ಪ್ರಧಾನಿಯಾದವರು ಒಂದು ಧರ್ಮದ ವಕಾಲತ್ತು ವಹಿಸುವುದು ಸಂವಿಧಾನಕ್ಕೆ ಮಾಡಿದ ಅಪಮಾನ: ಸಿಪಿಐ(ಎಂಎಲ್)

Update: 2024-01-22 16:01 GMT

ರಾಯಚೂರು: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಒಂದು ಧರ್ಮದ ವಕಾಲತ್ತು ವಹಿಸುವುದು ದೇಶದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಎಂದು ಆರೋಪಿಸಿ ಸಿಪಿಐ(ಎಂಎಲ್) ರೆಡ್‍ಸ್ಟಾರ್ ರಾಯಚೂರು ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಸೋಮವಾರ ರಾಯಚೂರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಿಪಿಐ(ಎಂಎಲ್) ರೆಡ್‍ಸ್ಟಾರ್ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಈಗಾಗಲೇ ದೇಶಾದ್ಯಂತ ನಿರುದ್ಯೋಗ, ಹಸಿವು, ಬಡತನ, ಬೆಂಬಲ ಬೆಲೆಯ ಕೊರತೆ, ಆರೋಗ್ಯದ ಸಮಸ್ಯೆ ಹೀಗೆ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜನತೆಯ ನೆರವಿಗೆ ಬಾರದೆ ಜನರಿಂದ ಸಂಗ್ರಹಿಸಲ್ಪಟ್ಟ ತೆರಿಗೆಯ ಸಾವಿರಾರು ಕೋಟಿ ಹಣವನ್ನು ಮಂದಿರ ಕಟ್ಟುವುದಕ್ಕೆ ಬಳಸುವುದು ಕೂಡ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಕಾರರು ದೂರಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ಹಿಂದೂ ಮೂಲಭೂತವಾದವನ್ನು ಗಟ್ಟಿಗೊಳಿಸುತ್ತಾ, ರಾಷ್ಟ್ರೀಯ ಸರಕು ಸಾಗಾಣಿಕೆಯ ಖಾಸಗೀಕರಣ ಹಾಗೂ ಮುಸ್ಲಿಂ ವಿರೋಧಿ ರಾಜಕಾರಣ ಷಡ್ಯಂತ್ರವಾಗಿದೆ. ಇನ್ನೂ, ಮನೆ ಮನೆಗೆ ಅಕ್ಷತೆಯ ಹೆಸರಲ್ಲಿ ಅಮಾಯಕ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಈ ತಂತ್ರಗಾರಿಕೆಯನ್ನು ಮಾಡುತ್ತಿದೆ ಎಂದು ಆಪಾದಿಸಿದರು.

ಈ ಸಂದರ್ಭದಲ್ಲಿ ಸಿಪಿಐ(ಎಂಎಲ್) ರೆಡ್‍ಸ್ಟಾರ್ ಮುಖಂಡರಾದ ಚಿನ್ನಪ್ಪ ಕೊಟ್ರಿಕಿ, ಜಿ.ಅಮರೇಶ, ಎಂ.ಗಂಗಾಧರ ಆರ್.ಹುಚ್ಚಾರೆಡ್ಡಿ, ಮಲ್ಲಯ್ಯ ಕಟ್ಟಿಮನಿ, ಎಂ.ಡಿ.ಅಮೀರ ಅಲಿ, ಸೈಯದ್ ಅಬ್ಬಾಸ್ ಅಲಿ, ಜಿ.ಅಡವಿರಾವ್, ಅಝೀಝ್ ಜಾಗೀರದಾರ್, ಆದಿ ನಗನೂರು, ಸಂತೋಷ ದಿನ್ನಿ, ತಿಪ್ಪರಾಜ ಗೆಜ್ಜಲಗಟ್ಟಾ, ವೆಂಕಟೇಶ ನಾಯಕ, ಯಲ್ಲಪ್ಪ ಊಟಕನೂರು, ಗಿರಿಲಿಂಗಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News