ಪ್ರಪಂಚದ ಯಾವ ಭಾಷೆಯಲ್ಲೂ ಮಹಾಭಾರತದಂತಹ ಕಾವ್ಯ ಬಂದಿಲ್ಲ. ಇಲ್ಲಿನ ವೈವಿಧ್ಯಮಯ ಪಾತ್ರಗಳು ಹೊರರೂಪವನ್ನು ಬಿಂಬಿಸುವ ದರ್ಪಣಗಳಲ್ಲ. ಒಳಗಿನ ಸತ್ಯವನ್ನು ಅನಾವರಣಗೊಳಿಸಿ ಹೊಸ ದೃಷ್ಟಿಯ ಮೂಲಕ ವಿಮರ್ಶಿಸುವ ಶಕ್ತಿಯನ್ನು ಓದುಗರಲ್ಲಿ ತುಂಬುತ್ತದೆ. ಕವಿ ಹಿಂಡಿ ಕೊಟ್ಟ ಕಾವ್ಯದ ಹಾಲಿನಿಂದ ವಿಮರ್ಶಕರು ಬೆಣ್ಣೆಯನ್ನೋ, ತುಪ್ಪವನ್ನೋ ಕಡೆದು ಓದುಗರಿಗೆ ನೀಡುತ್ತಾರೆ. ಮೂಲದಲ್ಲಿ ಕೇವಲ ಸಾವಿರ ಶ್ಲೋಕಗಳಿದ್ದ ಜಯ ಎಂಬ ಕಾವ್ಯ ಲಕ್ಷದಷ್ಟು ಶ್ಲೋಕಗಳ ಮಹಾಭಾರತವಾಗಿ ರೂಪುಗೊಳ್ಳಲು ಹೊಸ ದೃಷ್ಟಿಯಿಂದ ನೋಡಿದ ಸಹೃದಯನಾದ ವಿಮರ್ಶಕನೂ ಒಂದಷ್ಟು ಕಥೆಗಳನ್ನು ಸೇರಿಸಿದ್ದು ಕಾರಣವಿರಬೇಕು. ನಾನೀಗ ಹೇಳ ಹೊರಟಿರುವುದು ಅಂತಹುದೇ ಒಂದು ಕಲ್ಪನೆಯಲ್ಲಿ ಸೃಷ್ಟಿಯಾದ ‘ಮಹಾಭಾರತದೊಳಗಿಂದ ಒಂದಿಷ್ಟು’ ಎಂಬ ಕೃತಿಯ ಬಗ್ಗೆ. ದಿ. ಟಿ.ಎಸ್. ರಾಮಸ್ವಾಮಿಯವರು ಆಂದೋಲನ ಪತ್ರಿಕೆಯಲ್ಲಿ ‘ಹಾಡು ಪಾಡು’ ಎಂಬ ಅಂಕಣದಿಂದ ಪ್ರಸಿದ್ಧರಾದವರು. ಹಾಡು ಪಾಡು ರಾಮು ಎಂಬ ಹೆಸರಲ್ಲಿ ಅವರ ನಿಧನದ ಬಳಿಕ ಈ ಕೃತಿ ಪ್ರಕಟವಾಗಿದೆ. ‘ಮನುಷ್ಯ ಸತ್ತ ಮೇಲೂ ನಮ್ಮನ್ನು ಹಿಂಬಾಲಿಸಿಕೊಂಡು ಬರುವುದು ಗೆಳೆಯ ಧರ್ಮವೊಂದೇ’ ಎಂಬ ಮಾತಿದೆ. ಈ ಮಾತಿಗೆ ಸಾಕ್ಷಿಯಾಗಿ ರಾಮು ಅವರ ಆತ್ಮೀಯ ಗೆಳೆಯರಾದ ದೇವನೂರ ಮಹಾದೇವ, ಒ.ಎಲ್. ನಾಗಭೂಷಣ ಸ್ವಾಮಿ ಮುಂತಾದವರ ಸ್ನೇಹದ ಅಪ್ಪುಗೆಯು ಸಂಕಲಿಸುವ ಮತ್ತು ಟೈಪಿಸುವ ಕೆಲಸವನ್ನು ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡಿದೆ. ರಾಮು ಅವರು ಮೂಲತಃ ಕವಿ. ಆದುದರಿಂದ ಇಡೀ ಕೃತಿ ಪದ್ಯಗಂಧಿಯಾಗಿ, ದೃಶ್ಯಕಾವ್ಯವಾಗಿ ರೂಪುಗೊಂಡಿದೆ. ‘ನುಡಿ ಬಾಗಿಲ ಹಾಯ್ದು’ ಕವನ ಸಂಕಲನವೂ ಅವರು ನಿಧನರಾದ ಬಳಿಕ ಪ್ರಕಟಗೊಂಡಿದೆ. ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿ ರೂಪುಗೊಳ್ಳಲು ರಾಮು ಅವರು ದೀರ್ಘಕಾಲದಿಂದ ಮಹಾಭಾರತ ಕಾವ್ಯದಲ್ಲಿ ರಚನೆಗೊಂಡ ಸಂಸ್ಕೃತ, ಇಂಗ್ಲಿಷ್, ಕನ್ನಡದ ಬಹುತೇಕ ಎಲ್ಲಾ ಕೃತಿಗಳನ್ನು ಅಧ್ಯಯನ ಮಾಡಿದ್ದಾರೆ. ರಾಮು ಅವರ ಓದಿನ ತಪಸ್ಸು ಎಷ್ಟು ಆಳವಾಗಿದೆ ಎಂಬುದನ್ನು ರಾಜೇಂದ್ರ ಚೆನ್ನಿ ಅವರು ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಲಕ್ಷ್ಮೀಶ ತೋಳ್ಪಾಡಿ ಯವರು ‘ನಾನು ಕಂಡಂತೆ’ ರಾಮುವನ್ನು ನಮ್ಮ ಮುಂದೆ ನಿಲ್ಲಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಪಂಡಿತ ಪರಂಪರೆಯ ಪ್ರಬುದ್ಧ ಲೇಖಕರು ಮತ್ತು ಚಿಂತಕರೂ ಆದ ಲೇಖಕರ ಸಂಯೋಗದ ಸಮ್ಮಿಶ್ರ ಪ್ರಯತ್ನದ ಫಲಶ್ರುತಿಯಾಗಿ ಹಾಡು ಪಾಡು ರಾಮ ಅವರು ನೆಲಗನ್ನಡದಲ್ಲಿ ಅಂದರೆ ದೇಸೀ ಶೈಲಿಯಲ್ಲಿ ಬರೆದ ಈ ಕೃತಿಯನ್ನು ಅಭಿರುಚಿ ಗಣೇಶ್ ಅವರು ಪ್ರಕಟಗೊಳಿಸಿ ಕನ್ನಡಿಗರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

ರಾಮು ಅವರು ಮಹಾಭಾರತದ ಕೆಲವು ಪ್ರಾಮುಖ್ಯವಾದ ಕಥೆಗಳನ್ನು ಆಯ್ಕೆ ಮಾಡಿ 29 ಅಧ್ಯಾಯಗಳಲ್ಲಿ ಹೇಳುತ್ತಾ ಹೋಗಿದ್ದಾರೆ. ದ್ವಾಪರ ಯುಗದ ಆ ಪಾತ್ರಗಳು ನಮ್ಮ ನೆರೆ ಹೊರೆಯವರಂತೆ ಮಾತಾಡುತ್ತವೆ. ಈ ಕಥೆಯು ಎಲ್ಲೋ ನಡೆದಿದ್ದಲ್ಲ, ನಮ್ಮ ಮನೆಯಲ್ಲೇ ನಡೆದಂತೆ ಭಾಸವಾಗುವ ಶೈಲಿಯೂ ಆಪ್ತವಾಗಿದೆ. ಮಹಾಭಾರತದ ಅನುವಾದವೆಂದು ಲೇಖಕ ಹೇಳಿಕೊಂಡರೂ ನಮ್ಮ ಕಾಲದ ಕಥೆಯೂ ಆಗಿದೆ. ಅಣ್ವಸ್ತ್ರಗಳಿವೆಯೆಂಬ ಅಹಂಕಾರದಿಂದ ಬೀಗುವ ರಾಷ್ಟ್ರಗಳ ಈ ಕಾಲದ ದರ್ಪವು ಯಾವಾಗಲಾದರೂ ಕುರುಕ್ಷೇತ್ರವನ್ನು ನಿರ್ಮಿಸುವ ತರಾತುರಿಯಲ್ಲಿರಬಹುದು ಎಂಬ ಭಯ ನಮ್ಮನ್ನು ಕಾಡುತ್ತಿದೆ. ಇಡೀ ಈ ಕೃತಿಯೇ ನ್ಯಾಯವಾಗಿ ತಮಗೆ ಸಿಗಬೇಕಾದುದನ್ನು ಪಡೆಯಲು ನಡೆಸಿದ ಹೋರಾಟವೇ ಆಗಿದೆ. ಶಕುಂತಲೆಯ ಕಥೆಯು ಕಾಳಿದಾಸನಿಂದಾಗಿ ಪಡೆದ ನೋಟದ ಕತೆ ಎಲ್ಲರಿಗೂ ಗೊತ್ತು. ಆದರೆ ಮೂಲ ಭಾರತದಲ್ಲಿ ಶಕುಂತಲೆ ದುಶ್ಯಂತನೊಡನೆ ವಾದ ಮಾಡುತ್ತಾ ‘‘ನೀನು ಸುಳ್ಳುಗಾರ, ನಾನು ಸುತರಾಂ ಇಲ್ಲಿರಲ್ಲ, ನಿನ್ನಂತಹವರ ಸಹವಾಸ ಬೇಡ ನನಗೆ’’ ಎಂದು ಧಿಕ್ಕರಿಸಿ ಹೊರ ನಡೆದ ಛಲಗಾತಿ. ಪಾಂಡುವಿನ ಕಥೆಯಲ್ಲಿ ಶಾಪಗ್ರಸ್ತನಾಗಿ ಆತ ಮರಣ ಹೊಂದಿದಾಗ ಮಾದ್ರಿಯು ರೋದಿಸುವಾಗ ಕುಂತಿಯು ಪಾಂಡುವನ್ನು ಸ್ಮರಿಸುತ್ತಾ ‘‘ಮಂಕು ಹಿಡಿದ ಅವನ ಮುಖ ನಗುತ್ತಾ ಇರುವುದನ್ನು ಕಂಡೆಯಲ್ಲಾ ನೀನೇ ಭಾಗ್ಯವಂತೆ’’ ಎಂದು ಸಂತೈಸುವ ಚಿತ್ರಣ ಸೊಗಸಾಗಿದೆ. ಏಕಲವ್ಯನ ಕಥೆಯಲ್ಲಿ ದ್ರೋಣನು ‘‘ನೀನು ನನ್ನ ಶಿಷ್ಯನೇ ಆದರೆ ನನ್ನ ಸಂಬಳ ಕೊಡು. ನಿನ್ನ ಬಲಗೈ ಹೆಬ್ಬೆರಳ ಕೊಡುವಂತವನಾಗು’’ ಎಂಬ ಕರುಳಿರಿಯುವ ಮಾತಿಗೆ ದ್ರೋಣನ ಪದತಲದಲ್ಲಿ ಹೆಬ್ಬೆರಳನ್ನು ಕತ್ತರಿಸಿಟ್ಟ ಘಟನೆಗೆ ನಮ್ಮ ಮನ ಕುದಿಯುತ್ತದೆ. ಕರ್ಣನ ರಂಗಪ್ರವೇಶದಲ್ಲಿ ಅವನ ಸ್ವಾಭಿಮಾನ ಹಾಗೆಯೇ ತನ್ನ ತಂದೆ ಅಧಿರಥನನ್ನು ಗೌರವಿಸಿದ ರೀತಿಗೆ ಬೆರಗಾಗುತ್ತೇವೆ. ಬಕಾಸುರ ವಧೆಯ ಪ್ರಸಂಗವನ್ನು ‘ಕುಂತಿ ಒಳಕ್ಕೆ ಬಂದಳು ಸತ್ತವರ ಹತ್ತಿರ ಅಮೃತ ಬಂದ ಹಾಗೆ’ ಎಂಬ ಅಧ್ಯಾಯದಲ್ಲಿ ವಿವರಿಸಲಾಗಿದೆ. ‘ವನಪರ್ವದೊಳಗೊಂದು ಪೂರ್ವಕಥಾ’ ಅಧ್ಯಾಯದಲ್ಲಿ ಋಷ್ಯಶೃಂಗನ ಕಥೆಯ ವಿವರಣೆಯಿದೆ. ಕುರುಡ ಧೃತರಾಷ್ಟ್ರನೊಡನೆ ದುರ್ಯೋಧನನ ಸಂವಾದವು ಜೂಜಿಗೆ ಆಹ್ವಾನ ನೀಡಿ ಯುಧಿಷ್ಠಿರನನ್ನು ಅರಮನೆಗೆ ಕರೆಸಿಕೊಂಡು ಶಕುನಿಯ ತಂತ್ರದಿಂದ ಪಾಂಡವರು ಸೋತ ವಿವರಗಳು ದೃಶ್ಯಕಾವ್ಯಗಳಂತೆ ಎರಡು ಅಧ್ಯಾಯಗಳಲ್ಲಿವೆ. ‘‘ದ್ರುಪದನ ಮಗಳನ್ನು ಪಣ ಒಡ್ಡುತ್ತಾ ಇದ್ದೀನಿ... ಅಯ್ಯೋ’’ ಎಂಬ ಅಧ್ಯಾಯದಲ್ಲಿ ದ್ರೌಪದಿಯು ಸಭೆಯಲ್ಲಿ ಹಾಕಿದ ಪ್ರಶ್ನೆಗಳಿಗೆ ಯಾರೂ ಉತ್ತರಿಸದೆ ‘ಆಕೆ ದೀನಳಾಗಿ ಗಂಡಂದಿರ ಕಡೆಗೆ ನೋಡುತ್ತಾ ಇದ್ದಾಗ ಗಂಡಂದಿರ ಕರುಳ ಸಂಕಟ ಅಯ್ಯೋ ಅಂತು’ ಎಂಬ ಮಾತುಗಳಿವೆ. ಅಕ್ಷಯಾಂಬರ ಪ್ರಸಂಗವು ಮೂಲಭಾರತದಲ್ಲಿಲ್ಲ. ಅದು ಗದುಗಿನ ಕವಿ ಕುಮಾರವ್ಯಾಸನ ಹೊಸ ನೋಟದ ಕಲ್ಪನೆಯಾಗಿದೆ.

ಉದ್ಯೋಗ ಪರ್ವದಲ್ಲಿ ಬರುವ ಮಾಧವಿಯ ಕಥೆ ಸಂಕ್ಷಿಪ್ತವಾಗಿದೆ. ಗಾಲವ ಋಷಿಯ ಮೇಲಿನ ಗೌರವದಿಂದ ಯಯಾತಿ ತನ್ನ ಮಗಳನ್ನೇ ದಾನವಾಗಿ ನೀಡಿ ಮಕ್ಕಳನ್ನು ಹೆರುವ ಯಂತ್ರದಂತೆ ಆಕೆಯನ್ನು ನಡೆಸಿಕೊಂಡ ಘಟನೆಯು ಆ ಕಾಲದಲ್ಲಿ ಹೆಣ್ಣಿನ ಸ್ಥಿತಿ ಹೇಗಿತ್ತು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಹೆಣ್ಣನ್ನು ಪೂಜಿಸುವಲ್ಲಿ ದೇವತೆಗಳು ಸಂತೃಪ್ತರಾಗುತ್ತಾರೆ ಎಂಬ ಉಕ್ತಿ ಯಾವ ಕಾಲದ್ದಿರಬಹುದು? ಪೂಜಿಸುವುದೆಂದರೆ ಹೀಗೆಯೇ ಇರಬೇಕು. ಹಾಗೆ ನೋಡಿದರೆ ರಾಮಾಯಣದ ಸ್ತ್ರೀ ಪಾತ್ರಗಳಿಗಿಂತ ಮಹಾಭಾರತದ ಸ್ತ್ರೀ ಪಾತ್ರಗಳು ಹೆಚ್ಚು ಉಸಿರಾಡುತ್ತವೆ. ಮಾಧವಿಯ ಕಥೆ ಇಲ್ಲಿ ಉಪಕಥೆಯಾಗಿ ಬಂದಿದೆ. ಮುಂದಿನ ಅಧ್ಯಾಯಗಳಲ್ಲಿ ಕೃಷ್ಣ ಸಂಧಾನ, ಕರ್ಣನೊಂದಿಗೆ ಒಳಮಾತು. ಯುದ್ಧ ಸಿದ್ಧತೆ ನಡೆದು ಯುಧಿಷ್ಠಿರನು ಯುದ್ಧರಂಗದಲ್ಲಿ ಭೀಷ್ಮನಿಗೆ ನಮಸ್ಕರಿಸಿ ‘‘ತಾತ ನಿನ್ನ ಜೊತೆ ಯುದ್ಧ ಮಾಡಬೇಕಿದೆ. ಆಶೀರ್ವಾದ ಮಾಡು’’ ಎಂದು ಬೇಡಿಕೊಳ್ಳುತ್ತಾನೆ. ಗೀತೋಪದೇಶದ ಘಟನೆಯನ್ನು ಕೈಬಿಟ್ಟಿದೆ. ಯುದ್ಧರಂಗದಲ್ಲಿ ಅದು ಅವಾಸ್ತವವಾಗಿದೆ. ಮಹಾಭಾರತದೊಳಗೆ ಸೇರಿಕೊಂಡ ಎಷ್ಟೋ ಪ್ರಕ್ಷಿಪ್ತ ಭಾಗಗಳಲ್ಲಿ ಇದೂ ಒಂದು. ಮುಂದೆ ‘‘ಯುದ್ಧದಲ್ಲಿ ತನ್ನನ್ನೇ ಕೊಂದರೆ ಸಾಕು ಎನಿಸಿಬಿಟ್ಟಿತ್ತು ಆ ನಮ್ಮಪ್ಪ ದೇವವ್ರತಗೆ’’ ಇಲ್ಲಿನ ಸಂಭಾಷಣೆಗಳು ಹೃದಯಕ್ಕೆ ಮುಟ್ಟುತ್ತವೆ. ಕರ್ಣನೊಂದಿಗೆ ಭೀಷ್ಮನ ಸಂವಾದವೂ ಅಷ್ಟೇ ಆತ್ಮೀಯವಾಗಿ ಮೂಡಿ ಬಂದಿದೆ. ಕರ್ಣನಿಂದ ಏಟು ತಿಂದು ಬಂದು ಮಲಗಿದ ಯುಧಿಷ್ಠಿರನನ್ನು ಕಂಡು ಅರ್ಜುನ ‘‘ಇವನನ್ನು ಕೊಂದು ಸತ್ಯದ ಸಾಲ ತೀರಸತೀನಿ’’ ಎಂದು ಹೊರಡುವ ಆವೇಶ, ತಡೆಯುವ ಕೃಷ್ಣ ‘‘ಅವನನ್ನು ‘ನೀನು’ ಎಂದು ಅನ್ನು. ಅದೇ ಗುರುವನ್ನು ಕೊಂದ ಹಾಗೆ’’ ಎಂದು ಸಂತೈಸಿ, ಯುಧಿಷ್ಠಿರನ ಕಾಲಿಗೆ ಬೀಳುವಂತೆ ಮಾಡುತ್ತಾನೆ.

‘ನೋಡಿದವರೆಲ್ಲಾ ಇವನು ಮನುಷ್ಯ ಅಲ್ಲ ಎಂದರು’ ಎಂಬ ಅಧ್ಯಾಯದಲ್ಲಿ ಭೀಮ ದುಶ್ಯಾಸನನ್ನು ಕೊಲ್ಲುವ ದೃಶ್ಯಾವಳಿಗಳು ಬೀಭತ್ಸವಾಗಿ ಬಂದಿವೆ. ಯುದ್ಧದ ವರ್ಣನೆಗಳೆಲ್ಲಾ ಸಂಜಯ ಧೃತರಾಷ್ಟ್ರನಿಗೆ ನೀಡುವ ವರದಿಯಾಗಿ ಸಂಭಾಷಣಾ ರೂಪದಲ್ಲಿದೆ. ಕೊನೆಗೆ ಯುದ್ಧಭೂಮಿಯಲ್ಲಿ ಗಾಂಧಾರಿಯು ದ್ರೌಪದಿಗೆ ‘‘ನಾನೂ ನೀನೂ ಒಂದೇನೆ. ನಮಗೆ ಯಾರಿದ್ದಾರೆ?’’ ಎಂದು ದುಖದಿಂದ ತಮ್ಮನ್ನು ತಾವೇ ಸಂತೈಸಿಕೊಳ್ಳುವ ಅಧ್ಯಾಯವು ಮನ ಮಿಡಿಯುವಂತಿದೆ. ‘ಧರ್ಮರಾಯನ ಆಳ್ವಿಕೆಯಲ್ಲಿ ಧೃತರಾಷ್ಟ್ರ-ಗಾಂಧಾರಿ’ ಎಂಬ ಅಧ್ಯಾಯವು ಜನಮೇಜಯ ಮತ್ತು ವೈಶಂಪಾಯನರ ಸಂಭಾಷಣೆಯೊಂದಿಗೆ ಸಾಗುತ್ತದೆ. ಯಾದವರ ಕಲಹದ ಸುದ್ದಿ, ಕೃಷ್ಣ-ಬಲರಾಮರ ನಿಧನದ ಸುದ್ದಿ ಬಂದ ಮೇಲೆ ಯುಧಿಷ್ಠಿರ ವಾನಪ್ರಸ್ಥಕ್ಕೆ ಹೊರಡುವ ಸಿದ್ಧತೆ ಮಾಡುತ್ತಾನೆ. ಪಂಚಪಾಂಡವರು, ದ್ರೌಪದಿ ಎಲ್ಲರೂ ಎಲ್ಲವನ್ನೂ ತ್ಯಜಿಸಿ ಕಾಡಿಗೆ ಹೊರಟ ಸನ್ನಿವೇಶವು ಕಾಲದ ಹೊರಳಾಟವನ್ನು, ಕಾಲದ ಧರ್ಮವನ್ನು ಸ್ಪಷ್ಟಪಡಿಸುತ್ತದೆ. ಇವರ ಜೊತೆಯಲ್ಲಿ ಬಂದ ನಾಯಿಯು ಮಾತ್ರ ಕೊನೆಯವರೆಗೂ ಯುಧಿಷ್ಠಿರನ ಜೊತೆಗೆ ಇರುತ್ತದೆ. ಸ್ವರ್ಗದ ಬಾಗಿಲಲ್ಲೂ ನಿಂತು ಇಂದ್ರನೊಡನೆ ಅವನು ವಾದ ಮಾಡುತ್ತಾನೆ. ನಾಯಿಗೆ ಸ್ವರ್ಗದಲ್ಲಿ ಸ್ಥಾನವಿಲ್ಲದಿದ್ದರೆ ನನಗೂ ಬೇಡ. ಇದು ನನ್ನ ವ್ರತ ಎಂದು ಯಮಧರ್ಮನೊಡನೆಯೂ ವಾದಿಸಿ ಯುಧಿಷ್ಠಿರ ತಾನು ಬಯಸಿದ್ದನ್ನು ಸಾಧಿಸುತ್ತಾನೆ. ಸ್ವರ್ಗಾರೋಹಣದ ಘಟನೆಯೊಂದಿಗೆ ಈ ಕೃತಿ ಒಂದಿಷ್ಟು ಕಥೆಗಳನ್ನು ಯಾವುದೇ ಆಡಂಬರ, ಅಲಂಕಾರಗಳ ಸೋಂಕಿಲ್ಲದೆ ಸಾಮಾನ್ಯ ಜನರ ಹೃದಯದ ಮಾತುಗಳಂತೆ ಕೇಳಿಸುತ್ತದೆ. ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳ ಬಗ್ಗೆ ಗೊತ್ತಿದ್ದರೂ ಮನುಷ್ಯರಲ್ಲಿ ಯಾಕೆ ದುಷ್ಟತನ ಬೇರೂರಿದೆ? ಪಾಪ-ಪುಣ್ಯ, ಸ್ವರ್ಗ-ನರಕಗಳ, ದೇವರು-ಧರ್ಮಗಳ ಭಯವಿದ್ದರೂ ರಾಕ್ಷಸೀ ಮನೋಭಾವ ಯಾಕೆ ಕಡಿಮೆಯಾಗಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಲ್ಲ. ಧರ್ಮವು ಕಾಲದ ವಶದಲ್ಲಿ, ಮನುಷ್ಯ ಕಾಲದ ವಶದಲ್ಲಿದ್ದುಕೊಂಡು ಏನೇನೆಲ್ಲ ಸಂಭವಿಸಬಹುದು ಎಂಬುದಕ್ಕೆ ಮಹಾಭಾರತ ಕಾವ್ಯವು ಸಾರುವ ಸತ್ಯಕ್ಕಿಂತ ಭಿನ್ನವಾದುದು ಇರಲು ಸಾಧ್ಯವಿಲ್ಲ. ರಾಮು ಅವರ ಈ ಕೃತಿ ಮಹಾಭಾರತ ಒಳಗಿಂದ ಇನ್ನೊಂದಿಷ್ಟು ಹೊಸತನ್ನು ಕಾಣಿಸಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು.

(ಲೇಖಕಿ: ನಿವೃತ್ತ ಶಿಕ್ಷಕರು, ಹಿರಿಯ ಬರಹಗಾರರು)

ಈ ಕೃತಿಯ ಮುಖಬೆಲೆ: 225 ರೂ.

ಪ್ರಕಾಶಕರು: ಅಭಿರುಚಿ ಪ್ರಕಾಶನ,

# 386, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ,

ಸರಸ್ವತಿಪುರಂ, ಮೈಸೂರು-09. ಮೊ: 9980560013

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ.ಎಂ. ರೋಹಿಣಿ

contributor