ಜು.4ರಂದು ರಾಯಚೂರಿನಲ್ಲಿ ವಿಪ್ರೋತ್ಸವ-2026 : ರಮೇಶ ಕುಲ್ಕರ್ಣಿ
ರಾಯಚೂರು : ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜುಲೈ 4ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿಪ್ರೋತ್ಸವ-2026, ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ರಮೇಶ ಕುಲ್ಕರ್ಣಿ ತಿಳಿಸಿದ್ದಾರೆ.
ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮಾಜಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎನ್.ಎಸ್. ಬೋಸರಾಜು, ವಿಧಾನ ಪರಿಷತ್ ಸದಸ್ಯ ವಸಂತಕುಮಾರ, ಶಾಸಕರಾದ ಡಾ. ಶಿವರಾಜ ಪಾಟೀಲ, ಬಸನಗೌಡ ದದ್ದಲ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದ 120 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಸಮಾಜ ಸೇವೆಯಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆಗಾಗಿ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಹಾಗೂ ಮಹಿಳಾ ವಿಭಾಗದಲ್ಲಿ ಉಷಾಬಾಯಿ ಶ್ರೀನಿವಾಸರಾವ್ ದೇಸಾಯಿ ಅವರಿಗೆ ‘ವಿಪ್ರಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೊತೆಗೆ ಪಿಎಚ್‌ಡಿ ಮತ್ತು ಸಿಎ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ನಾಲ್ವರು ಪ್ರತಿಭಾವಂತರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ರಮೇಶ ಕುಲ್ಕರ್ಣಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನರಸಿಂಹರಾವ್ ದೇಶಪಾಂಡೆ, ಪ್ರಾಣೇಶ ಮುತಾಲಿಕ, ವೇಣುಗೋಪಾಲ ಇನಾಂದಾರ ,ರಾಮರಾವ್ ಗಣೇಕಲ್, ಸುಧೀರ, ಶ್ರೀನಿವಾಸ ದೇಸಾಯಿ, ವಿಜೇತ ಸಿರವಾರ ಉಪಸ್ಥಿತರಿದ್ದರು.