2025 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ರ ನಾಮನಿರ್ದೇಶನವೇ ಆಗಿರಲಿಲ್ಲವೇ?
ಟ್ರಂಪ್ ಗೆ 2025ರ ನೊಬೆಲ್ ಶಾಂತಿ ಸಿಕ್ಕದಿರುವುದರ ಹಿಂದೆ ನೊಬೆಲ್ ಸಂಸ್ಥೆಯ ಪ್ರಜಾತಾಂತ್ರಿಕ ರಾಜಕಾರಣ ಹುಡುಕುವ ಹತಾಶ ಪ್ರಯತ್ನ ಮಾಡುವ ಅಗತ್ಯವೇನಿಲ್ಲ.
ಏಕೆಂದರೆ ಇದೇ ಸಂಸ್ಥೆ ಈ ಹಿಂದೆ ಜಗತ್ತಿನಲ್ಲಿ ಅಮೆರಿಕ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಭಯೋತ್ಪಾದನೆ, ಅರಾಜಕತೆ ಹಿಂಸಾಚಾರಗಳನ್ನು ಖುದ್ದಾಗಿ ಸಂಘಟಿಸಿದ್ದ ಅಮೆರಿಕಾದ CIA ಯ ಮುಖ್ಯಸ್ಥ ಹೆನ್ರಿ ಕಿಸಿಂಜರ್ ಗೆ, ಅಮೆರಿಕಾದ ಅಧ್ಯಕ್ಷರುಗಳಾದ ರೂಸ್ವೆಲ್ಟ್, ವುಡ್ರೋ ವಿಲ್ಸನ್, ಜಿಮ್ಮಿ ಕಾರ್ಟರ್ ಮತ್ತು ಬರಾಕ್ ಒಬಾಮ ಅವರಿಗೆ ಶಾಂತಿ ನೊಬೆಲ್ ಕೊಟ್ಟು ಸಂತ್ರಸ್ತರಿಂದ ತೀವ್ರ ಆಕ್ಷೇಪಣೆಗೆ ಗುರಿಯಾಗಿತ್ತು.
ಹೀಗಾಗಿ ಈಗಲೂ ಶಾಂತಿ ಪ್ರಶಸ್ತಿಯ ಹಿಂದೆ ನೊಬೆಲ್ ಪ್ರತಿಷ್ಠಾನಕ್ಕೆ ಮುಖ್ಯವಾಗುವುದು ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ರಾಜಕೀಯವೇ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಶಾಂತಿಯೇ.
ಅದಕ್ಕೆ ಈ ಬಾರಿ ಅಮೆರಿಕ ಸಾಮ್ರಾಜ್ಯಶಾಹಿ ಬೆಂಬಲಿತ ಮತ್ತು ಇಸ್ರೇಲಿನ ಜಿಯೋನಿಸ್ಟ್ ಉಗ್ರ ಭಯೋತ್ಪಾದಕ ನೆತನ್ಯಾಹುವಿನ ಆಪ್ತಳೂ ಆಗಿರುವ ವೆನಿಜುಯೆಲಾದ ಮಚಾದೋಗೆ ನೀಡಲಾಗಿದೆ. ಅದನ್ನು ಆಕೆ ಟ್ರಂಪಿಗೆ ಅರ್ಪಿಸಿರುವುದು ಸಾಂಕೇತಿಕವೂ , ಬಂಡವಾಳಶಾಹಿ ಬಳಗದ ಸಾಂಸ್ಕೃತಿಕ ರಾಜಕಾರಣವೂ ಆಗಿದೆ.
ಹೀಗಾಗಿ ಈ ಬಾರಿ ಟ್ರಂಪಿಗೆ ಶಾಂತಿ ನೊಬೆಲ್ ತಪ್ಪಿರುವ ಹಿಂದೆ ಯಾವ ರಾಜಕೀಯ ಕಾರಣವೂ ಇಲ್ಲ. ಇರುವುದು ತಾಂತ್ರಿಕ ಕಾರಣ ಮಾತ್ರ.
ನೊಬೆಲ್ ಸಂಸ್ಥೆಯ ಪ್ರಕಾರ ಯಾವುದೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುವರು ಆಯಾ ವರ್ಷದ ಜನವರಿ 31 ರ ಮಧ್ಯರಾತ್ರಿ 12 ಗಂಟೆಯೊಳಗೆ ಮಾಡಬೇಕು. ಆ ನಂತರದ ನಾಮ ನಿರ್ದೇಶನವನ್ನು ಸಂಸ್ಥೆ ಪರಿಗಣಿಸುವುದಿಲ್ಲ.
ನಾಮ ನಿರ್ದೇಶನವನ್ನು ಯಾವುದೇ ಸಾರ್ವಭೌಮಿ ದೇಶದ ಸರ್ಕಾರದ ಮುಖ್ಯಸ್ಥರು, ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳು, ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರುಗಳು, ನೊಬೆಲ್ ಸಮಿತಿಯ ಹಾಲಿ ಮತ್ತು ಮಾಜಿ ಸದಸ್ಯರುಗಳು, ಮಾಜಿ ಶಾಂತಿ ಪ್ತ್ರಶಸ್ತಿ ವಿಜೇತರುಗಳು ಮಾಡಬಹುದು.
ಇನ್ನುಳಿದ ವಿವರಗಳನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ನೋಡಬಹುದು (https://www.nobelprize.org/nomination/peace/)
ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು 2025 ರ ಜನವರಿ 20 ರಂದು. ಅಧ್ಯಕ್ಷರಾದ ಮೊದಲ ಎರಡು ತಿಂಗಳು ಅವರು ಗ್ರೀನ್ ಲ್ಯಾನ್ಡ್ , ಕೆನಡಾ, ಮೆಕ್ಸಿಕೋ, ಇತ್ಯಾದಿಗಳನ್ನು ವಶಪಡಿಸಿಕೊಳ್ಳುವ ಮಾತಾಡುತ್ತಿದ್ದರೆ ವಿನಃ ಇನ್ನು ಕಪಟ ಶಾಂತಿ ಮತ್ತು ಯುದ್ಧ ನಿಲುಗಡೆಯ ಸೋಗಲಾಡಿ ಮಾತುಗಳನ್ನು ಶುರು ಮಾಡಿರಲಿಲ್ಲ.
ಟ್ರಂಪ್ ಅವರಿಗೆ ಶಾಂತಿ ನೊಬೆಲ್ ವಿಷಯ ಮೊದಲು ಬಹಿರಂಗವಾಗಿ ಪ್ರಸ್ತಾಪವಾದದ್ದೇ ಮಾರ್ಚಿನಲ್ಲಿ. ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಟ್ರಂಪ್ ಅವರನ್ನು ನಾಮ ನಿರ್ದೇಶನ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದು ಜೂನ್-ಆಗಸ್ಟ್ ನಲ್ಲಿ. ಟ್ರಂಪ್ ಅಭೂತಪೂರ್ವ ಶಾಂತಿ ಸೇನಾನಿ ಎಂದು ಮೋದಿ ಹೇಳಲು ಶುರು ಮಾಡಿದ್ದು ಮೂರುದಿನಗಳಿಂದ.
ಹೀಗಾಗಿ ಟ್ರಂಪ್ ಅವರು ಶಾಂತಿ ನೊಬೆಲ್ ಗೆ ಮನಸ್ಸು ಮಾಡುವ ವೇಳೆಗೆ 2025 ನಾಮ ನಿರ್ದೇಶನದ ಪ್ರಕ್ರಿಯೆ ಮುಗಿದು ಹೋಗಿತ್ತು. ಹೀಗಾಗಿ 2026 ರಲ್ಲಿ ಶಾಂತಿ ನೊಬೆಲ್ ಇದ್ದೆ ಇದೆ. ಹೇಗಿದ್ದರೂ ಆ ವೇಳೆಗೆ ಟ್ರಂಪ್ ಅವರು ಜಗತ್ತಿನಲ್ಲಿ ನಡೆಯದ, ನಿಂತಿರದ ಹಲವಾರು ಯುದ್ಧಗಳನ್ನು ನಿಲ್ಲಿಸಿದ ಘೋಷಣೆ ಮಾಡಿರುತ್ತಾರೆ. ಆಗ ಅವರಿಗಿಂತ ನೊಬೆಲ್ ಶಾಂತಿಗೆ ಅರ್ಹರು ಯಾರಿರುತ್ತಾರೆ ? ಅಲ್ಲವೇ?
ಏಕೆಂದರೆ ಟ್ರಂಪ್ ಈ ಸದ್ಯಕ್ಕೆ ಏಳು ಯುದ್ಧಗಳನ್ನು ನಿಲ್ಲಿಸಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ, ಅವು
ಕಾಂಬೋಡಿಯಾ -ಥೈಲಾಂಡ್
ಕೊಸೊವೊ -ಸರ್ಬಿಯಾ
ಕಾಂಗೋ-ರವಾಂಡಾ
ಭಾರತ-ಪಾಕಿಸ್ತಾನ
ಇಸ್ರೇಲ್-ಇರಾನ್
ಈಜಿಪ್ಟ್ -ಇಥಿಯೋಪಿಯಾ
ಅರ್ಮೇನಿಯಾ-ಅಜರ ಬೈಜಾನ್
ಇವುಗಳಲ್ಲಿ,
1.ಕಾಂಬೋಡಿಯಾ -ಥೈಲಾಂಡ್ ಯುದ್ಧ ನಿಂತಿಲ್ಲ
2.ಕೊಸೊವೊ -ಸರ್ಬಿಯಾ ಯುದ್ಧವು ಟ್ರಂಪ್ ಮುಂಚೆಯೇ ಸ್ಥಗಿತವಾಗಿತ್ತು. ಯುದ್ಧ ನಡೆದಿಲ್ಲ
3.ಕಾಂಗೋ-ರವಾಂಡಾ ನಡುವೆ ವೈಟ್ ಹೌಸಿನಲ್ಲಿ ಶಾಂತಿ ಒಪ್ಪಂದ ನಡೆದರೂ ಪ್ರಮುಖರು ಆ ಒಪ್ಪಂದದ ಭಾಗವಾಗಿಲ್ಲದಿದ್ದರಿಂದ ಇನ್ನೂ ಹಿಂಸಾಚಾರ ಮುಂದುವರೆದಿದೆ
4.ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ಯಾರೆಂದು ಮೋದಿಯನ್ನೇ ಕೇಳಬೇಕು.
5.ಇಸ್ರೇಲ್-ಇರಾನ್ ಯುದ್ಧ ನಡೆದದ್ದೇ ಟ್ರಂಪ್ ಇಸ್ರೇಲಿಗೆ ನೀಡಿದ ನೆರವು ಮತ್ತು ಕುಮ್ಮಕ್ಕಿನಿಂದ
6.ಈಜಿಪ್ಟ್ -ಇಥಿಯೋಪಿಯಾ ಗಾಲ ನಡುವೆ ನೈಲ್ ನದಿಗೆ ಸಂಬಂಧಪಟ್ಟಂತೆ ವಿವಾದವಿರುವುದು ನಿಜವಾದರೂ, ಆ ಎರಡೂ ದೇಶಗಳು ಯುದ್ಧದಲ್ಲೂ ಇಲ್ಲ, ವಿವಾದವೂ ಬಗೆಹರಿದಿಲ್ಲ. ಹೀಗಾಗಿ ಟ್ರಂಪ್ ಗೆ ಅಲ್ಲಿ ಯಾವ ಪಾತ್ರವೂ ಇಲ್ಲ. ಇರಲಿಲ್ಲ.
7.ಅರ್ಮೇನಿಯಾ-ಅಝರ್ ಬೈಜಾನ್ ನಡುವೆ ಯುದ್ಧ ನಡೆಯುತ್ತಿರುವುದು ನಿಜ. ಅವೆರಡರ ನಡುವೆ ಶಾಂತಿ ಒಪ್ಪಂದ ಮೂಡಿಸಲು ಟ್ರಂಪ್ ಪ್ರಯತ್ನಿಸಿದ್ದು ನಿಜ. ಆದರೆ ಆ ಶಾಂತಿ ಒಪ್ಪಂದವನ್ನು ಎರಡೂ ದೇಶಗಳು ಸಮ್ಮತಿಸಿಲ್ಲ. ಹೀಗಾಗಿ ಯುದ್ಧ ನಿಲ್ಲಿಸಿದೆ ಎಂಬ ಟ್ರಂಪ್ ಹೆಗ್ಗಳಿಗೆ ನಿಜವಲ್ಲ.
ಇನ್ನು, ಇಸ್ರೇಲ್ ಫೆಲೆಸ್ತೀನ್ ಮೇಲೆ ನಡೆಸುತ್ತಿರುವ ಅಮಾನುಷ ಯುದ್ಧವನ್ನು ನಿಲ್ಲಿಸಿದೆ ಎಂದು ಬರುವ ವರ್ಷ ಟ್ರಂಪ್ ಕೊಚ್ಚಿಕೊಳ್ಳಬಹುದು. ಆದರೆ ಇಸ್ರೇಲಿ ಒತ್ತೆಯಾಳುಗಳ ವಿನಿಮಯ ಆದ ಮೇಲೆ ಇಸ್ರೇಲ್ ಉಳಿದ ಷರತ್ತನ್ನು ಪಾಲಿಸುವುದೇ ಎಂಬ ಪ್ರಶ್ನೆ ಇಡೀ ಜಗತ್ತಿಗಿದೆ. 2025 ಜನವರಿ 19 ರಂದೂ ಕೂಡ ಮೂರು ಹಂತದ ಒಪ್ಪಂದವಾಗಿತ್ತು. ಇಸ್ರೇಲ್ ಒತ್ತೆಯಾಳುಗಳನ್ನು ಪಡೆದುಕೊಂಡ ಮೇಲೆ ತಾನೇ ಒಪ್ಪಂದವನ್ನು ಉಲ್ಲಂಘಿಸಿತು. ಅದನ್ನು ಟ್ರಂಪ್ ನ ಅಮೆರಿಕ ಸಂಪೂರ್ಣ ಬೆಂಬಲಿಸಿತು ಮಾತ್ರವಲ್ಲದೆ ಶಸ್ತ್ರಾಸ್ತ್ರ ಸರಬರಾಜು ಮಾಡಿ ನರಮೇಧ ಮುಂದುವರೆಯಲು ಸಹಕರಿಸಿತು. ವಿಶ್ವಸಂಸ್ಥೆಯಲ್ಲಿ ಕದನವಿರಾಮದ ವಿರುದ್ಧ ಓಟು ಮಾಡಿ ನರಮೇಧ ಮುಂದುವರೆಯುವಂತೆ ನೋಡಿಕೊಂಡಿತು. ಹೀಗಾಗಿ ಈ ಹೊಸ "ಟ್ರಂಪ್ ಶಾಂತಿ ಸೂತ್ರದ" ಆಯಸ್ಸೆಷ್ಟು ಎಂಬುದು ಜಗತ್ತಿಗೆ ಗೊತ್ತಿರುವ ವಿಷಯ.
ಅದೇನೇ ಇರಲಿ. ಹೆನ್ರಿ ಕಿಸಿಂಜರ್ ಮಾಡಿದೂ ಇದೆ. ಮೃದು ಮಾತುಗಳಲ್ಲಿ ಒಬಾಮಾ ಮಾಡಿದ್ದೂ ಇದೆ. ಅವರಿಗೆಲ್ಲಾ ಶಾಂತಿ ನೊಬೆಲ್ ಕೊಟ್ಟ ನೊಬೆಲ್ ಪ್ರತಿಷ್ಠಾನ ಟ್ರಂಪ್ ಗೆ ನಿರಾಕರಿಸುತ್ತದೆ ಎನ್ನಲು ಯಾವ ಕಾರಣವೂ ಇಲ್ಲ.
ನೊಬೆಲ್ ಶಾಂತಿ ಎಂದರೆ ಇದೆ ಅರ್ಥ. ನೊಬೆಲ್ ನ ಅಸಲಿ ನೆಂಟರೂ ಇವರೇ-ಟ್ರಂಪ್ ಬಳಗದವರೇ..
ಹೀಗಾಗಿ ಮೋದಿಯಾಗಲೀ, ಮುನೀರ್ ಆಗಲೀ , ಬೀಬಿಯಾಗಲೀ ಟ್ರಂಪ್ ಗೆ ಶಾಂತಿ ನೊಬೆಲ್ ತಪ್ಪಿತೆಂದು ಗೋಳಾಡುವ ಅಗತ್ಯವಿಲ್ಲ. ಈ ಬಾರಿ ಮೋದಿ ಆಪರೇಷನ್ ಸಿಂಧೂರ ನಿಲ್ಲಿಸಿದ್ದು ಟ್ರಂಪ್ ಎಂದು ನೊಬೆಲ್ ಗೆ ಬರೆದು ಕೊಟ್ಟರೆ 2026 ರಲ್ಲಿ ಶಾಂತಿ ಇನ್ನು ಖಾತರಿ ಆಗಬಹುದು ..