಿಂಗಾರು ಬೆಳೆಗಳೂ ಕೈಕೊಡುವ ಆತಂಕ ಎದುರಾಗಿದೆ.

ಮುಂಗಾರು ಬೆಳೆಗಳಿಗೆ ಬರದ ಹೊಡೆತ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ, ಉದ್ದು, ಹೆಸರು, ಹುರುಳಿ, ಅವರೆ, ಭತ್ತ, ಮುಸುಕಿನ ಜೋಳ ಹಾಗೂ ಹೈಬ್ರಿಡ್ ಜೋಳ ಸೇರಿದಂತೆ ಆಹಾರ ಧಾನ್ಯಗಳ ಬಿತ್ತನೆಗೆ 1,71,129 ಹೆಕ್ಟೇರ್ ಗುರಿ ನಿಗದಿಪಡಿಸಲಾಗಿತ್ತು.

ಈ ಪೈಕಿ 1,41,420 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಪ್ರಮುಖ ಬೆಳೆಯಾದ ತೊಗರಿಯನ್ನು 1,20,964 ಹೆಕ್ಟೇರ್, ಉದ್ದನ್ನು 8,618 ಹೆಕ್ಟೇರ್ ಹಾಗೂ ಹೆಸರನ್ನು 10,871 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು.

ಆದರೆ, ಮಳೆ ಕೊರತೆಯಿಂದ ಉದ್ದು ಮತ್ತು ಹೆಸರು ಬೆಳೆಗಳು ಸಂಪೂರ್ಣ ನಾಶವಾಗಿದ್ದು, ತೊಗರಿಯೂ ಒಣಗುತ್ತಿದೆ. ಇನ್ನು ಎಣ್ಣೆಕಾಳು ಬೆಳೆಯಾದ ಸೋಯಾ

ವನ್ನು 2,17,773 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದರೂ ನಿರೀಕ್ಷಿತ ಇಳುವರಿಯ ಭರವಸೆ ಇಲ್ಲವಾಗಿದೆ. ಕಬ್ಬು, ಹತ್ತಿ ಸೇರಿದಂತೆ ಇತರ ಬೆಳೆಗಳೂ ಒಣಗುತ್ತಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಹಿಂಗಾರು ಬಿತ್ತನೆಗೂ ಹಿನ್ನಡೆ ಆತಂಕ

ಮುಂಗಾರು ಬೆಳೆಗಳ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಹಿಂಗಾರು ಹಂಗಾಮಿನಲ್ಲಿಯೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕಡಲೆ, ಜೋಳ, ಗೋಧಿ, ಕುಸುಬೆ ಹಾಗೂ ಮೆಕ್ಕೆಜೋಳ ಸೇರಿದಂತೆ ಪ್ರಮುಖ ಹಿಂಗಾರು ಬೆಳೆಗಳ ಬಿತ್ತನೆಗೆ ಮಳೆಯ ಅಗತ್ಯವಿದೆ. ಆದರೆ, ಭೂಮಿಯಲ್ಲಿ ತೇವಾಂಶವಿಲ್ಲದ ಕಾರಣ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.

ಇತ್ತೀಚೆಗೆ ಚಿಯಾ ಎಂಬ ವಾಣಿಜ್ಯ ಬೆಳೆಯತ್ತಲೂ ರೈತರು ಆಸಕ್ತಿ ತೋರುತ್ತಿದ್ದರೂ ಮಳೆ ಕೊರತೆಯಿಂದ ಅದನ್ನು ಬೆಳೆಯುವುದಕ್ಕೂ ಹಿಂದೇಟು ಹಾಕುವಂತಾಗಿದೆ.

ಜಿಲ್ಲೆಯಲ್ಲಿ ಹಿಂಗಾರು ಬೆಳೆಗಳ ಬಿತ್ತನೆಗೆ ಒಟ್ಟು 1,51,032 ಹೆಕ್ಟೇರ್ ಗುರಿ ಹೊಂದಲಾಗಿದೆ. ಈ ಪೈಕಿ ಕಡಲೆಗೆ 85,000 ಹೆಕ್ಟೇರ್, ಹಿಂಗಾರು ಜೋಳಕ್ಕೆ 36,907 ಹೆಕ್ಟೇರ್ ಹಾಗೂ ಕುಸುಬೆಗೆ 20,000 ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದೆ. ಆದರೆ, ಮುಂಗಾರು ಬೆಳೆಗಳ ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಿಂಗಾರು ಬಿತ್ತನೆಯ ಪ್ರಮಾಣವನ್ನೂ ಕಡಿಮೆ ಮಾಡುವ ಸಾಧ್ಯತೆ ಇದೆ.

ಹಿಂಗಾರು ಹಂಗಾಮಿಗೆ ಕಡಲೆ 22,000 ಕ್ವಿಂಟಲ್, ಜೋಳ 50 ಕ್ವಿಂಟಲ್, ಗೋಧಿ 141 ಕ್ವಿಂಟಲ್ ಹಾಗೂ ಕುಸುಬೆ 89 ಕ್ವಿಂಟಲ್ ಬೀಜ ವಿತರಿಸುವ ಗುರಿ ಹೊಂದಲಾಗಿದೆ. ಈವರೆಗೆ 550 ಕ್ವಿಂಟಲ್ ಕಡಲೆ ಬೀಜ ಮಾತ್ರ ಮಾರಾಟವಾಗಿದ್ದು, ಇತರ ಬೆಳೆಗಳ ಬೀಜ ಮಾರಾಟವಾಗಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾದರೆ ಬಿತ್ತನೆ ಚಟುವಟಿಕೆ ಚುರುಕುಗೊಳ್ಳುವ ನಿರೀಕ್ಷೆಯಿದೆ.

ಬತ್ತಿದ ನದಿಗಳು; ನೀರು, ಮೇವಿನ ಆತಂಕ

ಜಿಲ್ಲೆಯ ಮಾಂಜ್ರಾ ಮತ್ತು ಕಾರಂಜಾ ನದಿಗಳು ಬತ್ತಿಹೋಗಿದ್ದು, ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಆತಂಕ ಎದುರಾಗಿದೆ. ನದಿ ದಡದಲ್ಲಿರುವ ಬೆಳೆಗಳೂ ಒಣಗುತ್ತಿವೆ. ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಕುಡಿಯುವ ನೀರು, ಮೇವು ಪೂರೈಕೆ ಸೇರಿದಂತೆ ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ

contributor