×
Ad

ಎನ್.ಎಸ್. ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಲು ಲಾರಿ ಓನರ್ಸ್ ವೆಲ್‌ಫೇರ್ ಅಸೋಸಿಯೇಶನ್ ಆಗ್ರಹ

Update: 2026-07-03 14:56 IST

ರಾಯಚೂರು, ಜು. 3: ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ದೇವರಾಜ ಅರಸ್ ಟ್ರಕ್ ಟರ್ಮಿನಲ್‌ಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಯಚೂರಿನ ಹಿರಿಯ ನಾಯಕ ಎನ್.ಎಸ್. ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಲಾರಿ ಓನರ್ಸ್ ವೆಲ್‌ಫೇರ್ ಅಸೋಸಿಯೇಶನ್ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಸೈಯದ್ ಯೂನುಸ್ ಸಲೀಂ ಮಾತನಾಡಿ, ಕಳೆದ 20 ವರ್ಷಗಳಿಂದ ಲಾರಿ ಮಾಲೀಕರ ಪ್ರಮುಖ ಬೇಡಿಕೆಯಾಗಿದ್ದ ಟ್ರಕ್ ಟರ್ಮಿನಲ್‌ಗಾಗಿ ರಾಯಚೂರಿನ ಸಮೀಪ 10 ಎಕರೆ ಜಮೀನು ಹಸ್ತಾಂತರಗೊಂಡಿದ್ದು, ಅದರ ಅಭಿವೃದ್ಧಿಗೆ ಸುಮಾರು ₹2.20 ಕೋಟಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ವಿ. ಲಕ್ಷ್ಮೀ ರೆಡ್ಡಿ ಅವರ ಸಹಕಾರದಿಂದ ಟ್ರಕ್ ಟರ್ಮಿನಲ್‌ಗೆ ಸೂಕ್ತ ಸ್ಥಳ ಗುರುತಿಸಲು ಸಾಧ್ಯವಾಗಿದೆ. ಈ ಟರ್ಮಿನಲ್ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದರೆ ಸ್ಥಳೀಯ ಲಾರಿ ಮಾಲೀಕರು ಹಾಗೂ ಸಾರಿಗೆ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಸಚಿವ ಸಂಪುಟದಲ್ಲಿ ಎನ್.ಎಸ್. ಬೋಸರಾಜು ಅವರಿಗೆ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಟ್ರಕ್ ಟರ್ಮಿನಲ್ ಸೇರಿದಂತೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ. ಜೊತೆಗೆ, ಹಿಂದುಳಿದ ಜಿಲ್ಲೆಯಾದ ರಾಯಚೂರಿಗೆ ಇನ್ನೂ ಹೆಚ್ಚಿನ ಸಚಿವ ಸ್ಥಾನಗಳು ದೊರೆತರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಣ್ಣ ಪ್ರಮಾಣದ ಟ್ರಕ್ ಟರ್ಮಿನಲ್‌ಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಇದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೂ ಆರ್ಥಿಕ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಸೈಯದ್ ಹಸನ್, ತೌಫೀಕ್ ಹುಸೇನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News