×
Ad

ಹಟ್ಟಿ ಪಟ್ಟಣಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ನಿರ್ಮಿಸಲು ಸಂಸದರಿಗೆ ಮನವಿ

Update: 2026-07-03 14:45 IST

ಹಟ್ಟಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಟ್ಟಿ ಪಟ್ಟಣಕ್ಕೆ ಫೀಡರ್ ರಸ್ತೆ ನಿರ್ಮಿಸಿಕೊಡಬೇಕೆಂದು ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣ ನಾಗರಿಕ ಸಮಿತಿಯ ವತಿಯಿಂದ ರಾಯಚೂರು-ಯಾದಗಿರಿ ಲೋಕಸಭಾ ಸಂಸದರಾದ ಜಿ. ಕುಮಾರ್ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.

ಹಟ್ಟಿ ಪಟ್ಟಣವು ರಾಯಚೂರು ಜಿಲ್ಲೆಯಲ್ಲಿಯೇ ಮಹತ್ವಾಕಾಂಕ್ಷಿ ಪ್ರದೇಶವಾಗಿದ್ದು, ಈ ಪ್ರದೇಶ ಸರ್ಕಾರಕ್ಕೆ ನೂರಾರು ಕೋಟಿ ಲಾಭಾಂಶ ಹಾಗೂ ರಾಯಲ್ಟಿಯನ್ನು ಪಾವತಿಸುತ್ತದೆ. ದೇಶದಲ್ಲಿಯೇ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ಗಣಿಗಾರಿಕೆಯ ಪ್ರದೇಶವಾಗಿದೆ. ಹಟ್ಟಿ ಹಾಗೂ ಹಟ್ಟಿ ಸುತ್ತಲಿನ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಹೇರಳವಾಗಿದ್ದು, ಈಗಾಗಲೇ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (Geological Survey of India) ಚಿನ್ನದ ಬ್ಲಾಕ್ಸ್‌ (Blocks)ಗಳನ್ನು ಗುರುತಿಸಿದೆ. ಮುಂದಿನ ದಿನಗಳಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಹೆಚ್ಚಿನ ಗಣಿಗಾರಿಕೆ ಕಾರ್ಯಾರಂಭಗೊಳ್ಳಲಿದ್ದು, ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ. ಈಗಾಗಲೇ ಹಟ್ಟಿ ಕ್ಯಾಂಪ್ ಹಾಗೂ ಹಟ್ಟಿ ಪಟ್ಟಣದ ಜನಸಂಖ್ಯೆ 50 ಸಾವಿರ ಮೇಲ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ನಗರ ಪಟ್ಟಣವಾಗಿ ಬೆಳೆಯಲಿದೆ.

ಪಿಎಂ-ಗತಿ ಶಕ್ತಿ ಹಾಗೂ ನೇಷನಲ್ ಮಿನರಲ್ ಪಾಲಿಸಿ ನಿಯಮಗಳ ಪ್ರಕಾರ, ದೊಡ್ಡ ಪಟ್ಟಣ, ಬಂದರು, ಗಣಿಗಾರಿಕೆಯಂತಹ ಪ್ರದೇಶಗಳಿಗೆ ಉತ್ತಮ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಬೇಕೆಂಬ ನಿಯಮವಿದೆ. ಹಟ್ಟಿ ಪಟ್ಟಣಕ್ಕೆ ರಾಷ್ಟ್ರೀಯ ಹೆದ್ದಾರಿ 150A (ಬೀದರ್-ಶ್ರೀರಂಗಪಟ್ಟಣ) ಹಾಗೂ ರಾಷ್ಟ್ರೀಯ ಹೆದ್ದಾರಿ 748A (ಬೆಳಗಾವಿ-ರಾಯಚೂರು) ಫೀಡರ್ ರಸ್ತೆ ಸಂಪರ್ಕಿಸುವುದರಿಂದ ಇಲ್ಲಿನ ಗಣಿಗಾರಿಕೆ ಹಾಗೂ ಸಾರಿಗೆ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿ 150A (ಬೀದರ್-ಶ್ರೀರಂಗಪಟ್ಟಣ) ಹಟ್ಟಿ ಪಟ್ಟಣಕ್ಕೆ 10 ಕಿ.ಮೀ. ಅಂತರದಲ್ಲಿ ಹಾದು ಹೋಗಿದೆ ಹಾಗೂ ರಾಷ್ಟ್ರೀಯ ಹೆದ್ದಾರಿ 748A (ಬೆಳಗಾವಿ-ರಾಯಚೂರು) 15 ಕಿ.ಮೀ. ಅಂತರದಲ್ಲಿ ಹಾದು ಹೋಗಿರುತ್ತದೆ. ಹಾಗಾಗಿ ಹಟ್ಟಿ ಪಟ್ಟಣವು ಇಡೀ ರಾಜ್ಯದಲ್ಲಿಯೇ ಮಹತ್ವಾಕಾಂಕ್ಷಿ ಪಟ್ಟಣವಾಗಿದ್ದು, ಹೆಚ್ಚಿನ ಚಿನ್ನದ ನಿಕ್ಷೇಪ ಹೊಂದಿರುವ ಪ್ರದೇಶವಾಗಿದೆ. ಈ ಎಲ್ಲ ಮಾನದಂಡಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಹಟ್ಟಿ ಪಟ್ಟಣವನ್ನು ಸಂಪರ್ಕಿಸುವ ಫೀಡರ್ ರಸ್ತೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಲಾಯಿತು.

ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ಫೀಡರ್ ರಸ್ತೆ ನಿರ್ಮಿಸಲು ಒತ್ತಾಯಿಸುತ್ತೇನೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News