×
Ad

ಸರಕಾರದ ಯೋಜನೆಗಳನ್ನು ಫಲಾನುವಿಗಳಿಗೆ ತಲುಪಿಸಿ: ಕೇಂದ್ರ ಜಂಟಿ ‌ಕಾರ್ಯದರ್ಶಿ ಉಜ್ವಲ್‌ ಕುಮಾರ್ ಘೋಷ್‌

Update: 2026-06-08 18:35 IST

ರಾಯಚೂರು: ದೇಶದಲ್ಲಿನ ಮಹತ್ವಾಕಾಂಕ್ಷಿ ಜಿಲ್ಲೆಗಳು ಮತ್ತು ಬ್ಲಾಕ್‌ಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಹಿಂದುಳಿದ ಹಣೆಪಟ್ಟಿಯನ್ನು ಕಳಚುವುದು ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯ ಉದ್ದೇಶವಾಗಿದ್ದು, ಸರ್ಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲಾನುವಿಗಳಿಗೆ ತಲುಪಿಸಲು ಅಗತ್ಯ ಕ್ರಮ ವಹಿಸಬೇಕೆಂದು ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಉಜ್ವಲ ಕುಮಾರ್ ಘೋಷ್‌ ಹೇಳಿದರು.

ಜೂನ್ 8ರ ಸೋಮವಾರದಂದು ನಗರದ ‌ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಹತ್ವಕಾಂಕ್ಷಿ ಜಿಲ್ಲೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಮಹತ್ವಾಕಾಂಕ್ಷೆ ಜಿಲ್ಲೆಯೆಂದು ಗುರುತಿಸಿಕೊಂಡಿರುವ ರಾಯಚೂರಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಮೂಲಕ ನಿರೀಕ್ಷಿತ ಗುರಿ ತಲುಪಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಸೌಕರ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೌಶಲ ಕ್ಷೇತ್ರದಲ್ಲಿ ತೀರಾ ಹಿಂದುಳಿದ ದೇಶದ 112 ಮಹತ್ವಾಕಾಂಕ್ಷಿ ಜಿಲ್ಲೆ ಮತ್ತು 500 ತಾಲೂಕುಗಳನ್ನು ಬ್ಲಾಕ್ ಎಂದು ವಿಂಗಡಿಸಿ, ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ವಿವಿಧ ಸರಕಾರದ ಸಾಲ ಸೌಲಭ್ಯಗಳು, ಯೋಜನೆಗಳು, ಪಿಂಚಣಿಗಳು ಸರಿಯಾಗಿ ಅನುಷ್ಠಾನ ಮಾಡಬೇಕು. ಜಿಲ್ಲೆಯಲ್ಲಿ ಆಧಾರ್ ಜೋಡಣೆ ಶೇ.100ರಷ್ಟು ಮಾಡಬೇಕು. ರಾಯಚೂರು ಜಿಲ್ಲೆಯಲ್ಲಿ ನೀತಿ ಆಯೋಗದ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಅನುದಾನ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ವೇಳೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಮಾತನಾಡಿ, ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ ಜಿಲ್ಲೆಯಲ್ಲಿ ವಿವಿಧ ಪ್ರಗತಿ ನಡೆದಿದ್ದು, ಸೂಚ್ಯಂಕಗಳಲ್ಲಿ ರಾಯಚೂರು ಜಿಲ್ಲೆ ಉತ್ತಮ ಸ್ಥಾನ ಪಡೆದಿದೆ. ದೇಶದ ಹಿಂದುಳಿದ 112 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆ 2018ರಲ್ಲಿ ಜಾರಿಗೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವುದು ಗುರಿಯಾಗಿದೆ. ಜನರ ಆರೋಗ್ಯ ಮತ್ತು ಪೌಷ್ಟಿಕ, ಕೃಷಿ ಮತ್ತು ಜಲ ಸಂಪನ್ಮೂಲ, ಶಿಕ್ಷಣ, ಆರ್ಥಿಕ ಸೇರ್ಪಡೆ ಹಾಗೂ ಕೌಶಲಾಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ 49 ಸೂಚ್ಯಂಕ ನೀಡಲಾಗಿದ್ದು, ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡಬೇಕು ಎಂದರು.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಮಾತನಾಡಿ, ಪೌಸ್ತಿಕ ರಾಯಚೂರಿನಡಿ ತಾಯಂದಿರು, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ದತ್ತಾಂಶ ಆಧಾರಿತ ಮಧ್ಯಸ್ಥಿಕೆಗಳ ಮೂಲಕ 250 ದುರ್ಬಲ ಹಳ್ಳಿಗಳನ್ನು ಗುರಿಯಾಗಿಟ್ಟುಕೊಂಡು ಸಮಗ್ರ ಪೋಷಣೆ ಮತ್ತು ಆರೋಗ್ಯ ಉಪಕ್ರಮ ಹಾಗೂ ಸಂಪೂರ್ಣತಾ ಅಭಿಯಾನಡಿ ರೋಗನಿರೋಧಕ ಶಕ್ತಿ, ಎಎನ್.ಸಿ, ಸಾಂಸ್ಥಿಕ ವಿತರಣೆ ಮತ್ತು ಪೌಷ್ಟಿಕಾಂಶ ಸೇವೆಗಳ ಶುದ್ಧತ್ವ, ಲ್ಯಾಬ್ ಮತ್ತು ಅನುಸರಣೆಗಳ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.

×
Ad

ಜಿಲ್ಲೆಯಲ್ಲಿ 2011ರ ಜನಸಂಖ್ಯೆ ಪ್ರಕಾರ 19,28,812 ಜನಸಂಖ್ಯೆ ಹೊಂದಿದೆ. ಒಟ್ಟು 8 ತಾಲೂಕುಗಳನ್ನು ಒಳಗೊಂಡಿದೆ. 884 ಕಂದಾಯ ಹಾಗೂ 179 ಗ್ರಾಮ ಪಂಚಾಯತಿಗಳು, 1658 ಶಾಲೆಗಳು, ಒಂದು ಸರಕಾರಿ ಮೆಡಿಕಲ್ ಸಂಸ್ಥೆ, 4 ತಾಲೂಕು ಜನರಲ್ ಆಸ್ಪತ್ರೆ, 6 ಸಮುದಾಯ ಆರೋಗ್ಯ ಕೇಂದ್ರಗಳು, 50 ಪ್ರಾಥಮಿಕ ಆರೋಗ್ಯ ಕೇಂದ್ರ, 6 ಯುಪಿಎಚ್.ಸಿ ಕೇಂದ್ರಗಳ ಜೊತೆಗೆ ಕೃಷಿ ವಿಶ್ವವಿದ್ಯಾಲಯ, ರಾಯಚೂರು ವಿಶ್ವವಿದ್ಯಾಲಯದ ಹಾಗೂ ಐಐಐಟಿ ರಾಯಚೂರಿನಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಡಾ.ಟಿ.ರೋಣಿ ಅವರು ಸಭೆಗೆ ಮಾಹಿತಿ ‌ನೀಡಿದರು.

ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ‌ ನಿರ್ದೇಶಕ ಮಲ್ಲಿಕಾರ್ಜುನ ಅವರು ಮಾತನಾಡಿ, ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ 10 ನೇ ತರಗತಿಯ ಫಲಿತಾಂಶಗಳಲ್ಲಿ ಸುಧಾರಣೆಗೆ ಶ್ರಮಿಸಲಾಗಿದೆ. ರಾಜ್ಯಕ್ಕೆ ರಾಯಚೂರು ಜಿಲ್ಲೆಯು 21ನೇ ಸ್ಥಾನ ‌ಪಡೆದಿದೆ. ಕಾಲಕಾಲಕ್ಕೆ ಶಾಲಾ ತಪಾಸಣೆ ಮತ್ತು  ಮನೆ ಮನೆಗೆ ಸಮೀಕ್ಷೆಯ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪುನರ್ ಶಾಲೆಗೆ ಸೇರಿಸಲು ಸೂಕ್ತ ಕ್ರಮವಹಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಶೈಕ್ಷಣಿಕ ಮೇಲ್ವಿಚಾರಣೆ ಮತ್ತು ಉತ್ತಮ ಅಭ್ಯಾಸಕ್ಕಾಗಿ ನೀತಿ ಆಯೋಗದಿಂದ 50 ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್ ಅವರು ಮಾತನಾಡಿ, 2026ರ ಮಾರ್ಚ್‌ 26ರವರೆಗೆ ಜಿಲ್ಲೆಯಲ್ಲಿ 17,138 ಮಣ್ಣಿನ ಆರೋಗ್ಯ ಕಾರ್ಡ್‌ಗಳು ವಿತರಿಸಲಾಗಿದೆ. ನರೇಗಾ ಯೋಜನೆಯಡಿ 10,794 ಜಲಮೂಲಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ6 ಎಲೆಕ್ಟ್ರಾನಿಕ್ ಮಾರುಕಟ್ಟೆಗೆ ಸಂಪರ್ಕ ಹೊಂದಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಹನಿ ಮತ್ತು ತುಂತುರು ನೀರಾವರಿ, ನೀರು ಉಳಿಸುವ ತಂತ್ರಜ್ಞಾನಗಳ ಅಳವಡಿಕೆ ಕುರಿತು ರೈತರಿಗೆ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ.  ಕಾಲುವೆ ನೀರಾವರಿ ವ್ಯವಸ್ಥೆಗಳ ಸುಧಾರಿತ ಬಳಕೆ ಹಾಗೂ ರೈತರಿಗೆ ನಿಯಮಿತ ರೈತ ತರಬೇತಿಗಳು, ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಶೇ.100ರಷ್ಟು ಪ್ರಾಣಿಗಳಿಗೆ ಲಸಿಕೆ ಹಾಕಲಾಗಿದೆ ಎಂದರು. ನೀತಿ ಆಯೋಗದಿಂದ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ 24 ಜಲಮೂಲಗಳ ಪುನರುಜ್ಜೀವನ ನೀಡಲಾಗಿದೆ ಎಂದು ಸಭೆಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹೊಪಾತ್ರ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ್‌ ಮುಖ್ಯ ಯೋಜನಾ ‌ನಿರ್ದೇಶಕ ಶರಣಬಸರಾಜ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ‌ ನಿರ್ದೇಶಕಿ ಶರಣಮ್ಮ,ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ನಂದಿತಾ, ಆಹಾರ ಇಲಾಖೆಯ ಉಪ ನಿರ್ದೇಶಕ ನಜೀರ್ ಅಹಮದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News