ಸರಕಾರಕ್ಕೆ ಬಿಸಿ ಮುಟ್ಟಿಸಿದ ದಿಲ್ಲಿ ಚಳವಳಿ

Update: 2026-07-23 11:08 IST

ಸಿಜೆಪಿ ಪ್ರತಿಭಟನೆಯಲ್ಲಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಷ್ಟೇ ಇಲ್ಲ. ಅವರ ಸಂಖ್ಯೆಗಿಂತ ಹೆಚ್ಚು ಬೇರೆ ಯುವಕ-ಯುವತಿಯರಿದ್ದಾರೆ. ಬಹುತೇಕ ನೀಟ್ ವಿದ್ಯಾರ್ಥಿಗಳು ಬಂದಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಪದವಿ ಪಡೆದು ಕೆಲಸವಿಲ್ಲದೆ ಪರದಾಡುತ್ತಿರುವ ಯುವಕರಿದ್ದಾರೆ. ಹೊಟ್ಟೆ ಪಾಡಿಗೆ ಡೆಲಿವರಿ ಬಾಯ್-ಗರ್ಲ್‌ಗಳಾಗಿ ದುಡಿಯುವವರಿದ್ದಾರೆ. ಕೊನೆಯದಾಗಿ ಪಕೋಡ ಮಾರುವ ನಿರುದ್ಯೋಗಿಗಳೂ ಉಂಟು. ಪೊಲೀಸರಿಂದ ಹೊಡೆತ ತಿಂದು ಯಾರೂ ಓಡಿ ಹೋಗಿಲ್ಲ. ಧೈರ್ಯವಾಗಿ ನಿಂತಿದ್ದಾರೆ. ದಿನೇ ದಿನೇ ಪ್ರತಿಭಟನೆ ಕಾವು ಏರುತ್ತಿದೆ.

ಹೊಸ ದಿಲ್ಲಿಯ ರಸ್ತೆಗಳು ‘ರಣರಂಗ’ವಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ವಿದ್ಯಾರ್ಥಿ-ಯುವಜನರು ಎಲ್ಲ ರಸ್ತೆಗಳನ್ನು ಮುತ್ತಬಹುದೆಂದು ಭಾವಿಸಿರಲಿಲ್ಲ. ಎನ್‌ಡಿಎ ಸರಕಾರದ ಎರಡು ಪ್ರಮುಖ ಪಿಲ್ಲರ್‌ಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೂ ಅಂದಾಜಿರಲಿಕ್ಕಿಲ್ಲ. ಚಳವಳಿಯ ಪ್ರಖರತೆ ಅರ್ಥ ಮಾಡಿಕೊಳ್ಳಲು ಕೇಂದ್ರ ಗುಪ್ತ ದಳವೂ ಸೋತಿದೆ. ಹಿಂದೆ ನಡೆದ ರೈತ ಚಳವಳಿ, ಶಾಹೀನ್‌ಬಾಗ್ ಪ್ರತಿಭಟನೆಯನ್ನು ಹತ್ತಿಕ್ಕಿದಂತೆ, ಈ ಹೋರಾಟವನ್ನೂ ಹೊಸಕಿ ಹಾಕಬಹುದು ಎಂದು ಸರಕಾರ ಭಾವಿಸಿತ್ತು.ಅದು ಹುಸಿಯಾಗಿದೆ.

ವೈದ್ಯಕೀಯ, ದಂತ ವೈದ್ಯಕೀಯ ಪದವಿ ಪ್ರವೇಶಕ್ಕಾಗಿ ನಡೆಸುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನ್ಯಾಷನಲ್ ಎಲಿಜಿಬಲಿಟಿ ಕಂ ಎಂಟ್ರೆನ್ಸ್ ಟೆಸ್ಟ್- ಎನ್‌ಇಇಟಿ) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ‘ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ’ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಈಚೆಗೆ ಅಸ್ತಿತ್ವಕ್ಕೆ ಬಂದಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದಲ್ಲಿ ತಿಂಗಳಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಬೆಂಬಲಿಸಿ ಲಡಾಖ್‌ನ ಪರಿಸರವಾದಿ, ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸೋಮವಾರ ‘ಸಂಸತ್ ಚಲೋ’ ವೇಳೆ ವಿದ್ಯಾರ್ಥಿ-ಯುವಜನರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ. ಲಾಠಿ ಚಾರ್ಜ್ ಮಾಡಲಾಗಿದೆ. ಅಶ್ರುವಾಯು ಪ್ರಯೋಗಿಸಲಾಗಿದೆ. ‘ಜಲ ಫಿರಂಗಿ’ (ವಾಟರ್ ಜೆಟ್)ಬಳಸಲಾಗಿದೆ. ದಮನ ಮಾಡಿದಷ್ಟು ಚಳವಳಿ ಪ್ರಬಲವಾಗುತ್ತಿದೆ. ಗಾಳಿ- ಮಳೆ ಲೆಕ್ಕಿಸದೆ ಹೋರಾಟಗಾರರು ದಿಲ್ಲಿ ರಸ್ತೆಗಳಲ್ಲಿ ಜಮಾಯಿಸಿದ್ದಾರೆ.

ಮೇಲಿಂದ ಮೇಲೆ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗುತ್ತಿವೆ.ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅಂದಾಜಿನ ಪ್ರಕಾರ 12 ವರ್ಷಗಳಲ್ಲಿ ನೂರಕ್ಕಿಂತ ಹೆಚ್ಚು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇದು ವಿರೋಧಪಕ್ಷಗಳು ಕೊಡುತ್ತಿರುವ ಅಂಕಿಅಂಶ. ‘ನ್ಯೂಸ್ ಲಾಂಡ್ರಿ’ ಸಮೀಕ್ಷೆಯಂತೆ 10 ವರ್ಷಗಳಲ್ಲಿ ಅಂದರೆ, 2014ರಿಂದ 2024ರವರೆಗೆ 89 ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಕೇಂದ್ರ ಮತ್ತು ಬಿಜೆಪಿ ರಾಜ್ಯಗಳ ಅಧೀನದ ಸಂಸ್ಥೆಗಳಲ್ಲೇ ಪ್ರಶ್ನೆ ಪತ್ರಿಕೆ ಅಕ್ರಮಗಳು ಅಧಿಕ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಆರ್‌ಎಸ್ ಅಧಿಕಾರದಲ್ಲಿದ್ದ ರಾಜ್ಯಗಳಲ್ಲೂ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕು. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಕೊಡಬೇಕೆಂದು ಸಿಜೆಪಿ ಒತ್ತಾಯಿಸುತ್ತಿದೆ. ಈ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಕೇಂದ್ರ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಸರಕಾರಗಳಿಗೆ ತಾಯಿ ಹೃದಯ ಇರಬೇಕು. ಕಣ್ಣು- ಕಿವಿ ತೆರೆದಿರಬೇಕು. ಜನರ ಭಾವನೆ, ನಿರೀಕ್ಷೆಗಳಿಗೆ ಸ್ಪಂದಿಸಬೇಕು. ‘ನಾವು ಬದುಕಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ. ಪ್ರಜಾಸತ್ತಾತ್ಮಕ ಸರಕಾರ ಜನರ ಅಭಿಪ್ರಾಯಗಳನ್ನು ಗೌರವಿಸಬೇಕು’. ಆದರೆ, ಕೇಂದ್ರ ಸರಕಾರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.

ಹದಿನೈದು ವರ್ಷದ ಹಿಂದೆ ನಡೆದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ದ ವೇಳೆ ಅಧಿಕಾರದಲ್ಲಿದ್ದ ಯುಪಿಎ ಸರಕಾರ ಸಂವೇದನಾಶೀಲವಾಗಿ ನಡೆದುಕೊಂಡಿತ್ತು. ಹೋರಾಟಗಾರರನ್ನು ಮಾತುಕತೆಗೆ ಕರೆದಿತ್ತು. ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿತ್ತು. ಅದೊಂದು ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ಪ್ರಾಯೋಜಿತ ಚಳವಳಿ. ತೆರೆಯ ಮೇಲೆ ಕೆಲವರಿದ್ದರೆ, ಹಿಂದೆ ಅನೇಕರಿದ್ದರು. ಮನಮೋಹನ್ ಸಿಂಗ್ ಸರಕಾರ ಅದನ್ನು ಗ್ರಹಿಸಲು ವಿಫಲವಾಯಿತು. ಇದರಿಂದ ಎರಡು ಪಕ್ಷಗಳಿಗೆ ಲಾಭವಾಯಿತು. ದಿಲ್ಲಿ ಮಟ್ಟದಲ್ಲಿ ‘ಆಮ್ ಆದ್ಮಿ ಪಕ್ಷ’ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಗೆಲುವಿಗೆ ದಾರಿ ಮಾಡಿತು. ದಿಲ್ಲಿ ಈಗ ಆಮ್ ಆದ್ಮಿಗಳ ಕೈಬಿಟ್ಟಿದೆ. ಬಿಜೆಪಿ ತೆಕ್ಕೆಗೆ ಹೋಗಿದೆ.

ಅದೇ ಮಾದರಿ ಚಳವಳಿ ಈಗ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದೆ. ಪ್ರತಿಭಟನೆ ಕಾರಣ, ಸ್ಥಳ ಹಾಗೂ ಪಾತ್ರಧಾರಿಗಳು ಬೇರೆ. ಸಿಜೆಪಿ ನಾಯಕರು ಹೋರಾಟದ ಮುಂಚೂಣಿಯಲ್ಲಿದ್ದಾರೆ. ಅವರ ಬೆಂಬಲಕ್ಕೆ ಸೋನಂ ವಾಂಗ್ಚುಕ್ ನಿಂತಿದ್ದಾರೆ. ಇವರಿಗೂ ರಾಜಕೀಯ ಮಹತ್ವಾಕಾಂಕ್ಷೆ ಇದೆಯೇ ಎಂದು ಈಗಲೇ ಹೇಳಲಾಗದು. ಚಳವಳಿ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಇವೆಲ್ಲವೂ ಅವಲಂಬಿಸಿದೆ. ಒಂದಂತೂ ಸತ್ಯ, ಸಿಜೆಪಿ ಬೆಳೆದ ರೀತಿ ಗಾಬರಿ ಹುಟ್ಟಿಸಿದೆ. ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿರುವವರ ಸಂಖ್ಯೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ಮೀರಿಸಿದೆ.

ಸರಕಾರ ಆರಂಭದಲ್ಲೇ ಹೋರಾಟಗಾರರನ್ನು ಮಾತುಕತೆಗೆ ಕರೆದಿದ್ದರೆ ಸಂಘರ್ಷ ತಪ್ಪಿಸಬಹುದಿತ್ತು. ಬೇಡಿಕೆ ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದರೂ ಚಳವಳಿ ತಣ್ಣಗಾಗುತ್ತಿತ್ತು. ಪ್ರಧಾನ್ ಖಾತೆ ಬದಲಾವಣೆ ಮಾಡಿದ್ದರೂ ಸಾಕಿತ್ತು. ಪ್ರಧಾನಿ ಮೋದಿಗೆ ಇದು ಕ್ಷಣ ಮಾತ್ರದ ಕೆಲಸವಾಗಿತ್ತು. ಅವರು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಪರೀಕ್ಷೆ ಅಕ್ರಮ ತಡೆಯುವ ವಾಗ್ದಾನ ನೀಡಬೇಕಿತ್ತು. ಅದೇಕೋ ಸರಕಾರ ಹಟಮಾರಿ ಧೋರಣೆ ತಳೆಯಿತು. ಗರ್ವದಿಂದ ನಡೆದುಕೊಂಡಿತು. ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬ ಗಾದೆಯಂತೆ, ಪ್ರಧಾನಿ ತಿಂಗಳ ಬಳಿಕ ಮೌನ ಮುರಿದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ವಿದ್ಯಾರ್ಥಿಗಳ ಹಿತ ರಕ್ಷಣೆಗೆ ಬದ್ಧ ಎಂದಿದ್ದಾರೆ. ಈ ಮಾತುಗಳನ್ನು ಮೊದಲೇ ಹೇಳಬಹುದಿತ್ತು. ರಾಮಮಂದಿರದ ‘ಚಂದಾ ಚೋರಿ’ ವಿಷಯದಲ್ಲೂ ಪ್ರಧಾನಿ ಇನ್ನೂ ಬಾಯಿ ಬಿಟ್ಟಿಲ್ಲ. ಸಂಕಷ್ಟ ಎದುರಾದಾಗಲೆಲ್ಲಾ ಅವರು ಮೌನಕ್ಕೆ ಮೊರೆ ಹೋಗುತ್ತಾರೆ.

ಮೋದಿ, ರಾಜೀನಾಮೆ ಕೇಳದಿದ್ದರೇನಂತೆ, ಪ್ರಧಾನ್ ಅವರೇ ಸ್ವಯಂ ಪ್ರೇರಣೆಯಿಂದ ಕೊಡಬಹುದಿತ್ತು. ಹಾಗೆ ಮಾಡಿದ್ದರೆ ಅಧಿಕಾರಕ್ಕೆ ಜೋತು ಬೀಳುವ ರಾಜಕಾರಣಿಗಳಿಗೆ ಮಾದರಿ ಆಗುತ್ತಿದ್ದರು. ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಐವರು ಕೇಂದ್ರ ಸಚಿವರು ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 1956ರಲ್ಲಿ ಆಂಧ್ರದಲ್ಲಿ ರೈಲು ದುರಂತ ನಡೆದಾಗ ಶಾಸ್ತ್ರಿ ರಾಜೀನಾಮೆ ನೀಡಿದ್ದರು. ಅದನ್ನು ಆಗಿನ ಪ್ರಧಾನಿ ನೆಹರೂ ಒಪ್ಪಿಕೊಳ್ಳಲಿಲ್ಲ. ಕೆಲವೇ ತಿಂಗಳಲ್ಲಿ ತಮಿಳುನಾಡಿನಲ್ಲಿ ರೈಲು ಅಪಘಾತವಾಯಿತು. ಎರಡನೇ ಸಲ ಶಾಸ್ತ್ರಿ ಪದತ್ಯಾಗ ಮಾಡಿದರು. ನೆಹರೂ ಏನೇ ಹೇಳಿದರೂ ಅವರು ಕೇಳಲಿಲ್ಲ. ಅದೇ ಸಮಯದಲ್ಲಿ ಹಣಕಾಸು ಸಚಿವರಾಗಿದ್ದ ಟಿ.ಟಿ. ಕೃಷ್ಣಮಾಚಾರಿ ಹಗರಣವೊಂದರ ಸಂಬಂಧ ರಾಜೀನಾಮೆ ನೀಡಿದರು. 1962ರ ಚೀನಾ ಯುದ್ಧದಲ್ಲಿ ಹಿನ್ನಡೆ ಅನುಭವಿಸಿದ ಕಾರಣಕ್ಕೆ ರಕ್ಷಣಾ ಸಚಿವರಾಗಿದ್ದ ಕೃಷ್ಣ ಮೆನನ್ ರಾಜೀನಾಮೆ ಕೊಟ್ಟರು. ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಖಾಸಗಿ ಕಂಪೆನಿಯೊಂದನ್ನು ಕೇಳಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಕೇಶವದೇವ್ ಮಾಳವೀಯ ರಾಜೀನಾಮೆ ಸಲ್ಲಿಸಿದರು. ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದ ವಿ.ಪಿ. ಸಿಂಗ್ ರಾಜಕೀಯ ಕಾರಣಕ್ಕಾಗಿ ಕುರ್ಚಿ ಬಿಟ್ಟರು. ಇಂಥದೊಂದು ಸತ್ಸಂಪ್ರದಾಯವನ್ನು ನಮ್ಮ ಹಿರಿಯ ತಲೆಮಾರಿನ ರಾಜಕಾರಣಿಗಳು ಹಾಕಿ ಹೋಗಿದ್ದಾರೆ. ಈಗಿನ ರಾಜಕಾರಣಿಗಳು ಈ ಮೌಲ್ಯಗಳಿಗೆ ಬೆನ್ನು ತಿರುಗಿಸಿದ್ದಾರೆ.ಈಗ ಎಷ್ಟೇ ಗಂಭೀರ ಆರೋಪಗಳು ಬಂದರೂ ಕುರ್ಚಿಗೆ ಅಂಟಿಕೊಳ್ಳುತ್ತಾರೆ. ದಪ್ಪ ಚರ್ಮದ ರಾಜಕಾರಣಿಗಳು ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತಾರೆ.

ಸಿಜೆಪಿ ಪ್ರತಿಭಟನೆಯಲ್ಲಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಷ್ಟೇ ಇಲ್ಲ. ಅವರ ಸಂಖ್ಯೆಗಿಂತ ಹೆಚ್ಚು ಬೇರೆ ಯುವಕ- ಯುವತಿಯರಿದ್ದಾರೆ. ಬಹುತೇಕ ನೀಟ್ ವಿದ್ಯಾರ್ಥಿಗಳು ಬಂದಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಪದವಿ ಪಡೆದು ಕೆಲಸವಿಲ್ಲದೆ ಪರದಾಡುತ್ತಿರುವ ಯುವಕರಿದ್ದಾರೆ. ಹೊಟ್ಟೆ ಪಾಡಿಗೆ ಡೆಲಿವರಿ ಬಾಯ್-ಗರ್ಲ್‌ಗಳಾಗಿ ದುಡಿಯುವವರಿದ್ದಾರೆ. ಕೊನೆಯದಾಗಿ ಪಕೋಡ ಮಾರುವ ನಿರುದ್ಯೋಗಿಗಳೂ ಉಂಟು. ಪೊಲೀಸರಿಂದ ಹೊಡೆತ ತಿಂದು ಯಾರೂ ಓಡಿ ಹೋಗಿಲ್ಲ. ಧೈರ್ಯವಾಗಿ ನಿಂತಿದ್ದಾರೆ. ದಿನೇ ದಿನೇ ಪ್ರತಿಭಟನೆ ಕಾವು ಏರುತ್ತಿದೆ. ಚಳವಳಿ ಹತ್ತಿಕ್ಕಲು ಸರಕಾರ ಮತ್ತು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಯುವಕರನ್ನು ‘ಟಾರ್ಗೆಟ್’ ಮಾಡಿ ಗಂಭೀರ ಪ್ರಕರಣ ದಾಖಲಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಸಂವಿಧಾನದ 19(1)(ಎ)ಕಲಂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಗೊಳಿಸಿದೆ. 19 (1)(ಬಿ)ಆಯುಧಗಳಿಲ್ಲದೆ, ಶಾಂತಿಯುತ ಸಭೆ ಸೇರುವ ಅವಕಾಶ ಕಲ್ಪಿಸಿದೆ. ಭಿನ್ನಾಭಿಪ್ರಾಯ ದಾಖಲಿಸುವ ಹಕ್ಕೂ ಇದೆ. ಹಾಗೆ, 19 (1)(ಬಿ) ಪ್ರತಿಭಟನೆಗಳಿಂದ ಸಾರ್ವಜನಿಕ ಶಾಂತಿ- ಸುರಕ್ಷತೆಗೆ ಭಂಗ ಬರದಂತೆ ನಿರ್ಬಂಧಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಿದೆ. ಈ ನೆಪದಲ್ಲಿ ಚಳವಳಿ ಹತ್ತಿಕ್ಕುವಂತಿಲ್ಲ.ಉನ್ನತ ನ್ಯಾಯಾಲಯಗಳು ಈ ಸಂಬಂಧ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದೆ.

ನೀಟ್ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದಿರುವ ಪ್ರತಿಭಟನೆಯನ್ನು ಎನ್‌ಡಿಎ ಸರಕಾರ ಕಡೆಗಣಿಸಿದಂತೆ, ವಿರೋಧ ಪಕ್ಷ ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿತ್ತು. ಸೋಮವಾರದ ಬೆಳವಣಿಗೆ ಬಳಿಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ನೀಟ್ ಅಕ್ರಮ ಕುರಿತು ಮೊದಲಿಂದ ದನಿ ಎತ್ತಿರುವ ರಾಹುಲ್ ಅದೇಕೋ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದರು.ಬಹುಶಃ ಸಿಜೆಪಿ ಮುಖಂಡ ಅಭಿಜೀತ್ ದೀಪ್ಕೆ, ಸೋನಂ ವಾಂಗ್ಚುಕ್ ಮತ್ತಿತರರು ಇದರ ಲಾಭ ಪಡೆಯಬಹುದು ಎಂಬ ಆತಂಕವಿರಬಹುದು. ಪ್ರಶ್ನೆ ಪತ್ರಿಕೆ ಸೋರಿಕೆ ಗಂಭೀರ ಪ್ರಕರಣವಾದ್ದರಿಂದ ಚಳವಳಿಯಲ್ಲಿ ಭಾಗವಹಿಸಲು ಮೀನ- ಮೇಷ ಎಣಿಸಬಾರದು. ರಾಹುಲ್ ಮೊದಲೇ ವಾಂಗ್ಚುಕ್ ಅವರನ್ನು ಜಂತರ್ ಮಂತರ್‌ನಲ್ಲಿ ಭೇಟಿಯಾಗಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು. ತಡವಾದರೂ ಪರವಾಗಿಲ್ಲ. ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದಾರೆ. ಆದರೆ, ಆಮ್ ಆದ್ಮಿಗಳು ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕಲು ಹೊರಟಿದ್ದಾರೆ. ವಿರೋಧ ಪಕ್ಷಗಳ ಸಮಸ್ಯೆ ಇದು.

ಬಿಜೆಪಿಗೆ ರಾಮ ಆದರ್ಶ ಪುರುಷ. ರಾಮನನ್ನು ಮುಂದಿಟ್ಟುಕೊಂಡೇ ಅಧಿಕಾರಕ್ಕೆ ಬಂದಿದ್ದು. ರಥಯಾತ್ರೆಯಿಂದ ಅಯೋಧ್ಯೆ ಮಂದಿರದ ನಿರ್ಮಾಣದವರೆಗೆ ಅವನೇ ಬಂಡವಾಳ. ರಾಜಕೀಯಕ್ಕೆ ರಾಮ ಬೇಕು. ಅವನ ಆದರ್ಶಗಳು ಬೇಡವೆಂದರೆ ಹೇಗೆ? ರಾಮನ ಆದರ್ಶಗಳನ್ನು ಪಾಲಿಸುವ ಔದಾರ್ಯವನ್ನು ಬಿಜೆಪಿ ನಾಯಕರು ಬೆಳೆಸಿಕೊಳ್ಳಬೇಕಿದೆ.

ದಿಲ್ಲಿ ಚಳವಳಿ ‘ಜನ ವಿರೋಧಿ’ ಎಂಬಂತೆ ಮುಖ್ಯ ವಾಹಿನಿಯ ಮಾಧ್ಯಮಗಳು ಬಿಂಬಿಸುತ್ತಿವೆ. ಪತ್ರಿಕಾ ಸ್ವಾತಂತ್ರ್ಯವೆಂದರೆ ಅವುಗಳ ಮಾಲಕರ ಸ್ವಾತಂತ್ರ್ಯ ಎಂದು ಭಾವಿಸಿದಂತಿವೆ. ಪತ್ರಿಕಾ ಸ್ವಾತಂತ್ರ್ಯ ಪತ್ರಕರ್ತನ ಸ್ವಾತಂತ್ರ್ಯ, ಜನಗಳ ಸ್ವಾತಂತ್ರ್ಯ ಎಂಬುದನ್ನು ಮರೆತಿವೆ. ಹೀಗಾಗಿ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ. ಈ ಬಗ್ಗೆ ಆತ್ಮ ವಿಮರ್ಶೆ ನಡೆಯಬೇಕಿದೆ. ಮಾಧ್ಯಮಗಳ ನಿಲುವು ಏನೇ ಇರಲಿ, ದಿಲ್ಲಿ ಚಳವಳಿ ಸರಕಾರಕ್ಕೆ ಬಿಸಿ ಮುಟ್ಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News