ರಂಗಭೂಮಿಯ ಎರಡು ಸ್ತಂಭಗಳು ನಾಟಕ ರಚನೆ ಮತ್ತು ರಂಗ ಪ್ರಯೋಗ. ಇವೆರಡರ ನಡುವೆ ಪ್ರದರ್ಶನ, ದೃಶ್ಯ, ಶ್ರವ್ಯ ಕಲೆಯ ಎಲ್ಲ ಆಯಾಮಗಳೂ ಹಾದು ಹೋದಾಗ, ನಾಟಕ ರಂಗದ ಮೇಲೆ ಕಲಾವಿದರ ವೈವಿಧ್ಯಮಯ ಕೌಶಲಗಳು ಮೇಳೈಸುತ್ತವೆ. ಈ ಇಡೀ ಸಾಂಸ್ಕೃತಿಕ ಪ್ರಕ್ರಿಯೆಯ ಬುನಾದಿ ನಾಟಕದ ರಚನೆ. ಇತ್ತೀಚಿನ ದಿನಗಳಲ್ಲಿ ನಾಟಕ ರಚನಕಾರರು ಕಡಿಮೆಯಾಗುತ್ತಿದ್ದಾರೆ ಎಂಬ ಅಳಲು ಕೇಳಿಬರುತ್ತಿರುವಾಗ ಎದುರಿನಲ್ಲಿ ಕಂಡಿದ್ದು ಡಾ. ಯಶವಂತ ಕೊಕ್ಕನವರ ವಿರಚಿತ ‘ಧಣಿಯ ಹಿಂದಿನ ಧ್ವನಿ’ ಎಂಬ ಕೌಟುಂಬಿಕ ಕಥನ. ನಾಟಕಕಾರರು ಈ ಕಥಾ ಹಂದರವನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸಿಡದೆ ಬಾಹ್ಯ ಸಮಾಜದ ನಟ್ಟ ನಡುವೆ ತಂದು ನಿಲ್ಲಿಸುವ ಮೂಲಕ, ವರ್ತಮಾನವನ್ನೂ ಎಡಬಿಡದೆ ಕಾಡುತ್ತಿರುವ ಪ್ರಾಚೀನ ಜಾತಿ ವ್ಯವಸ್ಥೆಯ ದುಷ್ಟ ಪ್ರವೃತ್ತಿಗಳಿಗೆ ಉಳಿಪೆಟ್ಟು ನೀಡಿದ್ದಾರೆ.

ಜಾತಿ ವ್ಯವಸ್ಥೆ ಅಳಿಯುವುದಿಲ್ಲ ಆದರೆ ಶತಮಾನಗಳ ಕಾಲ ಸಾಮಾಜಿಕವಾಗಿ, ಆರ್ಥಿಕವಾಗಿ ತುಳಿಯಲ್ಪಟ್ಟ ತಳಸ್ತರದ ಜಾತಿ ಸಮುದಾಯಗಳು ತಮ್ಮದೇ ಆದ ಜನಪದೀಯ ಸಾಂಸ್ಕೃತಿಕ ಜಗತ್ತನ್ನು ಕಾಪಾಡಿಕೊಂಡು ಬಂದರೂ, ಈ ಸಮುದಾಯದ ಜನರನ್ನು ತಳಸ್ತರದಲ್ಲೇ ಅದುಮಿಟ್ಟಿದ್ದ ಭಾರತದ ಶ್ರೇಣೀಕೃತ ಸಾಮಾಜಿಕ ಪರಿಸರವನ್ನು ಭೇದಿಸಿ, ತಳಸ್ತರದ ಹಿರಿಮೆಯನ್ನು ಮೇಲೆತ್ತುವ ಪ್ರಸಂಗಗಳು ಇವತ್ತಿನವರೆಗೂ ನಡೆಯುತ್ತಲೇ ಇವೆ. ಇಂತಹ ಒಂದು ಕೌಟುಂಬಿಕ ಪ್ರಸಂಗವನ್ನು ಡಾ. ಯಶವಂತ ವರ್ತಮಾನದಲ್ಲಿ ದಾಖಲಿಸದೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಗುರುತಿಸುತ್ತಾರೆ. ಒಮ್ಮೆಯೂ ಅಸಂಗತ ಎಂದು ಭಾಸವಾಗದ ರೀತಿಯಲ್ಲಿ ಕಥೆಯನ್ನು ಹೆಣೆದಿರುವ ಲೇಖಕರು, ಹುಟ್ಟು-ಸಾವಿನ ನಡುವೆ ಹಾದು ಹೋಗುವ ಜಾತಿ ಶ್ರೇಣಿಯ ಅಹಮಿಕೆಗಳನ್ನು ಧಿಕ್ಕರಿಸುತ್ತಾರೆ.

ಕಥಾ ನಿರೂಪಣೆಯಲ್ಲಿ ಫ್ಲಾಷ್‌ಬ್ಯಾಕ್‌ತಂತ್ರವನ್ನು ಉತ್ತಮವಾಗಿ ಬಳಸಿರುವ ನಾಟಕಕಾರರು ಬಹಳ ಎಚ್ಚರಿಕೆಯಿಂದ ಗತ ಸಮಯದ ಬೆಳವಣಿಗೆಗಳನ್ನು ವರ್ತಮಾನಕ್ಕೆ ಬೆಸೆದು ಅಂತಿಮವಾಗಿ ತಮ್ಮ ಉದ್ದೇಶಿತ ಸಂವೇದನಾಶೀಲ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗುತ್ತಾರೆ. ಆಧುನಿಕ ಯುಗದ ಬಾಡಿಗೆ ತಾಯಿ ಪದ್ಧತಿಯನ್ನು ಸ್ವಾತಂತ್ರ್ಯಪೂರ್ವದಲ್ಲಿ ವ್ಯಾಪಕವಾಗಿದ್ದ ವೇಶ್ಯಾವಾಟಿಕೆಯ ಚೌಕಟ್ಟಿನಲ್ಲಿ ನಿರೂಪಿಸಿರುವ ನಾಟಕಕಾರರು ದೇಸಗತಿ ದೇಸಾಯಿಯ ಸಂತತಿ, ಮಲ್ಲಣ್ಣ ದೇಸಾಯಿಯ ಕುಟುಂಬ ಹಾಗೂ ಈ ನಾಲ್ಕು ಗೋಡೆಗಳ ನಡುವೆ ನಡೆಯುವ ಮನುಜ ಸಂಬಂಧದ ಸೂಕ್ಷ್ಮ ಸಂಘರ್ಷಗಳನ್ನು ಡಾ. ಯಶವಂತ ಅವರು ಸುಂದರವಾಗಿ ಕಟ್ಟಿಕೊಡುತ್ತಾರೆ.

ಆರಂಭದ ಕೆಲವು ದೃಶ್ಯಗಳು ಓದುಗರಿಗೆ ಕೆಲವೆಡೆ ನೀರಸ ಎನಿಸುವಂತಿದ್ದರೂ (ರಂಗಪ್ರಯೋಗದಲ್ಲಿ ನಿರ್ದೇಶಕರು ಇದನ್ನು ನೀಗಿಸಬಹುದು) ದೇಸಗತಿ ದೇಸಾಯಿಯ ಪತ್ನಿ ಶಾರದಮ್ಮ, ತನ್ನ ಗತ ಜೀವನದ ಕತೆಯನ್ನು ಮಗ ವೆಂಕಟ ದೇಸಾಯಿಗೆ ವಿವರಿಸುವ ದೃಶ್ಯದಿಂದ, ಹಠಾತ್ತನೆ ಪ್ರತ್ಯಕ್ಷವಾಗುವ ರಂಗಪ್ಪನ ಮುಖಾಂತರ ಇಡೀ ನಾಟಕವೇ ಮಹತ್ವದ ತಿರುವು ಪಡೆದುಕೊಳ್ಳುತ್ತದೆ. ಈ ದೃಶ್ಯದ ನಂತರದಲ್ಲಿ ನಾಟಕದ ಓಘ ಅಡೆತಡೆಯಿಲ್ಲದೆ ಓದುಗರ (ಮುಂದೆ ಪ್ರೇಕ್ಷಕರ) ಮನಸ್ಸನ್ನು ಹಿಡಿದಿಡುವುದು ಖಚಿತ. ನಾಟಕದುದ್ದಕ್ಕೂ ಡಾ. ಯಶವಂತ ಕೊಕ್ಕನವರ ಅವರು ಬಳಸಿರುವ ಗ್ರಾಮೀಣ ಸೊಗಡಿನ ಗಾದೆ ಮಾತುಗಳು ಸಮಕಾಲೀನ ಸಮಾಜದ ಒಳಸೂಕ್ಷ್ಮಗಳನ್ನೂ ಬಿತ್ತರಿಸುವಂತಿದೆ.

‘ಧಣಿಯ ಹಿಂದಿನ ಧ್ವನಿ’ ಒಂದು ನಾಟಕವಾಗಿ ಉತ್ಕೃಷ್ಟ ಹಂತ ತಲುಪುವುದು ಕೊನೆಯ ಕೆಲವು ದೃಶ್ಯಗಳಲ್ಲಿ. ವೆಂಕಟದೇಸಾಯಿಗೆ ತನ್ನ ಜನ್ಮ ರಹಸ್ಯ ಅರಿವಾದ ನಂತರ ಆತನ ಮನಸ್ಸಿನಲ್ಲಾಗುವ ಹೊಯ್ದಾಟಗಳನ್ನು ನಾಟಕಕಾರರು ಹೃದಯಸ್ಪರ್ಶಿಯಾಗಿ ಅಭಿವ್ಯಕ್ತಿಸಿದ್ದಾರೆ. ತನ್ನ ಹೆತ್ತೊಡಲ ಋಣ ತೀರಿಸಲು ಆಕೆಯ ಅಂತ್ಯಸಂಸ್ಕಾರಕ್ಕೆ ಮುಂದಾಗುವ ವೆಂಕಟದೇಸಾಯಿ ‘ನನಗ ಎರ್ಡು ಬೇಕು ಜೀಂವ ಕೊಟ್ಟ ಹಡದಾಕಿಗೆ ಸಂಸ್ಕಾರ ಮಾಡೋದು ಮಗ ಆಗಿ ನನ್ನ ಕರ್ಮ ಹಂಗ ಜೀವಕೊಟ್ಟ ಪಡದಾಕಿ ದೇಸಗತಿ ಆಳೂದ ನನ್ನ ಧರ್ಮ’ (ಪುಟ 140) ಎಂದು ಹೇಳುವುದು ಮನುಜಧರ್ಮವನ್ನು ಎತ್ತಿಹಿಡಿಯುವ ಸಾಲುಗಳು.

ಮಲ್ಲಣ್ಣ ದೇಸಾಯಿ ತನ್ನ ಪತ್ನಿಯಿಂದ ಮಗುವನ್ನು ಪಡೆಯಲಾಗದೆ ವೇಶ್ಯೆಯ ಮಗಳಲ್ಲಿ ಪಡೆಯುವ ಪ್ರಸಂಗ ನೈಜ ಇತಿಹಾಸದಲ್ಲಿ ನಡೆದಿರುವ ಸಾಧ್ಯತೆಗಳೂ ಇವೆ. ಇದು ಕಲ್ಪನೆಯೇ ಆದರೂ ಈ ದೃಶ್ಯಗಳಲ್ಲಿ ಬರುವ ಸಂಭಾಷಣೆಗಳು. ಬಂಗಾರಿಯ ತಾಯೊಡಲ ವೇದನೆ, ಮಲ್ಲಣ್ಣ ದೇಸಾಯಿಯ ಬೀಜಫಲದ ಅಹಮಿಕೆ, ಮಗುವನ್ನು ಹೆತ್ತು ಬಿಟ್ಟುಕೊಡುವ ಬಂಗಾರಿಯಲ್ಲಿ ಮೂಡುವ ಕ್ಷೇತ್ರಫಲದ ಜಿಜ್ಞಾಸೆಗಳು, ಇವೆಲ್ಲವೂ ನಾಟಕಕ್ಕೆ ವಿಭಿನ್ನ ಆಯಾಮವನ್ನು ನೀಡುವಂತಿದೆ. ಒಂದು ಕಡೆ ಪುರುಷಾಹಂಕಾರದ ಧ್ವನಿ ಕೇಳಿಸಿದರೆ ಮತ್ತೊಂದೆಡೆ ವಂಶವಾಹಿನಿಯ ರಕ್ಷಣೆಗೆ ಗಂಡು ಅತ್ಯವಶ್ಯ ಎಂಬ ಪಿತೃಪ್ರಧಾನತೆಯ ಧ್ವನಿಯೂ ಇಲ್ಲಿ ಅಡಕವಾಗಿದೆ.

ಆಧುನಿಕ ಸ್ತ್ರೀವಾದಿ ದೃಷ್ಟಿಯಿಂದ ಈ ನಾಟಕವನ್ನು ಹೇಗೆ ನೋಡಲಾಗುತ್ತದೆ? ಬಹುಶಃ ಇದು ರಂಗಪ್ರಯೋಗದಲ್ಲಿ ನಿರ್ದೇಶಕರು ಬಳಸುವ ರಂಗಪ್ರಸ್ತುತಿಯ ತಂತ್ರಗಾರಿಕೆಯನ್ನು ಅವಲಂಬಿಸುತ್ತದೆ. ಉದಾಹರಣೆಗೆ ‘ಗರತ್ಯಾರೀಗಿ ಗಂಡ ಸಿಗಲಾರದ ಈ ಕಾಲದಾಗ ಸೂಳ್ಯಾರಿಗೆ ಸರದಾರ ಸಿಗತಾನೇನ?’ ಎಂಬ ನಾಣ್ಣುಡಿ ಸಮಕಾಲೀನ ಸಂದರ್ಭದಲ್ಲಿ ಪುರುಷಾಧಿಪತ್ಯದ ಅಹಂಭಾವದಂತೆ ಧ್ವನಿಸುತ್ತದೆ. ಇಂತಹ ಕೆಲವು ಪ್ರಸಂಗಗಳನ್ನು ನಾಟಕಕಾರರು ವಸ್ತುನಿಷ್ಠವಾಗಿ ಕಥಾಹಂದರಕ್ಕೆ ಪೂರಕವಾಗಿ ಅಳವಡಿಸಿದ್ದಾರೆ. ಹಾಗಾಗಿ ನಾಟಕದ ಓದಿನಲ್ಲಿ ಆಕ್ಷೇಪಾರ್ಹ ಎನಿಸಲಾರದು.

ಆದರೆ ಈ ನಾಟಕದ ಕಥಾವಸ್ತುವನ್ನು ಸಮಕಾಲೀನಗೊಳಿಸಿ ರಂಗಾಸಕ್ತರ ಮುಂದೆ ಪ್ರಸ್ತುತಪಡಿಸುವ ಜವಾಬ್ದಾರಿ ನಾಟಕ ನಿರ್ದೇಶಕರ ಹೆಗಲೇರುತ್ತದೆ. ರಂಗಭೂಮಿ ಈ ಸ್ವಾಯತ್ತತೆ, ಸ್ವಾತಂತ್ರ್ಯವನ್ನು ಸ್ವಾಭಾವಿಕವಾಗಿ ಒದಗಿಸುವುದರಿಂದ ಡಾ. ಯಶವಂತ ಕೊಕ್ಕನವರ ಅವರ ‘ಧಣಿಯ ಹಿಂದಿನ ಧ್ವನಿ’ ಡಿಜಿಟಲ್ ಯುಗದ ಪ್ರೇಕ್ಷಕರ ಮುಂದೆ ಕೊಂಚ ವ್ಯತ್ಯಯಗಳೊಂದಿಗೆ ಧ್ವನಿಸುವ ಅವಕಾಶಗಳಿವೆ. ಉತ್ತರ ಕರ್ನಾಟಕದ ಭಾಷಾ ಸೊಗಡು ಇಡೀ ನಾಟಕದ ಸೌಂದರ್ಯಕ್ಕೆ ಮುಕುಟವಿಟ್ಟಂತೆ ಕಾಣುತ್ತದೆ. ತಮ್ಮ ಸಾಹಿತ್ಯ ಕೃತಿಯಲ್ಲಿ ಮೊದಲ ಪ್ರಯತ್ನವಾಗಿ ಡಾ ಯಶವಂತ ಅವರು ‘ಧಣಿಯ ಹಿಂದಿನ ಧ್ವನಿ’ಯನ್ನು ದೂರ ದೂರಕ್ಕೂ ಕೇಳಿಸುವಷ್ಟು ಪರಿಣಾಮಕಾರಿಯಾಗಿ ಮರುಧ್ವನಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಕಾಲೀನ ನಾಟಕಗಳನ್ನು ಕನ್ನಡ ರಂಗಭೂಮಿಗೆ ಸಮರ್ಪಿಸುವ ಭರವಸೆಯನ್ನಂತೂ ಈ ಕೃತಿ ನೀಡುತ್ತದೆ.

ಈ ಕೃತಿಯ ಮುಖಬೆಲೆ: ರೂ. 190

ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, 577418 ಹೊಸನಗರ (ತಾ.), ಶಿವಮೊಗ್ಗ ಜಿಲ್ಲೆ ಮೊ:7338437666

(ಲೇಖಕರು: ಹಿರಿಯ ಬರಹಗಾರರು, ಸಾಮಾಜಿಕ ಹೋರಾಟಗಾರರು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ. ದಿವಾಕರ

contributor