ಗುಡಿಹಳ್ಳಿ-ಕಬ್ಬಳ್ಳಿ: ಗುಂಡಿಗಳಾಗಿ ಮಾರ್ಪಟ್ಟ ರಸ್ತೆ
ತಿಂಗಳೊಳಗೆ ರಸ್ತೆ ದುರಸ್ಥಿ ಮಾಡುವುದಾಗಿ ಹೇಳಿ ನಾಪತ್ತೆಯಾದ ಇಂಜಿನಿಯರ್!
ವಿಜಯನಗರ: ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟಕಾಪಾಡದೆ ನಿರ್ಲಕ್ಷ್ಯ ತೋರಿದ್ದರಿಂದ ಹರಪನಹಳ್ಳಿ ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಿಂದ ಗಡಿ ಭಾಗದ ಚಿಕ್ಕಬ್ಬಳ್ಳಿ ಗ್ರಾಮದವರೆಗಿನ ಟಾರ್ ಕಿತ್ತು ಹೋಗಿ ಸಂಪೂರ್ಣ ಗುಂಡಿಮಯವಾಗಿದೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅನುದಾನ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಈ ಟಾರ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದೀಗ ಕೇವಲ ನಾಲ್ಕು ವರ್ಷದಲ್ಲೇ ಡಾಂಬರು ಕಿತ್ತುಹೋಗಿ ಜಲ್ಲಿ ರಸ್ತೆಯಾಗಿದೆ ಎಂದು ಜನರು ದೂರಿದ್ದಾರೆ.
ರಸ್ತೆ ನಿರ್ಮಾಣ ಕಾರ್ಯ ಗುಣಮಟ್ಟದಿಂದ ಮಾಡದೆ ಇರುವುದು ಹಾಗೂ ಸರಕಾರದ ನಿಯಮಾವಳಿಯಂತೆ ಟಾರ್ ಹಾಕದಿರುವುದು ರಸ್ತೆ ಗುಂಡಿಗಳಾಗಿ ಮಾರ್ಪಟ್ಟಿವೆ ಎಂದು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಉಚ್ಚೆಂಗೆಮ್ಮ ನೆಲೆಸಿರುವ ತಾಣಕ್ಕೆ ಈ ಭಾಗದಿಂದ್ದ ಸಾವಿರಾರು ಜನರು ಇದೇ ರಸ್ತೆಯ ಮೂಲಕ ಸಾಗಬೇಕಿದ್ದು, ಹುಣ್ಣಿಮೆ-ಹಬ್ಬ ಹರಿದಿನಗಳಲ್ಲಿ ನರಕಯಾತನೆ ಅನುಭವಿಸುವ ಅನುಭವವಾಗುತ್ತಿದೆ. ರಸ್ತೆ ದುರಸ್ತಿ ಮಾಡುವಂತೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ಈ ಹಿಂದೆ ಸುತ್ತಮುತ್ತಲಿನ ರೈತರೆಲ್ಲ ಸೇರಿ ಪ್ರತಿಭಟನೆ ಮಾಡಿದಾಗ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಇಂಜಿನಿಯರ್ ರಸ್ತೆ ದುರಸ್ಥಿ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ತಿಂಗಳುಗಳೇ ಕಳೆದರೂ ನೀಡಿದ ಭರವಸೆ ಈಡೇರಿಸಿಲ್ಲ. ಈಗಲಾದರೂ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೆರೆಗುಡಿಹಳ್ಳಿ ರಸ್ತೆ ಹಾಳಾದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಹಾಗೂ ಇಂಜಿನಿಯರ್‌ಗೆ ಮಾಹಿತಿ ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ.ರಸ್ತೆ ಸಂಚಾರ ತಡೆದು ಪ್ರತಿಭಟನೆ ಮಾಡಿದ್ದೇವೆ. ಆಗ ಸ್ಥಳಕ್ಕೆ ಆಗಮಿಸಿ ದುರಸ್ತಿ ಮಾಡುತ್ತೇವೆ ಎಂದ ಅಧಿಕಾರಿಯೂ ಹೇಳಿದಂತೆ ನಡೆದುಕೊಂಡಿಲ್ಲ. ಈಗಲಾದರೂ ಅಧಿಕಾರಿಗಳು ರಸ್ತೆ ಸ್ಥಿತಿಗತಿ ಪರಿಶೀಲಿಸಿ ಅಭಿವೃದ್ಧಿಪಡಿಸಬೇಕು.
-ಸಿ.ಶಿವಣ್ಣ, ಗ್ರಾಮದ ನಿವಾಸಿ
ಸಮರ್ಪಕ ರಸ್ತೆ ಸೌಕರ್ಯ ಇಲ್ಲದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸಮಸ್ಯೆ ಅನುಭವಿಸುತ್ತಿದ್ದೇವೆ. ಅನೇಕ ಬಾರಿ ಅಧಿಕಾರಿಗಳ ರಸ್ತೆ ಸಮಸ್ಯೆ ಕುರಿತು ಗಮನಕ್ಕೆ ತಂದರೂ ಸರಿಪಡಿಸಿಲ್ಲ. ಗ್ರಾಮಸ್ಥರೆಲ್ಲ ಸೇರಿ ಸಂಬಂಧಿಸಿದ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುತ್ತೇವೆ.
-ಕೆರೆಗುಡಿಹಳ್ಳಿ ಹಾಲೇಶ್, ಜಿಲ್ಲಾಧ್ಯಕ್ಷರು ಅಖಿಲ ಭಾರತ ಕಿಸಾನ್ ಸಭಾ ವಿಜಯನಗರ
ರಸ್ತೆ ದುರಸ್ತಿ ಕಾಮಗಾರಿಯನ್ನು ನಾನು ಖುದ್ದಾಗಿ ಪರಿಶೀಲಿಸಿದ್ದೇನೆ. ಆ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ.ಆದ್ದರಿಂದ ಕೂಡಲೇ ಸ್ಥಳೀಯ ಗುತ್ತಿಗೆದಾರರ ಮೂಲಕ ಮಾರ್ಚ್ ತಿಂಗಳೊಳಗೆ ದುರಸ್ತಿ ಕಾರ್ಯ ಮುಗಿಸುವ ಕೆಲಸ ಮಾಡುತ್ತೇನೆ.
-ಕಿರಣ್ ದಿವಾಕರ ಸರಕಾರಿ ಇಂಜಿನಿಯರ್