ಸಾಂವಿಧಾನಿಕ ನೈತಿಕತೆ ಇಲ್ಲದ ಸಿಲಿಕಾನ್ ದಂಪತಿಗಳು!
Photo credit: PTI
ಸಿಲಿಕಾನ್ ದಂಪತಿಗಳೇ,
ಸಮಾಜದಲ್ಲಿ ಹಿಂದುಳಿದವರೆಷ್ಟು ಮತ್ತು ಯಾಕೆ ಎಂದು ತಿಳಿಯಲು ಮುಂದುವರೆದವರೆಷ್ಟು, ಯಾಕೆ ಎಂದು ತಿಳಿಯಬೇಕು. ಮುಂದುವರೆದವರು ಹಿಂದುಳಿದವರಿಂದ ಕಸಿಯುತ್ತಿರುವೆಷ್ಟು ಎಂದು ತಿಳಿದುಕೊಳ್ಳದೆ ಹಿಂದುಳಿದವರ ಪಾಲೆಷ್ಟು ಎಂಬುದೂ ಅರ್ಥವಾಗದು.
ಹೀಗಾಗಿ ಸಾಮಾಜಿಕ ನ್ಯಾಯ ಸಾಧಿಸಲು ಇಡೀ ಸಮಾಜದ ಸಾಮಾಜಿಕ ಸಮೀಕ್ಷೆಯಾಗಬೇಕು.
ಪ್ರತಿ ಹತ್ತು ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಸಾಮಾಜಿಕ ಸಮೀಕ್ಷೆ ಮಾಡಬೇಕೆಂದು 1994 ರಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದ್ದ ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಂತ ಸಾಮಾಜಿಕ ಸಮೀಕ್ಷೆ ಇಡೀ ಸಮಾಜವನ್ನು ಒಳಗೊಳ್ಳಬೇಕು ಎಂದು ಆದೇಶಿಸಿದೆ.
ಸರ್ಕಾರ ಆ ಆದೇಶವನ್ನು ಅರೆಮನಸ್ಸಿನಿಂದ ಜಾರಿ ಮಾಡುತ್ತಿದೆ.. ಅಷ್ಟೇ
ಕರ್ನಾಟಕ ಹೈಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಹಿಂದುಳಿದ ವರ್ಗಗಳನ್ನು ಪತ್ತೆ ಮಾಡಲು ರಾಜ್ಯದ ಸಮಸ್ತ ನಾಗರಿಕರ ಸಾಮಾಜಿಕ ಸ್ಥಿತಿಗತಿ ಸಮೀಕ್ಷೆ ಮಾಡುವುದು ಅಗತ್ಯವೆಂದು ಹೇಳಿದ್ದ (ಮಂಡಲ್ ಜಡ್ಜ್ ಮೆಂಟ್ ಎಂದು ಪ್ರಖ್ಯಾತವಾಗಿರುವ ಇಂದಿರಾ ಸಾಹ್ನಿ ಮತ್ತು ಭಾರತ ಒಕ್ಕೂಟದ ಪ್ರಕರಣದಲ್ಲಿ (WP (C)930/1990) ) ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಆದೇಶವನ್ನು ಕೂಡ ಅಹವಾಲುದಾರರಿಗೆ ನೆನಪಿಸಿದೆ)
ಆ ಆದೇಶದಲ್ಲಿ ಸುಪ್ರೀಂ ಕೋರ್ಟು : 859. .... (b) Neither the Constitution nor the law prescribes the procedure or method of identification of backward classes. Nor is it possible or advisable for the court to lay down any such procedure or method. It must be left to the authority appointed to identify. It can adopt such method/procedure as it thinks convenient and so long as its survey covers the entire populace, no objection can be taken to it." ಎಂದೂ ಸ್ಪಷ್ಟಪಡಿಸಿದೆ.
ಹಾಗೆಯೇ...
“782. Coming back to the question of identification, the fact remains that one has to begin somewhere – with some group, class or section. There is no set or recognise method. There is no law or other statutory instrument prescribing the methodology. The ultimate idea is to survey the entire populace…”
ಹೀಗೆ ಸಾಂವಿಧಾನಿಕ ಪೀಠ ಸಂದೇಹಕ್ಕೆ ಕಾರಣವೇ ಇಲ್ಲದಂತೆ ಸಮಸ್ತ ಜನಸಂಖ್ಯೆಯ ಸಮೀಕ್ಷೆಯ ಮೂಲಕ ಹಿಂದುಳಿದ ವರ್ಗದ ಪತ್ತೆಯಾಗಬೇಕು ಎಂದು ಹೇಳುತ್ತಾ :
"ಹಿಂದುಳಿದ ವರ್ಗಗಳನ್ನು ಹೇಗೆ ಪತ್ತೆ ಮಾಡಬೇಕೆಂಬುದನ್ನು ಸಂವಿಧಾನದಲ್ಲಾಗಲೀ , ಕಾನೂನಲ್ಲಾಗಲೀ ಸ್ಪಷ್ಟಪಡಿಸಿಲ್ಲ. ಕೋರ್ಟುಗಳೂ ಕೂಡ ಅದರ ಬಗ್ಗೆ ನಿರ್ದಿಷ್ಟ ಮಾರ್ಗದರ್ಶನ ಕೊಡಲಾಗುವುದಿಲ್ಲ. ಆದರೆ ಅದನ್ನು ಪತ್ತೆ ಹಚ್ಚಲು ರೂಪಿಸಲಾದ ಪ್ರಾಧಿಕಾರವು ತನ್ನ ಸಮೀಕ್ಷೆಯಲ್ಲಿ ಇಡೀ ಜನಸಂಖ್ಯೆಯನ್ನು ಒಳಗೊಳ್ಳಬೇಕು" ಎಂದು ಸ್ಪಷ್ಟಪಡಿಸಿದೆ.
ಎಂದರೆ ಸಾಂವಿಧಾನಿಕ ಗುರಿಗಳಲ್ಲಿ ಒಂದಾದ ಸಾಮಾಜಿಕ ನ್ಯಾಯ ಈಡೇರಲು ಸಾಮಾಜಿಕ ಸಮೀಕ್ಷೆಯಲ್ಲಿ ಎಲ್ಲಾ ನಾಗರಿಕರು ಒಳಗೊಳ್ಳುವುದು ನಾಗರಿಕ ಹೊಣೆಗಾರಿಕೆ ಮತ್ತು ಸಾಂವಿಧಾನಿಕ ನೈತಿಕತೆ.
ಆದರೆ ದುರದೃಷ್ಟವಶಾತ್ ಕರ್ನಾಟಕ ಹೈಕೋರ್ಟ್ ಇವೆಲ್ಲಾ ಅಂಶಗಳನ್ನು ಪರಿಗಣಿಸಿದರೂ , ಸೆನ್ಸಸ್ ಎಂಬುದು ಸರ್ವೇ ಅಲ್ಲ ಮತ್ತು ಸರ್ವೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂಬುದಕ್ಕೆ ಕಾನೂನಿನ ಬಲವಿಲ್ಲ ಎಂಬ ತಾಂತ್ರಿಕ ಅಂಶವನ್ನು ಪುರಸ್ಕರಿಸಿ ಸಮೀಕ್ಷೆಯಲ್ಲಿ ಭಾಗವಹಿಸುವುದುನ್ನು ಐಚ್ಛಿಕವೇ ಹೊರತು ಕಡ್ಡಾಯವಲ್ಲ ಎಂದು ನಿರ್ದೇಶಿಸಿದೆ. ಆದರೆ ಹೈಕೋರ್ಟ್ ಆದೇಶವೂ ಸಹ ನಾಗರಿಕ ಹೊಣೆಗಾರಿಕೆಯುಳ್ಳ ನಾಗರಿಕರು ಸಮೀಕ್ಷೆಯಲ್ಲಿ ಭಾಗವಹಿಸುವ ಅಗತ್ಯವಿಲ್ಲ ಎಂದು ಹೇಳಿಲ್ಲ.
ಬದಲಿಗೆ ಸಮಾಜದ ಸರ್ವರೂ ಭಾಗವಹಿಸುವುದು ಅಗತ್ಯ ಮತ್ತು ಅಪೇಕ್ಷಣೀಯ ಎಂದೇ ಅಭಿಪ್ರಾಯಪಟ್ಟಿದೆ. ಆದರೆ ಆ ನಿರ್ಧಾರದ ಹೊಣೆಗಾರಿಕೆಯನ್ನು ಆಯಾ ನಾಗರಿಕರಿಗೆ ಬಿಟ್ಟಿದೆ.
ಆದರೆ ಬಿಜೆಪಿಗಳು ಮತ್ತು ಕಾಂಗ್ರೆಸ್ಸಿನೊಳಗಿನ ಬಲಾಢ್ಯ ಜಾತಿವಾದಿ ಶಕ್ತಿಗಳು ಹೈಕೋರ್ಟಿನ ಆದೇಶದ ಬಗ್ಗೆ ಮತ್ತು ಸಮೀಕ್ಷೆಯ ಉದ್ದೇಶದ ಬಗ್ಗೆ ದುರುದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಾ ಸಮೀಕ್ಷೆಯನ್ನು ಮತ್ತು ಆ ಮೂಲಕ ಸಾಮಾಜಿಕ ನ್ಯಾಯವನ್ನು ವಿಫಲಗೊಳಿಸುತ್ತಿದ್ದಾರೆ.
ನಾಗರಿಕ ಹೊಣೆಗಾರಿಕೆ ಇಲ್ಲದ, ಸಾಂವಿಧಾನಿಕ ನೈತಿಕತೆ ಇಲ್ಲದ ಅಥವಾ ಅಪಪ್ರಚಾರಕ್ಕೆ ಬಲಿಬಿದ್ದಿರುವ ಮೇಲ್ಜಾತಿ ನಾಗರಿಕರು ಸಮೀಕ್ಷೆಯಲ್ಲಿ ಭಾಗವಹಿಸದ ಮೂಲಕ ಸಂವಿಧಾನ ವಿರೋಧಿ ಬ್ರಾಹ್ಮಣೀಯ ಶಕ್ತಿಗಳ ಜೊತೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಕೈಗೂಡಿಸುತ್ತಿದ್ದಾರೆ.
ಆದರೆ ಈ ಸಿಂಪಲ್ ಸಿಲಿಕಾನ್ ದಂಪತಿಗಳು ಮಾತ್ರ ಎಲ್ಲಾ ಗೊತ್ತಿದ್ದೂ, ಪ್ರಜ್ಞಾಪೂರ್ವಕವಾಗಿ ಮತ್ತು ಕುತರ್ಕಗಳನ್ನು ಮುಂದೊಡ್ಡಿ ಸಾಮಾಜಿಕ ಸಮೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲ.
ಆ ಮೂಲಕ ಈ ಸಿಲಿಕಾನ್ ದಂಪತಿಗಳು ಕಾನೂನಿನ ಪ್ರಕಾರ ತಪ್ಪು ಮಾಡದೆ ಇದ್ದರೂ ತಾವು ಸಾಂವಿಧಾನಿಕ ನೈತಿಕತೆ ಇಲ್ಲದ , ಸಾಮಾಜಿಕ ನ್ಯಾಯ ವಿರೋಧಿ ಜಾತಿವಾದಿಗಳೆಂದು ಸಿಂಪಲ್ ಆಗಿ ಸಾಬೀತು ಮಾಡಿದ್ದಾರೆ... ಅಷ್ಟೇ
-ಶಿವಸುಂದರ್