ಮಾನ್ವಿಯಲ್ಲಿ ಉರ್ದು ಲಿಪಿಯ 360 ಪುರಾತನ ತಾಮ್ರದ ನಾಣ್ಯಗಳು ಪತ್ತೆ
ಮಾನ್ವಿ: ಪಟ್ಟಣದ ಕಿಲ್ಲಾ ಪ್ರದೇಶದಲ್ಲಿರುವ ಮನೆಯೊಂದರ ಅಡಿಪಾಯ ಅಗೆಯುವ ವೇಳೆ ಪುರಾತನ ಕಾಲದ 360 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ಗುರುವಾರ ನಾಣ್ಯಗಳು ಪತ್ತೆಯಾಗಿದ್ದು, ವಿಷಯ ತಿಳಿದು ಶುಕ್ರವಾರ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಸ್ಥಳಕ್ಕೆ ಭೇಟಿ ನೀಡಿ, ಮನೆಯ ಮಾಲೀಕರಿಂದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ, ಕಿಲ್ಲಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ 360 ತಾಮ್ರದ ನಾಣ್ಯಗಳು ದೊರೆತಿದ್ದು, ಅವುಗಳನ್ನು ವಶಕ್ಕೆ ಪಡೆದು ಪೊಲೀಸ್ ಇಲಾಖೆಯ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
ನಾಣ್ಯಗಳು ತಾಮ್ರದಿಂದ ತಯಾರಿಸಲಾಗಿದ್ದು, ಅವುಗಳ ಮೇಲೆ ಉರ್ದು ಭಾಷೆಯ ಲಿಪಿಯಲ್ಲಿ ಬರಹಗಳಿವೆ. ಹಿಂದೆ ಈ ಭಾಗದಲ್ಲಿ ಆಡಳಿತ ನಡೆಸಿದವರ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಾಗಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಅಧ್ಯಯನಕ್ಕಾಗಿ ನಾಣ್ಯಗಳನ್ನು ಪುರಾತತ್ವ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಬಿ. ದೇವಮಾನೆ, ಕಂದಾಯ ನಿರೀಕ್ಷಕ ಚರಣಸಿಂಗ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.