ದೇವದುರ್ಗ | ಕುಡುಕರ ಅಡ್ಡೆಯಾದ ಎಪಿಎಂಸಿ ಕಲ್ಯಾಣ ಮಂಟಪ
ಕೋಟಿ ರೂ. ವೆಚ್ಚದ ಕಟ್ಟಡ ನಿರ್ವಹಣೆಯಿಲ್ಲದೆ ಶಿಥಿಲ: ಅಧಿಕಾರಿಗಳು ಮೌನ
ದೇವದುರ್ಗ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಲ್ಯಾಣ ಮಂಟಪ ಇಂದು ನಿರ್ವಹಣೆಯ ಕೊರತೆಯಿಂದ ಶಿಥಿಲಾವಸ್ಥೆ ತಲುಪಿದ್ದು, ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲೆಂದು ನಿರ್ಮಿಸಲಾದ ಈ ಕಟ್ಟಡ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
2016ರಲ್ಲಿ ಮಾಜಿ ಶಾಸಕ ಹಾಗೂ ಸಂಸದರಾಗಿದ್ದ ದಿ. ವೆಂಕಟೇಶ ನಾಯಕ್ ಅವರು ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಭವ್ಯ ಕಲ್ಯಾಣ ಮಂಟಪವನ್ನು ತಾಲೂಕಿನ ಜನತೆಗೆ ಸಮರ್ಪಿಸಿದ್ದರು. ಆದರೆ ಉದ್ಘಾಟನೆಯಾದ ನಂತರ ಸರಿಯಾದ ನಿರ್ವಹಣೆ, ಸ್ವಚ್ಛತೆ ಹಾಗೂ ಮೂಲಸೌಕರ್ಯ ಒದಗಿಸದ ಕಾರಣ ಕಟ್ಟಡ ಪಾಳುಬಿದ್ದ ಸ್ಥಿತಿಗೆ ತಲುಪಿದೆ. ಮಳೆ ಬಂದಾಗ ಛಾವಣಿಯಿಂದ ನೀರು ಸೋರಿಕೆ ಆಗುತ್ತಿದ್ದು, ಒಳಭಾಗದ ಟೈಲ್ಸ್, ಪ್ಲಂಬಿಂಗ್ ಮತ್ತು ವಿದ್ಯುತ್ ವ್ಯವಸ್ಥೆಗಳು ಕಳಪೆ ಗುಣಮಟ್ಟದಲ್ಲಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕಲ್ಯಾಣ ಮಂಟಪದಲ್ಲಿ ನಿಯಂತ್ರಣವಿಲ್ಲದ ಸಂಚಾರದಿಂದಾಗಿ ಮದ್ಯಪಾನ, ಜೂಜಾಟ, ಕಸ ಸುರಿಯುವುದು, ಮೂತ್ರ ವಿಸರ್ಜನೆ ನಡೆಯುತ್ತಿದ್ದು, ಇದಕ್ಕೆ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶ್ನಿಸಿದರೆ ಅಧಿಕಾರಿಗಳು ಮೌನ ವಹಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಇದಲ್ಲದೆ, ಎಪಿಎಂಸಿ ಆವರಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಶೌಚಾಲಯ ಕಟ್ಟಡಗಳು ಬಳಕೆಯಾಗದೆ ಪಾಳು ಬಿದ್ದು, ಜಾನುವಾರುಗಳ ಆಶ್ರಯವಾಗಿವೆ. ರೈತರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ನಿರ್ಮಿಸಿದ ಶೌಚಾಲಯಗಳು ಉಪಯೋಗಕ್ಕೆ ಬಾರದೆ, ಮಾರುಕಟ್ಟೆ ಆವರಣದಲ್ಲಿ ಬಯಲಲ್ಲಿ ಮೂತ್ರ ವಿಸರ್ಜನೆ ನಡೆಯುತ್ತಿರುವುದರಿಂದ ದುರ್ವಾಸನೆ ಆವರಿಸಿದೆ. ಶೌಚಾಲಯದ ಛಾವಣಿಯ ಟಿನ್ ಸಹ ಕಾಣೆಯಾಗಿದ್ದು, ಇದಕ್ಕೆ ಯಾರು ಹೊಣೆ ಎಂಬುದೇ ತಿಳಿಯದ ಸ್ಥಿತಿಯಾಗಿದೆ.
ಇನ್ನೊಂದೆಡೆ, ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಬೆಳಗ್ಗೆ 11-12 ಆದರು ಕಚೇರಿಯಲ್ಲು ಯಾವಾಬ್ಬ ಅಧಿಕಾರಿಗಳು ಇಲ್ಲದೆ ಇರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಸಿಬ್ಬಂದಿ ಕೊರತೆ ಮತ್ತು ಖಾಲಿ ಹುದ್ದೆಗಳ ಕಾರಣದಿಂದ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗುತ್ತಿದೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರೆ.
ಎಪಿಎಂಸಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಲ್ಯಾಣ ಮಂಟಪ ಹಾಗೂ ಶೌಚಾಲಯಗಳು ಕಳಪೆ ಸ್ಥಿತಿಗೆ ತಲುಪಿವೆ. ಮಾರುಕಟ್ಟೆ ಆವರಣ ಕಸ ಹಾಗೂ ಮೂತ್ರ ವಿಸರ್ಜನೆಯಿಂದ ದುರ್ವಾಸನೆಯಾಗುತ್ತಿದೆ. ಉಪಯೋಗವಿಲ್ಲದ ಕಲ್ಯಾಣ ಮಂಟಪಕ್ಕೆ ದುರಸ್ತಿ ಕಾಮಗಾರಿಗೆ ಹಣ ಮೀಸಲಿಡಲಾಗಿದೆ ಎನ್ನುವುದು ಆಶ್ಚರ್ಯಕರ. ತಕ್ಷಣವೇ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
-ಬಸವರಾಜ ನಾಯಕ್ ಮಸ್ಕಿ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರು, ದೇವದುರ್ಗ
ನಾನು ಇತ್ತೀಚೆಗೆ ಉಸ್ತುವಾರಿಯಾಗಿ ಸೇರಿಕೊಂಡಿದ್ದೇನೆ. ಹಿಂದಿನ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ದುರಸ್ತಿ ಕಾಮಗಾರಿಗೆ ಹಣ ಮೀಸಲಿಟ್ಟಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು.
-ನೀಲಪ್ಪ ಶೆಟ್ಟಿ, ಉಸ್ತುವಾರಿ ಕಾರ್ಯದರ್ಶಿಗಳು ಎಪಿಎಂಸಿ,ದೇವದುರ್ಗ
ಅಧಿಕಾರಿಗಳು ಮತ್ತು ಅಧ್ಯಕ್ಷರ ಬೇಜವಾಬ್ದಾರಿಯಿಂದ ಮೂಲಸೌಕರ್ಯಗಳಿಗೆ ಆದ್ಯತೆ ಸಿಗುತ್ತಿಲ್ಲ. ಲೋಕಾಯುಕ್ತ ಭಯದಿಂದ ಕೆಲ ದಿನ ಸ್ವಚ್ಛತೆ ಮಾಡಿದಂತೆ ತೋರಿಸಿ ಮತ್ತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮೇಲಾಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
-ಬಸನಗೌಡ ವೆಂಕಟಾಪೂರ ಬಿಜೆಪಿ ಮುಖಂಡರು, ದೇವದುರ್ಗ