×
Ad

ಪ್ರತಿಭಟನೆ ಮತ್ತು ನ್ಯಾಯಾಂಗ

Update: 2026-07-13 10:53 IST

ಯಾವುದೇ ಪಕ್ಷದ ಇರಲಿ, ಪೊಲೀಸರ ಕೆಂಗಣ್ಣಿನಿಂದ ಪಾರಾಗ ಬೇಕೆಂದರೆ ಕೇಂದ್ರದಲ್ಲಿ ಅಧಿಕಾರರೂಢ ಪಕ್ಷವನ್ನು ಸೇರುವುದೊಂದೇ ದಾರಿ ಎಂಬಂತಾಗಿರುವ ಇಂದಿನ ದಿನಗಳಲ್ಲಿ ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿ ಮಾಧವ ಜಾಮದಾರ್ ಅವರು ಅರ್ಜಿದಾರ ಸಯೀದ್ ಅಬ್ದುಲ್ ವಾಹಿದ್ ಚೌಧರಿ ಅವರನ್ನುದ್ದೇಶಿಸಿ, ಅರ್ಜಿದಾರರು ತಮ್ಮ ಮೇಲಿರುವ ಎಫ್‌ಐಆರ್‌ಗಳಿಂದ ಪಾರಾಗಬೇಕೆಂದಿದ್ದರೆ ಆಡಳಿತ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಅಲ್ಲಿರುವ ವಾಸಿಂಗ್ ಮೆಷಿನ್‌ನಿಂದ ಪರಿಶುದ್ಧರಾಗಬಹುದು ಎಂದು ತಮಾಷೆಯಾಗಿ ಹೇಳಿರುವ ಮಾತು ಕಟು ಸತ್ಯವಾಗಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ (ಎನ್‌ಡಿಎ) ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಕಳೆದ ಹನ್ನೆರಡು ವರ್ಷಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅವಿರತ ದಾಳಿ ನಡೆಯುತ್ತಿದೆ.ಇಂಥ ಸಂದರ್ಭಗಳಲ್ಲಿ ಅನ್ಯಾಯಕ್ಕೊಳಗಾದವರ ನೆರವಿಗೆ ಬರಬೇಕಾದ ನ್ಯಾಯಾಲಯಗಳಿಂದಲೂ ನಿರಾಶಾದಾಯಕ ತೀರ್ಪುಗಳು,ಆದೇಶಗಳು ಬರುತ್ತಿವೆ. ಆದರೆ ಎಲ್ಲ ಆದೇಶಗಳು, ತೀರ್ಪುಗಳು ಹಾಗಿವೆಯೆಂದಲ್ಲ.ಸುಪ್ರೀಂ ಕೋರ್ಟ್ಮಾತ್ರವಲ್ಲ ಹೈಕೋರ್ಟ್‌ಗಳು ಹಾಗೂ ಸ್ಥಳೀಯ ನ್ಯಾಯಾಲಯಗಳು ಜನಸಾಮಾನ್ಯರ ಹಕ್ಕುಗಳ ಪರವಾಗಿ ನಿಂತ ಉದಾಹರಣೆಗಳು ನಮ್ಮಲ್ಲಿವೆ. ಅವು ನಿರ್ದಿಷ್ಟ ಪ್ರಕರಣಕ್ಕೆ ಸೀಮಿತವಾಗಿ ಉಳಿದು ಬಿಡುತ್ತವೆ. ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನದತ್ತವಾದ ಹಕ್ಕು ಎಂಬುದನ್ನು ಮುಂಬೈ ಹೈಕೋರ್ಟ್ಕಳೆದ ವಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಂವಿಧಾನದ ಮೇಲೆ ನಂಬಿಕೆಯನ್ನು ಹೊಂದಿರದ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಇಂಥದೆಲ್ಲ ಅನಿರೀಕ್ಷಿತವಲ್ಲ. ಜನರ ಮೂಲಭೂತ ಹಕ್ಕುಗಳ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಮುಂಬೈ ಹೈಕೋರ್ಟ್ ತೀರ್ಪು ಹೊಸ ಆಸೆ,ಭರವಸೆಗಳನ್ನು ಮೂಡಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಜ್ಞಾನ ವಾಪಿ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಡೆಮಾಕ್ರಟಿಕ್ ಪಕ್ಷ (ಎಸ್‌ಡಿಪಿಐ)ದ ನಾಯಕ ಸಯೀದ್ ಅಬ್ದುಲ್ ವಾಹಿದ್ ಚೌಧರಿ ಎಂಬ ಅರ್ಜಿದಾರರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ನೀಡಿರುವ ಪ್ರಕರಣ ಗಮನಾರ್ಹವಾಗಿದೆ.

ತೀರ್ಪು ನೀಡುವ ಸಂದರ್ಭದಲ್ಲಿ ಹೈಕೋರ್ಟ್ ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನ ನೀಡಿರುವ ಹಕ್ಕು ಎಂದು ಹೇಳಿದೆ

ಸಯೀದ್ ಅಬ್ದುಲ್ ವಾಹಿದ್ ಚೌಧರಿ ಅವರು ಪೌರತ್ವ ಕಾಯ್ದೆ (ಸಿಎಎ) ಹಾಗೂ ಜ್ಞಾನ ವಾಪಿ ಮಸೀದಿಗೆ ಸಂಬಂಧಿಸಿದಂತೆ ಬಿಜೆಪಿ ಸರಕಾರದ ಕ್ರಮವನ್ನು ವಿರೋಧಿಸಿ ಪೊಲೀಸರ ಪರವಾನಿಗೆ ಪಡೆಯದೇ ಪ್ರತಿಭಟನಾ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ ಎಂದು ಅವರ ಮೇಲೆ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಎಫ್‌ಐಆರ್ ಹಾಕಿದ್ದರು. ಅಷ್ಟೇ ಅಲ್ಲ, ಮುಂಬೈ ಮಹಾನಗರ ಪ್ರವೇಶವನ್ನು ನಿರ್ಬಂಧಿಸಿ ಚೌಧರಿ ಅವರ ವಿರುದ್ಧ 2025ರಲ್ಲಿ ಗಡಿಪಾರು ಆದೇಶವನ್ನು ಹೊರಡಿಸಿದ್ದರು.

ಪೊಲೀಸರ ಈ ಕ್ರಮವನ್ನು ಆಕ್ಷೇಪಿಸಿದ ಮುಂಬೈ ಹೈಕೋರ್ಟ್ ಸರಕಾರವನ್ನು ಟೀಕಿಸಿದ ಮಾತ್ರಕ್ಕೆ ಓರ್ವ ನಾಗರಿಕನ ಮೇಲೆ ಪ್ರಕರಣ ದಾಖಲಿಸಿ ಎಫ್‌ಐಆರ್ ಹಾಕುವುದು ನ್ಯಾಯ ಸಮ್ಮತವಲ್ಲ ಎಂದು ಹೇಳಿತು. ಸಾರ್ವಜನಿಕ ಸುರಕ್ಷತೆ ಅಥವಾ ಆಸ್ತಿಗೆ ಧಕ್ಕೆ ಉಂಟಾಗುವ ಸಾಧ್ಯತೆಯಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ, ಆದ್ದರಿಂದ ಪೊಲೀಸರು ಕೈಗೊಂಡ ಕ್ರಮ ಅರ್ಜಿದಾರರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿದೆ ಎಂದು ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಂಬುದು ಪ್ರಜೆಗಳ ಮೂಲಭೂತ ಹಕ್ಕು. ನಮ್ಮ ಸಂವಿಧಾನವೂ ಅದನ್ನು ಖಾತರಿ ಪಡಿಸಿದೆ. ಇದನ್ನೇ ಉಲ್ಲೇಖಿಸಿದ ಮುಂಬೈ ಹೈಕೋರ್ಟ್‌ನ ಮಾಧವ ಜಮದಾರ್ ಅವರು ಸಯೀದ್ ಅಹ್ಮದ್ ಅಬ್ದುಲ್ ವಾಹಿದ್ ಚೌಧರಿ ಅವರ ವಿರುದ್ಧದ ನಗರ ಪ್ರದೇಶದ ನಿರ್ಬಂಧವನ್ನು ರದ್ದು ಪಡಿಸಿದ್ದಾರೆ.

ಅಷ್ಟೇ ಅಲ್ಲದೆ ದೇಶದ ನಾಗರಿಕರನ್ನು ಸರಕಾರದ ಗುಲಾಮರನ್ನಾಗಿ ಮಾಡಲು ಸಾಧ್ಯವಿಲ್ಲ, ಪ್ರತಿಭಟನೆ ನಡೆಸಿದರೆಂಬ ಕಾರಣಕ್ಕಾಗಿ ನಾಗರಿಕರನ್ನು ಗಡಿಪಾರು ಮಾಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಮಾಧವ ಜಾಮದಾರ್ ಹೇಳಿದ್ದಾರೆ.

ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವುದು ಧಿಕ್ಕಾರ ಕೂಗುವುದು ಅಪರಾಧವಲ್ಲ, ಹೀಗೆ ಪ್ರತಿಭಟನೆ ನಡೆಸಿದವರ ಮೇಲೆ ಕ್ರಿಮಿನಲ್ ಖಟ್ಲೆ ಹಾಕುವುದು ಅಥವಾ ಅವರನ್ನು ಗಡಿಪಾರು ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಮಾಧವ ಜಾಮದಾರ್‌ಅವರು ತೀರ್ಪು ನೀಡುವಾಗ ಹೇಳಿದ ಮಾತು ಸೂಕ್ತವಾಗಿದೆ. ಸಂವಿಧಾನದ 19 ಕಲಂ (ವಿಧಿ) ಖಾತರಿಪಡಿಸಿರುವ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ಪ್ರತಿಭಟನೆ ನಡೆಸುವುದರಿಂದ ಕಾನೂನು ಸುವ್ಯವಸ್ಥೆಗೆ ಅಪಾಯ ಎಂದು ಪುರಾವೆಯಿಲ್ಲದೆ ಆರೋಪಿಸುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ ಮಾತು ಸೂಕ್ತವಾಗಿದೆ.

ಯಾವುದೇ ಪಕ್ಷದ ಇರಲಿ, ಪೊಲೀಸರ ಕೆಂಗಣ್ಣಿನಿಂದ ಪಾರಾಗ ಬೇಕೆಂದರೆ ಕೇಂದ್ರದಲ್ಲಿ ಅಧಿಕಾರರೂಢ ಪಕ್ಷವನ್ನು ಸೇರುವುದೊಂದೇ ದಾರಿ ಎಂಬಂತಾಗಿರುವ ಇಂದಿನ ದಿನಗಳಲ್ಲಿ ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿ ಮಾಧವ ಜಾಮದಾರ್ ಅವರು ಅರ್ಜಿದಾರ ಸಯೀದ್ ಅಬ್ದುಲ್ ವಾಹಿದ್ ಚೌಧರಿ ಅವರನ್ನುದ್ದೇಶಿಸಿ ಅರ್ಜಿದಾರರು ತಮ್ಮ ಮೇಲಿರುವ ಎಫ್‌ಐಆರ್‌ಗಳಿಂದ ಪಾರಾಗಬೇಕೆಂದಿದ್ದರೆ ಆಡಳಿತ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಅಲ್ಲಿರುವ ವಾಸಿಂಗ್ ಮೆಷಿನ್‌ನಿಂದ ಪರಿಶುದ್ಧರಾಗಬಹುದು ಎಂದು ತಮಾಷೆಯಾಗಿ ಹೇಳಿರುವ ಮಾತು ಕಟು ಸತ್ಯವಾಗಿದೆ.ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳು ಅಪಾಯದಲ್ಲಿರುವ ಈ ದಿನಗಳಲ್ಲಿ ನ್ಯಾಯಾಂಗದಲ್ಲಿ ಕೆಲವರಾದರೂ ಕಳವಳಗೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಮುಂಬೈ ಹೈಕೋರ್ಟ್‌ನಲ್ಲಿ ಚೌಧರಿ ಅವರಿಗೆ ಸಂಬಂಧಿಸಿದ ಈ ಮಹತ್ವದ ತೀರ್ಪು ಪ್ರಕಟಗೊಂಡ ಎರಡೇ ದಿನಗಳಲ್ಲಿ 2020ರ ದಿಲ್ಲಿಯ ಗಲಭೆಗಳ ಕುರಿತಾದ ಸಂಚಿನ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದಿಲ್ಲಿಯ ಹೈಕೋರ್ಟ್ ತಿರಸ್ಕರಿಸಿತು.ಐದು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿರುವ ಅವರ ಜಾಮೀನು ಅರ್ಜಿಗಳನ್ನು ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ತಿರಸ್ಕರಿಸುತ್ತಲೇ ಬಂದಿವೆ. ಯಾವುದೇ ಸಾಕ್ಷ್ಯಾಧಾರ ಗಳಿಲ್ಲದೇ, ಆರೋಪ ಪಟ್ಟಿ ಇಲ್ಲದೇ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಐದು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇಡುವುದು ಮತ್ತು ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಅಲ್ಲವೇ? ಮುಂಬೈ ಹೈಕೋರ್ಟಿನ ತೀರ್ಪು ಹಾಗೂ ದಿಲ್ಲಿ ಹೈಕೋರ್ಟ್‌ನ ತೀರ್ಪುಗಳು ವಿಭಿನ್ನವಾಗಿವೆ. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ವೈರುಧ್ಯವಲ್ಲವೇ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಮತ ಇರುವುದು ತಪ್ಪಲ್ಲ, ಅದಕ್ಕೆ ನ್ಯಾಯಾಂಗದ ರಕ್ಷಣೆ ಇದೆ ಎಂದು ಧೃಢೀಕರಿಸಿರುವ ಮುಂಬೈ ಹೈಕೋರ್ಟ್ ನ್ಯಾಯಮೂರ್ತಿ ಮಾಧವ ಜಾಮದಾರ್ ಅವರ ತೀರ್ಪು ನಿರ್ದಿಷ್ಟ ಪ್ರಕರಣದ ವ್ಯಾಪ್ತಿಯನ್ನು ಮೀರಿ ಪ್ರಜಾಪ್ರಭುತ್ವದ ಚೈತನ್ಯವನ್ನು ಬಲಪಡಿಸುವಂಥ ಬೆಳಕನ್ನು ಚೆಲ್ಲಿದೆ. ಆದರೆ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ರ ಅರ್ಜಿಯ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸುವ ತೀರ್ಪು ತದ್ವಿರುದ್ಧವಾಗಿದೆ.

ನ್ಯಾಯಾಂಗದ ಈ ವಿರೋಧಾಭಾಸಕ್ಕೆ ಹೊಣೆ ಯಾರು? ಉಮರ್ ಖಾಲಿದ್ ಪ್ರಕರಣ ಮಾತ್ರವಲ್ಲ, ಆನಂದ್ ತೇಲ್ತುಂಬ್ಡೆೆ, ಕವಿ ವರವರರಾವ್ ಮೊದಲಾದವವರ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳಿಂದ ನೀಡಿದ ವಿಳಂಬವಾಗಿ ಜಾಮೀನು ದೊರಕಿರುವುದು ಗಮನಾರ್ಹ ಸಂಗತಿ ಆಗಿದೆ. ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿ ಮಾಧವ ಜಾಮದಾರ ಅವರು ನೀಡಿರುವ ತೀರ್ಪು ನಿರ್ದಿಷ್ಟ ಪ್ರಕರಣದ ವ್ಯಾಪ್ತಿಯನ್ನು ಮೀರಿ ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುವುದರಲ್ಲಿ ಇರುವ ಅಡ್ಡಿ ಯಾವುದು?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News