ಒಂದು ಕುತೂಹಲಕರ ಬೆಳವಣಿಗೆಯನ್ನು ಗಮನಿಸಬೇಕು. 2015ರ ತನಕವೂ ವಿಮಾ ಕ್ಷೇತ್ರದಲ್ಲಿ ಖಾಸಗೀಕರಣ-FDIಗಳನ್ನು ಕಂಠಪೂರ್ತಿ ವಿರೋಧಿಸುತ್ತಿದ್ದವರು ವಿಮಾ ಕ್ಷೇತ್ರದ ನೌಕರ ಸಂಘಗಳು. 2026ರಲ್ಲಿ ಶೇ. 100 FDIಗೆ ಅನುಮತಿ ದೊರಕುವುದರೊಂದಿಗೆ, ಆ ಹೋರಾಟಕ್ಕೆ ಈಗ ನೆಲೆ ಉಳಿದಿಲ್ಲ. ಈಗ ಎರಡನೇ ಹಂತದ ಪ್ರತಿರೋಧ ಕಾಣಿಸಿಕೊಂಡಿದೆ. IRDAI ಪ್ರಸ್ತಾವಕ್ಕೆ ಈ ಬಾರಿ ಕಂಠಪೂರ್ತಿ ವಿರೋಧ ಸೂಚಿಸುತ್ತಿರುವುದು, ವಿಮಾ ಏಜೆಂಟರು ಮತ್ತು ದಲ್ಲಾಳಿಗಳು.

ಯಶಸ್ವೀ ಖಾಸಗಿ ಬ್ಯಾಂಕೊಂದರ ಮುಖ್ಯಸ್ಥರು 90ರ ದಶಕದ ಆರಂಭದಲ್ಲಿ (ಅರ್ಥಾತ್, ಉದಾರೀಕರಣದ ಆರಂಭದ ಹಂತದಲ್ಲಿ) ಅವರ ಎಕ್ಸಿಕ್ಯೂಟಿವ್‌ಗಳ ಜೊತೆ ಮಾತನಾಡುವಾಗ, ಅವರ ಬ್ಯಾಂಕಿನ ಯಶಸ್ಸಿನ ಬಗ್ಗೆ ಹೇಳಿದ ಮಾತಂತೆ ಇದು: ‘‘ನಮ್ಮ ಬ್ಯಾಂಕಿನ ಶೇ. 90 ವ್ಯವಹಾರ ನಡೆಯುತ್ತಿರುವುದು ಶೇ. 5 ಗ್ರಾಹಕರಿಂದ. ಉಳಿದ ಶೇ. 10 ವ್ಯವಹಾರ ಶೇ. 95 ಗ್ರಾಹಕರಿಂದ. ಹಾಗಾಗಿ, ಆ ಶೇ. 5 ಗ್ರಾಹಕರನ್ನು ಚೆನ್ನಾಗಿ ನೋಡಿಕೊಳ್ಳಿ. ಉಳಿದ ಶೇ. 95 ಜನ ಗ್ರಾಹಕರು ನಮ್ಮ ಬ್ಯಾಂಕ್ ಬಿಟ್ಟು ಬೇರೆ ಬ್ಯಾಂಕ್ ಅರಸಿಕೊಂಡು ಹೋದರೂ ತೊಂದರೆ ಇಲ್ಲ. ನಮ್ಮ ಮುಖ್ಯ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಬಹುದು.’’

ಈಗ ಉದಾರೀಕರಣ ದೇಶದಲ್ಲಿ ಒಂದು ಮಜಲು ದಾಟಿ ಆಗಿದೆ. 1956ರಲ್ಲಿ ವಿಮಾ ಕ್ಷೇತ್ರವನ್ನು ರಾಷ್ಟ್ರೀಕರಿಸಲಾಗಿತ್ತು. ಆಗ ಅದಕ್ಕೆ ಕೊಟ್ಟ ಕಾರಣ: ದೇಶದ ಎಲ್ಲ ವರ್ಗಗಳವರಿಗೂ ವಿಮೆ ಸವಲತ್ತು ಲಭ್ಯ ಆಗಬೇಕು ಎಂದು. ಮುಂದೆ ಉದಾರೀಕರಣದ ಆರಂಭದ ಹಂತದಲ್ಲಿ, (1993) ಆರ್.ಎನ್. ಮಲ್ಹೋತ್ರಾ ಸಮಿತಿಯ ವರದಿಯು ವಿಮಾ ಕ್ಷೇತ್ರವನ್ನು ಖಾಸಗೀಕರಿಸಬೇಕು ಮತ್ತು ವಿದೇಶಿ ಹೂಡಿಕೆಗೆ (FDI) ಅವಕಾಶ ನೀಡಬೇಕೆಂದು ಹೇಳಿದಾಗಲೂ ಅದಕ್ಕೆ ಕೊಟ್ಟ ಕಾರಣ - ದೇಶದ ಎಲ್ಲ ವರ್ಗಗಳವರಿಗೂ ವಿಮೆ ಸವಲತ್ತು ಲಭ್ಯ ಆಗಬೇಕು ಎಂದು. ಉದಾರೀಕರಣ ಪ್ರಕ್ರಿಯೆಯ ಭಾಗವಾಗಿಯೇ ವಿಮಾ ಕ್ಷೇತ್ರಕ್ಕೆ ಸ್ವಾಯತ್ತ ನಿಯಂತ್ರಣ ವ್ಯವಸ್ಥೆಯನ್ನು ಒದಗಿಸಲು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಸ್ಥಾಪನೆ ಆದದ್ದು, 2000ನೇ ಇಸವಿಯಲ್ಲಿ. FDI ಮತ್ತು ಖಾಸಗೀಕರಣಕ್ಕೆ ದೇಶದಾದ್ಯಂತ ವಿಮಾ ನೌಕರ ಕ್ಷೇತ್ರದ ತೀವ್ರ ವಿರೋಧ ಇತ್ತು. ಅದರ ಹೊರತಾಗಿಯೂ 1999-2000ದ ಹೊತ್ತಿಗೆ, ಅಂದಿನ ಭಾರತ ಸರಕಾರ ವಿಮಾ ಕ್ಷೇತ್ರವನ್ನು ಖಾಸಗಿಗೆ ಹಾಗೂ ಶೇ. 26ರ ತನಕ FDIಗೆ ತೆರೆಯಿತು. ಯುಪಿಎ ಸರಕಾರ ಇದನ್ನು ಶೇ. 49ಕ್ಕೆ ಏರಿಸಲು ಹರಸಾಹಸ ಪಟ್ಟಿತಾದರೂ ಸಾಧ್ಯ ಆಗಲಿಲ್ಲ. ಮುಂದೆ 2015ರಲ್ಲಿ ಎನ್‌ಡಿಎ ಸರಕಾರ FDI ಮಿತಿಯನ್ನು ಶೇ. 49ಕ್ಕೆ ಏರಿಸಿತು. ಈಗ ಫೆಬ್ರವರಿ 2026ರಿಂದ, ಈ FDI ಮಿತಿಯನ್ನು ಭಾರತ ಸರಕಾರ ಶೇ. 100ಕ್ಕೆ ಏರಿಸಿದೆ. ಈ ಎಲ್ಲ ಹಂತಗಳಲ್ಲೂ ಸರಕಾರಗಳು ಹೇಳಿದ್ದು - ವಿಮೆ ಎಲ್ಲರನ್ನೂ ತಲುಪಬೇಕು ಎಂದೇ. 2025 ಡಿಸೆಂಬರ್‌ನಲ್ಲಿ ಹಾಲಿ ಸರಕಾರ ಸಂಸತ್ತಿನಿಂದ ಶೇ. 100 FDIಗೆ ಅನುಮೋದನೆ ಪಡೆದ ಮಸೂದೆಯ ಹೆಸರೇ ‘ಸಬ್ ಕಾ ಬಿಮಾ ಸಬ್ ಕೀ ರಕ್ಷಾ (ವಿಮಾ ಕಾನೂನುಗಳ ತಿದ್ದುಪಡಿ) ಕಾಯ್ದೆ, 2025’.

ಇವಿಷ್ಟು ವಿಮಾ ಕ್ಷೇತ್ರದ ಖಾಸಗೀಕರಣದ ಸಂಕ್ಷಿಪ್ತ ಚರಿತ್ರೆ. ಈಗ ಹೊಸ ಸುದ್ದಿ ಏನೆಂದರೆ, ವಿದೇಶೀ ಕಂಪೆನಿಗಳ ಹೂಡಿಕೆಗೆ ನೆಲ ಹದನುಗೊಳಿಸುವ ಕಾರ್ಯಕ್ರಮಗಳನ್ನು IRDAI ಆರಂಭಿಸಿದ್ದು, ಅದರ ಭಾಗವಾಗಿ, 23 ಸೆಪ್ಟಂಬರ್ 2026ರಂದು ವಿಮಾ ಕ್ಷೇತ್ರದಲ್ಲಿ ಹಲವು ಬದಲಾವಣೆಗಳ ಪ್ರಸ್ತಾವವನ್ನು (‘Recalibrating Economics of Insurance Distribution’ ಆಸಕ್ತರು ಅದನ್ನು ಇಲ್ಲಿ ಓದಬಹುದು: https://iib.gov.in/dr) ಅದು ಮುಂದಿಟ್ಟಿದ್ದು, ಸಾರ್ವಜನಿಕರು ಅದಕ್ಕೆ ಅಕ್ಟೋಬರ್ 25ರ ಒಳಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಬಹುದಾಗಿದೆ.

ತನ್ನ ಈ ಪ್ರಸ್ತಾವದಲ್ಲಿ IRDAI ಸ್ಥೂಲವಾಗಿ, ವಿಮೆ ವಿತರಣಾ ಚೌಕಟ್ಟಿನ ಸಂರಚನೆಗೆ ಸ್ಪಷ್ಟತೆ, ವಿಮಾ ವ್ಯವಹಾರ ವೆಚ್ಚಗಳಿಗೆ ಮಿತಿ ಹೇರಿಕೆ, ವಿಮೆ ಇಳಿಸುವ ಏಜೆಂಟರು-ದಲ್ಲಾಳಿಗಳು ಮತ್ತು ವಿತರಣಾ ಸಂಸ್ಥೆಗಳ ಕಮಿಷನ್‌ಗೆ ಮಿತಿ, ಮಾರುಕಟ್ಟೆಯಲ್ಲಿ ವಿಮಾ ಪಾಲಿಸಿಗಳನ್ನು ತಪ್ಪುಹಾದಿಯಲ್ಲಿ ಮಾರುವುದಕ್ಕೆ ಕಡಿವಾಣ, ಡಿಜಿಟಲ್ ಪ್ರಚಾರಕ್ಕೆ ನಿರ್ಬಂಧಗಳನ್ನು ಪ್ರಸ್ತಾಪಿಸಿದೆ. ತನ್ನ ಈ ಸೂಚನೆಗಳನ್ನು ಪಾಲಿಸಿದಲ್ಲಿ, ವಿಮಾದಾರರಿಗೆ ಕಡಿಮೆ ವೆಚ್ಚದಲ್ಲಿ ವಿಮೆ ಸಿಗಲಿದೆ, ಪಾರದರ್ಶಕತೆ ಸುಧಾರಿಸಲಿದೆ ಮತ್ತು ಮಾರಾಟಗಾರರಿಗೆ ಪಾಲಿಸಿದಾರರ ಮೌಲ್ಯಕ್ಕೆ ತಕ್ಕ ಆರ್ಥಿಕ ಪ್ರೋತ್ಸಾಹ ಸಿಗುತ್ತದೆ ಎಂದು IRDAI ಹೇಳಿಕೊಂಡಿದೆ. ಇಲ್ಲೂ ಕೂಡ IRDAI ಮೂಲ ಉದ್ದೇಶ ಇರುವುದು - 2047ರ ಒಳಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ವಿಮೆ ಹೊಂದುವಂತಾಗಬೇಕು ಎಂಬುದು.

ಒಂದು ಕುತೂಹಲಕರ ಬೆಳವಣಿಗೆಯನ್ನು ಗಮನಿಸಬೇಕು. 2015ರ ತನಕವೂ ವಿಮಾ ಕ್ಷೇತ್ರದಲ್ಲಿ ಖಾಸಗೀಕರಣ-FDIಗಳನ್ನು ಕಂಠಪೂರ್ತಿ ವಿರೋಧಿಸುತ್ತಿದ್ದವರು ವಿಮಾ ಕ್ಷೇತ್ರದ ನೌಕರ ಸಂಘಗಳು. 2026ರಲ್ಲಿ ಶೇ. 100 FDIಗೆ ಅನುಮತಿ ದೊರಕುವುದರೊಂದಿಗೆ, ಆ ಹೋರಾಟಕ್ಕೆ ಈಗ ನೆಲೆ ಉಳಿದಿಲ್ಲ. ಈಗ ಎರಡನೇ ಹಂತದ ಪ್ರತಿರೋಧ ಕಾಣಿಸಿಕೊಂಡಿದೆ. IRDAI ಪ್ರಸ್ತಾವಕ್ಕೆ ಈ ಬಾರಿ ಕಂಠಪೂರ್ತಿ ವಿರೋಧ ಸೂಚಿಸುತ್ತಿರುವುದು, ವಿಮಾ ಏಜೆಂಟರು ಮತ್ತು ದಲ್ಲಾಳಿಗಳು. ಹೆಚ್ಚಿನಂಶ, ಮುಂದಿನ ಗುರಿ ಸಣ್ಣ ವಿಮಾ ಕಂಪೆನಿಗಳು. ಉದಾರೀಕರಣದ ಹೆಜ್ಜೆಗಳು ಪ್ರತಿಯೊಂದು ಕ್ಷೇತ್ರದಲ್ಲೂ ಇದೇ ಹಾದಿಯಲ್ಲಿ ಸಾಗುತ್ತಿವೆ. ಹುಳ-ಹುಪ್ಪಟೆಗಳನ್ನು ಸಣ್ಣ ಮೀನುಗಳೂ, ಸಣ್ಣ ಮೀನನ್ನು ದೊಡ್ಡ ಮೀನುಗಳೂ, ದೊಡ್ಡ ಮೀನನ್ನು ತಿಮಿಂಗಿಲಗಳೂ ತಿಂದು ಬದುಕುವುದೇ ಉದಾರೀಕರಣದ ಹುರುಳು ಅನ್ನಿಸತೊಡಗಿದೆ.

ಈ ಎಲ್ಲ ಬೆಳವಣಿಗೆಗಳಲ್ಲಿ, ಅಂತಿಮ ಗ್ರಾಹಕ ಆಗಿರುವ ಪಾಲಿಸಿದಾರ ಪ್ರಜೆ ಕಳೆದೇ ಹೋದಂತಿದೆ. ಎಲ್ಲ ಸ್ಟೇಕ್‌ಹೋಲ್ಡರುಗಳೂ ತಮ್ಮ ತಮ್ಮ ಸ್ಟೇಕ್‌ಗಳ ಬಂದೂಕನ್ನು ಪಾಲಿಸಿದಾರರ ಹೆಗಲ ಮೇಲಿಟ್ಟೇ ಗುರಿ ಹೂಡಿದ್ದಾರೆ. ಅದಕ್ಕೆ ಒಳ್ಳೆಯ ಉದಾಹರಣೆ, IRDAI ತನ್ನನ್ನು ಸಮರ್ಥಿಸಿಕೊಳ್ಳುತ್ತಿರುವ ರೀತಿ ಮತ್ತು ಅದಕ್ಕೆ ವಿಮಾ ಏಜೆಂಟರು ಹಾಗೂ ದಲ್ಲಾಳಿಗಳ ಪ್ರತಿಕ್ರಿಯೆ. ಈ ಪ್ರಸ್ತಾವಗಳನ್ನು ಒಮ್ಮೆಲೇ ಜಾರಿಗೆ ತರುವ ಬದಲು ಹಂತಹಂತವಾಗಿ ಜಾರಿಗೆ ತಂದರೆ, ಆ ಅವಧಿಯಲ್ಲಿ ತಪ್ಪು ಹಾದಿಯಲ್ಲಿ ವಿಮಾ ಪಾಲಿಸಿ ವ್ಯಾಪಾರ ಆರಂಭ ಆಗಬಹುದು ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಎಚ್ಚರಿಸಿರುವ IRDAI ಸದಸ್ಯ (ಜೀವವಿಮೆ) ಸ್ವಾಮಿನಾಥನ್ ಅಯ್ಯರ್ ಅವರು, 15ಲಕ್ಷ ಕೋಟಿ ರೂ.ಗಳ ಭಾರತೀಯ ವಿಮಾ ಮಾರುಕಟ್ಟೆಯಲ್ಲಿ, ಇಂತಹ ತಪ್ಪು ಮಾಹಿತಿಗಳೊಂದಿಗೆ ನಡೆಯುವ ವ್ಯಾಪಾರಗಳನ್ನು (mis-selling) ತಪ್ಪಿಸುವುದಕ್ಕಾಗಿಯೇ ಏಜಂಟರು ಮತ್ತು ದಲ್ಲಾಳಿಗಳ ಮೊದಲ ವರ್ಷದ ಕಮಿಷನ್, ನವೀಕರಣ ಕಮಿಷನ್‌ಗಳಲ್ಲಿ ಸುಧಾರಣೆ ಮಾಡಿರುವುದಲ್ಲದೆ, ಪಾಲಿಸಿಯ ಜೊತೆ ಕಡ್ಡಾಯವೆಂಬಂತೆ ಬೇರೆ ಸವಲತ್ತುಗಳನ್ನು (ಉದಾಹರಣೆಗೆ ಸಾಲದ ಜೊತೆ ವಿಮೆ ಕಡ್ಡಾಯ ಎಂದು ವಿಧಿಸುವುದು) ಹೇರುವುದನ್ನು (compulsory bundling) ನಿಯಂತ್ರಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಅವರ ಪ್ರಕಾರ, ಈ ಎಲ್ಲ ಸುಧಾರಣೆಗಳು ವಿಮಾ ವಿತರಣೆಯ ಇಕಾನಮಿಯನ್ನು ಪಾಲಿಸಿದಾರರಿಗೆ ದುಡ್ಡಿಗೆ ತಕ್ಕ ಮೌಲ್ಯ ಒದಗಿಸುವ ಮೂಲಕ, ಕಾರ್ಯಾಚರಣೆಯಲ್ಲಿ ಕ್ಷಮತೆ ತರುವ ಮೂಲಕ, ಸ್ಪರ್ಧೆಗಳನ್ನು ನ್ಯಾಯಯುತಗೊಳಿಸುವ ಮೂಲಕ, ಹೆಚ್ಚು ಜನರನ್ನು ವಿಮಾ ವ್ಯಾಪ್ತಿಗೆ ತರುವ ಮೂಲಕ, ವಿಮೆ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವ ಮೂಲಕ ಮತ್ತು ವಿಮಾ ವಲಯದ ಬೆಳವಣಿಗೆಯನ್ನು ಸುಸ್ಥಿರಗೊಳಿಸುವ ಮೂಲಕ ಮರುಹೊಂದಾಣಿಕೆ ಮಾಡಲಿದೆ.

ಆದರೆ, ವಿಮಾ ಏಜೆಂಟರು, ದಲ್ಲಾಳಿಗಳು ಬೇರೆಯೇ ಕಥೆ ಹೇಳುತ್ತಿದ್ದಾರೆ. 2023ರಲ್ಲಿ IRDAI ಜಾರಿಗೆ ತಂದ ಸುಧಾರಣೆಗಳನ್ನು ಹಾಲಿ ಪ್ರಸ್ತಾವ ಅನೈತಿಕ ವ್ಯವಹಾರಗಳಿಗೆ ಅವಕಾಶ ತೆರೆಯುವ ಮೂಲಕ ನಾಶ ಮಾಡಲಿದೆ ಹಾಗೂ ಇದರಿಂದ 10 ಲಕ್ಷಕ್ಕೂ ಹೆಚ್ಚು ವಿಮಾ ಕ್ಷೇತ್ರದ ಜನರ ಜೀವನ ಅಪಾಯಕ್ಕೀಡಾಗಲಿದೆ ಎಂದು ಅವರು ಹೇಳುತ್ತಿದ್ದಾರೆ. ಈ ಕುರಿತು ಭಾರತೀಯ ವಿಮಾ ದಲ್ಲಾಳಿಗಳ ಸಂಘ (IBAI)ವು ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿದೆ. 2023ರ ಸುಧಾರಣೆಗಳ ಕಾರಣದಿಂದಾಗಿ 824 ಕೋಟಿ ರೂ.ಗಳ ಜಿಎಸ್‌ಟಿ ಇನ್‌ಪುಟ್ ಕುರಿತ ಸುಳ್ಳು ಪ್ರಕರಣಗಳ ನಿಖಾಲಿ ಆಗಿತ್ತು. ಅದು ಮತ್ತೆ ತಲೆ ಎತ್ತಬಹುದು, ಸಾರ್ವಜನಿಕ ಕ್ಷೇತ್ರದ ವಿಮಾ ಕಂಪೆನಿಗಳಿಗೆ ಹಾಗೂ ಸಣ್ಣ ವಿಮಾ ಕಂಪೆನಿಗಳಿಗೆ ಇದರಿಂದ ನಷ್ಟ ಸಂಭವಿಸಲಿದೆ. ಹಾಗಾಗಿ 2023ರ ಸುಧಾರಣೆಗಳನ್ನೇ ಮುಂದುವರಿಸಬೇಕು. ಅಗತ್ಯ ಬಿದ್ದಲ್ಲಿ ಅದರ ಅನುಷ್ಠಾನದ ಕುರಿತು ಕಟ್ಟುನಿಟ್ಟಿನ ನಿಗಾ ಇರಿಸಬೇಕು ಎಂದು IBAI ತನ್ನ ಅಭಿಪ್ರಾಯ ನೀಡಿದೆ.

ಈ ಎಲ್ಲ ಬೆಳವಣಿಗೆಗಳ ಒಟ್ಟು ಚಿತ್ರಣವನ್ನು ಗಮನಿಸಿದರೆ, ಏನೇನು ಕಾಣಿಸುತ್ತದೆ?

ವಿಮಾಕ್ಷೇತ್ರ ಖಾಸಗೀಕರಣಗೊಂಡಿರುವ ಜಗತ್ತಿನ ಬೇರೆ ದೇಶಗಳ ಯಾವುದೇ ಉದಾಹರಣೆಯನ್ನು ತೆಗೆದುಕೊಂಡರೂ ಅಲ್ಲೆಲ್ಲ ಅವು ‘ಲಾಭ ಬಡುಕ’ ಉದ್ಯಮಗಳೇ. ಒಂದೆಡೆ ವಿಮಾ ಮೊತ್ತ ಸಂಗ್ರಹದ ಲಾಭ, ಇನ್ನೊಂದೆಡೆ ಬಂದ ಹಣದ ಮರು ಹೂಡಿಕೆ.... ಹೀಗೆ.

ಭಾರತದಲ್ಲಿ ವಿದೇಶಿ ಹೂಡಿಕೆಗೆ ಶೇ. 100 ಅವಕಾಶ ತೆರೆಯಲಾಗಿದೆ ಎಂದರೆ ಅದರ ಅರ್ಥ ಕೂಡ, ಇಲ್ಲಿ ವಿಮೆ ವ್ಯಾಪಾರದಿಂದ ಲಾಭ ಗಳಿಸಲು ವಿದೇಶಿ ಕಂಪೆನಿಗಳಿಗೆ ಅವಕಾಶ ತೆರೆಯಲಾಗುತ್ತಿದೆ ಎಂದೇ. ಈ ಅವಕಾಶ ತೆರೆಯಲು ಕಳೆದ 30 ವರ್ಷಗಳಲ್ಲಿ ಹಂತಹಂತವಾಗಿ ಪ್ರಯತ್ನಗಳು ನಡೆದಿವೆ. ಮೊದಲ ಹಂತದಲ್ಲಿ ವಿಮಾ ಕ್ಷೇತ್ರದ ಕಾರ್ಮಿಕರು, ಈಗ ಎರಡನೇ ಹಂತದಲ್ಲಿ ಏಜೆಂಟರು, ಬ್ರೋಕರುಗಳು, ಮುಂದೆ ಸಣ್ಣ ಗಾತ್ರದ ವಿಮಾ ಕಂಪೆನಿಗಳು.. ಹೀಗೆ. ಅಂತಿಮವಾಗಿ ದೇಶದ ಆಪತ್ಬಂಧು ಆಗಿ ಬೆಳೆದು ನಿಂತಿರುವ ಭಾರತೀಯ ಜೀವವಿಮಾ ನಿಗಮ ಮತ್ತು ಇಲ್ಲಿನ 140 ಕೋಟಿ ಜನಸಂಖ್ಯೆ, ದೇಶದ ಹೊರಗಿನ ವಿಮಾ ಕಂಪೆನಿಗಳ ಕಣ್ಣು ಕುಕ್ಕಿವೆ. ಹಾಗಾಗಿ ಅವರಿಗೆ ಇಲ್ಲಿಗೆ ಬರುವ ಆತುರ. ಇದೆಲ್ಲ ಎಲ್ಲಿಗೆ ತಲುಪಲಿದೆ, ಕಾದು ನೋಡಬೇಕು.

(ಅಂಕಣಕಾರರು ಪತ್ರಕರ್ತರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಾಜಾರಾಂ ತಲ್ಲೂರು

contributor