Raichur | ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದ ಆರೋಪಿಗಳನ್ನು ಬಂಧಿಸಲು ಬಲಿಜ ಸಮಾಜ ಒತ್ತಾಯ
ರಾಯಚೂರು : ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ಎಸೆದ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಂಡು ತಕ್ಷಣ ಬಂಧಿಸಬೇಕು ಎಂದು ಮುನ್ನೂರು ಕಾಪು ಸಮಾಜದ ಕ್ರೀಡಾಧ್ಯಕ್ಷ ಎನ್. ಶ್ರೀನಿವಾಸರೆಡ್ಡಿ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರದೀಪ್ ಈಶ್ವರ್ ಅವರು ಬಲಿಜ ಸಮಾಜದ ಏಕೈಕ ಶಾಸಕರಾಗಿದ್ದು, ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ತಡೆದು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸೂಕ್ತ ನಿರ್ದೇಶನ ನೀಡಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿಸ್ತಿನ ಪಕ್ಷಗಳೆಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಅವಮಾನ ಮಾಡಿ ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವುದು ಖಂಡನೀಯ. ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಸಂಬಂಧಪಟ್ಟ ಪಕ್ಷದ ನಾಯಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ವಿ.ಲಕ್ಷ್ಮೀರೆಡ್ಡಿ, ಬಂಗಿ ನರಸರೆಡ್ಡಿ, ಉಟ್ಕೂರು ಕೃಷ್ಣಮೂರ್ತಿ, ಚಂದ್ರಶೇಖರ ಪೋಗಲ್, ಪ್ರತಾಪರೆಡ್ಡಿ, ಜಿ.ಶೇಖರರೆಡ್ಡಿ, ಯು.ಗೋವಿಂದರೆಡ್ಡಿ ,ಗುಡ್ಸಿ ನರಸರೆಡ್ಡಿ, ತಿಮ್ಮಾರೆಡ್ಡಿ, ಗುಡ್ಡಿ ತಿಮ್ಮಾರೆಡ್ಡಿ, ಸತ್ಯರೆಡ್ಡಿ, ಬೆಲ್ಲಂ ಶ್ರೀಧರರೆಡ್ಡಿ, ಪುಂಡ್ಲ ರಾಜೇಂದ್ರರೆಡ್ಡಿ ಸೇರಿದಂತೆ ಅನೇಕರಿದ್ದರು.