Raichur| ಯುವತಿಯ ಮೃತದೇಹ ಪತ್ತೆ ಪ್ರಕರಣ: ಅತ್ಯಾಚಾರಗೈದು ಕೊಲೆ ಆರೋಪ; ಮೂವರ ಬಂಧನ
Update: 2026-08-21 10:05 IST
ರಾಯಚೂರು: ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಬಾವಿಯಯೊಂದರಲ್ಲಿ ಯುವತಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಬಯಲು ಪ್ರದೇಶದಲ್ಲಿ ಶೌಚಕ್ಕೆ ಹೋಗಿದ್ದ ಯುವತಿಯ ಮೃತದೇಹ ಮರುದಿನ ಊರ ಬಾವಿಯ ಮೆಟ್ಟಿಲ ಮೇಲೆ ಪತ್ತೆಯಾಗಿತ್ತು. ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಆಕೆಯ ತಂದೆ ತಿಮ್ಮರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಗುಂಡ್ಯ (22) ಮಹಾಂತೇಶ (22) ವೀರೇಶ (23) ಮುಂಡರಗಿ ಬಸವರಾಜ(45) ಎಂಬ ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿದ್ದು , ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ ಎಂದು ಸಿಪಿಐ ಎಂ.ಶಶಿಕಾಂತ ತಿಳಿಸಿದ್ದಾರೆ.
ಐಜಿ ಭೇಟಿ : ಹೊಕ್ರಾಣಿ ಗ್ರಾಮಕ್ಕೆ ಗುರುವಾರ ಸಂಜೆ ಐಜಿ ಪಿಎಸ್ ಹರ್ಷ, ಜಿಲ್ಲಾಧಿಕಾರಿ ಪೂವಿತಾ ಎಸ್, ಅಪರ ಜಿಲ್ಲಾಧಿಕಾರಿ ಶಿವನಂದ ಭಜಂತ್ರಿ, ಡಿವೈಎಸ್ಪಿ ಚಂದ್ರಶೇಖರ ನಾಯಕ ಭೇಟಿ ನೀಡಿ ಪರಿಶೀಲಿಸಿದರು.